ಒಂದು ಕಡೆಯಿಂದ ಚಿತ್ರರಂಗದ (filme industry) ಗರ್ಭದೊಳಗೆ ಅನಿಶ್ಚಿತ ವಾತಾವರಣವೊಂದು ಊಟೆಯೊಡೆಯುತ್ತಿದ್ದರೆ, ಮತ್ತೊಂದು ಮಗ್ಗುಲಿಂದ ಆಶಾದಾಯಕ ಬೆಳವಣಿಗೆಗಳು ಹರಳುಗಟ್ಟಿಕೊಳ್ಳುತ್ತಿವೆ. ಭಿನ್ನ ಆಲೋಚನೆ, ಪ್ರಯೋಗಾತ್ಮಕ ಗುಣಗಳ ಯುವ ಸಮೂಹವೊಂದು ಸದ್ದೇ ಇಲ್ಲದೆ ಕಾರ್ಯಪ್ರವೃತ್ತವಾಗಿದೆ. ಒಂದೆಡೆ ಸಿನಿಮಾ ಮಂದಿ ಜನಪ್ರಿಯ ಮಾದರಿಯೆಂಬೋ ಭ್ರಮೆಯ ಚುಂಗು ಹಿಡಿದು ಹೊರಟಿರುವಾಗಲೇ, ಮತ್ತೊಂದಷ್ಟು ಮಂದಿ ಸಣ್ಣ ಸಣ್ಣ ಪ್ರಯತ್ನಗಳ ಮೂಲಕ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಆವರಿಸಿಕೊಳ್ಳಲು ಮುಂದಾಗುತ್ತಿದೆ. ಸದ್ಯದ ಮಟ್ಟಿಗೆ ಇಂಥಾ ಆಶಾದಾಯಕ ಬೆಳವಣಿಗೆಯ ಭಾಗವೆಂಬಂತೆ ಗೋಚರಿಸುತ್ತಿರುವ ಚಿತ್ರ (ambuja) `ಅಂಬುಜ’. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ಅದಕ್ಕೆ ಸಿಗುತ್ತಿರುವ ಭರಪೂರ ಪ್ರತಿಕ್ರಿಯೆ ಕಂಡು ಯುವ ನಿರ್ದೇಶಕ (sreeni hanumatharaju) ಶ್ರೀನಿ ಹನುಮಂತರಾಜು ಖುಷಿಗೊಂಡಿದ್ದಾರೆ. ಅದು ಒಂದಿಡೀ ಚಿತ್ರತಂಡದ ಕಣ್ಣುಗಳಲ್ಲಿಯೂ ಪ್ರತಿಫಲಿಸುತ್ತಿದೆ!

ಅಷ್ಟಕ್ಕೂ ಅಂಬುಜ ಚಿತ್ರ ಆರಂಭ ಕಾಲದಿಂದಲೂ ನಾನಾ ಥರದಲ್ಲಿ ಸುದ್ದಿಯಾಗುತ್ತಲೇ ಬಂದಿದೆ. ಹಂತ ಹಂತವಾಗಿ ಅಂಬುಜಾ ಸುತ್ತ ಪ್ರೇಕ್ಷಕರ ಕಲ್ಪನೆಗಳು ಹಲವು ನಮೂನೆಗಳಲ್ಲಿ ಗರಿಬಿಚ್ಚಿಕೊಂಡಿವೆ. ಮೊದಮೊದಲು ಇದೊಂದು ಮಹಿಳಾ ಪ್ರಧಾನ ಸಿನಿಮಾವೆಂಬ ವಿಚಾರ ಹೊರಬಿದ್ದಿತ್ತು. ಅದಾದೇಟಿಗೆ ಆ ಜಾನರಿನ ಸುತ್ತ ಸಿದ್ಧ ಸೂತ್ರಗಳ ಕಲ್ಪನೆಗಳು ರಿದಾಡಿದ್ದವು. ಅದೆಲ್ಲದರ ನಡುವೆಯೇ ಅಚ್ಚುಕಟ್ಟಾಗಿ ಚಿತ್ರೀಕರಣ ಮುಗಿಸಿಕೊಂಡ ಚಿತ್ರತಂಡ ಟ್ರೈಲರ್ ಲಾಂಚ್ ಮಾಡಿತು ನೋಡಿ? ಕಲ್ಪನೆಗಳ ಜಗವನ್ನು ಅಕ್ಷರಶಃ ಅಚ್ಚರಿಯೊಂದು ಆವರಿಸಿಕೊಂಡಿದೆ. ಯಾಕೆಂದರೆ, ಈ ಟ್ರೈಲರ್‍ನಲ್ಲಿ ಕಲಾತ್ಮಕ ಚೌಕಟ್ಟಿನಲ್ಲಿ ಬಂಧಿಯಾಗಬಹುದಿದ್ದ ಕಥಾ ವಸ್ತುವನ್ನು, ಪಕ್ಕಾ ಕಮರ್ಶಿಯಲ್ ಪಥದಲ್ಲಿ ನಿರೂಪಿಸಿರುವ ನಿಖರ ಸೂಚನೆಗಳು ಸಿಕ್ಕಿವೆ. ಅಲ್ಲಿಗೆ ಅಂಬುಜಾಗೆ ಆರಂಭಿಕ ಗೆಲುವೊಂದು ದಕ್ಕಿದಂತಾಗಿದೆ.

ಇಂಥಾದ್ದೊಂದು ಭಿನ್ನ ಬಗೆಯ ಸಿನಿಮಾ ಶುರುವಾತಿನ ಹಿಂದೆ ಒಂದಷ್ಟು ಸಮ್ಮೋಹಕ ಸಂಗತಿಗಳಿರುತ್ತವೆ. ಈ ಚಿತ್ರದ ಮಟ್ಟಿಗೆ ಹೇಳುವುದಾದರೆ, ಪ್ರಧಾನವಾಗಿ ಗಮನ ಸೆಳೆಯುವವರು ನಿರ್ದೇಶಕ ಶ್ರೀನಿ ಹನುಮಂತರಾಜು. ದಶಕಗಳಿಗೂ ಹೆಚ್ಚು ಕಾಲದಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವವರು ಶ್ರೀನಿ. ಮೊದಲ ಹೆಜ್ಜೆಯಲ್ಲಿಯೇ ಹೊಸತಿಗೆ ತೆರೆದುಕೊಳ್ಳುವ ತುಡಿತ ಹೊಂದಿದ್ದ ಅವರು ಓಂ ಪ್ರಕಾಶ್ ರಾವ್ ನಿರ್ದೇಶನದ ಎಕೆ 56 ಸಿನಿಮಾದಲ್ಲಿ ಒಂದಷ್ಟು ಕಾಲ ಕೆಲಸ ಮಾಡಿ, ಆ ನಂತರ ಅಶೋಕ್ ಕಶ್ಯಪ್ ನಿರ್ದೇಶನದ `ಪ್ರೀತಿಯಿಂದ’ ಎಂಬ ಧಾರಾವಾಹಿ ತಂಡ ಸೇರಿಕೊಂಡಿದ್ದರು. ಬಳಿಕ ಹೊಂ ಸ್ಟೇ ಅಂತೊಂದು ಬಹುಭಾಷಾ ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಅನುಭವ ತುಂಬಿಕೊಂಡಿದ್ದರು.

ಇದೆಲ್ಲ ಆದ ಬಳಿಕ ಶ್ರೀನಿಯನ್ನು ಬರಮಾಡಿಕೊಂಡಿದ್ದು ಸಂಚಾರಿ ವಿಜಯ್ ನಟಿಸಿದ್ದ ಚಿತ್ರ `ರಿಕ್ತ’. ಅದರಲ್ಲಿ ಕೋ ಡೈರೆಕ್ಟರ್ ಕಂ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದ ಶ್ರೀನಿ, ಮಹೇಶ್ ಬಾಬು ಅವರ ಕ್ರೇಜಿ ಬಾಯ್ ಚಿತ್ರದ ಭಾಗವಾಗಿಯೂ ಕೆಲಸ ಮಾಡಿದದರು. ಹೀಗೆ ನಿರ್ದೇಶನ ವಿಭಾಗವನ್ನು ಸರಿಕಟ್ಟಾಗಿ ಅರ್ಥೈಸಿಕೊಂಡಿದ್ದ ಶ್ರೀನಿ, ತಮ್ಮ ಜೀವಿತದ ಪ್ರಧಾನ ಗುರಿಯಂತಿದ್ದ ನಿರ್ದೇಶನದತ್ತ ಗಂಭೀರವಾಗಿ ಚಿತ್ತ ಹರಿಸಿದ್ದರು. ಅದೃ ಫಲವಾಗಿಯೇ 2018ರಲ್ಲಿ `ಕೆಲವು ದಿನಗಳ ನಂತರ’ ಎಂಬ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಶೀರ್ಷಿಕೆಯೇ ಧ್ವನಿಸುವಂತೆ ಸಾಕಷ್ಟು ಹೊಸತನಗಳನ್ನು ಹೊಂದಿದ್ದ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ನಂತರದ ಅವಧಿಯಲ್ಲಿ ಮತ್ತೊಂದು ಭಿನ್ನ ಬಗೆಯ ಸಿನಿಮಾ ನಿರ್ದೇಶನ ಮಾಡುವ ಇರಾದೆಯಿಂದಿದ್ದ ಶ್ರೀನಿಗೆ ವರವಾಗಿ ಸಿಕ್ಕವರು ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್. ಸ್ವತಃ ಬರಹಗಾರರಾಗಿ, ಸಾಹಿತ್ಯಾಸಕ್ತಿಯನ್ನೂ ಹೊಂದಿದ್ದ ಕಾಶಿನಾಥ್ ಅದಾಗಲೇ ಕಥೆಯೊಂದನ್ನು ಬರೆದಿದ್ದರು. ಅದಕ್ಕೆ ಸಿನಿಮಾ ಫ್ರೇಮು ತೊಡಿಸಬೇಕೆಂಬ ಆಳದ ಆಸೆಯನ್ನೂ ಹೊಂದಿದ್ದರು. ಈ ಎರಡು ತುಡಿತಗಳ ಸಂಗಮದಿಂದ ಸೃಷ್ಟಿಯಾದ ಚಿತ್ರ ಅಂಬುಜ!

ಸಾಮಾನ್ಯವಾಗಿ, ಸತ್ಯಕಥೆ ಆಧಾರಿತ ಚಿತ್ರವನ್ನು ಮೂಲ ಸಂವೇದನೆಗಳು ಮುಕ್ಕಾಗದಂತೆ ದೃಷ್ಯಕ್ಕೆ ಅಳವಡಿಸುವುದೇ ಒಂದು ಸವಾಲು. ಅದನ್ನು ಸಮರ್ಥವಾಗಿ ನಿಭಾಯಿಸಿದ ಖುಷಿ ಶ್ರೀನಿಯವರಲ್ಲಿದೆ. ಲವ್, ಕಾಮಿಡಿ, ಹಾರರ್ ಸೇರಿದಂತೆ ನಾನಾ ಅಂಶಗಳನ್ನೊಳಗೊಂಡಿರೋ ಅಂಬುಜಾ, ಹೊಸಾ ಜಗತ್ತೊಂದನ್ನು ಪ್ರೇಕ್ಷಕರ ಮುಂದೆ ತೆರೆದಿಡಲಿದೆ ಎಂಬ ಗಾಢ ನಂಬುಗೆ ನಿರ್ದೇಶಕರಲ್ಲಿದೆ. ಚಿತ್ರೀಕರಣ ನಡೆದ ಸ್ಥಳ, ತಾಂತ್ರಿಕತೆ, ಕಥಾ ಹಂದರ ಸೇರಿದಂತೆ ಎಲ್ಲದರಲ್ಲಿಯೂ ಹೊಸತನ ತುಂಬಿಕೊಂಡಿರೋ ಚಿತ್ರವಿದು. ಇದು ಖಂಡಿತವಾಗಿಯೂ ಪ್ರೇಕ್ಷಕರನ್ನು ಆವರಿಸಿಕೊಂಡು, ದೊಡ್ಡ ಗೆಲುವಿನ ರೂವಾರಿಯಾಗುತ್ತದೆಂಬ ನಂಬುಗೆ ಶ್ರೀನಿಯದ್ದು. ಅದು ಎಷ್ಟು ನಿಜವಾಗುತ್ತದೆ? ಪ್ರೇಕ್ಷಕರ ಪ್ರತಿಕ್ರಿಯೆ ಏನಿರುತ್ತದೆಂಬುದಕ್ಕೆ ವಾರದೊಪ್ಪತ್ತಿನಲ್ಲಿಯೇ ಉತ್ತರ ಸಿಗಲಿದೆ. ಅಂದಹಾಗೆ, ಈ ಚಿತ್ರ ಇದೇ ಜುಲೈ 21ರಂದು ರಾಜ್ಯಾದ್ಯಂತ ತೆರೆಗಾಣಲಿದೆ…

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!