ದರ್ಶನ್ ವಿಚಾರದಲ್ಲಿ ಮಾತ್ರವಲ್ಲ; ಪರಪ್ಪನ ಅಗ್ರಹಾರದ ಒಟ್ಟಾರೆ ಅವ್ಯವಸ್ಥೆ, ದಂಧೆಗಳ ಬಗ್ಗೆ `ಶೋಧ ನ್ಯೂಸ್’ ತನಿಖಾ ವರದಿಯೊಂದನ್ನು ಕಳೆದ ವರ್ಷವೇ ಪ್ರಕಟಿಸಿತ್ತು. ಗೃಹ ಇಲಾಖೆಯೊಳಗೂ ಅದರ ಆಧಾರದಲ್ಲಿ ಚರ್ಚೆಗಳಾದೇಟಿಗೆ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷ ಬಚಾವಾಗಲು ಹರಸಾಹಸ ಪಟ್ಟಿದ್ದ. ಕಡೆಗೂ ಮಂಡ್ಯ ಸೀಮೆಯ ಶಾಸಕರೋರ್ವರ ಮೂಲಕ ಜಾತಿ ಲಾಬಿ ನಡೆಸಿ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದ. ಆದರೆ, ಶೇಷ ಪರಪ್ಪನ ಅಗ್ರಹಾರವನ್ನು ಹಡಾಲೆಬ್ಬಿಸಿದ್ದ ರೀತಿಯಿದೆಯಲ್ಲಾ? ಅದು ದರ್ಶನ್ ಜೈಲುಪಾಲಾದ ನಂತರ ನಾನಾ ಸ್ವರೂಪಗಳಲ್ಲಿ ಜಾಹೀರಾಗುತ್ತಿದೆ. ಇದೆಲ್ಲದರ ಮೇಲೆ ಈ ಹಿಂದೆ ಬಂಧೀಖಾನೆ ಮುಖ್ಯಸ್ಥೆಯಾಗಿದ್ದ ಮಾಲಿನಿ ಕೃಷ್ಣಮೂರ್ತಿಯ ನೆರಳಿದೆ ಎಂಬ ಆರೋಪವೂ ಇದೆ. ಈಗ ಲೀಕಾಗಿರುವ ದರ್ಶನ್ ಫೋಟೋದ ಹಿಂದೆಯೂ ಪರಪ್ಪನ ಅಗ್ರಹಾರದೊಳಗಿನ ಕಡುಭ್ರಷ್ಟ ವಾತಾವರಣದ ಕೈವಾಡ ಇದ್ದೇ ಇದೆ. ಪರಿವರ್ತನೆಯ ತಾಣವಾದ ಜೈಲು ಫಟಿಂಗ ಅಧಿಕಾರಿಗಳ ಕೈಗೆ ಸಿಕ್ಕರೆ ಏನಾಗಬಹುದೋ ಅದೆಲ್ಲವಕ್ಕೂ ಪರಪ್ಪನ ಅಗ್ರಹಾರ ತಾಜಾ ಉದಾಹರಣೆಯಂತಾಗಿದೆ!
-ಸಂತೋಷ್ ಬಾಗಿಲಗದ್ದೆ
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸಿಕ್ಕಿದ್ದ ಬೇಲ್ ರದ್ದಾಗಿದ್ದರಿಂದಾಗಿ ದರ್ಶನ್ ಪಟಾಲಮ್ಮು ಮತ್ತೆ ಜೈಲುಪಾಲಾಗಿದೆ. ಹಾಗೆ ದರ್ಶನ್ ಪರಪ್ಪನ ಅಗ್ರಹಾರ ಸೇರುತ್ತಲೇ ಮೀಡಿಯಾ ಮಂದಿ ಜೈಲಿನ ಹೊರ ಭಾಗದಲ್ಲಿ ಹದ್ದಿನಕಣ್ಣಿಟ್ಟು ಪಹರೆ ಕಾಯಲಾರಂಭಿಸಿದ್ದಾರೆ. ದರ್ಶನ್ ಕೆಮ್ಮಿದ್ದು, ಕ್ಯಾಕರಿಸಿದ್ದು, ಬೆಳಗ್ಗೆ ಉಪ್ಪಿಟ್ಟು ತಿಂದ ಸುದ್ದಿಗಳೆಲ್ಲ ಬಗ್ಗಡದಂತೆ ಜನಸಾಮಾನ್ಯರ ಮುಂದೆ ಗುಡ್ಡೆ ಬೀಳುತ್ತಿವೆ. ಇದೇ ಹೊತ್ತಿನಲ್ಲಿ ಏಕಾಏಕಿ ದರ್ಶನ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿದೆ. ಅದು ಯಾವೊಬ್ಬ ಸ್ಟಾರ್ ನಟನೂ ಕಾಣಿಸಿಕೊಳ್ಳಲು ಇಷ್ಟಪಡದ ರೀತಿಯಲ್ಲಿರೋ ದರ್ಶನ್ ಫೋಟೋ. ಅದನ್ನಿಟ್ಟುಕೊಂಡು ವಿರೋಧಿ ಪಾಳೆಯ ಕುಹಕವಾಡಲಾರಂಭಿಸಿದರೆ, ಅಭಿಮಾನಿ ಪಡೆ ದುಃಖದ ಮಡುವಿಗೆ ಬಿದ್ದಿದೆ. ಕೆಲ ಮಾಧ್ಯಮಗಳಲ್ಲಿ ಅದು ದರ್ಶನ್ ಜೈಲುಪಾಲಾದ ಘಳಿಗೆಯ ಫೋಟೋ ಅಂತೆಲ್ಲ ಸುದ್ದಿ ಬಿತ್ತರಿಸಲಾಗುತ್ತಿದೆ. ಆ ಫೋಟೋದ ಮೂಲ ಹುಡುಕುತ್ತಾ ಹೋದರೆ, ಪರಪ್ಪನ ಅಗ್ರಹಾರ ಜೈಲೊಳಗಿನ ಅರಾಜಕ ಸ್ಥಿತಿಯನ್ನು ಮತ್ತೊಮ್ಮೆ ಬಯಲಾಗುತ್ತದೆ!
ಅದು ಗುಪ್ತ ಫೋಟೋ!
ದರ್ಶನ್ ವಿಚಾರದಲ್ಲಿ ಮಾತ್ರವಲ್ಲ; ಪರಪ್ಪನ ಅಗ್ರಹಾರದ ಒಟ್ಟಾರೆ ಅವ್ಯವಸ್ಥೆ, ದಂಧೆಗಳ ಬಗ್ಗೆ ಶೋಧ ನ್ಯೂಸ್ ತನಿಖಾ ವರದಿಯೊಂದನ್ನು ಕಳೆದ ವರ್ಷವೇ ಪ್ರಕಟಿಸಿತ್ತು. ಗೃಹ ಇಲಾಖೆಯೊಳಗೂ ಅದರ ಆಧಾರದಲ್ಲಿ ಚರ್ಚೆಗಳಾದೇಟಿಗೆ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷ ಬಚಾವಾಗಲು ಹರಸಾಹಸ ಪಟ್ಟಿದ್ದರು. ಕಡೆಗೂ ಮಂಡ್ಯ ಸೀಮೆಯ ಶಾಸಕರೋರ್ವರ ಮೂಲಕ ಜಾತಿ ಲಾಬಿ ನಡೆಸಿ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದರು. ಆದರೆ, ಶೇಷ ಪರಪ್ಪನ ಅಗ್ರಹಾರವನ್ನು ಹಡಾಲೆಬ್ಬಿಸಿದ್ದ ರೀತಿಯಿದೆಯಲ್ಲಾ? ಅದು ದರ್ಶನ್ ಜೈಲುಪಾಲಾದ ನಂತರ ನಾನಾ ಸ್ವರೂಪಗಳಲ್ಲಿ ಜಾಹೀರಾಗುತ್ತಿದೆ. ಈಗ ಲೀಕಾಗಿರುವ ದರ್ಶನ್ ಫೋಟೋದ ಹಿಂದೆಯೂ ಪರಪ್ಪನ ಅಗ್ರಹಾರದೊಳಗಿನ ಕಡುಭ್ರಷ್ಟ ವಾತಾವರಣದ ಕೈವಾಡ ಇದ್ದೇ ಇದೆ.
ಸಾಮಾನ್ಯವಾಗಿ ಯಾವ ಹೀರೋಗಳೂ ಕೂಡಾ ಕಳೆಗುಂದಿದ ಫೋಟೋಗಳು ಪ್ರೇಕ್ಷಕರೆದುರು ತೆರೆದುಕೊಳ್ಳೋದನ್ನು ಸಹಿಸೋದಿಲ್ಲ. ದರ್ಶನ್ ವಿಗ್ ಬಳಸಿಕೊಂಡು ಮ್ಯಾನೇಜು ಮಾಡಿದ್ದರ ಹಿಂದೆಯೂ ಅದೇ ಫಾರ್ಮುಲಾವಿದೆ. ದರ್ಶನ್ ಇತ್ತೀಚೆಗಷ್ಟೇ ತಿರುಪತಿಯಲ್ಲಿ ಮುಡಿಕೊಟ್ಟು ಬಂದಿದ್ದ. ಅಷ್ಟರಲ್ಲಿಯೇ ಸುಪ್ರೀಂ ಕೋರ್ಟಿನಲ್ಲಿ ಬೇಲ್ ರದ್ದಾಗಿ ಆತ ಜೈಲುಪಾಲಾಗುವ ಸಂದರ್ಭ ಎದುರಾಗಿದೆ. ಹೀಗೆ ಹೊಸತಾಗಿ ಕೈದಿಗಳು ಸೇರ್ಪಡೆಗೊಳ್ಳುವಾಗ ಪರಪ್ಪನ ಅಗ್ರಹಾರದ ವೆಬ್ ಕ್ಯಾಮೆರಾದಲ್ಲಿ ಫೋಟೋ ಹಿಡಿದು, ಕಂಪ್ಯೂಟರಿನಲ್ಲಿ ದಾಖಲೆಯಾಗಿ ಇಡಲಾಗುತ್ತೆ. ಅದು ಗೌಪ್ಯವಾಗಿರಬೇಕೆಂಬ ನಿಯಮಾವಳಿ ಇದೆ. ಈಗ ವೈರಲ್ ಆಗಿರೋ ದರ್ಶನ್ ಫೋಟೋ ಅದೇ ರೀತಿ ಪರಪ್ಪನ ಅಗ್ರಹಾರದೊಳಗಿನ ವೆಬ್ ಕ್ಯಾಮ್‌ನಲ್ಲಿ ತೆಗೆದಿರುವುದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಹಾಗಾದರೆ, ಜೈಲಿನ ಕಡತದಲ್ಲಿರಬೇಕಾದ, ವೆಬ್ ಕ್ಯಾಮ್ ಸೆರೆ ಹಿಡಿದು ಗುಪ್ತವಾಗಿಡಬೇಕಾದ ಫೋಟೋ ಹೊರಬಂದಿದ್ದು ಹೇಗೆ? ಪರಪ್ಪನ ಅಗ್ರಹಾರದೊಳಗಿಂದ ದರ್ಶನ್ ಫೋಟೋವನ್ನು ಲೀಕ್ ಮಾಡಿದವರ್‍ಯಾರು? ಇಂಥಾ ಹತ್ತಾರು ಪ್ರಶ್ನೆಗಳು ಸಹಜವಾಗಿಯೇ ಮೂಡಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ತಲಾಶು ನಡೆಸಿದರೆ ಗುಮಾನಿಯೆಂಬುದು ಪರಪ್ಪನ ಅಗ್ರಹಾರದ ಮುಖ್ಯ ಜೈಲು ಅಧೀಕ್ಷಕ ಸುರೇಶ್ ಸುತ್ತ ಸುಳಿದಾಡುತ್ತದೆ. ಒಂದಿಡೀ ಜೈಲಿನ ದೇಖಾರೇಖಿಯನ್ನು ನೋಡಿಕೊಂಡು, ಎಲ್ಲ ವಿಧದಲ್ಲಿಯೂ ಗೌಪ್ಯತೆ ಕಾಪಾಡಿಕೊಳ್ಳಬೇಕಾದಾತ ಸುರೇಶ್. ಈತನ ನೆರಳಲ್ಲಿಯೇ ದರ್ಶನ್ ಫೋಟೋ ಲೀಕ್ ಆಗಿದೆಯೆಂದರೆ ನಾನಾ ದಿಕ್ಕಿನಲ್ಲಿ ಅನುಮಾನ ಮೂಡಿಕೊಳ್ಳೋದು ಸಹಜ.
ಮಾಲಿನಿ ಭಂಟ ಸುರೇಶ
ಅಷ್ಟಕ್ಕೂ ಸುರೇಶ್ ಹಿನ್ನೆಲೆ ಗಮನಿಸಿದರೆ ದರ್ಶನ್ ಫೋಟೋ ಲೀಕ್ ಪ್ರಕರಣದ ಸುತ್ತ ಹಬ್ಬಿಕೊಂಡಿರುವ ಅನುಮಾನಗಳು ಬಲಗೊಳ್ಳುತ್ತವೆ. ಈ ಹಿಂದೆ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧಿಯಾಗಿದ್ದಾಗ ಆತನಿಗೆ ರಾಜಾತಿಥ್ಯ ನೀಡಿದ ಬಗ್ಗೆ ವಿವಾದವೆದ್ದಿತ್ತು. ದಾಸ ಜೈಲೊಳಗೆ ವಿಲ್ಸನ್ ಗಾರ್ಡನ್ ನಾಗನಂಥಾ ರೌಡಿ ಎಲಿಮೆಂಟುಗಳ ಜೊತೆ ಆರಾಮಾಗಿ ಧಮ್ಮು ಹೊಡೆಯುತ್ತಿದ್ದ ಫೋಟೋ ಲೀಕ್ ಆಯ್ತಲ್ಲಾ? ಅದು ಸರ್ಕಾರವನ್ನೇ ಮುಜುಗರಕ್ಕೀಡು ಮಾಡಿತ್ತು. ಅದೆಂಥಾ ಗಂಭೀರ ಆರೋಪಗಳಿದ್ದರೂ ಅಂಡಿನ ಕೆಳ ಹಾಕಿ ನಿರಾಳವಾಗಿ ಕೂರಬಲ್ಲ ಗೃಹಸಚಿವ ಪರಮೇಶ್ವರ್ ಕೂಡಾ ಇದರಿಂದಾಗಿ ಪೀಕಲಾಟಕ್ಕಿಟ್ಟುಕೊಂಡಿದ್ದರು. ವಿಶೇಷವೆಂದರೆ, ಆ ಪ್ರಕರಣದಲ್ಲಿ ಆಕಾಲಕ್ಕೆ ಬಂಧಿಖಾನೆಗಳ ಮುಖ್ಯಸ್ಥರಾಗಿದ್ದ ಐಪಿಎಸ್ ಮಾಲಿನಿ ಕೃಷ್ಣಮೂರ್ತಿಯವರ ಮೇಲೇ ನೇರವಾಗಿ ಆರೋಪ ಕೇಳಿ ಬಂದಿತ್ತು. ಸಹಾಯಕ ಅಧೀಕ್ಷಕರಾಗಿದ್ದ ಕರ್ಣ ಕ್ಷತ್ರಿಯ ಹಾಗೂ ಮಾಲಿನಿ ಕೃಷ್ಣಮೂರ್ತಿಯವರ ಸಹಾಯಕರಾಗಿದ್ದ ಕೆ. ಸುರೇಶ್ ಮೂಲಕ ದರ್ಶನ್ ಕಡೆಯಿಂದ ಎರಡು ಕೋಟಿ ಗುಂಜಿಕೊಂಡ ಘನ ಗಂಭೀರ ಆರೋಪ ಮಾಲಿನಿ ಕೃಷ್ಣಮೂರ್ತಿ ಅವರ ಮೇಲಿತ್ತು. ಈಗ ದರ್ಶನ್ ಬೇಲ್ ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ಮಾಲಿನಿ ಪ್ರಕರಣದ ಬಗ್ಗೆಯೂ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿದೆ. ಈ ಹಿಂದೆ ದರ್ಶನ್‌ಗೆ ರಾಜಾತಿಥ್ಯ ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ ಐಪಿಎಸ್ ಅಧಿಕಾರಿ ಚಂದ್ರಗುಪ್ತರನ್ನು ತನಿಖೆ ನಡೆಸಲು ನೇಮಿಸಲಾಗಿತ್ತು. ಈ ತನಿಖೆಯಲ್ಲಿ ಒಟ್ಟು ಹದಿನೇಳು ಮಂದಿ ಜೈಲಾಧಿಕಾರಿಗಳ ವಿರುದ್ಧ ಎಲ್ಲ ಆರೋಪಗಳು ಸಾಬೀತಾಗಿದ್ದವು. ಅದರಲ್ಲಿ ಹನ್ನೊಂದು ಮಂದಿಯನ್ನು ಅಮಾನತುಗೊಳಿಸಲಾಗಿತ್ತು.
ಆದರೆ, ಸಹಾಯ ಅಧೀಕ್ಷಕ ಕರ್ಣ ಕ್ಷತ್ರಿಯ ಹಾಗೂ ಈಗ ಮುಖ್ಯ ಅಧೀಕ್ಷಕರಾಗಿರುವ ಕೆ ಸುರೇಶ್ ಮಾಲಿನಿ ಕೃಷ್ಣಮೂರ್ತಿಯ ಕೃಪೆಯಿಂದ ಬಚಾವಾಗಿದ್ದಾರೆ. ಮತ್ತದೇ ಹಳೇ ದಂಧೆಗಳನ್ನು ಮುಂದುವರೆಸಿದ್ದಾರೆಂಬ ಆರೋಪಗಳಿದ್ದಾವೆ. ಇದೀಗ ದರ್ಶನ್ ಫೋಟೋ ಲೀಕ್ ಆಗುವ ಮೂಲಕ ಮುಖ್ಯ ಅಧೀಕ್ಷಕ ಸುರೇಶ ಅದೆಂಥಾ ಅಧಕ್ಷ ಅಧಿಕಾರಿ ಎಂಬ ವಿಚಾರ ನಿಖರವಾಗಿಯೇ ಸಾಬೀತಾಗಿದೆ. ಜೈಲೊಳಗಿಂದಲೇ ಫೋನ್ ಪೇ ಮೂಲಕ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿರೋ ಸುಳಿವುಗಳೂ ಸಿಕ್ಕಿವೆ. ಸಜಾಶ ಕೈದಿಗಳು ಜೈಲೊಳಗಿದ್ದುಕೊಂಡೇ ಮೊಬೈಲ್ ಮೂಲಕ ಧಮಕಿ ಹಾಕಿ ಹಪ್ತಾ ವಸೂಲಿ ಮಾಡುತ್ತಿರುವ ಕರಾಳ ದಂಧೆಯೂ ಬಯಲಾಗಿದೆ. ಈ ಬಗ್ಗೆ ಸಿಸಿಬಿಯಲ್ಲಿ ಎಫ್‌ಐಆರ್ ಆಗಿ ತನಿಖೆ ನಡೆಯುತ್ತಿದೆ. ಈ ದಂಧೆಗೆ ಅನುವು ಮಾಡಿಕೊಡುವ ಮೂಲಕ ಮುಖ್ಯ ಅಧೀಕ್ಷಕ ಸುರೇಶ ಮತ್ತು ಕರ್ಣ ಕೋಟ್ಯಾಂತರ ರೂಪಾಯಿ ಶೇರು ಪಡೆದಿರೋದು ಬೆಳಕಿಗೆ ಬಂದಿದೆಯಂತೆ!
2ಕೋಟಿ ಕೊಟ್ಟೆ ಅಂದ!
ಸುಮ್ಮನೊಮ್ಮೆ ಆಲೋಚಿಸಿ ನೋಡಿ, ಈ ಹಿಂದೆ ದರ್ಶನ್ ಜೈಲು ಸೇರಿದಾಗಲೂ ಫೋಟೋ ಲೀಕ್ ಆಗಿತ್ತು. ಈಗಲೂ ಅದು ಮತ್ತೊಂದು ಅವತಾರದಲ್ಲಿ ಮುಂದುವರೆದಿದೆ. ಈ ಮೂಲಕವೇ ದರ್ಶನ್ ಕಡೆಯಿಂದ ಮತ್ತೊಂದಷ್ಟು ಕಾಸು ಗುಂಜಿಕೊಳ್ಳಲು ಪರಪ್ಪನ ಅಗ್ರಹಾರದೊಳಗಿನ ಶನಿಸಂತಾನಿಗರು ತಯಾರಾದಂತಿದೆ. ಈ ಹಿಂದೆ ಬಂಧಿಖಾನೆ ಮುಖ್ಯಸ್ಥೆಯಾಗಿದ್ದ, ಈಗ ನಿವೃತ್ತರಾಗಿರುವ ಮಾಲಿನಿ ಕೃಷ್ಣಮೂರ್ತಿ ತಾನು ಬಚಾವಾಗೋದಲ್ಲದೇ ಸುರೇಶ, ಕರ್ಣ ಸೇರಿದಂತೆ ಒಂದಷ್ಟು ಭ್ರಷ್ಟ ಅಧಿಕಾರಿಗಳನ್ನು ಕಾಪಾಡಿಕೊಂಡಿದ್ದಾರೆ. ಕಾನೂನು ಪ್ರಕಾರವೇ ಎಲ್ಲ ನಡೆದಿದ್ದರೆ, ದರ್ಶನ್‌ಗೆ ರಾಜಾತಿಥ್ಯ ಕೊಟ್ಟ ಕೇಸಲ್ಲಿ ಮಾಲಿನಿ ಮೇಲೆ ಕಾನೂನು ಕ್ರಮ ಜರುಗುತ್ತಿತ್ತು. ಆದರೆ ಅವರು ಈಗ ಸಚಿವ ಸ್ಥಾನ ಕಳೆದುಕೊಂಡಿರುವ ರಾಜಣ್ಣನ ಕಡೆಯಿಂದ ಬಚಾವಾಗಿ, ತನ್ನ ಕೂಟವನ್ನೂ ಸೇಫ್ ಆಗಿಸಿದ್ದಾರೆಂಬ ಆರೋಪಗಳಿದ್ದಾವೆ.
ಚಂದ್ರಗುಪ್ತ ವರದಿಯಲ್ಲಿ ಉಲ್ಲೇಖವಾಗಿದ್ದ ಅಂಶಗಳು ಗಂಭೀರವಾಗಿದ್ದವು. ಅದರನ್ವಯ ಕ್ರಮ ಕೈಗೊಂಡಿದ್ದಿದ್ದರೆ ಆಗ ಬಂಧಿಖಾನೆ ಮುಖ್ಯಸ್ಥೆಯಾಗಿದ್ದ ಮಾಲಿನಿ ಕೃಷ್ಣಮೂರ್ತಿ ತನ್ನ ಭ್ರಷ್ಟ ಪಟಾಲಮ್ಮಿನ ಸಮೇತ ಅಮಾನತುಗೊಳ್ಳುತ್ತಿದ್ದರು. ಆದರೆ, ಆಕೆ ರಾಜಕೀಯ ಪ್ರಭಾವ ಬಳಸಿಕೊಂಡು ಚಂದ್ರಗುಪ್ತ ವರದಿಯನ್ನೇ ಪರಪ್ಪನ ಅಗ್ರಹಾರದಲ್ಲಿ ಬಂಧಿಸಿಟ್ಟಿದ್ದರು. ಆದರೀಗ ಮಾಲಿನಿ, ಕರ್ಣ, ಸುರೇಶ ಸೇರಿದಂತೆ ಪರಪ್ಪನ ಅಗ್ರಹಾರದೊಳಗಿರುವ ಸಮಸ್ತ ಭ್ರಷ್ಟ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಯಾಕೆಂದರೆ, ದರ್ಶನ್ ಬೇಲ್ ಕ್ಯಾನ್ಸಲ್ ಮಾಡಿ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್ ಪರಪ್ಪನ ಅಗ್ರಹಾರದ ಲಂಚಬಾಕ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದೆ. ಕಳೆದ ಬಾರಿ ದರ್ಶನ್ ರೌಡಿ ಪಟಾಲಮ್ಮಿನ ಜೊತೆಗಿರೋ ಫೋಟೋ ಲೀಕ್ ಆದಾದ ಗೃಹಸಚಿವ ಪರಮೇಶ್ವರ್ ಜೈಲಿಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ದರ್ಶನ್ ಪರಮ್ ಮುಂದೆಯೇ ಭಯಾನಕ ಸತ್ಯವೊಂದನ್ನು ಒದರಿದ್ದ. ಕರ್ಣ ಕ್ಷತ್ರಿಯ ಮತ್ತು ಈಗ ಮುಖ್ಯ ಜೈಲಾಧಿಕಾರಿಯಾಗಿರೋ ಕೆ ಸುರೇಶ್ ಮೂಲಕ ಮಾಲಿನಿ ಕೃಷ್ಣಮೂರ್ತಿ ತನ್ನಿಂದ ಎರಡು ಕೋಟಿ ಪಡೆದುಕೊಂಡಿದ್ದಾರೆಂಬುದು ದರ್ಶನ್ ಬಿಚ್ಚಿಟ್ಟ ಸತ್ಯದ ಸಾರಾಂಶವಾಗಿತ್ತು!
ದಯಾನಂದ್ ಅವರ ಆವಗಾಹನೆಗೆ…
ಈಗ ಬಂಧಿಖಾನೆ ಮುಖ್ಯಸ್ಥರಾಗಿ ಖಡಕ್ ಅಧಿಕಾರಿಯಾಗಿ ಹೆಸರು ಮಾಡಿರುವ ದಯಾನಂದ್ ಅವರು ಬಂದಿದ್ದಾರೆ. ಕಾರ್ಯನಿರ್ವಹಿಸಿದ ಜಾಗಗಳಲ್ಲೆಲ್ಲ ಅತ್ಯಂತ ಕಟ್ಟುನಿಟ್ಟಾಗಿ, ಯಾರ ಮುಲಾಜಿಗೂ ಬಗ್ಗೆದೆ ನಡೆದುಕೊಳ್ಳುವ ಮೂಲಕ ದಯಾನಂದ್ ಅವರು ಹೆಸರಾಗಿದ್ದಾರೆ. ಇಂಥಾ ಅಧಿಕಾರಿಯ ಸುಪರ್ಧಿಗೀಗ ಪರಪ್ಪನ ಅಗ್ರಹಾರವೂ ಸಿಕ್ಕಿದೆ. ಈ ಕಾರಣದಿಂದಲೇ ಈ ಹಿಂದೆ ಮಾಲಿನಿ ಕೃಷ್ಣಮೂರ್ತಿ ದರ್ಭಾರಿನಲ್ಲಿ ಮಲಿನಗೊಂಡಿದ್ದ ಪರಪ್ಪನ ಅಗ್ರಹಾರವನ್ನು ಕ್ಲೀನ್ ಮಾಡುತ್ತಾರೆಂಬ ನಂಬಿಕೆಯೂ ಮೂಡಿಕೊಂಡಿದೆ. ಈ ಸುರೇಶ ಮತ್ತು ಕರ್ಣ ಮಾಲಿನಿಯ ಮಾಲಿನ್ಯದ ತುಣುಕುಗಳೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮೊದಲು ಸುರೇಶ ಮತ್ತು ಕರ್ಣನ ಅಂದಾದುಂದಿಗಳ ಬಗ್ಗೆ ದಯಾನಂದ್ ಅವರು ಗಮನಹರಿಸಬೇಕಿದೆ.
ಈ ಹಿಂದೆ ಚಂದ್ರಗುಪ್ತ ವರದಿಯಲ್ಲಿ ಈ ಸುರೇಶ ಮತ್ತು ಕರ್ಣ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಅದರಂದ ಬಾಚಾವಾಗಿದ್ದ ಆತನಿಗೆ ಮತ್ತೆ ಕಂಟಕ ಶುರುವಾಗಿದೆ. ಒಂದು ಮೂಲದ ಪ್ರಕಾರ ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಶೀಘ್ರದಲ್ಲಿಯೇ ಚಂದ್ರಗುಪ್ತ ವರದಿಯನ್ನು ಸಲ್ಲಿಸಲಿದ್ದಾರೆ. ಹಾಗಾದೇಟಿಗೆ ಸುರೇಶ ತನ್ನ ಪಟಾಲಮ್ಮಿನ ತಮೇತ ಅಮಾನತ್ತಾಗಿ ತೊಲಗೋದು ಗ್ಯಾರೆಂಟಿ. ಅದರ ಬೆನ್ನಲ್ಲಿಯೇ ನಿವೃತ್ತರಾಗಿರುವ ಮಾಲಿನಿಯತ್ತಲೂ ತನಿಖೆಯ ಗಮನ ಹೊರಳಿಕೊಳ್ಳಲಿದೆ. ಮಾಲಿನಿಯ ಬಂಟ ಸುರೇಶ ದರ್ಶನ್ ವಿರೋಧಿ ಪಾಳೆಯದಿಂದ ಕಾಸು ಗುಂಜಿಕೊಂಡೇ ದರ್ಶನ್ ಫೋಟೋ ಲೀಕ್ ಮಾಡಿದ್ದಾರೆಂಬ ಆರೋಪವೂ ಹರಿದಾಡುತ್ತಿದೆ.
ಹಾಗಾದರೆ, ದರ್ಶನ್ ಫೋಟೋ ಲೀಕ್ ಮಾಡೋದರಿಂದ ವಿರೋಧಿ ಪಾಳೆಯಕ್ಕಾಗುವ ಲಾಭವೇನು ಅಂತೊಂದು ಪ್ರಶ್ನೆ ಸಹಜ. ಸಾಮಾನ್ಯವಾಗಿ ಯಾವ ಹೀರೋಗಳೂ ಕೂಡಾ ಹೀಗೆ ಕಳೆಗುಂದಿದ, ತಲೆ ಕೂದಲಿಲ್ಲದ, ದೈಹಿಕವಾಗಿ ಕುಗ್ಗಿದ ಫೋಟೋಗಳು ಅಭಿಮಾನಿಗಳನ್ನು ತಲುಪೋದನ್ನು ಇಷ್ಟಪಡೋದಿಲ್ಲ. ದರ್ಶನ್ ಒಂದು ಕಾಲದಲ್ಲಿ ಕಂಡೋರನ್ನೆಲ್ಲ ದುರಹಂಕಾರದಿಂದ ಎದುರು ಹಾಕಿಕೊಂಡಿದ್ದನಲ್ಲಾ? ಆ ಕುದಿತ ಹೊಂದಿರೋ ಮಂದಿಯೇ ಈ ಫೋಟೋ ಲೀಕ್ ಹಿಂದಿರಬಹುದು. ಈ ಮೂಲಕ ಮೆರೆದಾಡುತ್ತಿದ್ದ ಅಭಿಮಾನಿಗಳನ್ನು ಉರಿಸುವ ಉದ್ದೇಶವೂ ಇದ್ದಿರಬಹುದು. ಅದನ್ನು ಜೈಲಾಧಿಕಾರಿ ಸುರೇಶ ಕಾಸಾಗಿ ಪಳಗಿಸಿಕೊಂಡಿದ್ದಾರೆಂಬ ಸಂಶಯವೇ ದಟ್ಟವಾಗಿದೆ. ಖಡಕ್ ಅಧಿಕಾರಿ ದಯಾನಂದ್ ಅವರು ಮೊದಲು ಪರಪ್ಪನ ಅಗ್ರಹಾರದೊಳಗಿರೋ ಸುರೇಶನಂಥಾ ಮಾಲಿನಿಯ ಚೇಲಾ ಪಡೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆರಂಭಿಕವಾಗಿ ಸುರೇಶನಂಥ ಅಧಿಕಾರಿ ವರ್ಗವನ್ನು ಅಮಾನತುಗೊಳಿಸಿದರೆ ಪರಪ್ಪನ ಅಗ್ರಹಾರ ತಾನಾಗಿಯೇ ಶುಚಿಯಾಗುತ್ತದೆ. ಈಗ ದರ್ಶನ್ ಫೋಟೋ ಲೀಕ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಚೀಫ್ ಸೂಪರಿಟೆಂಡೆಂಟ್ ಸುರೇಶ ಮನೆ ಸೇರಿಕೊಳ್ಳುವ ಕ್ಷಣಗಳೂ ಹತ್ತಿರಾಗುತ್ತಿವೆ!