ಬಿಗ್ ಬಾಸ್ ಎಂಬೋ ಭಳಾಂಗು ಶೋವೊಂದು ಮತ್ತೆ ಆರಂಭವಾಗಲು ದಿನಗಣನೆ ಶುರುವಾಗಿದೆ. ಕನ್ನಡ ಚಿತ್ರರಂಗ ಕಂಡ ಅತೀ ಬುದ್ಧಿವಂತ ಕಿಚ್ಚಾ ಸುದೀಪ್ ಕಳೆದ ಬಾರಿಯ ಶೋ ಮುಗಿಯುತ್ತಲೇ ಇನ್ನು ಮುಂದೆ ಈ ಶೋವನ್ನು ನಡೆಸಿಕೊಡೋದಿಲ್ಲ ಅಂತೊಂದು ನಿರ್ಧಾರ ಪ್ರಕಟಿಸಿದ್ದರು. ಆ ಹೊತ್ತಿನಲ್ಲಿ ಇದು ಕಿಚ್ಚನ ನೌಟಂಕಿಕ ನಾಟಕ ಎಂಬ ವಿಚಾರ ಬಹುತೇಕರಿಗೆ ಖಚಿತವಾಗಿತ್ತು. ಇದೀಗ ಮತ್ತೆ ಮತ್ತದೇ ಅತೀ ಬುದ್ಧಿವಂತಿಕೆಯ ಪೋಷಾಕು ತೊಟ್ಟ ಕಿಚ್ಚ ಮತ್ತೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬೃಹನ್ನಾಟಕದಲ್ಲಿ ಯಾರ್‍ಯಾರು ಸ್ಪರ್ಧಿಗಳಾಗಿ ಭಾಗಿಯಾಗುತ್ತಾರೆ ಅಂತೊಂದು ಮಾಮೂಲಿ ಶೈಲಿಯ ಚರ್ಚೆ ಶುರುವಾಗಿದೆ. ರೂಢಿಯಂತೆಯೇ ಈ ಯಾದಿಯಲ್ಲಿ ಒಂದಷ್ಟು ಮಂದಿಯ ಹೆಸರುಗಳೂ ಕೂಡಾ ಕೇಳಿ ಬರಲಾರಂಭಿಸಿವೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರು ಕಾಮಿಡಿ ಕಿಲಾಡಿ ಗಿಲ್ಲಿ ನಟನದ್ದು!
ಬಿಗ್ ಬಾಸ್ ಎಂಬುದು ಪಕ್ಕಾ ಫೇಕ್ ಶೋ ಎಂಬ ವಿಚಾರ ಈಗಾಗಲೇ ಸಾಬೀತಾಗಿದೆ. ತಕರಾರುಗಳು ಏನೇ ಇದ್ದರೂ ಈ ಶೋ ಚೂರು ಪಾರಾದರೂ ಆಕರ್ಷಣೆ ಉಳಿಸಿಕೊಂಡಿರೋದೇ ಕಿಚ್ಚಾ ಸುದೀಪ್ ಕಾರಣದಿಂದ. ಸುದೀಪ್ ಅದೇನೇ ಭಳಾಂಗು ಬಿಟ್ಟರೂ ಕೂಡಾ ಈ ಶೋ ಪ್ರೇಕ್ಷಕರ ಇಂಗಿತದಂತೆ ನಡೆಯೋದಿಲ್ಲ ಎಂಬ ಸತ್ಯ ಯಾವತ್ತೋ ಸಾಬೀತಾಗಿದೆ. ಆದರೂ, ಒಂದಷ್ಟು ತಲೆ ನೆಟ್ಟಗಿರುವ, ನೈಜ ಮನೋರಂಜನೆ ಕೊಡಬಲ್ಲವರು ಸ್ಪರ್ಧಿಗಳಾಗಬುದೆಂಬ ನಿರೀಕ್ಷೆಯೊಂದು ಪ್ರೇಕ್ಷಕರಲ್ಲಿ ಇದ್ದೇ ಇದೆ. ಆ ನಿಟ್ಟಿನಲ್ಲಿ ಈ ಬಾರಿಯೂ ಕೂಡಾ ಮನೋರಂಜನೆ ಕೊಡುವ ದಿಕ್ಕಿನಲ್ಲಿ ಯಾರು ಬಿಗ್‌ಬಾಸ್ ಮನೆ ಸೇರಿದರೆ ಚೆಂದ ಅಂತೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಯಲ್ಲಿತ್ತು.
ಇಂಥಾ ಚರ್ಚೆಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಹೊರ ಹೊಮ್ಮಿರುವ ಹೆಸರು ಗಿಲ್ಲಿ ನಟನದ್ದು. ಒಂದು ಮೂಲದ ಪ್ರಕಾರ ಈಗಾಗಲೇ ಸಂಭಾವ್ಯ ಸ್ಪರ್ಧಿಗಳ ಆಯ್ಕೆ ಕಾರ್ಯ ಸಮಾಪ್ತಿಗೊಂಡಿದೆ. ಈ ಬಾರಿ ಮಾಜಿ ಭೂಗತ ಜೀವಿಗಳು ಕಿಚ್ಚನ ಪಂಚಾಯ್ತಿಯಲ್ಲಿ ಕಾಣಿಸಿಕೊಂಡರೂ ಅಚ್ಚರಿಯೇನಿಲ್ಲ. ವಿಶೇಷವೆಂದರೆ, ಮೊದಲ ಹಂತದಲ್ಲಿಯೇ ಗಿಲ್ಲಿ ನಟ ಬಿಗ್ ಬಾಸ್ ಸ್ಪರ್ಧಿಯಾಗೋದು ನಿಕ್ಕಿಯಾಗಿದೆ. ಈ ಹುಡುಗ ಗಿಲ್ಲಿ ನಟ ಕೊರೋನಾ ಕಾಲದಲ್ಲಿ ಕಾಮಿಡಿ ವೀಡಿಯೋಗಳ ಮೂಲಕ ಹವಾ ಸೃಷ್ಟಿಸಿದ್ದ. ಮೂಲತಃ ಮಳವಳ್ಳಿಯ ಮಟದಳ್ಳಿಯವನಾದ ಈತ ಪಕ್ಕಾ ಗ್ರಾಮ್ಯ ಶೈಲಿಯ, ಅಸಹ್ಯವೆನ್ನಿಸುವಂಥಾ ಡೈಲಾಗುಗಳಿಲ್ಲದ ಹಾಸ್ಯ ನಟನೆಯಿಂದ ಮನ ಗೆದ್ದಿದ್ದ.
ನಟನಾಗಬೇಕೆಂಬ ತುತಿತದಿಂದ ಬೆಂಗಳೂರು ಸೇರಿಕೊಂಡು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಈತನಿಗೆ ನೋಡ ನೋಡುತ್ತಲೇ ಕಿರುತೆರೆ ಲೋಕದ ಹೆಬ್ಬಾಗಿಲು ತೆರೆದುಕೊಂಡಿತ್ತು. ಸಾಮಾನ್ಯವಾಗಿ ಪ್ರಸಿದ್ಧಿ ಪಡೆದ ಕಾಮಿಡಿ ಕಲಾವಿದರು ಸಂದರ್ಭಕ್ಕಾನುಸಾರ ಹಾಸ್ಯ ಸೃಷ್ಟಿ ಮಾಡೋ ತಾಕತ್ತು ಹೊಂದಿರೋದಿಲ್ಲ. ಆದರೆ ಈ ಹುಡುಗ ನಿಂತ ನಿಲುವಿನಲ್ಲಿಯೇ ನಗಿಸಬಲ್ಲ ಚಾಕಚಕ್ಯತೆ ಹೊಂದಿದ್ದಾನೆ. ಡ್ಯಾನ್ಸ್ ಶೋ ಒಂದರಲ್ಲಿ ಪ್ರಾಪರ್ಟಿ ಕಾಮಿಡಿ ಮೂಲಕವೂ ಪ್ರಸಿದ್ಧನಾಗಿದ್ದ ಗಿಲ್ಲಿ ಈ ಬಾರಿ ಬಿಗ್ ಬಾಸ್ ಶೋಗೊಂದು ಕಳೆ ತಂದು ಕೊಡೋದರಲ್ಲಿ ಸಂಶಯವೇನಿಲ್ಲ. ಈ ಹಿಂದೆ ಕುರಿ ಪ್ರತಾಪನಂಥವರು ಸ್ವಂತದಚ್ದೊಂದು ಕಾಮಿಡಿ ಸೀನು ಸೃಷ್ಟಿಸಲಾರದೆ ಬಿಗ್ ಬಾಸ್ ಮನೆ ತುಂಬಾ ಹಿಕ್ಕೆ ಉದುರಿಸಿ ಬಂದಿದ್ದದ್ದು ಇತಿಹಾಸ. ಅಂಥವರಿಗೆ ಹೋಲಿಸಿದರೆ ಗಿಲ್ಲಿ ನಟ ನಿಜಕ್ಕೂ ಅತ್ಯುತ್ತಮ ನಟ ಅನ್ನೋದು ಈಗಾಗಲೇ ಸಾಬೀತಾಗಿದೆ!