ಕನ್ನಡದ ನಟಿಮಣಿಯರು ಪರಭಾಷಾ ಚಿತ್ರರಂಗಗಳಿಗೆ ತೆರಳಿ ಮಿಂಚೋದೇಕನೂ ಹೊಸತಲ್ಲ. ಆದರೆ, ನಿರ್ದೇಶಕರು ಪರಭಾಷೆಗಳಿಗೆ ವಲಸೆ ಹೋಗೋದಾಗಲಿ, ಅಲ್ಲಿಯೇ ಗೆಲುವು ದಕ್ಕಿಸಿಕೊಳ್ಳೋದಾಗಲಿ ಕನ್ನಡದ ಮಟ್ಟಿಗೆ ಹೊಸಾ ವಿದ್ಯಮಾನ. ಆ ನಿಟ್ಟಿನಲ್ಲಿ ನೋಡಹೋದರೆ, ಹನುಮ ನಾಮಸ್ಮರಣೆಯ ಟೈಟಲ್ಲುಗಳ ಮೂಲಕವೇ ಒಂದಷ್ಟು ಹೆಸರಾಗಿದ್ದ ಎ.ಹರ್ಷ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಅವರು ಸೀದಾ ಬಾಲಿವುಡ್ಡಿಗೆ ಹಾರಿ, ಭಾಗಿ೪ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿರೋ ಸುದ್ದಿ ಜಾಹೀರಾದಾಗ ಹೇಳಿಕೊಳ್ಳುವಂಥಾ ನಿರೀಕ್ಷೆಯಿರಲಿಲ್ಲ. ಇದೀಗ ಆ ಸಿನಿಮಾ ಬಿಡುಗಡೆಗೊಂಡಿದೆ. ಬಾಕ್ಸಾಫೀಸಿನಲ್ಲಿಯೂ ಗಣನೀಯ ಗಳಿಕೆ ಮಾಡುವ ಮೂಲಕ ಹರ್ಷ ಪಾಲಿಗೆ ಗೆಲುವಿನ ಹರುಷ ದಕ್ಕಿಸಿಕೊಟ್ಟಿದೆ!
ಈ ತಿಂಗಳ ಐದನೇ ತಾರೀಕಿನಂದು ಭಾಗಿ೪ ಚಿತ್ರ ತೆರೆಗಂಡಿತ್ತು. ಆರಂಭದಿಂದಲೂ ಪ್ರದರ್ಶನದಲ್ಲಿ ಏರುಗತಿ ಕಾಣುತ್ತಾ ಸಾಗಿದ್ದ ಈ ಚಿತ್ರಕ್ಕೀಗ ಒಂದಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬರಲಾರಂಭಿಸಿವೆ. ಭಾಗಿ ಚಿತ್ರದ ಮೊದಲ ಆವೃತ್ತಿ ಯಶ ಕಂಡಿತ್ತು. ಆದರೆ, ಎರಡನೇ ಭಾಗ ಪೇಲವವಾಗಿತ್ತು. ಮೂರನೇ ಭಾಗ ಪೂರ್ಣವಾಗಿ ಒಪ್ಪಿತವಾಗದಿದ್ದರೂ ಕೂಡಾ ಕಲೆಕ್ಷನ್ ವಿಚಾರದಲ್ಲಿ ಒಂದಷ್ಟು ಉತ್ತಮ ಪ್ರದರ್ಶನ ಕಂಡಿತ್ತು. ಈ ಧೈರ್ಯದ ಮೇಲೆಯೇ ನಿರ್ಮಾಪಕರು ನಾಲಕ್ಕನೇ ಭಾಗವನ್ನು ನಿರ್ಮಾಣ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಇದಕ್ಕೆ ನಿರ್ಮಾಪಕರು ಕನ್ನಡದ ನಿರ್ದೇಶಕ ಎ ಹರ್ಷ ಅವರನ್ನು ಆಯ್ಕೆ ಮಾಡಿದಾಗ ಸಹಜವಾಗಿಯೇ ಅಚ್ಚರಿ ಮೂಡಿಕೊಂಡಿತ್ತು.
ಆದರೆ, ಎಲ್ಲ ನಿರೀಕ್ಷೆಗಳನ್ನೂ ಮೀರಿ ಈ ಸಿನಿಮಾ ಗಳಿಕೆಯಲ್ಲಿ ಚೇತರಿಸಿಕೊಂಡಿದೆ.ಬಿಡುಗಡೆಯಾಗಿ ವಾರ ಕಳೆಯೋದರೊಳಗಾಗಿ ಭಾಗಿ೪ ಮೂವತ್ತು ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಅದಾಗಿ ಎರಡನೇ ವಾರ ಮಗುಚಿಕೊಳ್ಳುವ ಹೊತ್ತಿಗೆಲ್ಲ ಆ ಮೊತ್ತ ದುಪ್ಪಟ್ಟಾಗಿದೆ. ಹೇಗಾದರೂ ಮಾಡಿ ನೂರು ಕೋಟಿ ಬಾಚಿಕೊಳ್ಳುವ ಸಾಧ್ಯತೆಗಳೂ ಚಿಗಿತುಕೊಂಡಿವೆ. ಒಂದು ವೇಳೆ ಆ ನಿರೀಕ್ಷಿತ ಹಂತ ತಲುಪಿಕೊಳ್ಳಲಾಗದಿದ್ದರೂ ಕೂಡಾ ನಿರ್ದೇಶಕರಾಗಿ ಎ ಹರ್ಷ ಬಾಲಿವುಡ್ಡಲ್ಲಿ ಗೆದ್ದಿದ್ದಾರೆ. ಕನ್ನಡದಲ್ಲಿ ಭಜರಂಗಿ ಬ್ರ್ಯಾಂಡಿನ ಒಂದಷ್ಟು ಸಿನಿಮಾಗಳ ಮೂಲಕ ಗೆದ್ದಿದ್ದ ಹರ್ಷ ಇತ್ತೀಚಿನ ವರ್ಷಗಳಲ್ಲಿ ಅದೇಕೋ ಮಂಕಾಗದಂತಿದ್ದರು. ಇದೀಗ ಭಾಗಿ೪ ಗೆಲುವು ಕಂಡಿದ್ದರಿಂದಾಗಿ ಹರ್ಷ ಬಾಲಿವುಡ್ಡಿನಲ್ಲಿಯೇ ನೆಲೆ ಕಂಡುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ!