ಪರಪ್ಪನ ಅಗ್ರಹಾರ ಜೈಲಿನ ಅಧ್ವಾನಗಳು ಆಗಾಗ ಹೊರಜಗತ್ತಿಗೆ ಪರಿಚಯವಾಗುತ್ತಿರುತ್ತವೆ. ಆದರೀಗ ವೈರಲ್ ವೀಡಿಯೋವೊಂದರ ಮೂಲಕ ನಮ್ಮ ದುಷ್ಟ ವ್ಯವಸ್ಥೆಯ ಭಯಾನಕ ಹುಳುಕೊಂಡು ಬಟಾಬಯಲಾಗಿದೆ. ಪರಪ್ಪನ ಅಗ್ರಹಾರವೆಂಬುದು ಕೂಳುಬಾಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಉಗ್ರಾಣದಂತಾಗಿ ಬಹುಕಾಲ ಕಳೆದಿದೆ. ಈ ಮೂಲಕ ಜೈಲೆಂಬುದರ ಅಸಲೀ ರೂಪುರೇಷೆಯೇ ತಲೆಕೆಳಗಾಗಿ ಬಿಟ್ಟಿದೆ. ಇದೀಗ ಹಬ್ಬಿಕೊಂಡಿರುವ ವೀಡಿಯೋಗಳ ಮೂಲಕ ಪರಪ್ಪನ ಅಗ್ರಹಾರ ಅದೆಂಥಾ ಅಧೋಗತಿಯ ಸ್ಥಿತಿ ತಲುಪಿದೆ ಎಂಬ ಸ್ಪಷ್ಟ ಚಿತ್ರಣ ರವಾನೆಯಾಗಿದೆ. ಹೆಣ್ಣುಮಕ್ಕಳನ್ನು ಅತ್ಯಾಚಾರವೆಸಗಿ ಕೊಂದ ಪಾಪಿಷ್ಟ ಉಮೇಶ್ ರೆಡ್ಡಿ, ದೇಶದ್ರೋಹಿ ಭಯೋತ್ಪಾದಕರು, ದಂಧೆಕೋರರೆಲ್ಲ ಪರಪ್ಪನ ಅಗ್ರಹಾರದಲ್ಲಿ ಬಿಂದಾಸಾಗಿರುವ ಈ ವೀಡಿಯೋಗಳ ಮೂಲಕ ಹಾಲಿ ಸರ್ಕಾರದ ಮಾನ ರಾಷ್ಟ್ರಾದ್ಯಂತ ಮೂರಾಬಟ್ಟೆಯಾಗಿದೆ!

ಜೈಲೆಂಬುದು ಕ್ರಿಮಿನಲ್ಲುಗಳ ಎದೆಯಲ್ಲೂ ಪಶ್ಚಾತ್ತಾಪದ ಪಸೆ ಮೂಡಿಸಿ ಬದಲಾವಣೆಗೆ ದಾರಿ ಮಾಡಿಕೊಡುವ ಸ್ಥಳ. ಅದು ಈ ನೆಲದ ಜನಸಾಮಾನ್ಯರಲ್ಲಿದ್ದ ನಂಬಿಕೆ. ಆದರೆ, ಈಗ ಸಣ್ಣಪುಟ್ಟ ಕೇಸುಗಳಲ್ಲಿ ಬಂಧಿಯಾದವರನ್ನೂ ಸಹ ಲೋಕಕಂಟಕರನ್ನಾಗಿ ಮಾರ್ಪಡಿಸುವ ಕೇಂದ್ರವಾಗಿ ಪರಪ್ಪನ ಅಗ್ರಹಾರದಂಥಾ ಜೈಲುಗಳು ಮಾರ್ಪಾಟುಗೊಂಡಿವೆ. ಕಾಸು ಕೊಟ್ಟರೆ ಎಂಥಾ ಸೌಕರ್ಯ ಒದಗಿಸಲೂ ಹಿಂದೇಟು ಹಾಕದಷ್ಟು ಲಜ್ಜೆಗೆಟ್ಟು ನಿಂತಿದ್ದಾರೆ. ಇಂಥಾ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ಇರೋದರಿಂದಲೇ ವಿಕೃತ ಕಾಮಿ ಉಮೇಶ್ ರೆಡ್ಡಿ ಆರಾಮಾಗಿ ಆಂಡ್ರಾಯ್ಡ್ ಫೋನಲ್ಲಿ ಮಾತಾಡುತ್ತಾ, ಎಣ್ಣೆ ಹೊಡೆದುಕೊಂಡು ಆರಾಮಾಗಿದ್ದಾನೆ. ಐಸಿಸಿ ಉಗ್ರ ಶಕೀಲ್ ಮುನ್ನಾನಂಥಾ ಕ್ರಿಮಿಗಳನ್ನೂ ಸಖಲ ಸೌಕರ್ಯ ಕಲ್ಪಿಸಿ ಸಾಕಲಾಗುತ್ತಿದೆ. ಬೇರೆ ಬೇರೆ ಕೇಸುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಎಣ್ಣೆ ಪಾರ್ಟಿ ನಡೆಸುತ್ತಾ, ಕುಣಿದು ಕುಪ್ಪಳಿಸುತ್ತಿದ್ದಾರೆ!

ಯಾವಾಗ ಇಂಥಾದ್ದೊಂದು ವೀಡಿಯೋ ವೈರಲ್ ಆಯ್ತೋ, ಆ ಕ್ಷಣದಿಂದಲೇ ರಾಜ್ಯ ಸರ್ಕಾರ ಡ್ಯಾಮೇಜ್ ಕಂಟ್ರೋಲಿಗಾಗಿ ನಾನಾ ಸ್ವರೂಪಗಳಲ್ಲಿ ಸರ್ಕಸ್ಸು ನಡೆಸಲಾಗಿದೆ. ಏಕಾಏಕಿ ಸಿಸಿಬಿ ಅಧಿಕಾರಿಗಳು ನಟ ಧನ್ವೀರನನ್ನು ವಿಚಾರಣೆಗೊಳಪಡಿಸಿದ್ದೂ ಕೂಡಾ ಅಂಥಾ ಸರ್ಕಸ್ಸಿನ ಭಾಗ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಧನ್ವೀರ್‌ನನ್ನು ಹೀಗೆ ವಿಚಾರಣೆಗೊಳಪಡಿಸಿದ ಅಧಿಕಾರಿಗಳು ಆಳೋ ಸರ್ಕಾರದ ಆಜ್ಞೆಯಂತೆಯೇ ನಡೆದುಕೊಂಡಿದ್ದಾರೆ. ಪರಪ್ಪನ ಅಗ್ರಹಾರದೊಳಗಿನ ಅಸಹ್ಯ ಬೀದಿಗೆ ಬರುತ್ತಲೇ ಕಂಗಾಲಾದ ಸರ್ಕಾರ, ಈ ವೀಡಿಯೋ ಹೊರ ಬಂದಿದ್ದರ ಮೂಲ ಯಾವುದು ಎಂಬುದುದರ ಬಗ್ಗೆ ಸಹಜವಾಗಿಯೇ ತಲೆ ಕೆಡಿಸಿಕೊಂಡಿದೆ. ಈ ಹಂತದಲ್ಲಿ ಥಟ್ಟನೆ ಗೊತ್ತಿಲ್ಲ ಖ್ಯಾತಿಯ ಗೃಹಸಚಿವರ ತಲೆಗೆ ದರ್ಶನ್ ಹೆಸರು ಹೊಳೆಯಿತಾ? ಲೀಕಾದ ವೀಡಿಯೋ ಕಿಸುರನ್ನು ನಸೀಬುಗೇಡಿ ನಟನ ತಲೆಗೆ ಕಟ್ಟಿ ಆ ಕ್ಷಣಕ್ಕೆ ಜನರ ಗಮನವನ್ನ ಬೇರೆಡೆಗೆ ವರ್ಗಾಯಿಸುವ ಷಡ್ಯಂತ್ರ ನಡೆಯಿತಾ? ಸಿಸಿಬಿ ಪೊಲೀಸರ ನಡೆಯೇಕೋ ಇಂಥಾ ಗುಮಾನಿಯನ್ನು ತೀವ್ರವಾಗಿಸುವಂತಿದೆ.

ದರ್ಶನ್ ಎರಡನೇ ಬಾರಿ ಜೈಲುಪಾಲಾದ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಆತ ಒಂದು ತಲೆದಿಂಬಿಗಾಗಿ, ಕೊಂಚ ಬಿಸಿಲಿಗೆ ಮೈಯೊಡ್ಡುವದಕ್ಕಾಗಿಯೂ ಕೋರ್ಟ್ ಮೊರೆ ಹೋಗುವಂಥಾ ಸ್ಥಿತಿ ಬಂದೊದಗಿದೆ. ಹೀಗಿರುವಾಗ ಅದೇ ಜೈಲಿನ ಬ್ಯಾರಕ್ಕುಗಳಲ್ಲಿರುವ ವಿಕೃತಕಾಮಿ ಉಮೇಶ್ ರೆಡ್ಡಿ, ಶಕೀಲ್ ಮುನ್ನಾನಂಥಾ ಭಯೋತ್ಪಾದಕರು ಎಲ್ಲ ಸೌಕರ್ಯ ಪಡೆದು ಹಾಯಾಗಿದ್ದರು. ಇದನ್ನು ಹೊರಜಗತ್ತಿಗೆ ಜಾಹೀರು ಮಾಡುವ ಮೂಲಕ ದರ್ಶನ್ ಸೂತ್ರಧಾರಿಕೆ ವಹಿಸಿಕೊಂಡನಾ? ಅಂಥಾ ವೀಡಿಯೋ ಧನ್ವೀರ್ ಕಡೆಯಿಂದ ಮೀಡಿಯಾಗಳಿಗೆ ಸರಬರಾಜಾಯಿತಾ? ಇಂಥಾ ಅನುಮಾನಗಳಿರೋದರಿಂದಲೇ ಧನ್ವೀರ್‌ನನ್ನು ವಿಚಾರಣೆಗೊಳಪಡಿಸಿ, ಆತನ ಮೊಬೈಲ್ ಅನ್ನು ಪರಿಶೀಲಿಸಲಾಗಿದೆ. ಆದರೆ, ಅಲ್ಲಿ ಯಾವ ಸಾಕ್ಷಿಗಳೂ ಸಿಗದೆ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ!
ಒಂದು ವೇಳೆ ಧನ್ವೀರ್ ದರ್ಶನ್‌ಗೆ ಸಹಕಾರಿಯಾಗಲೆಂಬ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ, ಈ ವೀಡಿಯೋ ಲೀಕ್ ಸೂತ್ರಧಾರನಾಗಿದ್ದಾನೆ ಅಂತಿಟ್ಟುಕೊಳ್ಳಿ; ಅದರಲ್ಲಿ ಅಪರಾಧವೇನೂ ಇಲ್ಲ. ಯಹಾಕೆಂದರೆ, ಇಲ್ಲಿ ಮುಖ್ಯವಾಗೋದು ವೀಡಿಯೋ ಲೀಕ್ ಮಾಡಿರೋದು ಯಾರೆಂಬುದಲ್ಲ. ಆ ವೀಡಿಯೋದಲ್ಲಿರುವ ಭೀಕರ ವಾಸ್ತವಕ್ಕೆ ಕಾರಣರ್‍ಯಾರೆಂಬುದೇ ಚರ್ಚಿಸಬೇಕಾದ ವಿಚಾರ. ಪರಪ್ಪನ ಅಗ್ರಹಾರದಂಥಾ ಜೈಲುಗಳ ಮೇಲೆ ಗೃಹ ಇಲಾಖೆ ಸದಾ ಕಾಲವೂ ಕಣ್ಣಿಡಬೇಕಾಗುತ್ತೆ. ಇಂಥಾ ಕಣ್ಗಾವಲಿನಲ್ಲೇ ವಿಕೇತ ಕಾಮಿಗಳು, ದೇಶದ್ರೋಹಿ ಭಯೋತ್ಪಾದಕರು ರಾಜವೈಭೋಗ ಅನುಭವಿಸುತ್ತಾರೆಂದರೆ ಅದಕ್ಕಿಂತ ನಾಚಿಕೆಗೇಡಿನ ವಿಚಾರ ಮತ್ಯಾವುದಿದೆ? ಗೃಹಸಚಿವ ಜಿ ಪರಮೇಶ್ವರ್ ಆ ಖಾತೆಗೆ ಯೋಗ್ಯರಲ್ಲ ಅನ್ನೋದಕ್ಕೆ ಮತ್ಯಾವ ಪುರಾವೆ ಬೇಕಿದೆ? ಕ್ರಿಮಿನಲ್ಲುಗಳನ್ನು ಜೈಲೊಳಗೆ ಕೊಬ್ಬಲು ಬಿಡುವ ಯಾವುದೇ ಪಕ್ಷದ ಸರ್ಕಾರದಿಂದ ಜನ ಏನನ್ನು ನಿರೀಕ್ಷಿಸಲು ಸಾಧ್ಯ? ನಾಗರಿಕರ ನಡುವೆ ಹುಟ್ಟಿಕೊಂಡಿರುವ ಆಕ್ರೋಶಭರಿತ ಪ್ರಶ್ನೆಗಳಿಗೆ ಉತ್ತರಿಸೋ ನೈತಿಕತೆ ಈ ಸರ್ಕಾರಕ್ಕಿದೆಯಾ?
