ಭಿಜಿತ್ ತೀರ್ಥಹಳ್ಳಿ ನಿರ್ದೇಶನ ಅಪಾಯವಿದೆ ಎಚ್ಚರಿಕೆ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಅಷ್ಟಕ್ಕೂ ಹಾರರ್ ಸಿನಿಮಾಗಳೆಂದರೆ ಬಲು ಪ್ರೀತಿ ಹೊಂದಿರುವ ದೊಡ್ಡ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಹಾಗಿರುವಾಗ, ಆ ಜಾನರಿನ ಸಿದ್ಧಸೂತ್ರಗಳಾಚೆ ಹಬ್ಬಿಕೊಂಡಿರುವ ಈ ಸಿನಿಮಾ ಸಹಜವಾಗಿಯೇ ನೋಡುಗರನ್ನು ಸೆಳೆದುಕೊಂಡಿದೆ. ಈ ಸಿನಿಮಾ ಮೂಲಕವೇ ಹೊಸಾ ಪ್ರತಿಭೆಗಳೊಂದಷ್ಟು ಮಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ಸಾಲಿನಲ್ಲಿ ಗಾಬ್ರಿ ಅಂತೊಂದು ಮುಖ್ಯ ಪಾತ್ರವನ್ನು ನಿರ್ವಹಿಸಿರುವ ಮಿಥುನ್ ತೀರ್ಥಹಳ್ಳಿ ನಿರ್ವಹಿಸಿದ್ದಾರೆ. ಒಂದಷ್ಟು ಭಿನ್ನ ಚಹರೆಗಳನ್ನು ಹೊಂದಿರುವ ಆ ಪಾತ್ರವೀಗ ನೋಡುಗರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಒಂದು ಹಂತದಲ್ಲಿ ನಟನಾಗಬೇಕೆಂಬ ಕನಸು ಕಂಡು, ಆ ನಂತರ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಿಥುನ್ ಪಾಲಿಗೆ ಅಪಾಯವಿದೆ ಚಿತ್ರ ತಿರುವು ನೀಡೋ ಲಕ್ಷಣಗಳಿದ್ದಾವೆ!

ಕಾಲೇಜು ದಿನಗಳಲ್ಲಿಯೇ ನಟನಾಗಬೇಕೆಂಬ ಕನಸನ್ನು ಸಾಕಿಕೊಂಡಿದ್ದವರು ಮಿಥುನ್. ಡಿಗ್ರಿ ವ್ಯಾಸಂಗದ ಸಮಯದಲ್ಲಿ ಅಚಾನಕ್ಕಾಗಿ ಅದಕ್ಕೊಂದು ವೇದಿಕೆ ಸಿಕ್ಕಿತ್ತು. ಆ ದಿನಗಳಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದ ಮಾಲ್ಗುಡಿ ಡೇಸ್ ಚಿತ್ರದ ಆಡಿಷನ್ ಕರೆಯಲಾಗಿತ್ತು. ಅದರಲ್ಲಿ ಭಾಗಿಯಾಗಿದ್ದ ಮಿಥುನ್ ಗೆ ರಾಜಣ್ಣ ಎಂಬ ಪಾತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಆ ಪಾತ್ರ ಪ್ರೇಕ್ಷರಿಗೂ ಹಿಡಿಸಿತ್ತು. ಆ ಬಳಿಕ ಸಿನಿಮಾ ರಂಗದಲ್ಲಿ ನಟನಾಗಿ ನೆಲೆ ಕಂಡುಕೊಳ್ಳಬೇಕೆಂಬ ಇರಾದೆಯಿಂದ ಬೆಂಗಳೂರಿಗೆ ಬಂದಿಳಿದಿದ್ದ ಮಿಥುನ್‌ಗೆ ವಾಸ್ತವವೆಂಬುದು ನಾನಾ ರೀತಿಯಲ್ಲಿ ದರ್ಶನ ಕೊಟ್ಟಿತ್ತು. ತೀರ್ಥಹಳ್ಳಿಯಲ್ಲಿರುವಾಗಲೇ ರಂಗಭೂಮಿಯ ನಂಟು ಹೊಂದಿದ್ದ ಮಿಥುನ್ ನಟನೆ, ನಿರ್ದೇಶನ ಸೇರಿದಂತೆ ನಾನಾ ವೀಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಆ ಅನುಭವವೇ ಕೈ ಹಿಡಿದೀತೆಂದುಕೊಂಡಿದ್ದ ಆತನಿಗೆ ಸಿನಿಮಾ, ಸೀರಿಯಲ್ ಜಗತ್ತಿನ ಬೇರೆ ಬೇರೆ ಮಾನದಂಡಗಳ ಅರಿವಾಗಿತ್ತು.

ಅನೇಕ ಸೀರಿಯಲ್, ಸಿನಿಮಾಗಳ ಆಡಿಷನ್ನುಗಳಲ್ಲಿ ಭಾಗಿಯಾದರೂ ಅದೇಕೋ ಅವಕಾಶವೆಂಬುಉದು ಕೈಗೆಟುಕದೆ ಸತಾಯಿಸಲಾರಂಭಿಸಿತ್ತು. ಆ ನಂತರ ನಿರ್ದೇಶನ ವಿಭಾಗದತ್ತ ಆಕರ್ಷಿತರಾದ ಮಿಥುನ್, ಯುಗದೋಳ್, ಡಿಸೆಂಬರ್ ೨೪ ಮುಂತಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇತ್ತೀಚೆಗಷ್ಟೆ ವಿಕಲ್ಪ ಅನ್ನೋ ಸಿನಿಮಾದ ಭಾಗವಾಗಿದ್ದರು. ಹೀಗಿರುವಾಗಲೇ ಅಪಾಯವಿದೆ ಎಚ್ಚರಿಕೆ ಚಿತ್ರದ ಆಡಿಷನ್ ನಡೆಯುತ್ತಿರೋದನ್ನು ಮನಗಂಡ ಮಿಥುನ್ ಯಾವುದಕ್ಕೂ ಇರಲಿ ಅಂತ ಭಾಗಿಯಾಗಿದ್ದರು. ನಂತರ ಗಾಬ್ರಿ ಅನ್ನೋ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದರು. ಆ ನಂತರದ ಯಾನ ಮಿಥುನ್ ಪಾಲಿಗೆ ಚೆಂದದ ಅನುಭವಗಳನ್ನು ಕೊಡಮಾಡಿದೆ. ಯಾಕೆಂದರೆ, ಗಾಬ್ರಿ ಅನ್ನೋ ಪಾತ್ರಕ್ಕಾಗಿ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಎಂಟು ತಿಂಗಳ ಕಾಲ ರಿಹರ್ಸಲ್ ನಡೆಸಿದ್ದರಂತೆ. ಹಾಗೆ ಪಳಗಿಕೊಂಡಿದ್ದರಿಂದಲೇ ಗಾಬ್ರಿಒ ಎಂಬ ಪಾತ್ರಕ್ಕೆ ಪರಿಣಾಮಕಾರಿಯಾಗಿ ಜೀವ ತುಂಬಲು ಸಾಧ್ಯವಾಗಿದೆ ಎಂಬ ಭಾವ ಮಿಥುನ್ ರದ್ದು.

ಹೀಗೆ ನಟನಾಗೋ ಕನಸಿನ ಮೊದಲ ಹೆಜ್ಜೆಯಲ್ಲಿಯೇ ಮಿಥುನ್ ಗೆ ಆಶಾದಾಯಕ ಪ್ರತಿಕ್ರಿಯೆಗಳು ಸಿಕ್ಕಿವೆ. ಆದರೆ ಕಷ್ಟಕಾಲದಲ್ಲಿ ಬದುಕಲು ಅವಕಾಶ ಮಾಡಿಕೊಟ್ಟ ನಿರ್ದೇಶನ ವಿಭಾಗವೇ ಅವರ ಪಾಲಿನ ಮೊದಲ ಆಧ್ಯತೆ. ಮುಂದಿನ ದಿನಗಳಲ್ಲಿ ನಟನೆ ಮತ್ತು ನಿರ್ದೇಶನಗಳೆರಡನ್ನೂ ಸರಿದೂಗಿಸಿಕೊಂಡು ಹೋಗುವ ನಿರ್ಧಾರ ಅವರದ್ದಿದ್ದಂತಿದೆ. ಒಂದು ಯಶಸ್ಸಿನ ಆವೇಗಕ್ಕೊಳಗಾಗದೆ, ಅತ್ಯಂತ ಸಮಚಿತ್ತದಿಂದ ನಿರ್ಧಾರ ತಳೆಯಲು ಮಿಥುನ್ ಗೆ ಸಾಧ್ಯವಾದದ್ದರ ಹಿಂದೆ ಅವರೇ ಕಂಡುಂಡ ಕಷ್ಟಗಳ ಕಿಸುರಿದೆ. ಬೆಂಗಳೂರಿಗೆ ಬಂದ ಹೊಸತರಲ್ಲಿ ಬೇರೆ ದಾರಿ ಕಾಣದೆ ಗೆಳೆಯನ ಜೊತೆ ಲಾಡ್ಜಿನಲ್ಲಿ ಕೆಲಸಕ್ಕಿದ್ದುಕೊಂಡೇ ಅವಕಾಶಗಳಿಗಾಗಿ ಅರಸುವ ಸಂದರ್ಭವೂ ಬಂದೊದಗಿತ್ತು.

ಹೀಗೆ ನಾನಾ ಕೆಲಸಗಳನ್ನು ಮಾಡುತ್ತಲೇ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಬದುಕು ಸಲೀಸಾಗಿರಲಿಲ್ಲ. ಕೆಲವೊಂದು ಅವಕಾಶಗಳು ಸಿಕ್ಕ ಸಂದರ್ಭದಲ್ಲಿ ಜೊಮ್ಯಾಟೋದಂಥಾ ಡೆಲಿವರಿ ಕಸುಬು ಮಾಡುತ್ತಲೇ ಜೀವನ ನಡೆಸಿದ ಕಷ್ಟದ ದಿನಗಳನ್ನೂ ಮಿಥುನ್ ಕಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬದುಕು ಒಂದಷ್ಟು ಸಹ್ಯವಾದ ಭಾವ ಅವರಲ್ಲಿದೆ. ಅಪಾಯವಿದೆ ಎಚ್ಚರಿಕೆ ಚಿತ್ರವಂತೂ ಈತನ ಪಾಲಿಗೆ ಆಕ್ಸಿಜನ್ನಿನಂಥಾ ಸಿನಿಮಾ. ಇದರ ಗ್ರಾಬ್ರಿ ಎಂಬ ಪಾತ್ರದ ಮೂಲಕವೇ ಮತ್ತೊಂದಷ್ಟು ಅವಕಾಶಗಳು ಸಿಕ್ಕರೂ ಅಚ್ಚರಿಯೇನಿಲ್ಲ. ಹೀಗೆ ಒಂದು ಸಿನಿಮಾ ಒಂದಷ್ಟು ಯಶ ಕಂಡರೆ ಅದರ ಭಾಗವಾಗಿದ್ದವರ ಬದುಕು ಹಸನಾಗುತ್ತೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಅಪಾಯವಿದೆ ಎಚ್ಚರಿಕೆ ಚಿತ್ರದ ಭೂಮಿಕೆಯಲ್ಲಿಯೂ ಅಂಥಾದ್ದೊಂದು ಚಮತ್ಕಾರ ನಡೆಯಲಾರಂಭಿಸಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!