ಬಿಗ್ ಬಾಸ್ ಎಂಬೊಂದು ಶೋ ಹನ್ನೆರಡು ವರ್ಷಗಳಿಂದ ಕರ್ನಾಟಕವನ್ನು ಆವರಿಸಿಕೊಂಡಿದೆ. ಆರಂಭಿಕ ವರ್ಷದಲ್ಲಿ ಸಹಜವಾಗಿದ್ದ ಈ ಶೋ ಬಗೆಗಿನ ಕುತೂಹಲ ಅಸಹ್ಯವಾಗಿ ರೂಪಾಂತರಗೊಂಡು ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ಯಾವ ಕೋನದಿಂದಲೂ ತಕಲೆ ನೆಟ್ಟಗಿದ್ದಂತೆ ಕಾಣಿಸದ ಚಿತ್ರವಿಚಿತ್ರ ಆಸಾಮಿಗಳು, ಅಂಥವರ ತೆವಲಿನ ವಿಸರ್ಜನೆಗಳೇ ಈ ಕಾರ್ಯಕ್ರಮದ ಟಿಆರ್‌ಪಿ ಸರಕು. ಖುದ್ದು ಅಭಿಮಾನಿಗಳೇ ಈ ಶೋ ಬಗ್ಗೆ ಒಳಗೊಳಗೇ ಕುದ್ದು ಹೋದರೂ ಕೂಡಾ ಕಿಚ್ಚಾ ಸುದೀಪನಿಗೆ ಆ ಬಗ್ಗೆ ಯಾವ ಕಾಳಜಿಯೂ ಇದ್ದಂತಿಲ್ಲ. ಹಾಗೊಂದು ಸೂಕ್ಷ್ಮವಂತಿಕೆ ಇದ್ದಿದ್ದರೆ ಖಂಡಿತವಾಗಿಯೂ ಆತ ಕೊಸರಾಡಿ, ನಾನಾ ನೌಟಂಕಿ ಪಟ್ಟುಗಳನ್ನು ಹರಿಯಬಿಟ್ಟು ಮತ್ತೆ ಈ ಕಾರ್ಯಕ್ರಮದ ಸಾರಥ್ಯ ವಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಡೆಗೂ ಈ ಗಲೀಜು ಶೋವನ್ನು ಸ್ಥಗಿತಗೊಳಿಸಲು ಮಾಲಿನ್ಯ ನಿಯಂತ್ರಣಾ ಮಂಡಳಿಯೇ ಎಂಟ್ರಿ ಕೊಟ್ಟಿದ್ದರ ಹಿಂದೆ ದ್ವೇಷ ರಾಜಕಾರಣದ ಘಾಟು ಗಾಢವಾಗಿಯೇ ರಾಚಲಾರಂಭಿಸಿದೆ.

ಸಿನಿಮಾ ಮತ್ತು ರಾಜಕಾರಣದ ನಡುವೆ ನೇರ, ಸುಪ್ತವಾದ ನಂಟುಗಳಿದ್ದಾವೆ. ಲೇಟ್ ನೈಟ್ ಪಾರ್ಟಿಗಳಲ್ಲಿ ರಾಜಕಾರಣಿಗಳ ಭಂಟರು ಠಳಾಯಿಸೋದು, ಅಂಥವರ ನಡುವೆ ಚಿತ್ರರಂಗದ ಕಾಲ್ಗೆಜ್ಜೆ ಘಲ್ಲೆಂದು, ಆ ಶಬ್ಧ ರಸಿಕ ರಾಜಕಾರಣಿಗಳ ಅಂತಃಪುರದಲ್ಲಿಯೂ ಅನುರಣಿಸೋದೇನು ಹೊಸತಲ್ಲ. ಇಂಥಾ ನಂಟನ್ನೇ ರಾಜಕಾರಣದ ಮೈಲೇಜು ಗಿಟ್ಟಿಸಿಕೊಳ್ಳಲು ಬಳಸಿಕೊಳ್ಳಲು ಘಟಾನುಘಟಿ ರಾಜಕಾರಣಿಗಳೇ ಮುಂದಾಗೋದಿದೆ. ಹೇಳಿಕೇಳಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಂಥಾ ಪಟ್ಟುಗಳನ್ನು ಪಳಗಿಸಿಕೊಂಡಿರುವ ರಾಜಕಾರಣಿ. ಇಂಥಾ ಡಿಕೆಶಿ ಸಿನಿಮಾ ಸಂಬಂಧಿತ ಕಾರ್ಯಕ್ರಮವೊಂದನ್ನು ಮಾಡಿದಾಗ ಸ್ಟಾರ್ ನಟರ್‍ಯಾರೂ ಅದರಲ್ಲಿ ಭಾಗಿಯಾಗಿರಲಿಲ್ಲ. ಅರಿಂದ ರೊಚ್ಚಿಗೆದ್ದ ಡಿಕೆಶಿ ನಟ್ಟು ಬೋಲ್ಟು ಟೈಟ್ ಮಾಡೋ ಮಾತಾಡಿದ್ದರು. ಈಗ ಬಿಗ್ ಬಾಸ್‌ಗೆ ಬಿದ್ದಿರೋ ಬೀಗಮುದ್ರೆಯ ಹಿಂದೆ ಡಿಕೆಶಿಯ ಹಳೇ ಸಿಟ್ಟಿನ ಕಿಸುರಿದೆಯಾ? ಅದರ ಭಾಗವಾಗಿಯೇ ಬಿಡದಿಯಲ್ಲಿರೋ ಬಿಗ್ ಬಾಸ್ ಎದೆ ಮೇಲೆ ಕನಕಪುರ ಬಂಡೆ ಬಂದು ಬಿದ್ದಂತಾಗಿದೆಯಾ? ಅದ್ಯದ ಮಟ್ಟಿಗೆ ಅಂಥಾದ್ದೊಂದು ಗುಮಾನಿ ತೀವ್ರಗೊಂಡಿದೆ.

ಡಿಕೆಶಿ ಆಡಿದ ಮಾತುಗಳ ಬಗ್ಗೆ ಸಂದರ್ಶನವೊಂದರಲ್ಲಿ ಕಿಚ್ಚಾ ವಸುದೀಪ ಟಾಂಗ್ ಕೊಡುವಂಥಾ ಮಾತಾಡಿದ್ದರು. ಸಿನಿಮಾ ಜಗತ್ತಿನೊಳಗೆ ಈಜಾಡಿದವರು ಮಾತ್ರವೇ ನಟ್ಟು ಬೋಲ್ಟು ಟೈಟ್ ಮಾಡೋಕೆ ಸಾಧ್ಯ ಎಂಬಂರ್ಥದಲ್ಲಿ ಮಾತಾಡಿದ್ದರು. ಆ ಘಳಿಗೆಯಲ್ಲಿ ಕಿಚ್ಚನಿಗೆ ಡಿಕೆ ಸಾಹೇಬ ತನ್ನ ಮಾತನ್ನು ಲೈಟ್ ಆಗಿ ತೆಗೆದುಕೊಳ್ಳಬಹುದೆಂಬ ನಿರೀಕ್ಷೆ ಇತ್ತೇನೋ… ಆದರೆ, ಡಿಕೆಶಿಯ ರಾಜಕೀಯ ದಾಳಗಳ ರೂಹುಗಳನ್ನು ಬಲ್ಲವರ್‍ಯಾರೂ ಕಿಚ್ಚನ ನಿರೀಕ್ಷೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಓರ್ವ ಸ್ಟಾರ್ ನಟ ತನ್ನ ವಿರುದ್ಧ ಮಾತಾಡಿದ್ದಾನೆಂದ ಮೇಲೆ ಅದನ್ನು ಜನಸಾಮಾನ್ಯರೂ ಗಮನಿಸುತ್ತಾರೆ. ಅದಕ್ಕೊಂದು ತಿರುಮಂತ್ರ ಬಿಡದೇ ಹೋದರೆ ತನ್ನ ಘನತೆಗೆ ಕುತ್ತಾಗುತ್ತದೆಂದುಕೊಂಡ ಡಿಕೆಶಿ ಕಾದು ಮಾಂಜಾ ಕೊಟ್ಟಿರುವ ಸಾಧ್ಯತೆಗಳೇ ಹೆಚ್ಚಾಗಿವೆ. ಈ ಒಟ್ಟಾರೆ ವಿದ್ಯಮಾನದ ಹಿಂದೆ ಕಳೆದ ವಿಧಾನಸಭಾ ಚುನಾವಣಾ ಸಂದರ್ಭದ ಪಲ್ಲಟಗಳ ಪಾತ್ರವಿದ್ದರೂ ಅಚ್ಚರಿಯೇನಿಲ್ಲ!

ಹಾಗಂತ, ಡಿಕೆಶಿ ಜಿದ್ದಿನ ಪರಿಣಾಮವಾಗಿಯೇ ಬಿಗ್ ಬಾಸ್ ಎಂಬೋ ನಿಮ್ಹಾನ್ಸ್ ಬ್ರ್ಯಾಂಚಿಗೆ ಬೀಗ ಬಿದ್ದಿದೆ ಅಂದುಕೊಂಡರೆ ತಪ್ಪಾದೀತು. ಬಿಗ್ ಬಾಸ್ ಮನೆಯೊಳಗಿನ ತ್ಯಾಜ್ಯಗಳನ್ನು ಬೇಕಾಬಿಟ್ಟಿ ಹೊರಚೆಲ್ಲುತ್ತಿರೋದರ ಬಗ್ಗೆ ಮಾಲಿನ್ಯ ನಿತಂತ್ರಣಾ ಮಂಡಳಿ ಎಂಟು ತಿಂಗಳ ಹಿಂದೆಯೇ ನೊಟೀಸು ಕೊಟ್ಟಿತ್ತು. ಇಷ್ಟೂ ವರ್ಷಗಳ ಕಾಲ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ನಡೆಯುತ್ತಿದ್ದ ಈ ಶೋನ ಆಯೋಜಕರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಂಥಾದ್ದೊಂದು ಕಾನೂನಾತ್ಮಕ ಪ್ರಕ್ರಿಯೆಯನ್ನು ರಾಜಕೀಯ ಹಿತಾಸಕ್ತಿಗಳೊಂದಿಗೆ ಕಾರ್ಯಗತಗೊಳಿಸಿದ್ದರೆ ಅದರಲ್ಲಿ ಅಚ್ಚರಿ ಪಡುವಂಥಾದ್ದೇನೂ ಇಲ್ಲ.

ಇನ್ನು ಕೊಂಚ ಹೊರಳಿ ನೋಡಿದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಕಾಏಕಿ ಕಿಚ್ಚಾ ಸುದೀಪ ಪ್ರಚಾರದ ಅಖಾಡಕ್ಕಿಳಿದಿದ್ದರು. ಮಾಮಾ ಮಾಮಾ ಅನ್ನುತ್ತ ಬೊಮ್ಮಣ್ಣನ ಹಿಂಚುಮುಂಚಲ್ಲಿ ಕಾಣಿಸಿಕೊಂಡಿದ್ದರು. ತನ್ನ ಪ್ರೀತಿಯ ಮಾಮನನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸಲು ಏನು ಮಾಡಲೂ ಸಿದ್ಧ ಎಂಬಂತೆ ಮಾತಾಡಲಾರಂಭಿಸಿದ್ದರು. ಹೇಳಿಕೇಳಿ ಆಗ ಸಿಎಂ ಆಗಿಕದ್ದ ಬೊಮ್ಮಣ್ಣ ಅತ್ಯಂತ ಕಳಪೆ ಆಡಳಿತ ನಡೆಸಿದ್ದರು. ಅತ್ಯಂತ ಭ್ರಷ್ಟಾಚಾರ ಹೊಂದಿದ ಕಾಲಾವಧಿಯಾಗಿ ಬೊಮ್ಮಣ್ಣನ ಕಾಲಮಾನ ದಾಖಲಾಗಿತ್ತು. ಓರ್ವ ಜವಾಬ್ಧಾರಿಯುತ ನಟನಾಗಿ ಅಂಥಾ ಬೊಮ್ಮನಿಗೆ ಸಾಥ್ ನೀಡಿದ್ದ ಕಿಚ್ಚನ ನಡೆ ಟೀಕೆಗೆ ಗುರಿಯಾಗಿತ್ತು. ಈ ನಡೆ ಸಹಜವಾಗಿಯೇ ಗೆಲ್ಲುವ ಉಮೇದಿನಲ್ಲಿದ್ದ ಡಿಕೆಶಿ, ಸಿದ್ದು ಸೇರಿದಂತೆ ಕಾಂಗ್ರೆಸ್ ಪಟಾಲಮ್ಮಿನ ಕೆಂಗಣ್ಣಿಗೂ ಗುರಿಯಾಗಿತ್ತು. ಹುಚ್ಚು ಆಸಾಮಿಗಳನ್ನು ಬಿಗ್ ಬಾಸ್ ಮನೆಯಲ್ಲಿ ಕೂಡಿಹಾಕಿಕೊಂಡು ಬಿಟ್ಟಿ ಬಿಲ್ಡಪ್ಪು ಕೊಡುತ್ತಿದ್ದ ಕಿಚ್ಚನಿಗೆ ಆ ದಿಕ್ಕಿನಿಂದಲೂ ಒಂದು ಗುನ್ನ ಬಿದ್ದಿರಲೂ ಬಹುದು!

ಸದ್ಯದ ಮಟ್ಟಿಗೆ ಬಿಗ್‌ಬಾಸ್ ಎಂಬ ಬೂಸಾ ಶೋನ ಭವಿಷ್ಯ ಡೋಲಾಯಮಾನವಾಗಿದೆ. ಬೇರೆ ರಾಜ್ಯಗಳಲ್ಲಿ ಈ ಹಿಂದಿನಂತೆಯೇ ಶೋ ನಡೆಸಿ ಇಲ್ಲಿ ಪ್ರಸಾರ ಮಾಡುವ ಆಲೋಚನೆಯೂ ಚಾಲ್ತಿಯಲ್ಲಿದೆ. ಬಿಗ್ ಬಾಸ್ ಸ್ಪರ್ಧಿಗಳು ರೆಸಾರ್ಟ್ ಒಂದರಲ್ಲಿ ಎಣ್ಣೆ ಹೊಡೆಯುತ್ತಾ, ಧೂಮಲೀಲೆಗೆ ವಶವಾಗುತ್ತಾ ಕಾಲ ತಳ್ಳುತ್ತಿದ್ದಾರೆ. ನಾಜೂಕು ನಡೆಯ ಕಿಚ್ಚ ಆಕಸ್ಮಿಕವಾಗಿ ಆದ ಪ್ರಹಾರದಿಂದ ತತ್ತರಿಸಿದಂತಿದೆ. ಅವರ ಪ್ರೀತಿಯ ಮಾಮ ಬೊಮ್ಮಣ್ಣ ಕೂಡಾ ಈಗಾಗಲೇ ಅಳೀಮಯ್ಯನ ಪರವಾಗಿ ಡಿಕೆಶಿ ಬಳಿ ಸಂಧಾನ ನಡೆಸಿದ್ದಾರೆಂಬ ಮಾತೂ ಹರಿದಾಡುತ್ತಿದೆ. ಇದೆಲ್ಲದರಾಚೆಗೆ, ಒಂದು ವೇಳೆ ರಾಜಕೀಯ ಕಿಸುರಿನಿಂದಲೇ ಈ ಶೋ ನಿಂತಿದ್ದರೂ ಅದು ಈ ನೆಲದ ಮಂದಿಗೆ ಮಾಡಿದ ಉಪಕಾರವೇ. ಇದರ ಹಿಂದೆ ಡಿಕೆಶಿ ಸೇರಿಕದಂತೆ ಯಾರ ನೆರಳಿದ್ದರೂ ಕೂಡಾ, ಅವರಿಗೆ ಹುಚ್ಚರ ಸಂತೆಗೊಂದು ಅಂತ್ಯ ಹಾಡಿದ, ಆ ಮೂಲಕ ಕೊಳಕು ಅಭಿರುಚಿಯೊಂದನ್ನು ತೊಲಗಿಸಿದ ಪುಣ್ಯ ಖಂಡಿತವಾಗಿಯೂ ಸಂದಾಯವಾಗುತ್ತದೆ!
