ಅದೆಂಥಾದ್ದೇ ಗೆಲುವಿನ ಅಲೆ ಏಳುತ್ತಿದ್ದರೂ ಕೂಡಾ ಭಿನ್ನ ಪ್ರಯತ್ನಗಳತ್ತ ಈ ನೆಲದ ಸಿನಿಮಾ ಪ್ರೇಕ್ಷಕರು ಸದಾ ಹಾತೊರೆಯುತ್ತಿರುತ್ತಾರೆ. ಅಂಥಾ ಸದಭಿರುಚಿಯ ಪ್ರೇಕ್ಷಕರ ಕಾರಣದಿಂದಲೇ ಅದೆಷ್ಟೋ ಸಿನಿಮಾಗಳು ಗೆದ್ದು ಬೀಗಿದ್ದಿದೆ. ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ವಿಶಿಷ್ಟ ಪ್ರಯತ್ನಗಳ ಗೆಲುವಿನ ಪ್ರಭೆಯಲ್ಲಿ ಮಿಂಚುತ್ತಿದೆ. ಆ ಸರಣಿಯಲ್ಲಿ ದಾಖಲಾಗಬಲ್ಲ ಆಶಾವಾದ ಹುಟ್ಟು ಹಾಕಿರುವ ಸಿನಿಮಾ ಬಿಳಿಚುಕ್ಕಿ ಹಳ್ಳಿಹಕ್ಕಿ. ಮಹೇಶ್ ಗೌಡ ಅವರು ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿ, ನಾಯಕನಾಗಿಯೂ ನಟಿಸಿರುವ ಈ ಚಿತ್ರ ನಾಳೆ ಅಂದರೆ, ಅಕ್ಟೋಬರ್ ೨೪ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈ ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸಿರುವ ಲಕ್ಷ್ಮಿ ಸಿದ್ದಯ್ಯ ಒಟ್ಟಾರೆ ಸಿನಿಮಾ ಹಾಗೂ ಚಿತ್ರೀಕರಣದ ಅನುಭೂತಿಯನ್ನಿಲ್ಲಿ ತೆರೆದಿಟ್ಟಿದ್ದಾರೆ.

ಸೀರಿಯಲ್ ಲೋಕದಪಾಲಿಗೆ ಲಕ್ಷ್ಮಿ ಸಿದ್ದಯ್ಯ ಥರ ಥರದ ಪಾತ್ರಗಳ ಮೂಲಕ ಹೆಸರಾಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿರುವ ಇವರನ್ನು ವಿಶೇಷವಾಗಿ ಪರಿಚಯಿಸುವ ಅಗತ್ಯವೇನಿಲ್ಲ. ಇಂಥಾ ಲಕ್ಷ್ಮಿ ಪ್ರಧಾನವಾಗಿ ಗುರುತಿಸಿಕೊಂಡಿರೋದು, ಪ್ರೇಕ್ಷಕರಿಗೆ ಹತ್ತಿರಾಗಿರೋದು ಅಮ್ಮನ ಪಾತ್ರಗಳ ಮೂಲಕ. ನಿರ್ದೇಶಕ ಮಹೇಶ್ ಗೌಡ ಕೂಡಾ ಬಿಳಿಚುಕ್ಕಿ ಹಳ್ಳಿಹಕ್ಕಿಯ ತಾಯಿ ಪಾತ್ರಕ್ಕೆ ಆರಂಭದಲ್ಲಿಯೇ ಅವರನ್ನು ನಿಕ್ಕಿಯಾಗಿಸಿದ್ದರು. ಒಟ್ಟಾರೆ ಸಿನಿಮಾದ ಕಥೆ ಮತ್ತು ಆ ಪಾತ್ರದ ಚಹರೆಗಳನ್ನು ಗಮನಿಸಿದ ಲಕ್ಷ್ಮಿ ಅವರು ಮರುಮಾತಿಲ್ಲದೆ ಒಪ್ಪಿಕೊಂಡಿದ್ದರಂತೆ. ಕಡೆಗೂ ಚಿತ್ರೀಕರಣ ಶುರುವಾಗಿ, ತಾಯ್ತನದ ಪುಳಕಗಳನ್ನು ಆವಾಹಿಸಿಕೊಂಡು ನಟಿಸಿದ ಲಕ್ಷ್ಮಿ ಅವರ ಪಾಲಿಗೆ ಇದು ತನ್ನ ವೃತ್ತಿ ಬದುಕಿನ ಮಹತ್ವದ ಚಿತ್ರವೆಂಬ ಭಾವ ಮೂಡಿಕೊಂಡಿದೆ.

ಲಕ್ಷ್ಮಿ ಅವರಿಲ್ಲಿ ನಾಯಕನ ತಾಯಿಯಾಗಿ ನಟಿಸಿದ್ದಾರೆ. ಇಲ್ಲಿ ಅವರ ಮಗನಿಗೆ ಎಳವೆಯಿಂದಲೇ ತೊನ್ನಿನ ಬಾಧೆಯಿರುತ್ತದೆ. ಆಸುಪಾಸಿನ ಮಂದಿ ಅದೇನೇ ಕುಹಕವಾಡಿದರೂ, ಅದು ತನ್ನ ಮಗನಿಗೆ ಘಾಸಿಗೊಳಿಸದಂತೆ ಮುಚ್ಚಟೆ ಮಾಡಿ ಕಾಪಿಡುವ ಪಾತ್ರವದು. ಯಾವ ಘಳಿಗೆಯಲ್ಲಿಯೂ ಮಗನನ್ನು ಕುಗ್ಗಲು ಬಿಡುದ ಆ ಪಾತ್ರ ಈ ಸಿನಿಮಾದ ಕೇಂದ್ರಬಿಂದು. ಇಡೀ ಚಿತ್ರದುದ್ದಕ್ಕೂ ಹಬ್ಬಿಕೊಂಡಿರುವ ಈ ಪಾತ್ರ ಲಕ್ಷ್ಮಿಯವರಲ್ಲಿ ವಿಶಿಷ್ಟ ಅನುಭೂತಿ ಮೂಡಿಸಿದೆ. ಖಂಡಿತವಾಗಿಯೂ ನೋಡಿಕದ ಪ್ರತಿಯೊಬ್ಬರಿಗೂ ಅದು ದಾಟಿಕೊಳ್ಳುತ್ತದೆ. ಇಂಥಾ ಚೆಂದದ ಪಾತ್ರಕ್ಕೆ ತನ್ನನ್ನೇ ಆಯ್ಕೆ ಮಾಡಿಕೊಂಡ ಮಹೇಶ್ ಗೌಡರ ಬಗ್ಗೆಯೂ ಅವರಲ್ಲೊಂದು ಅಕ್ಕರೆಯಿದೆ.

ಮಲೆನಾಡಿನ ಒಡಲಲ್ಲಿರುವ ಕೊಪ್ಪದ ಸುಂದರ ವಾತಾವರಣದಲ್ಲಿ ಈ ಪಾತ್ರವನ್ನು ಲಕ್ಷ್ಮಿ ಅವರು ಜೀವಿಸಿದ್ದಾರೆ. ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತೆ ಮೂಡಿ ಬಂದಿದೆ ಎಂಬ ತುಂಬು ನಂಬಿಕೆಯೂ ಅವರಲ್ಲಿದೆ. ಈ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್ ಮತ್ತು ರಘು ನೃತ್ಯ ನಿರ್ದೇಶನ, ಪ್ರತಾಪ್ ಭಟ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರಕ್ಕಿದೆ.
