ಅಖಿಲ್ ಅಕ್ಕಿನೇನಿ ನಾಯಕನಾಗಿ ನಟಿಸಿರುವ ಲೆನಿನ್ ಚಿತ್ರ ಅಂತಿಮ ಘಟ್ಟದ ಕೆಲಸ ಕಾರ್ಯಗಳೀಗ ವೇಗ ಪಡೆದುಕೊಂಡಿವೆ. ಹಾಡುಗಳು ಸೇರಿದಂತೆ ಒಂದಷ್ಟು ಕೆಲಸ ಕಾರ್ಯಗಳು ಮಾತ್ರವೇ ಇದೀಗ ಬಾಕಿ ಉಳಿದುಕೊಂಡಿವೆ. ಮುರುಳಿಕೃಷ್ಣ ನಿರ್ದೇಶನದ ಸದರಿ ಚಿತ್ರದ ಬಗೆಗೀಗ ಒಂದು ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ. ಸರಿಕಟ್ಟಾದ ಸಮಯದಲ್ಲಿ ಬಿಡುಗಡೆಗೆ ತಯಾರಾಗುತ್ತಿರುವ ಚಿತ್ರತಂಡವೀಗ ಪ್ರಧಾನವಾಗೊಂದುಹಾಡಿನತ್ತ ಗಮನ ಹರಿಸಿದೆ. ಒಟ್ಟಾರೆ ಸಿನಿಮಾಕ್ಕೆ ತಂತಾನೇ ಮೈಲೇಜು ಗಿಟ್ಟಿಸುವ ಸಲುವಾಗಿಯೇ ಆ ಹಾಡನ್ನು ನಿರ್ದೇಶಕರು ಸಿದ್ಧಪಡಿಸಿದ್ದಾರೆ. ಅದರಲ್ಲಿ ನಟಿಸಲು ಅನನ್ಯಾ ಪಾಂಡೆ ಫಿಕ್ಸಾಗುವ ಲಕ್ಷಣಗಳು ದಟ್ಟವಾಗಿವೆ.
ಅನನ್ಯಾ ಪಾಂಡೆ ಲೆನಿನ್ ಚಿತ್ರದ ವಿಶೇಷವಾದ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಸುದ್ದಿಯೊಂದು ತಿಂಗಳಿಂದೀಚೆಗೆ ಹಬ್ಬಿಕೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಒಂದಷ್ಟು ಆಯಾಮದ ವಿಚಾರಗಳು ಹರಡಿಕೊಂಡಿದ್ದವು. ನಿಜಕ್ಕೂ ಪಾಂಡೆ ಇದರಲ್ಲಿ ನಟಿಸುತ್ತಿದ್ದಾಳಾ ಅಥವಾ ಅದೊಂದು ಗಾಳಿ ಸುದ್ದಿಯಾ ಎಂಬ ನಿಟ್ಟಿನಲ್ಲಿ ನೋಡಹೋದರೆ, ಚಿತ್ರತಂಡ ಈಗಾಗಲೇ ಅನನ್ಯಾ ಪಾಂಡೆಯನ್ನು ಸಂಪರ್ಕಿಸಿ ಮಾತುಕತೆ ನಡೆಸುತ್ತಿರುವ ವಿಚಾರ ಜಾಹೀರಾಗುತ್ತದೆ. ಆದರೆ, ಇನ್ನೂ ಕೂಡಾ ಈ ಮಾತುಕತೆ ಅಂತಿಮ ಹಂತ ತಲುಪಿಲ್ಲ. ಹಾಡಲ್ಲಿ ಕುಣಿಯಲು ಎಸ್ ಅಂದಿರುವ ಅನನ್ಯಾ, ಸಂಭಾವನೆಯ ವಿಚಾರದಲ್ಲಿ ಕೊಸರಾಡುತ್ತಿರೋದರಿಂದ, ಸದ್ಯದಲ್ಲಿಯೇ ಎಲ್ಲವೂ ನಿಕ್ಕಿಯಾಗಲಿದೆ ಅನ್ನಲಾಗುತ್ತಿದೆ.
ಅಖಿಲ್ ಅಕ್ಕಿನೇನಿ ಈ ಸಿನಿಮಾದಲ್ಲಿ ಸವಾಲಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆತನ ನಟನೆಯ ಬಗ್ಗೆ ಚಿತ್ರತಂಡದ ಕಡೆಯಿಂದ ಒಳಿತಿನ ಮಾತುಗಳು ಕೇಳಿ ಬರುತ್ತಿವೆ. ಭಾಗ್ಯಶ್ರೀ ಭೋರ್ಸೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇನ್ನುಳಿದಂತೆ ಬೇಸಗೆ ರಜೆಯ ಸಂದರ್ಭದಲ್ಲಿ ಬಿಡುಗಡೆಗೊಳಿಸುವ ನಿರ್ಧಾರಕ್ಕೆ ಬಂದಿರೋ ಚಿತ್ರತಂಡ ವೇಗವಾಗಿ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳುತ್ತಿದೆ. ಅನನ್ಯಾ ಪಾಂಡೆ ಒಂದು ವೇಳೆ ಈ ಹಾಡಿನಲ್ಲಿ ನಟಿಸಿದರೆ, ತೆಲುಗು ನಾಡಲ್ಲಿ ಛಿದ್ರವಾಗಿದ್ದ ಆಕೆಯ ಇಮೇಜು ಒಂದಷ್ಟು ಸರಿಯಾದೀತೇನೋ. ಈಕೆ ಈ ಹಿಂದೆ ವಿಜಯ್ ದೇವರಕೊಂಡನೊಂದಿಗೆ ಲೈಗರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಳು. ಆ ಸಿನಿಮಾ ತೋಪೆದ್ದು ಹೋಗಿತ್ತು. ಲೆನಿನ್ ಹಾಡಿನ ಮೂಲಕವಾದರೂ ಅನನ್ಯಾ ಲಕ್ಕು ಕುದುರಬಹುದಾ?

