ಮಹೇಶ್ ಗೌಡ ನಿರ್ಮಾಣ ಮಾಡಿ, ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಪುನೀತ್ ರಾಜ್ ಕುಮಾರ್ ಅವರ ಪ್ರೇರಣೆಯಿಂದ ಈ ಸಿನಿಮಾದ ಕಥೆ ಹೊಸೆದಿದ್ದ ನಿರ್ದೇಶಕರು, ಕಥೆಯ ಘಟ್ಟದಲ್ಲಿಯೇ ಆಯಾ ಪಾತ್ರಗಳನ್ನು ಇಂತಿಂಥಾ ಕಲಾವಿದರೇ ನಿರ್ವಹಿಸಬೇಕೆಂದು ನಿರ್ಧರಿಸಿದ್ದರಂತೆ. ವಿಶೇಷವೆಂದರೆ, ಆ ಎಲ್ಲ ಕಲಾವಿದರೂ ಕೂಡಾ ಕಥೆ ಕೇಳಿದಾಕ್ಷಣವೇ ಅತ್ಯಂತ ಸಂಭ್ರಮದಿಂದ ಒಪ್ಪಿಕೊಂಡಿದ್ದರು. ಅದೇ ಹುರುಪಿನೊಂದಿಗೆ ತಂತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು. ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿರುವ ಈ ಘಳಿಗೆಯಲ್ಲಿ ಎಲ್ಲ ಕಲಾವಿದರೊಳಗೂ ಅತ್ಯಪರೂಪದ ಸಿನಿಮಾವೊಂದರ ಭಾಗವಾದ ಧನ್ಯತಾ ಭಾವವಿದೆ. ಕಿರುತೆರೆ, ಹಿರಿತೆರೆಗಳಲ್ಲಿಯೂ ಥರ ಥರದ ಪಾತ್ರಗಳ ಮೂಲಕ ಪರಿಚಿತರಾಗಿರುವ ವೀಣಾ ಸುಂದರ್ ಬಿಳಿಚುಕ್ಕಿ ಹಳ್ಳಿಹಕ್ಕಿಯ ಮಹತ್ವದ ಪಾತ್ರವೊಂದಕ್ಕೆ ಜೀವತುಂಬಿದ್ದಾರೆ.

ಕಿರುತೆರೆ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿರುವ ವೀಣಾ ಸುಂದರ್ ಅನೇಕ ಸಿನಿಮಾಗಳ ಮೂಲಕ ಹಿರಿತೆರೆಗೂ ಚಿರಪರಿಚಿತರು. ಯಾವುದೇ ಪಾತ್ರ ಸಿಕ್ಕರೂ ಅದಕ್ಕೆ ನ್ಯಾಯ ಒದಗಿಸೋ ಛಾತಿ ಹೊಂದಿರುವ ಅವರಿಗೆ ಅಪರೂಪದ ಪಾತ್ರಗಳೇ ಒಲಿಯುತ್ತಾ ಬಂದಿವೆ. ಅದರಲ್ಲಿಯೂ ಅಮ್ಮನಾಗಿ ಅನೇಕ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ವೀಣಾ ಸುಂದರ್ ಕಾಣಿಸಿಕೊಂಡಿದ್ದಾರೆ. ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರದಲ್ಲಿಯೂ ಅವರು ನಾಯಕಿಯ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ, ಇಲ್ಲಿರೋದು ಮೃದು ಸ್ವಭಾವದ ಟಿಪಿಕಲ್ ಅಮ್ಮನಲ್ಲ; ಮಗಳ ಏಳಿಗೆಯ ಸದುದ್ದೇಶವಿದ್ದರೂ, ಬಿರುಸು ಮಾತಿನ ಮೂಲಕ ಮಗಳ ಮನಸಿಗೆ ಘಾಸಿಯುಂಟು ಮಾಡುವ, ಮೆಲುಮಾತಿನಲ್ಲಿಯೇ ತಿಳಿಹೇಳ ಬಂದ ಗಂಡನ ಬಾಯಿ ಮುಚ್ಚಿಸುವ ಘಾಟಿ ಅಮ್ಮನ ಪಾತ್ರ!
ನಿರ್ದೇಶಕ ಮಹೇಶ್ ಗೌಡ ಈ ಸಿನಿಮಾದ ಪ್ರತೀ ಪಾತ್ರಗಳನ್ನೂ ಕೂಡಾ ಅತ್ಯಂತ ಜತನದಿಂದ ರೂಪಿಸಿದ್ದಾರೆ. ಒಂದಕ್ಕಿಂತ ಒಂದು ಭಿನ್ನವಾದ್ ಪಾತ್ರಗಳು ಇಲ್ಲಿವೆ. ವೀಣಾ ಸುಂದರ್ ನಿರ್ವಹಿಸಿರುವ ತಾಯಿಯ ಪಾತ್ರಕ್ಕೆ ಬೇರೆಯದ್ದೇ ಥರದ ಛಾಯೆಯಿದೆಯಂತೆ. ಅದರಲ್ಲಿನ ಮಾತಗು, ವರ್ತನೆ, ಸಂಭಾಷಣೆಗಳು ಕೆಲ ಘಟ್ಟದಲ್ಲಿ ತನ್ನ ಬಗ್ಗೆ ತನಗೇ ಇರುಸುಮುರುಸುಂಟು ಮಾಡಿದ್ದವೆಂದು ಸ್ವತಃ ವೀಣಾ ಅವರೇ ಹೇಳಿಕೊಂಡಿದ್ದಿದೆ. ಆ ಪಾತ್ರವನ್ನು ಅಷ್ಟೊಂದು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವ ನಿರ್ದೇಶಕರ ಬಗ್ಗೆಯೂ ಅವರಲ್ಲೊಂದು ಹೆಮ್ಮೆಯಿದೆ. ವೀಣಾ ಸುಂದರ್ ಅವರು ನಿವ ಹಿಸಿರುವ ಪಾತ್ರವೂ ಸೇರಿದಂತೆ ಒಂದಿಡೀ ಚಿತ್ರ ನಾಳಿನ ಮುಂಜಾವದ ಹೊತ್ತಿಗೆಲ್ಲ ನಿಮ್ಮೆದುರು ತೆರೆದುಕೊಳ್ಳಲಿದೆ.

ಪಾತ್ರ ಎಂಥಾದ್ದೇ ಇದ್ದರೂ ಅದು ನೋಡುಗರಿಗೆ ನೇರವಾಗಿ ನಾಟುವಂತಿದ್ದರೆ ಕಲಾವಿದರ ಪಾಲಿಗೆ ಅದಕ್ಕಿಂತಲೂ ಖುಷಿ ಬೇರೊಂದಿಲ್ಲ. ತನ್ನ ಪಾತ್ರಕ್ಕೆ ಅಂಥಾದ್ದೇ ಚಹರೆ ಇರೋದರಿಂದ, ಅದನ್ನು ಪ್ರೇಕ್ಷಕರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆಂಬ ಕುತೂಹಲ, ಈ ಸಿನಿಮಾ ಎಲ್ಲರಿಗೂ ಇಷ್ಟವಾಗಿ ಗೆಲುವು ದಾಖಲಿಸುತ್ತದೆಂಬ ಭರವಸೆ ವೀಣಾ ಸುಂದರ್ ಅವರದ್ದು. ಈ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್ ಮತ್ತು ರಘು ನೃತ್ಯ ನಿರ್ದೇಶನ, ಪ್ರತಾಪ್ ಭಟ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರಕ್ಕಿದೆ.
