ಎ.ಆರ್ ರೆಹಮಾನ್ ಎಂಬ ಹೆಸರೊಂದು ಕಿವಿ ಸೋಕಿದರೆ ಸಾಕು; ಅವರೇ ಸೃಷ್ಟಿಸಿದ ನಾನಾ ಹಾಡುಗಳ ಆಲಾಪವೊಂದು ತಂತಾನೇ ಎದೆತುಂಬಿಕೊಳ್ಳುತ್ತೆ. ಅಷ್ಟರ ಮಟ್ಟಗೆ ಭಾರತೀಯರನ್ನೆಲ್ಲ ಆವರಿಸಿಕೊಂಡು, ವಿಶ್ವಾದ್ಯಂತ ಹೆಸರಾಗಿರುವವವರು ರೆಹಮಾನ್. ಯಾವ ನಿಲುಕಿಗೂ ದಕ್ಕದ ಅಗಾಧ ಪ್ರತಿಭೆ ಹೊಂದಿರೋ ಈ ಮ್ಯೂಸಿಕ್ ಮಾಂತ್ರಿಕ ಈ ಕ್ಷಣಕ್ಕೂ ಹೊಸತರ ಸೃಷ್ಟಿಯಲ್ಲಿ ತಲ್ಲೀನರಾಗಿದ್ದಾರೆ. ಎರಡೆರಡು ಆಸ್ಕರ್ ಪ್ರಶಸ್ತಿಯೊಂದಿಗೆ ಈವತ್ತಿಗೂ ಅದೇ ಬೇಡಿಕೆ ಹೊಂದಿರುವ ಅವರೀಗ ನಟನೆಯತ್ತ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ತನ್ನ ಹಳೇ ಗೆಳೆಯ ಪ್ರಭುದೇವ ಚಿತ್ರದ್ಲ್ಲಿ ಪ್ರಧಾನವಾದೊಂದು ಪಾತ್ರಕ್ಕೆ ಜೀವ ತುಂಬಲು ತಯಾರಾಗಿದ್ದಾರೆ.
ಸಂಗೀತ ಕ್ಷೇತ್ರವನ್ನು ಹಲವು ಆಯಾಮಗಳಲ್ಲಿ ಆವರಿಸಿಕೊಂಡಿರುವ ರೆಹಮಾನ್ ಅವರದ್ದು ಪ್ರಯೋಗಶೀಲ ನಡೆ. ಅಂಥಾದ್ದೊಂದು ಮನಃಸ್ಥಿತಿ ಇಲ್ಲದೇ ಹೋಗಿದ್ದಿದ್ದರೆ ದಶಕಗಟ್ಟಲೆ ಅದೇ ಛಾರ್ಮಿನೊಂದಿಗೆ ಚಾಲ್ತಿಯಲ್ಲಿರಲು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ. ಇಂತಾ ರೆಹಮಾನ್ ಇದುವರೆಗೂ ಒಂದಷ್ಟು ಆಲ್ಬಂ ಸಾಂಗುಗಳಲ್ಲಿ ಕಾಣಿಸಿಕೊಂಡಿದ್ದಿದೆ. ಅವರೇ ಸೃಷ್ಟಿಸಿದ ಸಂಗೀತ ಕಾರ್ಯಕ್ರಮಗಳಲ್ಲಿ ನಾನಾ ಭಾವ ಭಂಗಿಗಳಲ್ಲಿ ಮಿಂಚೋದಂತೂ ಮಾಮೂಲು. ಆದರೆ, ಸಾಕಷ್ಟು ಬೇಡಿಕೆಗಳು ಬಂದರೂ ಕೂಡಾ ಅವರೆಂದೂ ಸಿನಿಮಾಗಳಲ್ಲಿ ನಟಿಸುವ ಗೋಜಿಗೆ ಹೋಗಿರಲಿಲ್ಲ. ಕಡೆಗೂ ಅವರ ಬಹುಕಾಲದ ಗೆಳೆಯ ಪ್ರಭುದೇವ್ ಮಾತಿಗೆ ಕಟ್ಟು ಬಿದ್ದು ಬಣ್ಣ ಹಚ್ಚಲು ಒಪ್ಪಿಗೆ ಸೂಚಿಸಿದ್ದಾರೆ.
ಪ್ರಭುದೇವ ನಟಿಸುತ್ತಿರೋ ತಮಿಳು ಚಿತ್ರ ಮೂನ್ ವಾಕ್‌ನಲ್ಲಿ ರೆಹಮಾನ್ ಮುಖ್ಯ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ಮನೋಜ್ ಎನ್ ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾದಲ್ಲಿ ಪ್ರಭುದೇವ ಇಮೇಜಿಗೆ ತಕ್ಕಂಥಾ ನೃತ್ಯ ಪ್ರಧಾನ ಕಥೆಯಿದೆಯಂತೆ. ಇದರಲ್ಲಿ ಸಿಡುಕು ಸ್ವಭಾವದ ಸಿನಿಮಾ ನಿರ್ದೇಶಕನ ಪಾತ್ರಕ್ಕೆ ರೆಹಮಾನ್ ಅವರೇ ಜೀವ ತುಂಬಬೇಕೆಂಬುದು ಪ್ರಭುದೇವ ಬಯಕೆಯಾಗಿತ್ತು. ಯಾಕೆಂದರೆ, ರೆಹಮಾನ್ ಆ ಪಾತ್ರಕ್ಕೆ ಪಕ್ಕಾ ಸರಿ ಹೊಂದುತ್ತಿದ್ದರು. ಆರಂಭದಲ್ಲಿ ಕೊಸರಿಕೊಂಡರೂ ಗೆಳೆಯನ ಒತ್ತಾಯಕ್ಕೆ ಮಣಿದಿರೋ ಮ್ಯೂಸಿಕ್ ಮಾಂತ್ರಿಕ ಆಕ್ಟರ್ ಆಗಲು ಮುಂದಾಗಿದ್ದಾರೆ. ರೆಹಮಾನ್ ಅವರ ಈ ಹೊಸಾ ಅವತಾರದ ಬಗ್ಗೆ ಅಭಿಮಾನಿಗಳಲ್ಲೊಂದು ಕುತೂಹಲವಿದೆ!
keywords: rehman, ar rehman, prabhudeva, moon walk movie

