ಟನಾಗಲು ಬೇಕಾದ ಎಲ್ಲ ಗುಣಗಳಿದ್ದರೂ ಕೂಡಾ ನಸೀಬೆಂಬುದು ಕೆಲ ನಟರನ್ನು ಬಿಡದೇ ಸತಾಯಿಸೋದಿದೆ. ಕನ್ನಡ ಚಿತ್ರರಂಗದಲ್ಲಿಯೂ ಕೂಡಾ ಇಂಥಾದ್ದಕ್ಕೆ ದಂಡಿ ದಂಡಿ ಉದಾಹರಣೆಗಳಿದ್‌ದಾವೆ. ಒಂದು ಹಂತದವರೆಗೂ ಆ ಸಾಲಿನಲ್ಲಿಯೇ ಮಿಸುಕಾಡಲೂ ಆಗದಂತೆ ಕಂಗಾಲೆದ್ದು ನಿಂತಿದ್ದಾತ ಧರ್ಮ ಕೀರ್ತಿರಾಜ್. ಹೆಚ್ಚೇನಲ್ಲ; ಈಗೊಂದು ವರ್ಷದ ಹಿಂದೆ ಆತ ಬಿಗ್ ಬಾಸ್ ಮನೆ ಸೇರಿಕೊಳ್ಳುವವರೆಗೂ ಅದೇ ಸಂಕಟ ಸುತ್ತಿಕೊಂಡಿತ್ತು. ಬಿಗ್ ಬಾಸ್ ಮನೆಯೊಳಗೂ ಕೂಡಾ ಅಂಥಾ ಮ್ಲಾನ ಮನಃಸ್ಥಿತಿ ಧರ್ಮನ ವ್ಯಕ್ತಿತ್ವದಲ್ಲಿ ಎದ್ದು ಕಾಣಿಸುತ್ತಿತ್ತು. ಆದರೆ, ಆ ಶೋನಿಂದ ಎಲಿಮಿನೇಟ್ ಆಗಿ ಹೊರ ಬಂದ ನಂತರದಲ್ಲಿ ಧರ್ಮನ ಮುಂದೆ ಅವಕಾಶಗಳ ಒಡ್ಡೋಲಗ ನೆರೆದು ಬಿಟ್ಟಿದೆ.

ಕನ್ನಡ ಚಿತ್ರರಂಗ ಕಂಡ ಖ್ಯಾತ ಖಳ ನಟ ಕೀರ್ತಿ ರಾಜ್ ಅವರ ಪುತ್ರ ಧರ್ಮ. ದರ್ಶನ್ ಅಭಿನಯದ ನವಗ್ರಹ ಎಂಬ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದ ಈ ಹುಡುಗನನ್ನು ಕಂಡು ಪ್ರೇಕ್ಷಕರೆಲ್ಲರೂ ಖುಷಿಗೊಂಡಿದ್ದರು. ಕನ್ನಡ ಚಿತ್ರರಂಗಕ್ಕೋರ್ವ ಸ್ಫುರದ್ರೂಪಿ ನಟ ಸಿಕ್ಕ ಅಂತಲೇ ಎಲ್ಲರೂ ಮಾತಾಡಿಕೊಂಡಿದ್ದರು. ಒಂದಷ್ಟು ತಾಲೀಮು ನಡೆಸಿದರೆ ಓರ್ವ ಉತ್ತಮ ನಟನಾಗಿ ನೆಲೆಗಾಣುವ ಎಲ್ಲ ಸಾಧ್ಯತೆಗಳೂ ಧರ್ಮನ ಮುಂದಿದ್ದವು. ಆದರೇಕೋ ನವಗ್ರಹ ಬಂದು ಹದಿನೇಳು ವರ್ಷವಾಗುತ್ತಾ ಬಂದರೂ ಧರ್ಮನಿಗೊಂದು ಗೆಲುವು ಒಲಿಯಲೇ ಇಲ್ಲ. ಅದೇನು ಆಯ್ಕೆಯಲ್ಲಿನ ತಪ್ಪೋ, ಪರಿಸ್ಥಿತಿಯ ಕೈಚಳಕವೋ ಗೊತ್ತಿಲ್ಲ; ಧರ್ಮ ಸಾಲು ಸಾಲು ಸೋಲು ಕಾಣಬೇಕಾಗಿ ಬಂದಿತ್ತು.

ಹೀಗೆ ಬಸವಳಿದಿದ್ದ ಧರ್ಮನ ಮುಂದೀಗ ಸುವರ್ಣ ಕಾಲವೊಂದು ಕಣ್ತೆರೆದಂತಿದೆ. ಇದೇ ತಿಂಗಳು ಆತ ನಾಯಕನಾಗಿ ನಟಿಸಿರುವ ಬುಲೆಟ್ ಚಿತ್ರ ತೆರೆಗಾಣಲಿದೆ. ಅದರ ಬೆನ್ನಲ್ಲಿಯೇ ಸಿಂಧೂರಿ ಸೇರಿದಂತೆ ಮತ್ತಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಶೋ ನಂತರ ಧರ್ಮನ ನಸೀಬು ಸರಿ ಹೋದಂತೆ ಕಾಣಿಸುತ್ತಿದೆ. ಬಿಗ್ ಬಾಸ್ ಶೋ ಮೂಲಕವೇ ಈತನ ನೈಜ ವ್ಯಕ್ತಿತ್ವ ಪ್ರೇಕ್ಷಕರ ಮನಗೆದ್ದಿತ್ತು. ಯಾವುದೇ ತಟವಟಗಳಿಲ್ಲದೆ ನಡೆದುಕೊಂಡಿದ್ದ ಧರ್ಮ ನಾಯಕನಾಗಿ ಲಕಲಕಿಸಲೆಂದು ಕನ್ನಡಿಗರೆಲ್ಲ ಪ್ರೀತಿಯಿಂದ ಆಸಿಸಿದ್ದರು. ಅದೀಗ ಫಲ ಕೊಡುವ ಲಕ್ಷಣಗಳು ಢಾಳಾಗಿಯೇ ಗೋಚರಿಸಲಾರಂಭಿಸಿವೆ. ಆಯ್ಕೆಯ ವಿಚಾರದಲ್ಲಿ ಎಚ್ಚರ ವಹಿಸಿದರೆ ಧರ್ಮನಿಗೆ ಗೆಲುವು ದಕ್ಕೋದೇನು ಕಷ್ಟವಾಗಲಿಕ್ಕಿಲ್ಲ!

About The Author