ಶೋಮ್ಯಾನ್ ಎಂದೇ ಖ್ಯಾತರಾಗಿರುವ ನಿರ್ದೇಶಕ ಪ್ರೇಮ್ ಇದೀಗ ಕೇಡಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸನಿಮಾ ಟ್ರೈಲರ್ ಕೂಡಾ ಒಂದಷ್ಟು ಚರ್ಚೆ ಹುಟ್ಟು ಹಾಕಿದೆ. ಹೀಗೆ ಒಂದೆಡೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದುಕೊಂಡೇ, ಮತ್ತೊಂದೆಡೆಯಲ್ಲಿ ತಮ್ಮಿಷ್ಟದ ಕೃಷಿ ಕಾರ್ಯದಲ್ಲಿಯೂ ಪ್ರೇಮ್ಸ್ ಬ್ಯುಸಿಯಾಗಿದ್ದಾರೆ. ಈತ ಹಳ್ಳಿಗಾಡಿನ ಭಾಷೆ, ಮುಗ್ಧತೆಯ ಕಾರಣದಿಂದಲೇ ಸಾಕಷ್ಟು ಮಂದಿಯ ಪ್ರೀತಿ ಸಂಪಾದಿಸಿಕೊಂಡಿರುವ ನಿರ್ದೇಶಕ. ಹಾಗಂತ ವ್ಯವಹಾರಗಳಲ್ಲಿ ಪ್ರೇಮ್ಸ್ ಮುಗ್ಧರೇನಲ್ಲ. ಒಂದು ಸಿನಿಮಾವನ್ನು ನಿರ್ದೇಶನದ ಜೊತೆಗೆ ವ್ಯಾವಹಾರಿಕವಾಗಿಯೂ ಸರಿದೂಗಿಸಿಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ಇಂಥಾ ಪ್ರೇಮ್ಸ್ ಆನ್‌ಲೈನಲ್ಲಿಯೇ ಎಮ್ಮೆ ಖರೀದಿ ವ್ಯವಹಾರ ನಡೆಸುವ ಮೂರ್ಖತನ ಮಾಡಲು ಹೋಗಿ ನಾಲಕ್ಕೂವರೆ ಲಕ್ಷ ಕಳೆದುಕೊಂಡಿರೋ ವಿಚಾರವೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ!

ಜೋಗಿ ಪ್ರೇಮ್ಸ್ ಹೈನುಗಾರಿಕೆ ನಡೆಸೋ ಕನಸಿನ ಪ್ರಾಜೆಕ್ಟೊಂದನ್ನು ಇತ್ತೀಚೆಗೆ ಕಾರ್ಯರೂಪಕ್ಕೆ ತಂದಿದ್ದರು. ಹೀಗೆ ಹೈನುಗಾರಿಕೆ ನಡೆಸಲು ಹೊರಟಾಗ ಹಸು ಹಾಗೂ ಎಮ್ಮೆಗಳನ್ನು ಖರೀದಿಸೋದೇ ದೊಡ್ಡ ಸವಾಲು. ಯಾಕೆಂದರೆ, ನಾನಾ ಅವತಾರಗಳಲ್ಲಿ ವಂಚಿಸುವ ಒಂದು ಮಾಫಿಯಾ ರೈತಾಪಿ ವರ್ಗವನ್ನು ಲಾಗಾಯ್ತಿನಿಂದಲೂ ಕಾರ್ಯನಿರ್ವಹಿಸುತ್ತಿದೆ. ತೀರಾ ಅನುಭವಸ್ಥರು ನೋಡಿ, ಅಳೆದೂ ತೂಗಿ ವ್ಯವಹಾರ ನಡೆಸಿದಾಗಲೂ ಪಿಗ್ಗಿಬೀಳಿಸುವ ಪ್ರಳಯಾಂತಕರಿದ್ದಾರೆ. ಇಂಥಾದ್ದರ ನಡುವೆ ಈ ಪ್ರೇಮ್ಸ್ ಆನ್‌ಲೈನ್ ಮೂಲಕ ಎಮ್ಮೆ ವ್ಯಾಪಾರ ನಡೆಸುವ ಪೆಕರು ನಿರ್ಧಾರವೊಂದನ್ನು ಮಾಡಿ ಬಿಟ್ಟಿದ್ದಾರೆ. ಆನ್‌ಲೈನಲ್ಲಿಯೇ ಎಮ್ಮೆ ನೋಡಿ, ಆಯ್ಕೆ ಮಾಡಿ, ಆನ್‌ಲೈನ್ ಮೂಲಕವೇ ನಾಲಕ್ಕೂವರೆ ಲಕ್ಷ ಕಾಸನ್ನು ವಂಚಕರಿಗೆ ವರ್ಗಾವಣೆ ಮಾಡೋ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ಪ್ರೇಮ್ ಒಂಥರಾ ಗಡಿಬಿಡಿಯ ಆಸಾಮಿ. ಬಹುವಾಗಿ ತಾಳ್ಮೆ ಬೇಡುವ ಕೃಷಿ, ಹೈನುಗಾರಿಕೆಗಿಳಿದಿರೋ ಈತ ಅಲ್ಲಿಯೂ ಕೂಡಾ ಅಂಥಾದ್ದೇ ಪ್ರವೃತ್ತಿಯನ್ನು ಮುಂದುವರೆಸಿದಂತಿದೆ. ಯೂಟ್ಯೂಬ್ ಮೂಲಕ ಎಮ್ಮೆ ಖರೀದಿಯ ಕಾರ್ಯಾಚರಣೆ ನಡೆಸಿರುವ ಪ್ರೇಮ್, ಹೆಚ್ಚು ಹಾಲು ಕೊಡುವ ಗುಜರಾತಿ ತಳಿಯ ಮೋಹಕ್ಕೆ ಬಿದ್ದಿದ್ದಾರೆ. ಈ ಆನ್‌ಲೈನ್ ಬೇಟೆಯ ಹಾದಿಯಲ್ಲಿ ಗುಜರಾತಿನ ವನರಾಜ್ ಭಾಯ್ ಎಂಬಾತನ ಸಂಪರ್ಕ ಸಾಧಿಸಿದ್ದಾರೆ. ಅಡ್ವಾನ್ಸ್ ಆಗಿ ಇಪ್ಪತೈದು ಸಾವಿರ ಪೀಕಿಕೊಂಡ ವನರಾಜ ಕಟ್ಟುಮಸ್ತಾದ ಎರಡೆಮ್ಮೆಗಳ ಫೋಟೋವನ್ನು ವಾಟ್ಸಪ್ ಮೂಲಕ ಕಳಿಸಿದ್ದಾನೆ. ಆ ದಷ್ಟಪುಷ್ಟ ಎಮ್ಮೆಗಳಿಗೆ ಮನಸೋತ ಪ್ರೇಮ್ ಹಂತ ಹಂತವಾಗಿ ವನರಾಜನೆಂಬೋ ವಂಚಕನ ಖಾತೆಗೆ ಒಟ್ಟು ನಾಲಕ್ಕೂವರೆ ಲಕ್ಷವನ್ನು ರವಾನಿಸಿದ್ದಾರೆ.

ಎರಡ್ಮೂರು ದಿನಗಳಲ್ಲಿ ಎರಡು ಎಮ್ಮೆಗಳನ್ನು ತಲುಪಿಸೋದಾಗಿ ವನರಾಜ ನಂಬಿಸಿದ್ದಾನೆ. ಇಷ್ಟಾದದ್ದೇ ಕೊಟ್ಟಿಗೆ ವ್ಯವಸ್ಥೆ ಮಾಡಿಕೊಂಡನ ಪ್ರೇಮ್, ಇನ್ನೇನು ಗುಜರಾತಿನಿಂದ ಬರೋ ಎಮ್ಮೆಗಳನ್ನು ಕಟ್ಟಿ ಹಾಲು ಕರೆಯೋದೊಂದೇ ಬಾಕಿ ಎಂಬಂತೆ ಸಂಭ್ರಮಿಸಿದ್ದಾರೆ. ಆದರೆ, ಒಂದಷ್ಟು ದಿನ ಸತಾಯಿಸಿದ ವಂಚಕ ವನರಾಜ ಮೊಬೈಲ್ ಸ್ವಚಾಫ್ ಮಾಡಿಕೊಂಡು ಗಾಯಬ್ ಆಗಿದ್ದಾನೆ. ಕಡಗೂ ಪ್ರೇಮ್ಸ್‌ಗೆ ತುಂಬಾ ತಡವಾಗಿ ತಾನು ಹೀನಾಯವಾಗಿ ಮೋಸ ಹೋಗಿರುವ ಸತ್ಯದರ್ಶನವಾಗಿದೆ. ನಾಲಕ್ಕೂವರೆ ಲಕ್ಷ ಕಳೆದುಕೊಂಡ ಪ್ರೇಮ್ಸ್ ತಮ್ಮ ಕನಸಿನ ಕೊಟ್ಟಿಗೆಯ ಕಟ್ಟೆ ಹತ್ತಿಕೂತು ಅಂಬೋ ಅಂತ ರೋಧಿಸುವ ದೌರ್ಭಾಗ್ಯ ಬಂದೊದಗಿದೆ. ಕಡೆಗೂ ನಿರ್ದೇಶಕ ಪ್ರೇಮ್ಸ್‌ಗಾದ ಮಹಾ ಮೋಸ ಅವರ ಮ್ಯಾನೇಜರ್ ಹಾಗೂ ನಟರೂ ಆಗಿರುವ ದಶಾವರ ಚಂದ್ರು ಗಮನಕ್ಕೆ ಬಂದಿದೆ. ಈ ಬುದ್ಧಿವಂತ ಆಸಾಮಿ ಮಾಡಿದ ಮಣ್ಣು ತಿನ್ನೋ ಕೆಲಸ ಕಂಡು ಮರುಗಿದ ಚಂದ್ರು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲೊಂದು ಕೇಸು ದಾಖಲಿಸಿದ್ದಾರೆ.

ಆದರೆ, ಪ್ರೇಮ್ಸ್ ಕಳೆದುಕೊಂಡ ಕಾಸು ಮರಳೋದು ಮಾತ್ರ ಕಷ್ಟವಿದೆ. ಯಾವುದೇ ಫಾರ್ಮುಗಳಿಗೆ ಹಸು ಹಾಗೂ ಎಮ್ಮೆಗಳನ್ನು ಖರೀದಿಸುವಾಗ ರೈತರು ಬಲು ಎಚ್ಚರ ವಹಿಸುತ್ತಾರೆ. ಸಾಮಾನ್ಯವಾಗಿ ಜೆರ್ಸಿ ಹಸುಗಳನ್ನು ಪಂಜಾಬಿನಿಂದ ತರೋ ವಾಡಿಕೆ ಇದೆ. ಅತೀ ಹೆಚ್ಚು ಹಾಲು ಕೊಡುವ ಹಸುಗಳು ಅಲ್ಲಿ ಸಿಗುತ್ತವೆಂಬುದು ಅದಕ್ಕೆ ಕಾರಣ. ಆದರೆ, ಮಾಮೂಲಿ ಹಸುಗಳನ್ನೇ ಪಂಜಾಬಿ ಹಸುಗಳೆಂದು ಕೊಟ್ಟು ಯಾಮಾರಿಸಿದ ಅದೆಷ್ಟೋ ಪ್ರಕರಣಗಳಿದ್ದಾವೆ. ಹಾಗಿರುವಾಗ ಈ ಪ್ರೇಮ್ ಆನ್‌ಲೈನ್ ಮೂಲಕ ಎಮ್ಮೆ ನೋಡಿ, ನಾಲಕ್ಕೂವರೆ ಲಕ್ಷ ಕೊಟ್ಟು ಕಳೆದುಕೊಂಡರೆಂದರೆ ಏನೆನ್ನಬೇಕು? ಸೀದಾ ದಾರವಾಡ, ದಾವಣಗೆರೆಯತ್ತ ಹೋಗಿ ಮುರ್ರಾ ಎಮ್ಮೆ ತಂದಿದ್ದರೂ ಪ್ರೇಮ್ಸ್ ಕನಸಿನ ಫಾರ್ಮು ತುಂಬುತ್ತಿತ್ತು. ಆದರೆ, ಅವರು ಗುಜರಾತಿ ಎಮ್ಮೆಯ ಹಿಂದೆ ಬಿದ್ದು ಮೋಸ ಹೋಗಿದ್ದಾರೆ. ನಮ್ಮೆಲ್ಲರ ಹೆಮ್ಮೆಯ ನಿರ್ದೇಶಕ ಪ್ರೇಮ್ ಗುಜರಾತಿ ಎಮ್ಮೆಯಿಂದ ಒದೆಸಿಕೊಂಡಿದ್ದು ನಿಜಕ್ಕೂ ದಾರುಣ ಸಂಗತಿ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!