ಯಾವುದೇ ಘಟನೆಯೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದಾಗ ಸೀದಾ ಫಿಲಂ ಛೇಂಬರಿಗೆ ಹೋಗಿ ಒಂದು ಟೈಟಲ್ ರಿಜಿಸ್ಟ್ರೇಷನ್ ಮಾಡಿಸೋದು ಸಿನಿಮಾ ಮಂದಿಯ ರೂಢಿ. ಅದನ್ನು ಖಯಾಲಿ ಎಂದರೂ ಅತಿಶಯವೇನಲ್ಲ. ಒಂದು ಸಾಮಾಜಿಕ ಪಲ್ಲಟದ ಬಗ್ಗೆ ಸಿನಿಮಾ ಮಾಡಲು ಬೇಕಾದ ತಯಾರಿ, ಆ ವಿಚಾರದ ಬಗ್ಗೆ ಆಳವಾದ ತಿಳುವಳಿಕೆಯ ಲವಲೇಶ ಇಲ್ಲದವರೂ ಕೂಡಾನ ಟೈಟಲ್ ನೋಂದಣಿಯಲ್ಲಿ ಮಾತ್ರ ಮುಂದಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ತಾರಕಕ್ಕೇರಿರುವ ಇಂಥಾ ಖಯಾಲಿ ಖುದ್ದು ಸಿನಿಮಾ ಪ್ರೇಮಿಗಳಿಗೇ ಕಾಮಿಡಿಯ ಸರಕಿನಂತೆ ಕಾಣಿಸಲು ಶುರುವಾಗಿ ವರ್ಷಗಳೇ ಕಳೆದು ಹೋಗಿವೆ. ಹಾಗಿರುವಾಗ, ದಶಕಗಳಿಂದ ಹಬೆಯಾಡುತ್ತಿರುವ ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಮಂದಿ ಟೈಟಲ್ ನೋಂದಣಿ ಮಾಡಿಸಿದರೆ ಮತ್ಯಾವ ಭಾವ ಮೂಡಲೂ ಸಾಧ್ಯವಿಲ್ಲ!
ಸೌಜನ್ಯ ಎಂಬ ಹುಡುಗಿಯನ್ನು ಅಮಾನುಷವಾಗಿ ಅತ್ಯಾಚಾರ ಮಾಡಿ ಕೊಂದ ಘಟನೆಯ ನಂತರ ಧರ್ಮಸ್ಥಳ ಮತ್ತೊಂದು ಸುತ್ತಿಗೆ ವಿವಾದದ ಕೇಂದ್ರಕ್ಕೆ ಬಂದು ನಿಂತಿತ್ತು. ಈಗಂತೂ ಆ ಪರಿಸರದಲ್ಲಿ ಅಸ್ಥಿಪಂಜರ ಹುಡುಕುವ ಕಾರ್ಯ ಚಾಲ್ತಿಯಲ್ಲಿದೆ. ಈ ಮೂಲಕ ಆ ಊರಿನ ಸುತ್ತ ಹಬ್ಬಿಕೊಂಡಿರುವ ಗುಮಾನಿಗಳಿಗೆ, ಸಾರ್ವಜನಿಕರಲ್ಲಿರುವ ಜ್ವಲಂತ ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆಗಳಿದ್ದಾವೆ. ಇದರೊಂದಿಗೆ ಇನ್ನೂ ಒಂದಷ್ಟು ಹೆಣ್ಮಕ್ಕಳ ಅನ್ಯಾಯದ ಸಾವಿಗೆ ನ್ಯಾಯ ಸಿಗಬಹುದೆಂಬ ನಿರೀಕ್ಷೆಯೂ ಮೂಡಿಕೊಂಡಿದೆ. ಇದೇ ಹೊತ್ತಿನಲ್ಲಿ ಒಂದಷ್ಟು ಮಂದಿ ಖಾವಂದರನ ಮಾನ ಹೋಗಬಾರದೆಂದು ಟೊಂಕ ಕಟ್ಟಿ ನಿಂತಿದ್ದರೆ, ಮತ್ತೊಂದಷ್ಟು ಮಂದಿ ನ ನೊಂದ ಜೀವಗಳಿಗೆ ನ್ಯಾಯ ಸಿಗಬೇಕೆಂದು ಎದೆ ಸೆಟೆಸಿ ನಿಂತಿದ್ದಾರೆ.
ಇದೇ ಘಳಿಗೆಯಲ್ಲಿ ನಿಮಾಕ ಗಣೇಶ್ ಎಂಬಾತ ಧರ್ಮಸ್ಳ ಫೈಲ್ಸ್ ಎಂಬ ಟೈಟಲ್ ಅನ್ನು ನೋಂದಣಿ ಮಾಡಿಸಿದ್ದಾರೆ. ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆಂಬುದೂ ಸೇರಿದಂತೆ ಒಂದಷ್ಟು ವಿಚಾರ ಮುಂದಿನ ದಿನಗಳಲ್ಲಿ ಮುನ್ನೆಲೆಗೆ ಬಂದರೂ ಬರಬಹುದು. ಆದರೆ, ಈ ಸಿನಿಮಾವನ್ನು ಪರಿಪೂರ್ಣವಾಗಿ ನಿರ್ಮಾಣ ಮಾಡೋದು ಅಷ್ಟು ಸಲೀಸಿನ ಸಂಗತಿಯೇನಲ್ಲ. ಕಾನೂನು, ಭಕ್ತಿ, ಕಣ್ಣೀರುಗಳನ್ನೆಲ್ಲ ಆಳಕ್ಕಿಳಿದು ಪರಾಮರ್ಶಿಸಿ, ಸತ್ಯದ ಭೂಮಿಕೆಯಲ್ಲಿ ದೃಶ್ಯ ಕಟ್ಟೋದಕ್ಕೂ ಗುಂಡಿಗೆ ಬೇಕಾಗುತ್ತದೆ. ಅದೇನಾದರೂ ಉಳ್ಳವರಿಗೆ ಗಾಳಿ ಬೀಸಿ, ಅಸಹಾಯಕರ ಕಣ್ಣೀರನ್ನು ಗೌಣವಾಗಿಸಿದರೆ ಒಂದಷ್ಟು ಕಾಸು ಹುಟ್ಟ ಬಹುದಷ್ಟೆ. ಆದರೆ, ಆ ಪಾಪವನ್ನು ಸಾಕ್ಷಾತ್ತು ಮಂಜುನಾಥನೂ ಕ್ಷಮಿಸಲಾರ!