ನಿರ್ದೇಶನ: ಶಶಾಂಕ್
ತಾರಾಗಣ: ಡಾರ್ಲಿಂಗ್ ಕೃಷ್ಣ, ಮನಿಷಾ ಕಂದಕೂರ್, ಅಚ್ಯುತ್ ಕುಮಾರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು
ರೇಟಿಂಗ್: 3
ಟೈಟಲ್ ಮೂಲಕವೇ ಒಂದಷ್ಟು ಚರ್ಚೆ ಹುಟ್ಟು ಹಾಕಿ, ಆ ಮೂಲಕ ಸೆಳೆದುಕೊಳ್ಳುವ ಫಾರ್ಮುಲಾದೊಂದಿಗೆ ಪ್ರಚಲಿತಕ್ಕೆ ಬಂದಿದ್ದ ಚಿತ್ರ ಬ್ರ್ಯಾಟ್. ಅಷ್ಟೇನೂ ಪರಿಚಿತವಲ್ಲದ ಇಂಥಾದ್ದೊಂದು ಟೈಟಲ್ಲು ಟ್ರೈಲರ್ ಮೂಲಕ ಮತ್ತೊಂದು ಆಯಾಮದಲ್ಲಿ ಕ್ರೇಜ್ ಮೂಡಿಸಿತ್ತು. ನಿರ್ದೇಶಕ ಶಶಾಂಕ್ ಇತ್ತೀಚಿನ ದಿನಗಳಲ್ಲಿ ಸೆಳೆತ ಕಳೆದುಕೊಂಡಿದ್ದರೂ ಕೂಡಾ ಡಾರ್ಲಿಂಗ್ ಕೃಷ್ಣ ಜೊತೆಗಿನ ಕಾಂಬಿನೇಷನ್ನಿನಲ್ಲಿ ಮ್ಯಾಜಿಕ್ಕು ನಡೆದೀತೆಂಬ ಆಶಾವಾದವೊಂದು ಚಿಗಿತುಕೊಂಡಿತ್ತು. ಇದೀಗ ಬ್ರ್ಯಾಟ್ ತೆರೆಗಂಡಿದೆ. ಸಮರ್ಥವಾದ ಬರವಣಿಗೆಯೊಂದಿದ್ದರೆ, ನಿರ್ದೇಶನದ ತೊಡಕುಗಳನ್ನೂ ಪ್ರೇಕ್ಷಕ ಮಾಫಿ ಮಾಡೋದಿದೆ. ಇದೀಗ ಊರೂರನ್ನೂ ಆವರಿಸಿಕೊಂಡಿರುವ ಬೆಟ್ಟಿಂಗ್ ದಂಧೆಯ ಕರಾಳ ಲೋಕದೊಳಗೆ ಪಾತಾಳ ಗರಡಿ ಹಾಕುತ್ತಲೇ, ಅದರ ಸೂಕ್ಷ್ಮಗಳನ್ನು ತೆರೆದಿಟ್ಟಿರುವ ಕಥೆ, ಅಲ್ಲಲ್ಲಿ ನಿರ್ದೇಶನದ ಬಿಗುವು ಕಳೆದುಕೊಂಡರೂ ಮತ್ತೊಂದು ತಿರುವಿನಲ್ಲಿ ಅದನ್ನು ಮರೆಸುವ ಗುಣದೊಂದಿಗೆ ಬ್ರ್ಯಾಟ್ ಪ್ರೇಕ್ಷಕರನ್ನು ತಲುಪಿದೆ.

ಡಾರ್ಲಿಂಗ್ ಕೃಷ್ಣ ನಟನೆಯ ವಿಚಾರದಲ್ಲಿ ಮಿತಿಗಳ ಸರಹದ್ದಿನಲ್ಲಿಯೇ ಗಿರಕಿ ಹೊಡೆಯುವ ನಟ. ಚಿತ್ರದಿಂದ ಚಿತ್ರಕ್ಕೆ ಅಂಥಾ ಮಿತಿಗಳ ಸರಹದ್ದು ದಾಟಿ ಚಕಿತಗೊಳಿಸಬೇಕೆಂಬ ಇರಾದೆಯೇ ಈತನಿಗಿಲ್ಲವೇನೋ ಅಂತ ಪ್ರೇಕ್ಷಕರಿಗೆ ಅನ್ನಿಸಿದ್ದಿದೆ. ಈ ಕಾರಣದಿಂದಲೇ ಒಂದೇ ಬಗೆಯ ಆತನ ನಟನೆ ಏಕತಾನತೆ ಮೂಡಿಸಿದ್ದೂ ಇದೆ. ಬ್ರ್ಯಾಟ್ ಚಿತ್ರದಲ್ಲಿಯೂ ಡಾರ್ಲಿಂಗು ಅದನ್ನು ಮೀರಿಕೊಂಡಿಲ್ಲ. ಆದರೆ, ಆತನ ಒರಿಜಿನಲ್ ಛಾಯೆಗೆ ತಕ್ಕಂಥಾ ಪಾತ್ರವನ್ನೇ ನಿರ್ದೇಶಕ ಶಶಾಂಕ್ ಸೃಷ್ಟಿಸಿದ್ದಾರೆ. ಈ ಕಾರಣದಿಂದಲೇ ಸದರಿ ಪಾತ್ರ ಕೃಷ್ಣನಿಗೆ ಬಿಟ್ಟರೆ ಮತ್ಯಾರಿಗೂ ಸರಿಹೊಂದೋದಿಲ್ಲ ಎಂಬ ಭಾವವೊಂದು ಪ್ರೇಕ್ಷಕನ ಮನದಲ್ಲಿ ಹಾದು ಹೋಗುತ್ತೆ. ಹೆಂಗಾದ್ರೂ ಕಾಸು ಮಾಡ್ಬೇಕು ಮಗಾ ಅನ್ನೋದು ಹೊಸಾ ಜನರೇಷನ್ನಿನ ಮೂಲಮಂತ್ರ. ಅದರ ಚುಂಗು ಹಿಡಿದುಕೊಂಡೇ ಒಂದುಷ್ಟು ಅಧ್ಯಯನ, ಗಟ್ಟಿ ಕಥೆಯೊಂದಿಗೆ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ಶಾಲಾ ದಿನಗಳಲ್ಲಿಯೇ ಸಹಪಾಠಿ ಹುಡುಗರಿಗೆ ಬೆಟ್ಟಿಂಗಿನಂಥಾ ಆಟ ಆಡಿಸಿ, ಒಂದಷ್ಟು ಕಾಸು ಮಾಡಿಕೊಳ್ಳೋ ಪ್ರಳಯಾಂತಕ ಹುಡುಗ ಕೃಷ್ಣ ಅಲಿಯಾಸ್ ಕ್ರಿಸ್ಟಿ. ಇಂಥಾ ಹುಡುಗ ಶಿಸ್ತಿನ ಸಿಪಾಯಿಯಂಥಾ ಹೆಡ್ ಕಾನ್ಟೇಬಲ್ ಮಗ. ಆರಂಭದಿಂದಲೇ ಕ್ರಿಕೆಟರ್ ಆಗಬೇಕೆಂಬ ಕನಸು ಹೊತ್ತಿರೋ ಈ ಹುಡುಗನದ್ದು ಕೈ ತುಂಬಾ ಕಾಸು ಮಾಡಿಕೊಳ್ಳಬೇಕೆಂಬ ಬಯಕೆ. ಅದಕ್ಕಾಗಿ ತಂದೆಯಿಂದ ಕಲಿತುಕೊಂಡ ಆದರ್ಶಗಳಂತೆ ಬಲು ಕಷ್ಟದ ಹಾದಿಯನ್ನು ಆರಿಸಿಕೊಳ್ಳೋ ಕೃಷ್ಣ, ಬಹಳಷ್ಟು ಶ್ರಮ ಹಾಕುತ್ತಾನೆ. ಕಡೆಗೂ ಆ ಹಾದಿಯಲ್ಲಿ ಸೋತಂತೆ ಕಾಣೋ ನಾಯಕನಿಗೆ ನಿರ್ದೇಶಕರು ನಾಯಿಯ ಮೂಲಕ ತಿರುವೊಂದನ್ನು ಕರುಣಿಸುತ್ತಾರೆ. ಆ ನಂತರ ಈ ಹುಡುಗ ಕ್ರಿಸ್ಟಿ ಭಯಾನಕ ಬೆಟ್ಟಿಂಗ್ ಮಾಫಿಯಾಕ್ಕಿಳಿಯುವ ಕಥನವೇ ಒಟ್ಟಾರೆ ಸಿನಿಮಾದ ಜೀವಾಳ. ಕ್ರಿಕೆಟ್ಟಿಗೆ ಅಂಟಿಕೊಂಡಂತಿರುವ ಬೆಟ್ಟಿಂಗ್ ಮಾಫಿಯಾ, ಅದು ನಡೆಯುವ ರೀತಿ, ಅದರಾಳದ ದಂಧೆ ದುಷ್ಮನಿಗಳನ್ನು ನಿರ್ದೇಶಕರು ಸಮರ್ಥವಾಗಿ ಕಟ್ಟಿ ಕೊಟ್ಟಿದ್ದಾರೆ.

ಕ್ರಿಟೆಟ್ ಜಗತ್ತು ಹಾಗೂ ಬೆಟ್ಟಿಂಗ್ ಮಾಫಿಯಾದ ಬಗ್ಗೆ ಆಳವಾದ ಅಧ್ಯಯನ ನಡೆಸಿಯೇ ಈ ಸಿನಿಮಾ ಕಥೆ ಹೊಸೆಯಲಾಗಿದೆ. ಅದು ಈ ಸಿನಿಮಾದ ನಿಜವಾದ ಶಕ್ತಿ. ಆದರೆ, ಕೆಲವಾರು ದೃಷ್ಯಗಳಲ್ಲಿ ನಿರ್ದೇಶಕರು ಸಿನಿಮಾತ್ಮಕವಾಗಿ ದಾಟಿಸಬಹುದಾದ ಪರಿಣಾಮಕಾರಿ ಹಾದಿಗೆ ಎಳಸು ಎಳಸಾದ ಶೈಲಿಯ ಕಲ್ಲುಮುಳ್ಳು ಸುರಿದಿದ್ದಾರೆ. ಆದರೆ, ಅದಾದ ನಂತರ ಸರಿಯುವ ದೃಷ್ಯಗಳು ಅಸಹನೆಯನ್ನೆಲ್ಲ ಮರೆತು ಮುನ್ನಡೆಯುವಂತೆ ಮಾಡುತ್ತವೆ. ಬೆಟ್ಟಿಂಗ್ ಮಾಫಿಯಾ ಅನ್ನೋದು ಹೇಗೆಲ್ಲ ಅಧಿಕಾರಸ್ಥರ ನೆರಳಲ್ಲಿಯೇ ನಡೆಯುತ್ತೆ, ಅದರ ಆಳ ಅಗಲಗಳೇನು, ಯುವ ಸಮುದಾಯ ಆ ವರ್ತುಲದೊಳಗೆ ಹೇಗೆಲ್ಲ ಸಿಲುಕಿಕೊಳ್ಳುತ್ತೆ… ಇಂಥಾ ವಿಚಾರಗಳನ್ನಿಲ್ಲಿ ರೋಚಕವಾಗಿಯೇ ಪ್ರಚುರಪಡಿಸಲಾಗಿದೆ. ನಿರ್ದೇಶನದ ಸೂತ್ರ ಸಡಿಲವಾದರೂ ಗಟ್ಟಿ ಕಥೆ ಹೇಗೋ ದಡ ಸೇರಿಸುತ್ತೆ. ನಾಯಕನ ತಂದೆಯಾಗಿ, ಹೆಡ್ ಕಾನ್ಟೇಬಲ್ ಆಗಿ ಅಚ್ಯತ ಕುಮಾರ್, ಪೊಲೀಸ್ ಅಧಿಕಾರಿಯಾಗಿ ರಮೇಶ್ ಇಂದಿರಾ ಹಾಗೂ ಖಡಕ್ ವಿಲನ್ ಆಗಿ ಡ್ರ್ಯಾಗನ್ ಮಂಜು ನಟನೆ ಅಚ್ಚುಕಟ್ಟಾಗಿದೆ. ನಾಯಕನಾಗಿ ಡಾರ್ಲಿಂಗ್ ಕೃಷ್ಣ ಕೂಡಾ ತಮ್ಮ ಮಿತಿಯೊಳಗಿನ ಪಾತ್ರವನ್ನು ಚೆಂದಗೆ ನಿಭಾಯಿಸಿದ್ದಾರೆ.
ಇಲ್ಲಿ ಕೊರತೆಯಂತೆ ಭಾಸವಾಗೋದು ನಾಯಕಿ ಮನಿಷಾ ಕಂದಕೂರ್. ಈ ಹುಡುಗಿ ಮನಿಷಾಳನ್ನು ನಾಯಕಿಯಾಗಿ ಲಾಂಚ್ ಮಾಡಲೆಂದೇ ನಿರ್ಮಾಪಕರು ಈ ಸಿನಿಮಾ ಮಾಡಿದ್ದಾರೆಂಬ ಮಾತು ಚಿತ್ರರಂಗದ ವಲಯದಲ್ಲಿ ಹರಿದಾಡಿತ್ತು. ಆಕೆಯ ನಟನೆ ಕಂಡರೆ ಯಾರಿಗಾದರೂ ಆ ರೂಮರ್ ಸತ್ಯ ಅನ್ನಿಸುತ್ತೆ. ಯಾಕೆಂದರೆ, ನಟಿಯಾಗಿ ಮನಿಷಾಗೆ ಈ ಪಾತ್ರವನ್ನು ನಿಭಾಯಿಸುವ ಛಾತಿ ಯಾವ ಫ್ರೇಮಿನಲ್ಲಿಯೂ ಕಾಣಿಸುವುದಿಲ್ಲ. ಅನ್ನದಾತನ ಮಗಳೆಂಬ ಕಾರಾಣದಿಂದ ನಿರ್ದೇಶಕರಿಗೆ ಮನಿಷಾಳ ನಟನೆ ಸಹ್ಯವಾಗ ಬಹುದು. ಆದರೆ ಕಾಸು ಕೊಟ್ಟು ನೋಡುವ ಪ್ರೇಕ್ಷಕರಿಗೆ ಅದು ಕೊರತೆಯಾಗಿ ಕಾಡುತ್ತೆ. ಇನ್ನುಳಿದಂತೆ ಈ ಚಿತ್ರದ ಮಹಾ ಮೈನಸ್ ಪಾಯಿಂಟು ಅರ್ಜುನ್ ಜನ್ಯಾರ ಭೀಕರ ಹಿನ್ನೆಲೆ ಸಂಗೀತ. ಅವರೇ ಸಂಗೀತ ನೀಡಿದ್ದ ಹಾಡೊಂದು ಹಿಟ್ ಆಗಿ ವೈರಲ್ ಆಗಿತ್ತು. ಆದರೆ ಹಿನ್ನೆಲೆ ಸಂಗೀತವನ್ನು ಜನ್ಯಾ ಅಕ್ಷರಶಃ ಹಡಾಲೆಬ್ಬಿಸಿದ್ದಾರೆ. ತಾನು ಬೆರಳಾಡಿಸಿದ್ದನ್ನೆಲ್ಲ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆಂಬ ಅಹಮ್ಮಿಕೆಯೋ, ಕೆಲಸದ ಒತ್ತಡವೋ ಗೊತ್ತಿಲ್ಲ; ಜನ್ಯಾ ಕಡೆಯಿಂದ ಈ ಚಿತ್ರಕ್ಕೆ ದೋಖಾ ಸಂಭವಿಸಿದೆ.

ಇದೆಲ್ಲದರಾಚೆಗೆ ಬರವಣಿಗೆಯ ಕಸುವಿನೊಂದಿಗೇ ಈ ಸಿನಿಮಾ ಒಂದಷ್ಟು ಪರಿಣಾಮಕಾರಿಯಾಗಿದೆ ಎಂಬ ಅಭಿಪ್ರಾಯ ಸಿನಿಮಾಸಕ್ತರಲ್ಲಿ ಮೂಡಿಕೊಳ್ಳುತ್ತೆ. ಈ ವಿಚಾದಲ್ಲಿ ರಘುನಂದನ್ ಮತ್ತು ರವಿ ಚಕ್ರವರ್ತಿ ಅವರ ಶ್ರಮವನ್ನು ಮೆಚ್ಚಿಕೊಳ್ಳಲೇಬೇಕು. ಯಾಕೆಂದರೆ, ಈ ಕಥೆ ಹಾಗೂ ಸ್ಕ್ರೀನ್ ಪ್ಲೇ ಅವರು ಕಲೆ ಹಾಕಿರುಜವ ಸಮೃದ್ಧವಾದ ಮಾಹಿತಿಗಳಿಂದಲೇ ಕಳೆಗಟ್ಟಿಕೊಂಡಿದೆ. ಅಂಥಾ ಸಮರ್ಥವಾದ ಕಥೆಯನ್ನು ನಿರೂಪಣೆ ಮಾಡೋ ಹಾದಿಯಲ್ಲಿ ನಿರ್ದೇಶಕ ಶಶಾಂಕ್ ಅಲ್ಲಲ್ಲಿ ಮುಗ್ಗರಿಸಿದ್ದಾರೆ. ಆದರೆ, ಕ್ಲೈಮ್ಯಾಕ್ಸಿನಲ್ಲಿಯೇ ಒಂದಷ್ಟು ಟ್ವಿಸ್ಟುಗಳು ಮತ್ತು ನಗು ಬೆರೆಸುವ ಮೂಲಕ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿದ್ದಾರೆ. ಒಟ್ಟಾರೆಯಾಗಿ ಬ್ರ್ಯಾಟ್ ಸಿನಿಮಾ ಈ ಜನರೇಷನ್ನಿನ ಹುಡುಗರ ಮನಃಸ್ಥಿತಿಗೆ ತಕ್ಕುದಾಗಿ, ಒಂದು ಭಯಾನಕ ಮಾಫಿಯಾದ ಗರ್ಭದೊಳಗಿನ ಜಗತ್ತನ್ನು ದೃಷ್ಯಗಳಲ್ಲಿ ಹಿಡಿದಿಡುವ ಮೂಲಕ ಪ್ರೇಕ್ಷಕರನ್ನು ತೃಪ್ತಗೊಳಿಸುತ್ತೆ!
