ಚಾಲೆಂಜಿಂಗ್ ಸ್ಟಾರ್ (challenging star darshan) ದರ್ಶನ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಗರಬಡಿದಂತೆ ಕುಕ್ಕರಿಸಿದ್ದಾನೆ. ಹೊರಗಡೆ ಥೇಟು ಅವನದ್ದೇ ವಿಕ್ಷಿಪ್ತ ವರ್ಷನ್ನಿನಂಥಾ ಅಭಿಮಾನಿ ಪಡೆ ನಿಂತಲ್ಲಿ ನಿಲ್ಲಲಾರದೆ, ಕುಂತಲ್ಲು ಕೂರಲಾರದೆ ಲಗಾಟಿ ಹೊಡೆಯಲಾರಂಭಿಸಿದೆ. ಮಾಧ್ಯಮಗಳ ಮುಂದೆ ಈ ಅವಿವೇಕಿಗಳು ಆಡುತ್ತಿರೋ ಮಾತು, ವಿತಂಡ ವಾದಗಳಂತೂ ಕ್ಯಾಕರಿಸಿ ತುಪುಕ್ಕನೆ ಮುಕಕ್ಕುಗಿದರೂ ಸಮಾಧಾನವಾಗದಷ್ಟು ವಿಕೃತವಾಗಿವೆ. ಅಂಥವರ ಪ್ರಕಾರ ತಮ್ಮ ಬಾಸು ಕಾನೂನು ಕಟ್ಟಳೆಗಳನ್ನೇ ಮೀರಿದವನು. ಪೊಲೀಸರೇ (karnataka police) ಚಾಲೆಂಜಿಂಗ್ ಸ್ಟಾರ್ ಮುಂದೆ ಡಮ್ಮಿ ಪೀಸುಗಳೆಂಬಂಥಾ ಕಾಮಿಡಿ ಯಥೇಚ್ಚವಾಗಿ ಪ್ರದರ್ಶನಗೊಳ್ಳುತ್ತಿವೆ. ಹಾಗೆ ಎಗರಾಡಲು ಬಂದ ದರ್ಶನ್ (darshan fans) ಅಭಿಮಾನಿಗಳ ಅಂಡಿನಲ್ಲೀಗ ಲಾಠಿಯ ಬಾಸುಂಡೆಗಳೆದ್ದಿವೆ. ಹಾಗೊಂದು ಎಳಸು ಕುನ್ನಿಗಳ ಪಡೆ ಜುಟ್ಟು ಕೆದರಿಕೊಂಡು ಅಖಾಡಕ್ಕಿಳಿದವರೆಲ್ಲ ಸಾಕ್ಷಾತ್ತು ದರ್ಶನನ ಅಪರಾವತಾರಗಳಂತೆ ಕಾಣಿಸುತ್ತಿದ್ದಾರೆ.

ತುಂಬಿದ ಸಭೆಯಲ್ಲಿ ಹರುಕು ಬಾಯಿ ತೆರೆಯುತ್ತಾ ಬಂದಿರುವಾತ ದರ್ಶನ್. ಅಡ್ಡಕಸುಬುಗಳೆಲ್ಲವೂ ತನ್ನ ಗಂಡಸುತನ ಎಂಬಂತೆ ದಾಸ ಬಿಂಬಿಸಿಕೊಂಡಿದ್ದ. ಈತನ ಪ್ರಕಾರ ಕಟ್ಟಿಕೊಂಡ ಹೆಂಡತಿಗೆ ಸತ್ತೇ ಹೋಗುವಂತೆ ಬಡಿಯುವುದೂ ಗಂಡಸ್ತನ. ಅಧಿಕೃತವಾಗಿ ಒಬ್ಬಳು ಮಡದಿ ಇರುವಾಗಲೇ ಮತ್ತೊಬ್ಬಳೊಂದಿಗೆ ಸಂಸಾರ ಶುರುವಿಟ್ಟುಕೊಳ್ಳೋದೇ ಧೈರ್ಯವಂತಿಕೆ. `ಒಬ್ಬಳೊ ಹೋದ್ರೆ ಮತೊಬ್ಬಳು ಬರ್ತಾಳೆ’ ಎಂಬಂಥಾ ತಲೆಮಾಸಿದ ಡೈಲಾಗುಗಳೇ ಈ ಆಸಾಮಿ ಲಕ್ಷಾಂತರ ಅಭಿಮಾನಿಗಳಿಗೆ ಕೊಡುವ ಬೋಧನೆ. ತಗಡು, ಪುಡಾಂಗುಗಳಂಥಾ ಪದಪುಂಜಗಳೇ ಈತನ ಪಾಲಿಗೆ ರಿಯಲಿಸ್ಟಿಕ್ ಮಾಸ್ ಎಲಿಮೆಂಟುಗಳು. ಇಂಥಾ ದರ್ಶನನಿಗೀಗ `ಅಯ್ಯೋ ತಗಡೇ, ಹೀರೋಗಿರಿ ಅಂದ್ರೇನು ಗೊತ್ತೇನೋ’ ಅಂತ ಕಾಲರು ಹಿಡಿದು ಕೇಳುವಷ್ಟು ಕರುನಾಡಿನ ಮಂದಿ ಆಕ್ರೋಶಗೊಂಡಿದ್ದಾರೆ.

ಹಾಗೆನೋಡಿದರೆ, ಈತನ ಮೆರೆದಾಟಗಳಲ್ಲಿ ಹೀರೋಗಿರಿಯ ಲವಲೇಷವೂ ಕಾಣಲು ಸಾಧ್ಯವಿಲ್ಲ. ಅದು ಪ್ರಜ್ನಾವಂತರ ಪಾಲಿಗೆ ಬೇಕರಿಗಳೆದುರು ಗುಡ್ಡೆಬೀಳುವ ಪುಡಿ ರೌಡಿಗಳ ಠೇಂಕಾರದಂತಷ್ಟೇ ಕಾಣಿಸುತ್ತಿತ್ತು. ಬಹುಶಃ ಹೀರೋಗಿರಿ ಅಂದ್ರೆ ಇದಲ್ಲ ದರ್ಶನ್ ಅಂತ ಬುದ್ಧಿ ಹೇಳುವವರ್ಯಾರೂ ಆತನ ವಲಯದಲ್ಲಿರಲಿಲ್ಲ. ರೌಡಿಗಳು, ಗಾಂಜಾ ಗಿರಾಕಿಗಳ ಕೊಂಪೆಯಲ್ಲಿ ತಲೆನೆಟ್ಟಗಿರುವ ಆಸಾಮಿಗಳಿರಲು ಸಾಧ್ಯವೂ ಇಲ್ಲ. ನಿಜ, ದರ್ಶನ್‍ಗೆ ರಾಜ್ಯಾದ್ಯಂತ ಬೇರೆಲ್ಲ ನಟರನ್ನು ಮೀರಿಸುವಂಥಾ ಫ್ಯಾನ್ ಬೇಸ್ ಇದೆ. ಅದು ಬದುಕು ಆತನಿಗೆ ಕಲ್ಪಿಸಿದ ಕಾರುಣ್ಯ. ಹಾಗೆ ದರ್ಶನ್ ಅಭಿಮಾನಿಗಳೆನ್ನಿಸಿಕೊಂಡವರಲ್ಲಿ ಯುವ ಸಮುದಾಯದ ಪಾಲು ದೊಡ್ಡದಿದೆ.

ಅಂಥಾ ಎಳೇಯ ಜೀವಗಳೆಲ್ಲ ಅಭಿಮಾನಕ್ಕಾಗಿ ಜೀವ ಕೊಡಲೂ ರೆಡಿ ಅಂತಿರುವಾಗ ದರ್ಶನ್ ನಿಜಕ್ಕೂ ಎಚ್ಚರಿಕೆಯಿಂದ ಅಡಿಯಿರಿಸಬೇಕಿತ್ತು. ತಾನಾಡುವ ಪ್ರತೀ ಮಾತು, ನಡವಳಿಕೆ ಒಂದಿಡೀ ಅಭಿಮಾನಿ ವಲಯಕ್ಕೆ ಮಾದರಿಯಾಗುತ್ತೆ. ತನ್ನ ಮಾತು ವರ್ತನೆಗಳು, ಬಳಸುವ ಭಾಷೆಗಳೇ ಅಭಿಮಾನಿ ಬಳಗದಲ್ಲಿ ಮಾರ್ಧನಿಸುತ್ತೆ. ತನ್ನ ಬದುಕಿನ ಕ್ರಮವೇ ಲಕ್ಷಾಂತರ ಅಭಿಮಾನಿಗಳ ಬದುಕುಗಳಲ್ಲಿ ಪ್ರತಿಫಲಿಸುತ್ತೆ… ಇಂಥಾ ಖಬರು ದರ್ಶನ್ ಪಾಲಿಗೆ ಕಡೆಗೂ ಬರಲೇ ಇಲ್ಲ. ಈವತ್ತಿಗೆ ದರ್ಶನ್ ಪರವಾಗಿ ಮಾತಾಡುವ ಅಭಿಮಾನಿಗಳನ್ನ ಕಂಡರೆ ನಿಜಕ್ಕೂ ಮರುಕ ಹುಟ್ಟುತ್ತದೆ. ದರ್ಶನ್ ಆತ್ಮವೇ ಈ ಎಳಸು ಕುನ್ನಿಗಳಿಗೂ ದಾಟಿಕೊಂಡಿದೆಯೇನೋ ಎಂಬಂಥಾ ಸಂಶಯ ಮೂಡುತ್ತದೆ. ಹೀಗೆ ತನ್ನ ಠೇಂಕಾರದಿಂದ ಯುವ ಸಮೂಹವನ್ನ ಹಾಳುಗೆಡವಿದ ಕುಖ್ಯಾತಿ ದರ್ಶನ್‍ಗೆ ಅಂಟಿಕೊಂಡಿದೆ. ಅದು ಒಂದರ್ಥದಲ್ಲಿ ಈ ಸಮಾಜವನ್ನೇ ಊನಗೊಳಿಸಿದಂಥಾ ಪಾಪಕೃತ್ಯ. ಅದು ಓರ್ವ ಅಭಿಮಾನಿಯ ಜೀವಕ್ಕೆ ಕುತ್ತು ತಂದಷ್ಟೇ ಪಾಪಿಷ್ಟ ಕೆಲಸ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!