ಪ್ಯಾನಿಂಡಿಯಾ (panindia movies) ಸಿನಿಮಾಗಳ ಭರಾಟೆಯ ನಡುವೆ, ಸಣ್ಣ ಸಣ್ಣ ಕ್ರಿಯಾಶೀಲ ಪ್ರಯತ್ನಗಳು ಸೋಲುತ್ತಿವೆ… ಹೀಗೊಂದು ಆತಂಕಪೂರಿತ ಮಾತುಗಳು ಸಿನಿಮಾ ವಲಯದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಸತ್ಯವೂ ಇದೆ. ಯಾಕೆಂದರೆ, ಚಿತ್ರರಂಗದ ಜೀವಂತಿಕೆ ಅಡಗಿರೋದು ಬರೀ ಪ್ಯಾನಿಂಡಿಯಾ ಮಟ್ಟದ ಭ್ರಮೆಯಲ್ಲಲ್ಲ; ಹೊಸತನ ಹಾಗೂ ಪ್ರಯೋಗಶೀಲತೆಯಲ್ಲಿ. ಒಂದು ಫ್ಲೇವರಿನ ಗುಂಗಿಗೆ ಬಿದ್ದ ಪ್ರೇಕ್ಷಕರಿಗೆ ಸಲೀಸಾಗಿ ಭಿನ್ನ ಬಗೆಯ ಸಿನಿಮಾಗಳ ರುಚಿ ಹತ್ತೋದಿಲ್ಲ. (kgf)  ಕೆಜಿಎಫ್ ಸರಣಿ ಸಿನಿಮಾಗಳು ಬಂದ ನಂತರದಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಶುಷ್ಕ ವಾತಾವರಣ ಸೃಷ್ಟಿಯಾದದ್ದರ ಹಿಂದಿರೋದು ಅದೇ ಕಿಸುರು. ಇದೆಲ್ಲದರಾಚೆಗೆ ಚಿತ್ರಮಂದಿರಕ್ಕೆ ತೆರಳೋ ಮನಸು ಮಾಡಿದವರ ಮುಂದೆ ಚೆಂದದ ದೃಷ್ಯಕಾವ್ಯಗಳು ತೆರೆದುಕೊಂಡರೆ, ಅದರ ಮಜವೇ ಬೇರೆಯದ್ದಿರುತ್ತೆ. ಅದೇ ರೀತಿ ಈ ವಾರ ತೆರೆಗಂಡಿರುವ (bang kannada moie)  `ಬ್ಯಾಂಗ್’ನಂಥಾ ಚಿತ್ರಗಳು ಮಾತ್ರ ಬಡಪಾಯಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿ, ಮನೆಯಲ್ಲಿಯೇ ಉಳಿದುಬಿಡುವಂತೆ ಮಾಡುತ್ತವೆ!

`ಬ್ಯಾಂಗ್’ ಅಂತೊಂದು ಚಿತ್ರ ರೆಡಿಯಾಗಿದೆ ಎಂಬ ವಿಚಾರ ತಿಳಿದದ್ದೇ ಬಿಡುಗಡೆಯ ಹೊಸ್ತಿಲಲ್ಲಿ. ಕಿಚ್ಚಾ ಸುದೀಪ್ ವಾಯ್ಸು ಕೊಟ್ಟರು, ಮತ್ಯಾವುದೋ ಹಾಡು ಹಿಟ್ಟಾಯ್ತು ಅಂತೆಲ್ಲ ಚಿತ್ರತಂಡ ಬೆನ್ನು ತಟ್ಟಿಕೊಂಡಿದ್ದಿದೆ. ಆದರೆ, ಅದ್ಯಾವುದರಿಂದಲೂ ಈ ಸಿನಿಮಾ ಸುತ್ತ ಕುತೂಹಲ ಹರಳುಗಟ್ಟುವಂತೆ ಮಾಡಲು ಸಾಧ್ಯವಾಗಿರಲಿಲ್ಲ. ಅದರ ಬೆನ್ನಲ್ಲೇ ರಘು ಧೀಕ್ಷಿತ್ ಈ ಸಿನಿಮಾ ಮೂಲಕ ನಟನಾಗಿದ್ದಾರೆಂಬ ಸುದ್ದಿ ಹೊರ ಬಿದ್ದಿತ್ತು. ಅದರ ಚರ್ಚೆಯೆಲ್ಲವೂ `ಚೆಂದಗೆ ಹಾಡುತ್ತಿದ್ದ ಈ ಆಸಾಮಿಗೇನಾಯ್ತು’ ಎಂಬಂಥಾ ವಿಷಾದದಲ್ಲಿಯೇ ಪರ್ಯಾವಸಾನ ಹೊಂದಿತ್ತು. ಕಡೇಗೆ ಈ ಸಿನಿಮಾ ನಾಯಕಿ ಶಾನ್ವಿ ಶ್ರೀವತ್ಸಳನ್ನು ಕೇಂದ್ರವಾಗಿಟ್ಟುಕೊಂಡು, ಕಡೇ ಕ್ಷಣದಲ್ಲಿ ಒಂದಷ್ಟು ಪ್ರಚಾರ ಪಟ್ಟುಗಳು ಪ್ರದರ್ಶನಗೊಂಡಿದ್ದವು. ಆ ಮೂಲಕ ಈ ಸಿನಿಮಾ ನಿಜಕ್ಕೂ ಚೆನ್ನಾಗಿರಬಹುದಾ ಅಂತೊಂದು ಕುತೂಹಲ ಮೂಡಿಕೊಂಡಿತ್ತು. ಅದನ್ನು ಎದೆಯಲ್ಲಿಟ್ಟುಕೊಂಡು ಸಿನಿಮಾ ನೋಡಿದವರಿಗೆಲ್ಲ, ಪ್ರಚಾರದ ಸಂದರ್ಭದಲ್ಲಿ ಬಿಟ್ಟಿದ್ದೆಲ್ಲವೂ ಬರೀ ಭೋಂಗು ಎಂಬುದು ಸ್ಪಷ್ಟವಾಗಿಯೇ ಮನದಟ್ಟಾಗಿದೆ!

ಇದು ಗಣೇಶ್ ಪರಶುರಾಮ್ ನಿರ್ದೇಶನದ ಚಿತ್ರ. ಬ್ಲ್ಯಾಕ್ ಕಾಮಿಡಿ ವಿತ್ ಗ್ಯಾಂಗ್ ಸ್ಟರ್ ಥ್ರಿಲರ್ ಮಾದರಿಯ ಚುಂಗು ಹಿಡಿದು ನಿರ್ದೇಶಕರು ಈ ಚಿತ್ರವನ್ನು ರೂಪಿಸಿದ್ದಾರೆ. ಕನ್ನಡದ ಮಟ್ಟಿಗೆ ಡ್ರಗ್ಸ್ ಭೂಮಿಕೆಯ ಕಥನಗಳು ಪ್ರೇಕ್ಷಕರಿಗೆ ರುಚಿಸೋದಿಲ್ಲ. ಆ ಬಗೆಯ ಒಂದಷ್ಟು ಸಿನಿಮಾಗಳು ಗೋತಾ ಹೊಡೆದಿವೆ. ಅದೇ ಜಾನರಿನಲ್ಲಿ ಹೊಸತೇನನ್ನೋ ಮಾಡುವ ಭರದಲ್ಲಿ, ಕಲಸುಮೇಲೋಗರವೊಂದನ್ನು ಬ್ಯಾಂಗ್ ಹೆಸರಿನಲ್ಲಿ ಪ್ರೇಕ್ಷಕರ ಮುಂದಿಡಲಾಗಿದೆ. ರೋಡ್ ಟ್ರಿಪ್ ಹೊರಡುವ ಯುವಕರ ತಂಡ, ಅದರ ನಡುವಲ್ಲಿ ಜರುಗುವ ಕಿಡ್ನಾಪ್ ಪ್ರಹಸನ, ಅದಕ್ಕೊಂದು ಪ್ಲಾಶ್ ಬ್ಯಾಕು, ಅಲ್ಲಿ ಕಾಣಿಸುವ ಐವತ್ತು ಕೋಟಿ ಮೊತ್ತದ ಡ್ರಗ್ಸ್ ಗ್ಯಾಂಗಿನ ಮ್ಯಾಟರ್ರು ಮತ್ತು ಅದರ ಜಾಡು ಹಿಡಿದು ಹೊರಟ ಯುವಕರಿಗೆ ದಾರಿ ಮಧ್ಯೆಯೇ ಜೊತೆಯಾಗುವ ಹುಡುಗಿ… ಇವಿಷ್ಟು ಅಂಶಗಳೊಂದಿಗೆ ಬ್ಯಾಂಗ್ ಕಥನ ಗರಿಬಿಚ್ಚಿಕೊಳ್ಳುತ್ತೆ.

ಮೊದಲಾರ್ಧದಲ್ಲಿ ಕಥೆ ಒಂದ್ಯಾವುದೋ ದಿಕ್ಕಿನತ್ತ ಮುಂದುವರೆಯುತ್ತಿದೆ ಎಂಬಂಥಾ ತಟುಕು ಸಮಾಧಾನ ಪ್ರೇಕ್ಷಕರ ಪಾಲಿಗುಳಿಯುತ್ತದೆ. ಆದರೆ, ಇಂಟರ್‍ವಲ್ ಹೊತ್ತಿಗೆಲ್ಲ ಇಡೀ ಕಥೆಯೇ ಗರಬಡಿದಂತಾಗುತ್ತದೆ. ಖುದ್ದು ನಿರ್ದೇಶಕನೇ ಉಳಿದರ್ಧ ಭಾಗವನ್ನು ಹೇಗೆ ಮುನ್ನಡೆಸಬೇಕೆಂಬುದೇ ಗೊತ್ತಿಲ್ಲದೆ ತಬ್ಬಿಬ್ಬುಗೊಂಡಂತೆ ಭಾಸವಾಗುತ್ತೆ. ಅದರ ಭಾಗವಾಗಿಯೇ ಸೀರಿಯಸ್ ಕಾಮಿಡಿಯಂಥಾ ಸನ್ನಿವೇಷಗಳು ಜಮೆಯಾಗುತ್ತಾ ಸಾಗುತ್ತವೆ. ಪಾತ್ರಗಳು ಇದ್ದಲ್ಲಿಯೇ ಸುತ್ತಲಾರಂಭಿಸುತ್ತವೆ. ಕೆಲ ದೃಷ್ಯಗಳಂತೂ ಆಸು ಪಾಸಿನಲ್ಲಿ ಕುಂತ ಪ್ರೇಕ್ಷಕರು ಪರಸ್ಪರ ಮುಖ ನೋಡಿಕೊಂಡು ತಮ್ಮನ್ನು ತಾವೇ ಸಮಾಧಾನಿಸಿಕೊಳ್ಳುವ ಮಟ್ಟಕ್ಕೆ ರೇಜಿಗೆ ಹುಟ್ಟಿಸುತ್ತವೆ.

ಈ ಹಂತ ತಲುಪುವ ಹೊತ್ತಿಗೆಲ್ಲ ಪ್ರೇಕ್ಷಕರು ಟಿಕೇಟಿಗೆ ಕೊಟ್ಟ ಕಾಸಿನ ಮುಖ ನೋಡಿಯಷ್ಟೇ ಸೀಟಿಗೆ ಅಂಟಿಕೊಳ್ಳೋ ಪರಿಸ್ಥಿತಿ ಸೃಷ್ಟಿಯಾಗಿರುತ್ತೆ. ನಿಖರವಾಗಿ ಹೇಳಬೇಕೆಂದರೆ, ಸಿಕ್ಕು ಸಿಕ್ಕಾದ ದೃಷ್ಯಾವಳಿಗಳ ಭರಾಟೆಯಲ್ಲಿ ಪ್ರೇಕ್ಷಕರೆಲ್ಲ ಸೈಕ್ ಆಗಿ ಬಿಟ್ಟಿರುತ್ತಾರೆ. ಅದೇ ಅಹೊತ್ತಿನಲ್ಲಿ ಸೈಕೆಡೆನಿಕ್ಸ್ ಸಾಂಗಿನ ಅಬ್ಬರ ಶುರುವಾಗುತ್ತೆ. ಗಾಂಜಾ ಮತ್ತು, ಎಣ್ಣೆ ಏಟು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇಂಥಾ ಸೈಕೆಡೆನಿಕ್ಸ್ ಮಾದರಿಯ ಹಾಡುಗಳನ್ನು ಹಾಕಿಕೊಂಡು ಕುಣಿಯೋ ಮಂದಿಯಿದ್ದಾರೆ. ಅದನ್ನು ಗಾಂಜಾ ಸಾಂಗ್ಸ್ ಅಂತಲೂ ಕರೆಯುತ್ತಾರೆ. ಅಂಥಾ ಮಾದರಿಯ ಹಾಡು ಬರುವ ಹೊತ್ತಿಗೆಲ್ಲ, ಗಾಂಜಾ ಮೂಲ ಹುಡುಕಿ ಹೊರಟ ಯುವಕರ ಗುಂಪಿನ ಪುಟ್ಟ ಹುಡುಗನೊಬ್ಬ ದುಷ್ಟ ಬಂಧನದಲ್ಲಿರುತ್ತಾನೆ. ಈ ಗುಂಪು ಮಾತ್ರ ಅದರ ಗೊಡವೆ ಇಲ್ಲದಂತೆ ತಮ್ಮ ಲೋಕದಲ್ಲಿ ತಾವಿರೋದು ಮಹಾ ಅಭಾಸವಾಗಿ ಗೋಚರಿಸುತ್ತದೆ.

ಹೀಗೆ ಕಳ್ಳು ಕುಡಿದ ಕಪಿಗಳಂತಾಡುವ ಈ ಟೀಮಿಗೆ ಅಚಾತುರ್ಯದಿಂದ ಅದ್ಯಾರೋ ರಾಮರಸದಂಥಾ ದ್ರವ ಕುಡಿಸುವ ಸೀನೂ ಬರುತ್ತದೆ. ಆ ಮತ್ತಿನಲ್ಲಿ ರೇಸು ಹೊರಡುವ ಸೀನನ್ನು ಗ್ರಾಫಿಕ್ಸ್ ಮುಂತಾದವನ್ನು ಬೆರೆಸಿ ಅದ್ದೂರಿಯಾಗಿ ಸೆರೆ ಹಿಡಿಯಲಾಗಿದೆ. ಆದರೆ, ಆ ಸೀನು ಅದೆಷ್ಟು ಅಸಹನೆ ಹುಟ್ಟಿಸುತ್ತದೆ ಎಂದರೆ, ಅದುವರೆಗೆ ಪ್ರೇಕ್ಷಕರಲ್ಲಿದ್ದ ತಾಳ್ಮೆ ಕಟ್ಟೆಯೊಡೆಯೋ ಹಂತ ತಲುಪುತ್ತದೆ. ದುರಂತವೆಂದರೆ, ಕ್ಲೈಮ್ಯಾಕ್ಸಿನವರೆಗೂ ಪ್ರೇಕ್ಷಕರನ್ನು ಕಟ್ಟಿಡಬಲ್ಲ ಒಂದೇ ಒಂದು ದೃಷ್ಯವೂ ಕದಲುವುದಿಲ್ಲ. ಇದಾದೇಟಿಗೆ ರಘು ದೀಕ್ಷಿತ್ ಮತ್ತು ಶಾನ್ವಿಯ ಫೈಟ್ ಸೀನಂತೂ ಅಧ್ವಾನ!

ಇದು ಬ್ಲಾಕ್ ಕಾಮಿಡಿ ಜಾನರಿನ ಚಿತ್ರ. ಹಾಲಿವುಡ್ಡಿನಲ್ಲಿ ಗುಣಮಟ್ಟ ಹೊಂದಿರುವಂಥಾ ಈ ಜಾನರಿನ ದಂಡಿ ದಂಡಿ ಸಿನಿಮಾಗಳು ಬಂದಿವೆ. ಇದೀಗ ಜೈಲರ್ ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಿದೆಯಲ್ಲಾ? ಅದರ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಕೂಡಾ ಈ ಹಿಂದೆ `ಕೊಲಮಾವು ಕೋಕಿಲಾ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅಲ್ಲಿಯೂ ಡ್ರಗ್ ಮಾಫಿಯಾದ ಇರುವಿಕೆ ಇತ್ತು. ಆದರೆ ಅದನ್ನು ಸಂಭಾಳಿಸುವುದಕ್ಕೆ ಬೇರೆಯದ್ದೇ ತೆರನಾದ ಸೂಕ್ಷ್ಮತೆ ಬೇಕಾಗುತ್ತೆ. ಅದು ಇರೋದರಿಂದಲೇ ನಿರ್ದೇಶಕ ನೆಲ್ಸನ್ ಗೆದ್ದು ಬೀಗಿದ್ದರು. ಬ್ಯಾಂಗ್ ವಿಚಾರದಲ್ಲಿ ಹೇಳೋದಾದರೆ, ನಿರ್ದೇಶಕರು ಪರಿಣಾಮಕಾರಿಯಾಗಿಸುವ ದಿಕ್ಕಿನಲ್ಲಿ ಪ್ರಯತ್ನ ಹಾಕಿದ್ದಾರೆ. ಆ ದಿಸೆಯಲ್ಲಿ ಅವರನ್ನು ಮೆಚ್ಚಿಕೊಳ್ಳಬಹುದು. ಆದರೆ, ಅದು ಫಲಿಸಿಲ್ಲ ಎಂಬುದು ವಾಸ್ತವ. ಅದುವೇ ಈ ಚಿತ್ರಕ್ಕಾಗಿರುವ ಹಿನ್ನಡೆಗೆ ಪ್ರಧಾನ ಕಾರಣವೆಂದರೂ ತಪ್ಪೇನಿಲ್ಲ!

ಅದೇನು ದುರಾದೃಷ್ಟವೋ ಗೊತ್ತಿಲ್ಲ; ಕೆಲ ಸಿನಿಮಾದ ಕಥೆ ಚೆನ್ನಾಗಿರುತ್ತೆ. ನಿರೂಪಣೆಯಲ್ಲಿಯೂ ಸೆಳೆತವಿರುತ್ತದೆ. ಆದರೆ, ಅದಕ್ಕೆ ಬೇಕಾದ ಬಜೆಟ್ಟಿಗೆ ತತ್ವಾರವಾಗಿ ಬಿಡುತ್ತದೆ. ಆದರಿಲ್ಲಿ ಬ್ಯಾಂಗ್‍ಗೆ ಯಥೇಚ್ಚವಾಗಿ ಬಜೆಟ್ಟು ಸಿಕ್ಕಿದೆ. ಮೇಕಿಂಗ್ ಕೂಡಾ ಅದ್ದೂರಿಯಾಗಿದೆ. ಅದೆಲ್ಲವನ್ನೂ ವ್ಯರ್ಥವಾಗಿಸುವಂತೆ ಕಥೆ, ನಿರೂಪಣೆ ಮತ್ತು ಪಾತ್ರ ಕಟ್ಟುವಿಕೆಯಲ್ಲಿ ಎಡವಲಾಗಿದೆ. ಇಲ್ಲಿ ಶಾನ್ವಿ ಶ್ರೀವತ್ಸ, ರಘು ದೀಕ್ಷಿತ್ ಮುಂತಾದವರ ಜೊತೆ ರಿತ್ವಿಕ್ ಮುರಳೀಧರ್ ಕೂಡಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಲ್ಲಿ ಸಂಗೀತದೊಂದಿಗೆ ನಟಿಸುವ ಸರ್ಕಸ್ಸನ್ನೂ ಮಾಡಿದ್ದಾರೆ. ಅದೂ ಕೂಡಾ ಈತನಿಗೆ ಹೀರೋ ಆಗಿ ನಟಿಸುವ ಅವಕಾಶ ಹೇಗೆ ಸಿಕ್ಕಿತೆಂಬ ಪ್ರಶ್ನೆ ಪ್ರೇಕ್ಷಕರನ್ನೆಲ್ಲ ಕಾಡುತ್ತದೆ. ಬಹುಶಃ ಶ್ರೀಯುತರು ಒಂದಷ್ಟು ಇನ್ವೆಸ್ಟು ಮಾಡಿ ಆ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರೂ ಇರಬಹುದು. ಅವರ ಅಮೋಘ ನಟನೆ ಅಂಥಾದ್ದೊಂದು ಗುಮಾನಿ ಹುಟ್ಟಿಸೋದು ಅಚ್ಚರಿಯೇನಲ್ಲ. ಇಲ್ಲಿ ನಿರ್ದೇಶಕರು ಹೊಸತೇನನ್ನೋ ಹೇಳಲು ಪ್ರಯತ್ನಿಸಿದ್ದಾರೆ. ಆದರೆ, ದೃಷ್ಯ ಕಟ್ಟುವಾಗ ಅದರಲ್ಲಿ ಸೋತಿದ್ದಾರೆ. ಇದೆಲ್ಲದರ ಫಲವಾಗಿ ಬ್ಯಾಂಗ್ ಭಯಾನಕ ಅನುಭವವೊಂನ್ನು ಕಟ್ಟಿ ಕೊಡುತ್ತದೆ. ಆ ಅನುಭವವೇ ತಲೆನೋವಾಗಿ ಒಂದಷ್ಟು ದಿನ ಕಾಡುತ್ತದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!