ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಾಗಿದ್ದಾರೆ… ಹಾಗಂತ ಹಬ್ಬಿಕೊಳ್ಳತ್ತಾ ಬಂದಿರುವ ರೂರುಗಳಿಗೆ ಅವರಿಬ್ಬರ ನಡುವೆ ಹೊತ್ತಿಕೊಂಡ ವೈಮನಸ್ಯದಷ್ಟೇ ವಯಸಾಗಿದೆ. ಒಂದು ಕಾಲದಲ್ಲಿ ಇಂಥಾ ಕಲ್ಪಿತ ಸುದ್ದಿಗಳು ಜಾಹೀರಾದಾಗ ಇಬ್ಬರ ಅಭಿಮಾನಿಗಳೂ ಸಂಭ್ರಮಿಸುತ್ತಿದ್ದದ್ದು ನಿಜ. ಅವರಿಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿದರಷ್ಟೇ ಎಲ್ಲವನ್ನೂ ಜೈಸಿಕೊಳ್ಳಬಹುದೆಂಬ ಭಾವ ಬಹುತೇಕ ಅಭಿಮಾನಿ ಪಡೆಯಲ್ಲಿದ್ದದ್ದೂ ಸತ್ಯ. ಆದರೆ, ಬರು ಬರುತ್ತಾ ನಡೆದ ಪಲ್ಲಟಗಳು, ಎರಡೂ ದಿಕ್ಕಿನಿಂದ ಅಗೋಚರವಾಗಿ ಹೊರಳಾಡಿದ್ದ ದಾಳಗಳಿವೆಯಲ್ಲಾ? ಅವು ಒಂದು ಕಾಲದ ಕುಚಿಕ್ಕು ಗೆಳೆಯರನ್ನು ಆಜನ್ಮ ಶತ್ರುಗಳಂತಾಗಿಸಿ ಬಿಟ್ಟಿದ್ದವು. ಅದರ ತೀವ್ರತೆ ಎಷ್ಟಿತ್ತೆಂದರೆ, ಖುದ್ದು ರೆಬೆಲ್ ಸ್ಟಾರ್ ಅಂಬರೀಶ್ ತ್ಯಾಪೆ ಹಚ್ಚಲು ಪ್ರಯತ್ನಿಸಿದರೂ ಫಲ ಕೊಟ್ಟಿರಲಿಲ್ಲ. ಹಾಗೆ ಅಂಬಿಯ ಮುಂದೆಯೂ ಬಗ್ಗದ ಮುನಿಸೀಗ, ಬೆಂಗಳೂರಿನ ನಟೋರಿಯಸ್ ರೌಡಿಯೊಬ್ಬನ ಸಮ್ಮುಖದಲ್ಲಿ ಮಂಡಿಯೂರಿದ ಸುದ್ದಿಯೊಂದು ಹರಿದಾಡಲಾರಂಭಿಸಿದೆ!

ಈಗ್ಗೆ ಒಂದಷ್ಟು ದಿನಗಳ ಹಿಂದೆ ಸಂಸದೆ ಸುಮಲತಾ ಹುಟ್ಟುಹಬ್ಬ ಸಮಾರಂಭ ಅದ್ದೂರಿಯಾಗಿ ನೆರವೇರಿತ್ತು. ರಾಕ್ ಲನ್ ವೆಂಕಣ್ಣ ಸಾರಥ್ಯದಲ್ಲಿ ನಡೆದಿದ್ದ ಆ ಸಮಾರಂಭದ ಆಂತರ್ಯದಲ್ಲಿ ಕಿಚ್ಚ ಮತ್ತು ದಶನ್ ರನ್ನು ಮತ್ತೆ ಒಂದುಗೂಡಿಸುವ ಸುಪ್ತ ಅಜೆಂಡಾ ಇದೆ ಅಂತಲೂ ಗುಮಾನಿಗಳು ಹರಿದಾಡಿದ್ದವು. ಅದಕ್ಕೆ ಸರಿಯಾಗಿ, ಈ ಹಿಂದೆ ದರ್ಶನ್ ಮತ್ತು ಸುದೀಪ್ ಒಟ್ಟೊಟ್ಟಿಗೆ ಯಾವ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ, ಸುಮಲತಾ ಬರ್ತ್‍ಡೇ ಪಾರ್ಟಿಯಲ್ಲಿ ಮಾತ್ರ ಇಬ್ಬರೂ ಹಾಜರಿದ್ದರು. ಅಲ್ಲಿಯೂ ಪರಸ್ಪರ ಮುಖ ನೋಡಿಕೊಳ್ಳಲೂ ಬಿಗುಮಾನ ಪ್ರದರ್ಶನಗೊಂಡಿತೇ ಹೊರತು, ಕೂಡಿಕೆ ಸಾಧ್ಯವಾಗಿರಲಿಲ್ಲ. ಅಲ್ಲಿಗೆ ರಾಕ್ ಲೈನ್ ವೆಂಕಿಯ ಸುಪ್ತ ಸಂಧಾನವೂ ಗೋತಾ ಹೊಡೆದಂತಾಗಿತ್ತು.

ಹಾಗೆ ನೋಡಿದರೆ, ಅಂಥಾದ್ದೊಂದು ಪ್ರಹಸನ ನಡೆದಿದ್ದರ ಬಗ್ಗೆ ಇಬ್ಬರ ಅಭಿಮಾನಿ ಪಡೆಯಲ್ಲಿಯೂ ನಿರಾಸೆ ಮೂಡಿರಲಿಲ್ಲ. ಇದೆಲ್ಲದಿಂದಾಗಿ ಇದು ಸಲೀಸಾಗಿ ಮುಕ್ತಾಯಗೊಳ್ಳುವ ಮುನಿಸಲ್ಲ ಎಂಬಂಥಾ ವಾತಾವರಣ ತಂತಾನೇ ಹಬ್ಬಿಕೊಂಡಿತ್ತು. ವಾತಾವರ ಹೀಗಿರುವಾಗಲೇ ದಾಸನ ಗರಡಿಯಲ್ಲಿ ಒಂದಷ್ಟು ಹವಾಮಾನ ಬದಲಾವೆಗಳಾಗಿವೆ. ಅದು ಆತನ ವೃತ್ತಿ ಬದುಕಿನಲ್ಲಿ ಹವಾಮಾನ ವೈಪರೀತ್ಯದ ಛಾಯೆ ಆವರಿಸಿಕೊಂಡಿರೋದರ ಪರಿಣಾಮವೂ ಇರಬಹುದು. ಒಟ್ಟಾರೆಯಾಗಿ ಇದೆಲ್ಲದರ ಬಾಬತ್ತೆಂಬಂತೆ ದಾಸನ ಕಡೆಯಿಂದಲೇ ಹೊಸಾ ದಾಳವೊಂದು ಉರುಳಿರುವ ಸಾಧ್ಯತೆಗಳಿವೆ. ಅದುವೇ ದರ್ಶನ್ ಮತ್ತು ಸುದೀಪ್ ರನ್ನು ನಟೋಇಯಸ್ ರೌಡಿ ಎಲಿಮೆಂಟೊಂದರ ಅಡ್ಡೆಯಲ್ಲಿ ಸೇರುವಂತೆ ಮಾಡಿದ್ದರೆ ಅಚ್ಚರಿಯೇನೂ ಇಲ್ಲ!

ಒಂದು ಮೂಲದ ಪ್ರಕಾರ, ಈಗೊಂದು ಹದಿನೈದು ದಿನಗಳ ಹಿಂದೆ ಆ ಭೂಗತ ಪಾತಕಿಯ ಅಡ್ಡೆಯಲ್ಲಿ ಒಂದು ಕಾಲದ ಕುಚಿಕ್ಕು ಗೆಳೆಯರ ಸಮಾಗಮವಾಗಿದೆ. ಅಲ್ಲಿ ತ್ಯಾಪೆ ಹಚ್ಚೋ ಕೆಲಸವೂ ಸಾಂಘವಾಗಿ ನೆರವೇರಿದೆ. ಕಡೆಗೂ ದಶನ್ ಮತ್ತು ಸುದೀಪ್ ಕೈ ಕುಲುಕಿ ಒಂದಾಗಿದ್ದಾರೆ; ಹಳೇ ಮುನಿಸು ಮರೆತು ಮುದುವರೆಯುವ ಮನಸು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಮೊನ್ನೆ ಏಕಾಏಕಿ ದರ್ಶನ್ ಕಾವೇರಿ ಹೋರಾಟಕ್ಕೆ ಧುಮುಕಿ, ಹೀನಾಮಾನ ಮಾತಾಡಿದ್ದರಲ್ಲಾ? ಆ ಸಂದರ್ಭದಲ್ಲಿ ರಜನೀಕಾಂತ್ ರನ್ನು ಟಾರ್ಗೆಟ್ ಮಾಡಿ ಮಾತಾಡುವಾಗ `ನಿಮಗೇನು ದರ್ಶನ್, ಸುದೀಪ್, ಶಿವಣ್ಣ, ಯಶ್ ಮಾತ್ರ ಕಾಣಿಸೋದಾ’ ಎಂಬರ್ಥದಲ್ಲಿ ಅಬ್ಬರಿಸಿದ್ದರು. ಮಾಮೂಲಿಯಾಗಿದ್ದರೆ, ಆ ಮಾತಿನ ನಡುವೆ ಕಿಚ್ಚನ ಹೆಸರು ಗೈರಾಗುತ್ತಿತ್ತು. ಬಲು ಪ್ರೀತಿಯಿಂದ ದರ್ಶನ್ ಕಿಚ್ಚನ ಹೆಸರು ಪ್ರಸ್ತಾಪಿಸಿರೋದರ ಹಿಂದೆ, ಭೂಗತ ಜೀವಿಯ ಸಮ್ಮುಖದಲ್ಲಿ ನಡೆದ ಸಂಧಾನದ ಕಿಸುರಿಲ್ಲದಿಲ್ಲ!

ಹಾಗಾದರೆ, ಲೀಲಾಜಾಲವಾಗಿ ಕಿಚ್ಚ ಮತ್ತು ದರ್ಶನ್ ರನ್ನು ಒಂದುಗೂಡಿಸಿದ ಆ ರೌಡಿ ಎಲಿಮೆಂಟು ಯಾವುದು? ಈ ಸ್ಟಾರ್ ನಟರಿಬ್ಬರನ್ನೂ ಅಷ್ಟು ಸಲೀಸಾಗಿ ಹ್ಯಾಂಡಲ್ ಮಾಡುವಷ್ಟು ಆತ ಪ್ರಭಾವಶಾಲಿಯಾ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿಕೊಳ್ಳೋದು ಸಹಜ. ಅದಕ್ಕೆ ಉತ್ತರ ಹುಡುಕ ಹೋದರೆ, ಆ ರೌಡಿ ಆಸಾಮಿಯ ನಟೋರಿಟಿ, ಸಿನಿಮಾ ಕನೆಕ್ಷನ್ನುಗಳು ಜಾಹೀರಾಗುತ್ತವೆ. ಸದ್ಯದ ಮಟ್ಟಿಗೆ ಬೆಂಗಳೂರು ಭೂಗತದಲ್ಲಿ ನಾನಾ ಪಲ್ಲಟಗಳಾಗುತ್ತಿವೆ. ಹಳೇ ದಂಧೆಗಳು ಹೊಸ ಸ್ವರೂಪದ ಪಾಲೀಶು ಮಾಡಿಸಿಕೊಂಡಂತೆ ನಳನಳಿಸುತ್ತಿವೆ. ಅದರಲ್ಲಿ ಭೂ ಮಾಫಿಯಾ, ಫೈನಾನ್ಸ್ ಮಾಫಿಯಾ, ಹೈಟೆಕ್ ಇಸ್ಪೀಟ್ ಅಡ್ಡೆಗಳೂ ಸೇರಿಕೊಳ್ಳುತ್ತವೆ. ಅದೆಲ್ಲವನ್ನೂ ಮ್ಯಾನೇಜು ಮಾಡುತ್ತಾ, ಬೆಂಗಳೂರು ಸೌತ್ ಡಾನ್ ಎಂಬಂತೆ ಈ ರೌಡಿ ಮೆರೆಯುತ್ತಿದ್ದಾನೆ.

ಸದ್ಯಕ್ಕೆ ಬೆಂಗಳೂರು ಭೂಗತದಲ್ಲಿ ಸೈಲೆಂಟ್ ಸುನೀಲ ನೇಪಥ್ಯಕ್ಕೆ ಸರಿದಿದ್ದಾನೆ. ಒಂದು ಕಾಲಕ್ಕೆ ಆತನ ಸಿಂಡಿಕೇಟ್ ಸದಸ್ಯನೇ ಆಗಿದ್ದ ವಿಲ್ಸನ್ ಗಾರ್ಡನ್ ನಾಗನ ಹೆಸರು ಫೀಲ್ಡಿನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಆತನಿಗಿಂತಲೂ ಮೋಸ್ಟ್ ಸೀನಿಯರ್, ನಟೋರಿಯಸ್ ಅನ್ನಿಸಿಕೊಂಡಿರುವವನು ಈ ಆಸಾಮಿ. ಭೂಗತ ವಲಯದಲ್ಲಿ ಪೆಡ್ಲು ಅಂತಲೇ ಉಪನಾಮಧೇಯ ಹೊಂದಿರುವ ಈತ, ಒಂದು ಕಾಲದಲ್ಲಿ ಭಯಾನಕ ಸುಪಾರಿ ಹಂತಕ. ಇಂಥವನು ಆರಂಭ ಕಾಲದಿಂದಲೇ ರೆಬೆಲ್ ಸ್ಟಾರ್ ಅಂಬಿಯ ನಂಬಿಕೆ ಗಿಟ್ಟಿಸಿಕೊಂಡಿದ್ದ. ಅತ್ತ ಒಂದಷ್ಟು ವರ್ಷಗಳ ಹಿಂದೆ ಭೀಕರವಾಗಿ ಹತನಾಗಿದ್ದ ಮಂಡ್ಯ ಸೀಮೆಯ ರೌಡಿ ಜಡೇಜಾ ರವಿ ಕೂಡಾ ಅಂಬಿಯ ಅಭಿಮಾನಿಯಾಗಿ ಗುರುತಿಸಿಕೊಂಡಿದ್ದ. ಹಾಗೆ ಸಿಗರೇಟಿನ ಘಾಟು, ಅಂಬಿಯಣ್ಣನ ಕೈಯಲ್ಲಿರುತ್ತಿದ್ದ ಎಣ್ಣೆಯ ಕಮಟಿನ ನಡುವೆ ಜಡೇಜಾ ಮತ್ತು ಪೆಡ್ಲುವಿನ ನಡುವೆ ಜನ್ಮಾಂತರಗಳ ಸ್ನೇಹವೊಂದು ಸೊಂಪಾಗಿ ಕುದುರಿಕೊಂಡಿತ್ತು.

ಅಷ್ಟಕ್ಕೂ ಈ ಪೆಡ್ಲು ದರ್ಶನ್ ಮತ್ತು ಸುದೀಪ್ ಸರಹದ್ದಿಗೆ ದಾಟಿಕೊಂಡಿದ್ದರ ಮೂಲ ಕೂಡಾ ಮಂಡ್ಯದ ಗಂಡಿನ ಹಜಾರವೇ. ಹಾಗೆ, ಚಿಗುರಿಕೊಂಡ ಸ್ನೇಹ ದರ್ಶನ್ ಜೊತೆಗೇ ಪೆಡ್ಲು ಅಂಟಿಕೊಳ್ಳುವಂತೆ ಮಾಡಿತ್ತು ಅನ್ನುವವರೂ ಇದ್ದಾರೆ. ಅದರ ಪರಿಣಾಮವಾಗಿಯೇ ದಾಸನ ಫಾರ್ಮ್ ಹೌಸಿನಲ್ಲಿ ಆಗಾಗ ಪೆಡ್ಲು ರೌಂಡು ಹೊಡೆಯುತ್ತಿತ್ತು. ಇತ್ತೀಚೆಗೆ ಉಮಾಪತಿ ಕೇಸಿನಲ್ಲಿಯೂ ಪೆಡ್ಲು ಸದ್ದು ಮಾಡಿತ್ತು. ಹೀಗೆ ದರ್ಶನ್ ಜೊತೆ ಸ್ನೇಹವಿಟ್ಟುಕೊಂಡಿದ್ದ ಪೆಡ್ಲು, ಸುದೀಪ್‍ಗೂ ಪರಿಚತನೇ. ಆತನ ಪ್ರಭಾವ ಎಷ್ಟಿದೆಯೆಂದರೆ, ವರ್ಷಾಂತರಗಳ ಹಿಂದೆ ಗೃಹಮಂತ್ರಿಯಾಗಿದ್ದ ಪಾಟೀಲರ ಕಾಲ್ ಲಿಸ್ಟಿನಲ್ಲಿಯೂ ಪೆಡ್ಲಿನ ಹೆಸರಿತ್ತು. ಆ ಕಾಲಕ್ಕದು ಭಾರೀ ಸುದ್ದಿಯೂ ಆಗಿತ್ತು.

ಇಂಥಾ ನಟೋರಿಯಸ್ ರೌಡಿ ಪೆಡ್ಲು ಅಂತೂ ಇಂತೂ ಕಿಚ್ಚ ಮತ್ತು ದರ್ಶನ್ ರನ್ನು ಒಂದಾಗಿಸಿದ್ದಾನೆಂದು ಹೇಳಲಾಗುತ್ತಿದೆ. ಸದ್ಯದ ಮಟ್ಟಿಗೆ ದರ್ಶನ್‍ಗೂ ಕೂಡಾ ಎಲ್ಲ ವಿವಾದಗಳಿದ ಕಳಚಿಕೊಳ್ಳಬೇಕಾಗಿದೆ. ಯಾಕೆಂದರೆ, ಕ್ರಾಂತಿಯ ಸಂದರ್ಭದಲ್ಲಿಯೇ ದರ್ಶನ್ ಗೆ ವಾಸ್ತವ ದರ್ಶನವಾಗಿದೆ. ಅದರಿಂದಾಗಿಯೇ ಅತ್ತ ಯುವ ರಾಜ್‍ಕುಮಾರ್ ಶೂಟಿಂಗ್ ಸೆಟ್ಟಿಗೆ ಹೋಗಿ, ರೊಚ್ಚಿಗೆದ್ದಿದ್ದ ಪುನೀತ್ ಅಭಿಮಾನಿಗಳನ್ನು ತಣ್ಣಗಾಗಿಸುವ ಕೆಲಸ ನಡೆದಿದೆ. ಅದರ ಬೆನ್ನಲ್ಲಿಯೇ ಕಿಚ್ಚನೊಂದಿಗೂ ಮತ್ತೆ ಕೂಡಿಕೆಯಾಗಿದೆ. ಅತ್ತ ಅಂಬರೀಶ್, ಇತ್ತ ವೆಂಕಣ್ಣ ಸೇರಿದಂತೆ ಘಟಾನುಘಟಿಗಳು ಇವರಿಬ್ಬರನ್ನು ಒಂದುಗೂಡಿಸಲು ನಾನಾ ಸರ್ಕಸ್ಸುಗಳನ್ನು ನಡೆಸಿದ್ದರು; ಪದೇ ಪದೆ ಸೋತಿದ್ದರು. ಕಡೆಗೂ ರೌಡಿ ಎಲಿಮೆಂಟೊಬ್ಬ ಭೂಗತ ಅಡ್ಡೆಯಲ್ಲಿ ತಣ್ಣಗೆ ಅದನ್ನು ಸಾಧ್ಯವಾಗಿಸಿದ್ದಾನೆಂದರೆ, ಅದು ಈ ಶತಮಾನದ ಪವಾಡ ಎನ್ನಲಡ್ಡಿಯಿಲ್ಲ. ಈ ಮೂಲಕ ಫ್ಯಾನ್ ವಾರ್, ಹಾದಿರಂಪ ಬೀದಿರಂಪಕ್ಕೆ ಅಲ್ಪ ವಿರಾಮವಿಟ್ಟ ಪೆಡ್ಲಿನ ಕಿಮ್ಮತ್ತನ್ನು ಮೆಚ್ಚಿಕೊಳ್ಳದೆ ವಿಧಿಯಿಲ್ಲ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!