ರೇವ್ ಪಾರ್ಟಿಯ ಕಾರಣದಿಂದ ಬೆಂಗಳೂರು ಮತ್ತೆ ಮತ್ತೆ ಸುದ್ದಿಯಲ್ಲಿರುತ್ತೆ. ಹಣವಂತರ ತೆವಲಿನ ಕಾರಣಕ್ಕೆ ಬೆಂಗಳೂರಿಗೊಂದಷ್ಟು ಕುಖ್ಯಾತಿಯೂ ಅಂಟಿಕೊಂಡಿದೆ. ಈವತ್ತಿಗೆ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಮೂರು ಕಡೆಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿಂದ ಐವತೈದು ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ಅನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಎಂಡಿಎಂಎ ಅನ್ನೋ ಡ್ರಗ್ಸ್ ಇದೆಯಲ್ಲಾ? ಅದು ಪಾರ್ಟಿ ಡ್ರಗ್ಸ್ ಅಂತಲೇ ಪ್ರಸಿದ್ಧಿ ಪಡೆದುಕೊಂಡಿದೆ. ಹಾಗಾದರೆ, ಇಂಥಾ ಡ್ರಗ್ಸ್ ಹೊಸಾ ವರ್ಷದಂಥಾ ಆಚರಣೆಗಳನ್ನು ಗುರಿಯಾಗಿಸಿಕೊಂಡು ತಯಾರಾಗುತ್ತವಾ ಅಂತ ನೋಡ ಹೋದರೆ, ಅವುಗಳ ಪ್ರಧಾನ ಮಾರುಕಟ್ಟೆ ಇರೋದು ಹಣವಂತರ ಪಾರ್ಟಿಗಳಲ್ಲಿ. ರೇವ್ ಪಾರ್ಟಿಗಳೆಂಬ ಹೈ ಫೈ ದಂಧೆಯ ಮೂಲಕವೇ ಎಂಡಿಎಂಎ ಗುಳಿಗೆಗಳ ವ್ಯಾಪಕವಾಗಿ ಬಿಕರಿಯಾಗುತ್ತವೆ.
ಈ ಕಾರಣದಿಂದಲೇ ಬೆಂಗಳೂರೂ ಸೇರಿದಂತೆ ನಾನಾ ಭಾಗಗಳಲ್ಲಿ ಬಲಾಢ್ಯರು ಕಾನೂನಿನ ಕಣ್ಣಿಗೆ ಮಣ್ಣೆರಚಿ ರೇವ್ ಪಾರ್ಟಿಗಳನ್ನು ನಡೆಸುತ್ತಾರೆ. ಅದೊಂಥರಾ ಹಾದರದ ಜಾತ್ರೆಯಿದ್ದಂತೆ. ಇಂಥಾ ರೇವ್ ಪಾರ್ಟಿಗಳ ಎಂಟ್ರಿ ಫೀಸು ಒಬ್ಬೊಬ್ಬರಿಗೆ ಲಕ್ಷದ ಮೇಲಿರುತ್ತೆ. ಒಂದು ಲಕ್ಷದ ಲೆಕ್ಕ ಹಿಡಿದರೂ ನೂರು ಮಂದಿಗೆ ಭರ್ತಿ ಒಂದು ಕೋಟಿಯಾಗುತ್ತೆ. ಹಾಗಂತ ಒಟ್ಟಾರೆ ಕಮಾಯಿಯ ಬಾಬತ್ತು ಇಷ್ಟು ಮಾತ್ರವಲ್ಲ. ರೊಕ್ಕಸ್ತರು ಆಯೋಜಿಸೋ ವ್ಯವಸ್ಥಿತ ರೇವ್ ಪಾರ್ಟಿಗಳ ಎಂಟ್ರಿ ಫೀಸು ಒಬ್ಬರಿಗೆ ಐವತ್ತು ಲಕ್ಷ ಇರೋದೂ ಇದೆ. ಹಾಗಾದ್ರೆ, ಈ ಸಿನಿಮಾ ಮಂದಿ, ರಾಜಕಾರಣಿಗಳ ಮಕ್ಕಳು ರೇವ್ ಪಾರ್ಟಿ ಅಂದ್ರೆ ಯಾಕೆ ಥ್ರಿಲ್ ಆಗ್ತಾರೆ? ಅದು ಕೇವಲ ನಶೆಯ ಮೋಹವಾ ಅಂತೆಲ್ಲ ಹುಡುಕಹೋದರೆ, ರೇವ್ ಪಾರ್ಟಿಗಳ ಮಂದ ಬೆಳಕಿನಲ್ಲೊಂದು ಭಯಾನಕ ಲೋಕವೇ ತೆರೆದುಕೊಳ್ಳುತ್ತೆ.
ರೇವ್ ಪಾರ್ಟಿಯ ಮೂಲ ಆಕರ್ಷಣೆ ಸ್ವೇಚ್ಛಾಚಾರ. ಅಲ್ಲಿ ಬೇರೆಲ್ಲೂ ಸಲೀಸಾಗಿ ಸಿಗದ ಅನಾಹುತಕಾರಿ ಡ್ರಗ್ಸ್ ಸಲೀಸಾಗಿ ಸಿಕ್ಕಿ ಬಿಡುತ್ತೆ. ಅದಕ್ಕೂ ಮೃಗೀಯ ಕಾಮಕ್ಕೂ ನೇರಾನೇರ ಕನೆಕ್ಷನ್ನುಗಳಿವೆ. ಅದು ಎಂಡಿಎಂಎ ಡ್ರಗ್ಸ್ ಕಂಟೆಂಟ್. ಸುದೀರ್ಘ ಕಾಲ ಅಕ್ಷರಶಃ ಮೃಗಳಿಗಿಂತಲೂ ಕಡೆಯಾಗಿ ಮೈಥುನದಲ್ಲಿ ಪಾಲ್ಗೊಳ್ಳೋ ಶಕ್ತಿಯನ್ನು ಆ ಡ್ರಗ್ಸ್ ಕರುಣಿಸುತ್ತೆ. ಅದ್ಯಾವ ಪರಿಯ ಉತ್ತೇಜಕ ಅಂದ್ರೆ, ಅದನ್ನ ಸೇವಿಸಿದವರು ದೇಹದ ಉಷ್ಣಾಂಶ ಹೆಚ್ಚಾಗಿ, ಹೃದಯಬಡಿತ ದುಪ್ಪಟ್ಟಾಗಿ ಸತ್ತುಹೋಗಬಹುದು. ಕಾಮಕೇಳಿಯಲ್ಲಿ ಪಾಲ್ಗೊಳ್ಳುವ ಇಬ್ಬರೂ ಅದನ್ನು ಸೇವಿಸಿದ್ದರೆ ಅಡ್ಡಿಯಿಲ್ಲ. ಒಂದು ವೇಳೆ ಇದನ್ನ ಸೇವಿಸಿದಾತ, ಎಂಡಿಎಂಎ ತೆಗೆದುಕೊಳ್ಳದೆ ಹೆಣ್ಣಿನ ಮೇಲೆರಗಿದರೆ ಆಕೆ ಬದುಕುಳಿಯೋದೇ ಡೌಟು!

ಈ ಮಾತ್ರೆ ಸೇವಿಸಿ ಕೆನೆಯುವವರಿಗೆಂದೇ ರೇವ್ ಪಾರ್ಟಿಯಲ್ಲಿ ಚಿಲ್ ರೂಂಗಳನ್ನು ಸೃಷ್ಟಿಸಲಾಗಿರುತ್ತೆ. ಅದರೊಳಗೆ ಅಹೋರಾತ್ರಿ ಮತ್ತೇರಿಸಿಕೊಂಡು ಕೆನೆಯುವವರಿದ್ದಾರೆ. ಈ ರೂಮಿನಲ್ಲೇ ದುರಂತ ಸಾವಿಗೀಡಾದವರೂ ಇದ್ದಾರೆ. ಡ್ರಗ್ಸ್, ಸೆಕ್ಸ್ ಯಾವುದೇ ಇದ್ದರೂ ಅದರ ಮೋಹ ಅತಿಯಾದ್ರೆ ನೆಕ್ಸ್ಟ್ ಲೆವೆಲ್ಲಿನ ಮಜಾ ಬೇಡುತ್ತವೆ. ರೇವಣ್ಣನ ಮಗ ಪ್ರಜ್ವಲ್ ಕೂಡಾ ಅಂಥಾ ಸ್ಥಿತಿ ತಲುಪಿಕೊಂಡಿದ್ದನೆಂಬ ಮಾತಿದೆ. ಅಂಥಾ ಸ್ಥಿತಿ ತಲುಪಿರುವ ಕೆಲ ಸಿನಿಮಾ, ಕಿರುತೆರೆ ನಟಿಯರು ರೇವ್ ಪಾರ್ಟಿಗಳ ಮೋಹ ಮೆತ್ತಿಕೊಂಡಿರ್ತಾರೆ. ಅದೊಂದು ರೀತಿಯ ಹೈಟೆಕ್ ವ್ಯಭಿಚಾರ. ಅದರೊಳಗೆ ನಡೆಯೋದು ಪಕ್ಕಾ ದಂಧೆ. ಅದೆಷ್ಟೋ ನಟಿಯರು ರೇವ್ ಪಾರ್ಟಿಗಳನ್ನೇ ಫುಲ್ ಟೈಂ ಕಸುಬಾಗಿಸಿಕೊಂಡಿದ್ದಾರೆ. ಅಂಥವರ ಮೇಲಿನ ಮೋಹದಿಂದಲೇ ಹಣವಂತರು, ರಾಜಕಾರಣಿಗಳ ಬೀಡಾಡಿ ಮಕ್ಕಳು ಅಲ್ಲಿ ಗುಡ್ಡೆಬಿದ್ದಿರ್ತಾರೆ. ಸದ್ಯಕ್ಕೆ ಸಿಸಿಬಿ ಪೊಲೀಸರು ಆ ದುಷ್ಟ ದಂಧೆಯ ಎದೆಗೆ ಬೂಟುಗಾಲಿಟ್ಟಿದ್ದಾರೆ. ಅದನ್ನು ಸಂಪೂರ್ಣವಾಗಿ ಕಿತ್ತೆಸೆದರೆ ಐಟಿ ಸಿಟಿಯ ಮರ್ಯಾದೆ ಉಳಿಯಬಹುದೇನೋ…
keywords: drugs, party, bangalore, rave party, sandalwood, sandalwood, drugs case

