ಭಿಜಿತ್ ತೀರ್ಥಹಳ್ಳಿ ನಿರ್ದೇಶನದ ಅಪಾಯವಿದೆ ಎಚ್ಚರಿಕೆ ಚಿತ್ರ ಈ ವಾರ ಅಂದರೆ, ಫೆಬ್ರವರಿ 28ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ನೇರವಾಗಿ ಎದೆಗಿಳಿದು ಕಾಡುವಂಥಾ ಹಾಡು, ಕಾಡಿನ ಗರ್ಭದಲ್ಲಿ ಘಟಿಸುವ ಹಾರರ್ ಥ್ರಿಲ್ಲರ್ ಕಥೆನದ ಸುಳಿವು… ಯಶಸ್ವಿ ಚಿತ್ರವೊಂದರ ಆರಂಭಿಕ ಹೆಜ್ಜೆಗಳು ಹೇಗಿರುತ್ತವೋ, ಈ ಸಿನಿಮಾದ ಕದಲಿಕೆಗಳು ಕೂಡಾ ಅದಕ್ಕೆ ತಕ್ಕುದಾಗಿದೆ. ಹೀಗೆ ಹಬ್ಬಿಕೊಂಡಿರೋ ಸಕಾರಾತ್ಮಕ ವಾತಾವರಣದ ಹಿಂದೆ ಹೊಸಬರ ತಂಡವೊಂದರ ಅವಿರತವಾದ ಶ್ರಮವಿದೆ. ಆದರೆ, ಅದರ ಹಿಂದೆ ವಿ.ಕೆ ಮಂಜುನಾಥ್ ಎಂಬ ಅಪ್ಪಟ ಸಿನಿಮಾ ಪ್ರೇಮಿ ನಿರ್ಮಾಪಕರ ಸಾಥ್ ಕೂಡಾ ಪ್ರಧಾನವಾಗಿದೆ. ಯಶಸ್ವೀ ಉದ್ಯಮಿಯಾಗಿದ್ದುಕೊಂಡು, ವ್ಯವಹಾರದಾಚೆಗಿನ ಸಿನಿಮಾ ವ್ಯಾಮೋಹದಿಂದಲೇ ವಿ.ಕೆ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಹೊಸಬರು ಸಿನಿಮಾ ರಂಗಕ್ಕೆ ಆಗಮಿಸೋದು ಚಿತ್ರರಂಗದ ಏಳಿಗೆಯ ದೃಷ್ಟಿಯಿಂದ ಅವಶ್ಯಕ ವಿದ್ಯಮಾನ. ಆದರೆ, ಹೊಸಾ ತಂಡವನ್ನು ನೆಚ್ಚಿಕೊಂಡು ಕೋಟಿ ಕೋಟಿ ಪಣಕ್ಕಿಡಲು ಹಿಂಜರಿಕೆ ಹೊಂದಿರುವವರೇ ಹೆಚ್ಚು. ಅಂಥವರ ನಡುವೆ ಕೆಲ ನಿರ್ಮಾಪಕರು ಲಾಭ ನಷ್ಟದ ಗೋಜಿಗೆ ಹೋಗದೆ ಹೊಸಬರನ್ನು ಬೆನ್ತಟ್ಟಿ ಪ್ರೋತ್ಸಾಹಿಸೋದೂ ಇದೆ. ನಿಸ್ಸಂದೇಹವಾಗಿ ಆ ಸಾಲಿಗೆ ಸೇರ್ಪಡೆಗೊಳ್ಳುವವರು ವಿ.ಜಿ ಮಂಜುನಾಥ್. ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಗೆ ಸೇರುವ ವಡ್ಡರಹಳ್ಳಿಯವರು ವಿ.ಜಿ ಮಂಜುನಾಥ್. ಅಲ್ಲಿನ ಅಪ್ಪಟ ರೈತಾಪಿ ವರ್ಗದಲ್ಲಿ ಹುಟ್ಟಿ ಬೆಳೆದ ಅವರ ಪಾಲಿಗೆ ಆರಂಭದಿಂದಲೂ ಶಿಕ್ಷಕನಾಗಬೇಕೆಂಬ ಕನಸಿತ್ತು. ಕಷ್ಟಪಟ್ಟು ಓದಿ, ಆ ವೃತ್ತಿಯನ್ನು ದಕ್ಕಿಸಿಕೊಂಡ ಮೇಲೆ ಅವರು ಉದ್ಯಮದತ್ತ ಹೊರಳಿಕೊಂಡು ಯಶ ಕಂಡಿದ್ದೇ ಒಂದು ರೋಚಕ ಕಥನ.

ಹಾಗೆ ಯಶಸ್ವೀ ಉದ್ಯಮಿಯಾಗಿದ್ದ ವಿ.ಜಿ ಮಂಜುನಾಥ್ ಸಿನಿಮಾ ಕನಸಿನತ್ತ ಗಮನ ಹರಿಸಿದ್ದರು. ಅದರ ಫಲವಾಗಿಯೇ ವರ್ಷಾಂತರಗಳ ಹಿಂದೆ ಕದ್ದುಮುಚ್ಚಿ ಅಂತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಹಂತದಲ್ಲಿ ನಿರ್ಮಾಣ ಕ್ರೇತ್ರದ ಬಗ್ಗೆ ಹೆಚ್ಚೇನೂ ತಿಳುವಳಿಕೆ ಹೊಂದಿರದಿದ್ದ ವಿ.ಜಿ ಮಂಜುನಾಥ್ ಪಾಲಿಗೆ ಹೆಜ್ಜೆ ಹೆಜ್ಜೆಗೂ ಸವಾಲುಗಳು ಎದುಉರಾಗಿದ್ದವು. ನಾನಾ ಸರ್ಕಸ್ಸು ನಡೆಸಿಬ ಬಳಿಕವೂ ಉಳಿದುಕೊಂಡಿದ್ದು ಕೆಟ್ಟ ಅನುಭವದ ಕಹಿ ಮಾತ್ರ. ಸಾಮಾನ್ಯವಾಗಿ ಆರಂಭದಲ್ಲಿ ಶ್ರಮ ಪಟ್ಟರೂ ಹಿನ್ನಡೆಯಾದಾಗ ಯಾರೇ ಆದರೂ ನಿರಾಸೆಗೀಡಾಗೋದು ಸಹಜ. ಓರ್ವ ಉದ್ಯಮಿಯಾಗಿ ಸಾಕಷ್ಟು ಏಳು ಬೀಳುಗಳನ್ನು ಕಂಡು ಗೆದ್ದಿರುವ ವಿ.ಜಿ ಮಂಜುನಾಥ್ ಅವರ ಪಾಲಿಗೇನು ಅಡೆತಡೆ ಹೊಸತಲ್ಲ. ಆದರೂ, ನಿರ್ಮಾಪಕನಾಗಿ ಮೊದಲ ಸಿನಿಮಾದಲ್ಲಿಯೇ ಅವರು ಅಕ್ಷರಶಃ ಹೈರಾಣಾಗಿದ್ದರು. 

ಇನ್ನು ಮುಂದೆ ಸಿನಿಮಾ ನಿರ್ಮಾಣದ ಸಹವಾಸವೇ ಬೇಡ ಎಂಬ ನಿರ್ಧಾರ ಮಾಡುವಷ್ಟರ ಮಟ್ಟಿಗವರು ಬೇಸತ್ತಿದ್ದರು. ಹಾಗೆ ಭ್ರಮನಿರಸನ ಹೊಂದಿದ್ದ ವಿ.ಜಿ ಮಂಜುನಾಥ್ ಅವರನ್ನು ಮತ್ತೆ ನಿರ್ಮಾಪಕನಾಗಿ ಅಖಾಡಕ್ಕಿಳಿಯುವಂತೆ ಮಾಡಿರೋದು ಅಪಾಯವಿದೆ ಎಚ್ಚರಿಕೆ ಚಿತ್ರದ ಚೆಂದದ ಕಥೆ ಎಂಬುದು ಅಸಲೀ ವಿಶೇಷ. ಯುವ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಕದ್ದುಮುಚ್ಚಿ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಆ ನಂತರ ಉಂಟಾದ ಅನೇಕ ಪಲ್ಲಟಗಳಿಂದಾಗಿ ಹೆಚ್ಚಿನ ಜವಾಬ್ದಾರಿ ತಾನೇ ತಾನಾಗಿ ಅವರ ಹೆಗಲೇರಿಕೊಂಡಿತ್ತು. ಕಡೆಗೂ ಪ್ರಯಾಸ ಪಟ್ಟು ಆ ಸಿನಿಮಾ ತೆರೆಗಂಡ ನಂತರವೂ ಅಭಿಜಿತ್ ನಿರ್ಮಾಪಕ ವಿ.ಜಿ ಮಂಜುನಾಥ್ ಅವರ ಸಂಪರ್ಕದಲ್ಲಿದ್ದರು.

ಅದಾಗಲೇ ದಶಕಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಅಭಿಜಿತ್ ತೀರ್ಥಹಳ್ಳಿ ಸ್ವತಂತ್ರ ನಿರ್ದೇಶಕರಾಗುವ ಇರಾದೆಯಿಂದ ಒಂದು ಕಥೆ ರೆಡಿ ಮಾಡಿಕೊಂಡಿದ್ದರು. ಹಾರರ್ ಅಂಶ ಸೇರಿದಂತೆ ಅನೇಕ ವಿಚಾರಗಳು ಅಡಕವಾಗಿದ್ದ ಆ ಕಥೆಯನ್ನು ವಿ.ಕೆ ಮಂಜುನಾಥ್ ಅವರ ಮುಂದೆ ಹರವಿದಾಗ ಅವರೊಳಗೊಂದು ಭರವಸೆ ಮೂಡಿಕೊಂಡಿತ್ತು. ಹಾಗಂತ ಏಕಾಏಕಿ ನಿರ್ಮಾಣಕ್ಕೆ ಇಳಿದು ಬಿಡುವಂಥಾ ವಾತಾವರಣವೂ ಇರಲಿಲ್ಲ. ಯಾಕೆಂದರೆ, ಮೊದಲ ಸಿನಿಮಾದ ಮೂಲಕ ಆಗಿದ್ದ ಕಹಿ ಅನುಭವಗಳಿನ್ನೂ ಅವರನ್ನು ಕಾಡುತ್ತಿದ್ದವು. ಹೀಗೆ ಮೊದಲ ಹೆಜ್ಜೆಗಂಟಿಗ ಅನುಭವಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿದ್ದ ವಿ.ಜಿ ಮಂಜುನಾಥ್ ಅವರು ಹಂಣತ ಹಂತವಾಗಿ ಅಭಿಜಿತ್ ಅವರನ್ನು ಪರೀಕ್ಷೆಗೊಡ್ಡಿ, ಎಲ್ಲ ರೀತಿಯಿಂದಲೂ ಸಮಯ ಪಕ್ವವಾದ ನಂತರವಷ್ಟೇ ಚಿತ್ರೀಕರಣಕ್ಕೆ ಹಸಿರು ನಿಶಾನೆ ತೋರಿಸಿದ್ದರಂತೆ.

ಅಂದಹಾಗೆ, ಆರಂಭಿಕವಾಗಿ ಅಪಾಯವಿದೆ ಎಚ್ಚರಿಕೆ ಚಿತ್ರವನ್ನು ಒಂದು ಸೀಮಿತ ಬಜೆಟ್ಟಿನಲ್ಲಿ ನಿರ್ಮಾಣ ಮಾಡಲು ವಿ.ಜಿ ಮಂಜುನಾಥ್ ತೀರ್ಮಾನಿಸಿದ್ದರಂತೆ. ಆದರೆ, ಚಿತ್ರೀಕರಣಕ್ಕಿಳಿದ ನಂತರ ಯಾವುದಕ್ಕೂ ಕಡಿಮೆಯಾಗದಂತೆ ನೋಡಿಕೊಂಡ ಅವರು, ಎಲ್ಲ ಕೋನಗಳಿಂದಲೂ ಈ ಸಿನಿಮಾ ಅಮೋಘವಾಗಿರುವಂತೆ ನೋಡಿಕೊಂಡಿದ್ದಾರೆ. ಕಡೆಗೂ ಆರಂಭಿಕ ಹೆಜ್ಜೆಗಳ ಕಹಿ ಮರೆತು, ಅಪಾಯವಿದೆ ಎಚ್ಚರಿಕೆ ಚಿತ್ರದ ಮೂಲಕ ಹೊಸಾ ಭರವಸೆಯೊಂದು ಅವರನ್ನು ಆವರಿಸಿಕೊಂಡಿದೆ. ದರಿ ಸಿನಿಮಾದೊಂದಿಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಗುವ ನಿರೀಕ್ಷೆಯೂ ಅವರಲ್ಲಿದೆ. ಸದ್ಯದ ವಾತಾವರಣವಂತೂ ಅದಕ್ಕೆ ಪೂರಕವಾಗಿದೆ. ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನ, ಗುರುಪ್ರಸಾದ್ ಸಹ ನಿರ್ದೇಶನ, ಹರ್ಶಿತ್ ಪ್ರಭು ಸಂಕಲನ, ವಿಕಾಸ್ ಉತ್ತಯ್ಯ, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್ ಮುಂತಾದವರ ತಾರಾಗಣದೊಂದಿಗೆ ಈ ಸಿನಿಮಾ ಮೂಡಿ ಬಂದಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!