ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ದೇಶದ ಗಡಿ ದಾಟಿ ವಿದೇಶಗಳಲ್ಲಿಯೂ ಕೂಡಾ ಕೂಲಿಯನ್ನು ಎದುರುಗೊಳ್ಳುವ ಉತ್ಸಾಹ ಮೇರೆ ಮೀರಿಕೊಂಡಿದೆ. ಜೈಲರ್ ಸಿನಿಮಾದ ಭಾರೀ ಯಶಸ್ಸಿನ ನಂತರದಲ್ಲಿ ಬಿಡುಗಡೆಗೊಳ್ಳುತ್ತಿರುವ ಕೂಲಿ ಬಾಕ್ಸಾಫೀಸ್‌ನಲ್ಲಿ ಭಾರೀ ದಾಖಲೆ ಸೃಷ್ಟಿಸುವ ಸೂಚನೆಗಳು ಈಗಾಗಲೇ ಕಾಣಿಸಲಾರಂಭಿಸಿವೆ. ಒಂದು ಮಹಾ ಸೋಲಿನ ಪರ್ವವನ್ನು ಜೈಲರ್ ಮೂಲಕ ದಾಟಿಕೊಂಡಿದ್ಚದ ತಲೈವಾ ಕೂಲಿಯ ಅವತಾರದಲ್ಲಿ ಮತ್ತೆ ಮೈಕೊಡವಿಕೊಳ್ಳಲಿರೋದು ಪಕ್ಕಾ ಎಂಬಂಥಾ ವಾತಾವರಣ ಈಗ ಚಾಲ್ತಿಯಲ್ಲಿದೆ. ಈ ಸಿನಿಮಾ ಮ ಉಂಗಡ ಬುಕ್ಕಿಂಗ್‌ನಲ್ಲಿ ಮಾಡಿರುವ ಕಲೆಕ್ಷನ್ನಿನ ಮೊತ್ತವೇ ಮಹಾ ಗೆಲುವಿನ ಮುನ್ಸೂಚನೆಯಂತಿರೋದು ಸುಳ್ಳಲ್ಲ!
ಈಗ ಜಾಹೀರಾಗಿಕರುವ ಲೆಕ್ಕಾಚಾರವೊಂದರ ಪ್ರಕಾರವಾಗಿ ಹೇಳೋದಾದರೆ, ಮುಂಗಡ ಬುಕ್ಕಿಂಗ್‌ನಿಂದಲೇ ಕೂಲಿ ನೂರು ಕೋಟಿ ಕಲೆಕ್ಷನ್ನು ಮಾಡಿದೆ. ಕೇವಲ ತಮಿಳು ನಾಡು ಮಾತ್ರವಲ್ಲ; ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಕೂಲಿ ಕ್ರೇಜ್ ಯಾವ ಮಟ್ಟದಲ್ಲಿದೆ ಅನ್ನೋದಕ್ಕೆ ಈ ಕಲೆಕ್ಷನ್ ಮೊತ್ತಕ್ಕಿಂತಲೂ ಬೇರೆ ಸಾಕ್ಷಿ ಬೇಕಿಲ್ಲ. ಈ ಮೊತ್ತದಲ್ಲಿ ವಿದೇಶಗಳ ಪಾಲು ಐವತ್ತು ಕೋಟಿಗಳಷ್ಟಿದೆ ಅನ್ನೋದು ಮತ್ತೊಂದು ವಿಶೇಷ. ಹಾಗೆ ನೋಡಿದರೆ, ಕೂಲಿ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡಿತ್ತು. ಆ ನಂತರವೂ ಸುಖಾಸುಮ್ಮನೆ ಹೈಪ್ ಕ್ರಿಯೇಟ್ ಮಾಡೋ ಗೋಜಿಗೆ ಚಿತ್ರತಂಡ ಹೋಗಿರಲಿಲ್ಲ. ಆದರೂ ಕೂಡಾ ಜೈಲರ್ ಗೆಲುವಿನ ಪ್ರಭೆಯಲ್ಲಿ ತಾನೇ ತಾನಾಗಿ ಕೂಲಿ ಲಕಲಕಿಸಿದೆ.
ಇದು ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ. ನಟನೊಬ್ಬನ ಛಾರ್ಮ್ ಅನ್ನು ಅಂದಾಜಿಸಿ, ಅದಕ್ಕನುಗುಣವಾಗಿ ದೃಶ್ಯ ಕಟ್ಟುವ ಛಾತಿ ಹೊಂದಿರುವ ಲೋಕೇಶ್ ಒಂದು ಗಟ್ಟಿ ಕಥೆಯೊಂದಿಗೆ ಈ ಸಿನಿಮಾವನ್ನು ನಿರ್ದೇಶನ ಮಾಡಿದಂತಿದೆ. ತಲೈವಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಒಂದಷ್ಟು ಗೆಟಪ್ಪುಗಳು ಮಾತ್ರವೇ ಇದೂವರೆಗೂ ಜಾಹೀರಾಗಿವೆ. ಆದರೆ, ಸಿನಿಮಾ ಮಂದಿರದೊಳಗೆ ತಲೈವಾಭಿಮಾನಿಗಳಿಗೆ ಅಚ್ಚರಿಯ ಮೇಲೆ ಅಚ್ಚರಿ ಕಾದಿವೆ ಎಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ಕೂಲಿ ತೆರೆಗಾಣಲು ಇನ್ನು ಕೆಲವೇ ಕೆ ಗಂಟೆಗಳು ಮಾತ್ರವೇ ಬಾಕಿ ಉಳಿದುಕೊಂಡಿದೆ. ಒಟ್ಟಾರೆ ಸಿನಿಮಾದ ಅಸಲೀಯತ್ತು ಮುಂಜಾನೆ ಹೊತ್ತಿಗೆಲ್ಲ ಬಯಲಾಗಲಿದೆ!