ಮಹೇಶ್ ಗೌಡ ಅವರು ನಿರ್ಮಾಣ ಮಾಡಿ, ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ನಾಳೆ ಅಂದರೆ ಅಕ್ಟೋಬರ್ ೨೪ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ವಿಟಿಲಿಗೋ ಎಂಬ ಸಮಸ್ಯೆಯ ಸುತ್ತ ಹೆಣೆಯಲಾಗಿರುವ ಈ ಕಥನ ಪಕ್ಕಾ ಮನೋರಂಜನಾತ್ಮಕ, ಕಮರ್ಶಿಯಲ್ ಹಾದಿಯಲ್ಲಿ ರೂಪುಗೊಂಡಿದೆ. ಈಗಾಗಲೇ ಮಹಿರಾ ಎಂಬ ಚಿತ್ರದ ಮೂಲಕ ಪ್ರತಿಭಾನ್ವಿತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮಹೇಶ್ ಗೌಡ ಅವರ ಶ್ರಮದ ಕೂಸಿಕನಂಥಾ ಚಿತ್ರವಿದು. ಈ ಸಿನಿಮಾದ ಪ್ರತೀ ಪಾತ್ರಗಳಿಗೂ ಕೂಡಾ ಕಥೆಯ ಸೃಷ್ಟಿಯ ಘಳಿಗೆಯಲ್ಲಿಯೇ ಕಲಾವಿದರನ್ನು ನಿಗಧಿಪಡಿಸಿಕೊಂಡಿದ್ದರು. ಹಾಗೆ ಈ ಸಿನಿಮಾದ ಭಾಗವಾಗಿರುವವರು ಖ್ಯಾತ ಪೋಶಕ ನಟ ರವಿ ಭಟ್!

ರವಿ ಭಟ್ ಈಗಾಗಲೇ ಹಲವಾರು ಸಿನಿಮಾ, ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟ. ಕಿರುತೆರೆಯಲ್ಲಿ ಚೆಂದದ ಪಾತ್ರಗಳನ್ನು ನಿರ್ವಹಿಸುತ್ತಲೇ ಸಿನಿಮಾ ರಂಗದಲ್ಲಿಯೂ ಮಿಂಚುತ್ತಿರುವವರು ರವಿ ಭಟ್. ಪರಭಾಷೆಗಳಲ್ಲಿಯೂ ಛಾಪು ಮೂಡಿಸಿರುವ ಅವರು ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಾಗಲೇ ಲೆಕ್ಕವಿಲ್ಲದಷ್ಟು ಸಿನಿಮಾಗಳಲ್ಲಿ, ಪಾತ್ರಗಳಲ್ಲಿ ನಟಿಸಿರುವ ಕಲಾವಿದರ ಪಾಲಿಗೆ ಒಂದು ಪಾತ್ರ ವಿಶೇಷ ಅನ್ನಿಸೋದಿದೆಯಲ್ಲಾ? ಅದು ನಿಜವಾದ ಕಸುವು. ಆ ನಿಟ್ಟಿನಲ್ಲಿ ನೋಡ ಹೋದರೆ, ಹಿರಿಯ ನಟ ರವಿ ಭಟ್ ಅವರಿಗೆ ಬಿಳಿಚುಕ್ಕಿ ಹಳ್ಳಿಹಕ್ಕಿಯ ಪಾತ್ರ ಕೂಡಾ ಅಂಥಾದ್ದೇ ಧನ್ಯತಾ ಭಾವ ಮೂಡಿಸಿದೆ.

ಆರಂಭದಲ್ಲಿ ಕಥೆ ಕೇಳಿದಾಗಲೇ ರವಿ ಭಟ್ ಖುಷಿಗೊಂಡಿದ್ದರಂತೆ. ವಿಟಿಲಿಗೋ ಸಮಸ್ಯೆ ಹೊಂದಿರುವ ವ್ಯಕ್ತಿಯೇ ಈ ಸಿನಿಮಾ ಮಾಡಲು ಮುಂದಾಗಿರೋದನ್ನು ಕಂಡು ಸಹಜವಾಗಿಯೇ ಅಚ್ಚರಿಗೊಂಡಿದ್ದರಂತೆ. ಯಾವುದೇ ಉದ್ವೇಗವಿಲ್ಲದೆ ಬದುಕುವ, ಮಗಳ ಬದುಕನ್ನು ನೆಲೆಗಾಣಿಸೋದೇ ಉದ್ದೇಶವಾಗಿರುವ ತಂದೆಯ ಪಾತ್ರವದು. ಹೆಂಡತಿಯ ತಕರಾರುಗಳನ್ನೂ ಕೂಡಾ ಅಷ್ಟೇ ಸಮಚಿತ್ತದಿಂದ ಆಲಿಸಿ, ಆಕೆಯನ್ನು ಸಂಭಾಳಿಸುವ ಗುಣವೂ ಆ ಪಾತ್ರಕ್ಕಿದೆ. ತನ್ನ ಮಗಳು ತೊನ್ನು ಹೊಂದಿರುವ ವ್ಯಕ್ತಿಯನ್ನು ಮದುವೆಯಾಗ ಹೊರಟಾಗ ಸಿಡಿಮಿಡಿಗೊಳ್ಳುವ ಹೆಂಡತಿಯನ್ನು ಸಮಾಧಾನಿಸುವ ಆ ಪಾತ್ರದ ಎದೆಯಲ್ಲಿ ಮಗಳ ಬಗೆಗಿನ ಒಂದು ಮಹಾ ರಹಸ್ಯವಿರುತ್ತೆ. ಅಂಥಾ ರಹಸ್ಯವನ್ನು ಎದೆಯಲ್ಲಿಟ್ಟುಕೊಂಡು ಬದುಕೋ ಪಾತ್ರ ರವಿ ಭಟ್ ಅವರದ್ದು.

ಈ ಸಿನಿಮಾವನ್ನು ಮಹೇಶ್ ಗೌಡ ಅವರು ರೂಪಿಸಿರುವ ಪರಿಯ ಬಗ್ಗೆ ರವಿ ಭಟ್ ಖುಷಿಗೊಂಡಿದ್ದಾರೆ. ಮಹೇಶ್ ಗೌಡರಂಥಾ ವಿದ್ಯಾವಂತರು, ಪ್ರತಿಭಾನ್ವಿತರು ಆಗಮಿಸೋದರಿಂದ ಕನ್ನಡ ಚಿತ್ರರಂಗದ ದಿಕ್ಕುದೆಸೆ ಬದಲಾಗುತ್ತದೆಂಬ ಗಾಢ ನಂಬಿಕೆಯೂ ಅವರೊಳಗಿದೆ. ಒಟ್ಟಾರೆಯಾಗಿ ಈ ಪಾತ್ರ ಪ್ರೇಕ್ಷಕರ ಮನಸೂರೆಗೊಳ್ಳುತ್ತದೆಂಬ ಗಾಢ ನಂಬಿಕೆ ರವಿ ಭಟ್ ಅವರದ್ದು. ಈ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್ ಮತ್ತು ರಘು ನೃತ್ಯ ನಿರ್ದೇಶನ, ಪ್ರತಾಪ್ ಭಟ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರಕ್ಕಿದೆ.
