ಭಾರತೀಯ ಚಿತ್ರರಂಗ ಅನೇಕಾನೇಕ ವಿಕ್ಷಿಪ್ತ ನಟರನ್ನು ಕಂಡಿದೆ. ಇದರಲ್ಲಿ ಕೆಲ ಮಂದಿ ನಾಕಾಣೆಯ ನಟನೆ ಬಾರದಿದ್ದರೂ ಬರೀ ಬಿಟ್ಟಿ ಬಿಲ್ಡಪ್ಪುಗಳ ಮೂಲಕವೇ ದಡ ಸೇರಿಕೊಂಡ ಉದಾಹರಣೆಗಳೂ ಇದ್ದಾವೆ. ಇನ್ನೂ ಕೆಲ ಮಂದಿ ಎಲ್ಲ ಮೂದಲಿಕೆ, ವಿಮರ್ಶೆಗಳನ್ನು ಮೀರಿಕೊಂಡು ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಹೊಂದಿ ಮೆರೆದದ್ದೂ ಇದೆ. ಇಂಥಾ ವಿಕ್ಷಿಪ್ತ ನಟರ ಸಾಲಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವಾತ ನಂದಮೂರಿ ಬಾಲಕೃಷ್ಣ ಅಲಿಯಾಸ್ ಬಾಲಯ್ಯ. ಈತನ ಸಿನಿಮಾ ಸೀನುಗಳನ್ನು ವಿದೇಶದ ಮಂದಿಯೂ ಟ್ರೋಲ್ ಮಾಡೋದಿದೆ. ಆದರೂ ಬಾಲಯ್ಯ ಬ್ರಾಂಡು ಆಗಾಗ ಗೆಲುವು ಕಾಣೋದೂ ಇದೆ. ಹೀನಾಯ ಸೋಲುಂಡಿದ್ದೂ ಇದೆ. ಅಂಥಾ ಸೋಲು ಕಂಡ ಬಾಲಯ್ಯನ ಇತ್ತೀಚಿನ ಚಿತ್ರ ಅಂಖಂಡ೨!
ಯಾವುದೇ ಸಿನಿಮಾಗಳು ತೆರೆ ಕಂಡರೂ ಹೀನಾಮಾನ ಬಿಲ್ಡಪ್ಪು ಕೊಡೋದು ಬಾಲಯ್ಯನ ಸ್ಪೆಷಾಲಿಟಿ. ವಾಸ್ತವಕ್ಕಿಂತ ಫರ್ಲಾಂಗು ದೂರವಿರುವ ಸೀನುಗಳನ್ನೇ ಬಯಸುವ ಈತ ಅಖಂಡ೨ ಮೂಲಕ ಅಂಥಾದ್ದೇ ಅಧ್ವಾನಗಳನ್ನು ಸೃಷ್ಟಿಸಿದ್ದ. ಆದರೆ, ಪ್ರೇಕ್ಷಕರು ಆ ಸಿನಿಮಾದತ್ತ ಮುಖ ಮಾಡಿರಲಿಲ್ಲ. ಈ ಮೂಲಕ ಇತ್ತೀಚಿನ ವರ್ಷಗಳಲ್ಲಿ ಬಾಲಯ್ಯನ ಅತಿ ಕೆಟ್ಟ ಸಿನಿಮಾವಾಗಿ ಅಖಂಡ೨ ದಾಖಲಾಗಿದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಬಾಲಯ್ಯನೇ ಈ ಸೋಲಿನಿಂದ ಕಂಗಾಲಾಗುವಂಥಾಗಿದೆ. ಇಂಥಾ ಅಖಂಡ೨ ಓಟಿಟಿಗೆ ಎಂಟ್ರಿ ಕೊಡುವ ಕ್ಷಣಗಳು ಹತ್ತಿರಾಗಿವೆ!
ಇದೇ ಜನವರಿ ಒಂಬತ್ತನೇ ತಾರೀಕಿನಿಂದ ಅಖಂಡ೨ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಬಾಲಯ್ಯನ ಪಾಲಿಗೀಗ ಓಟಿಟಿಯಲ್ಲಾದರೂ ಅಖಂಡ ಪವಾಡ ಸಂಭವಿಸಲೆಂಬ ತಟುಕು ಆಸೆ ಇದ್ದಂತಿದೆ. ಅಷ್ಟಕ್ಕೂ ಸಿನಿಮಾ ಮಂದಿರಗಳ್ಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕಂಡ ಅನೇಕ ಸಿನಿಮಾಗಳು ಓಟಿಟಿಯಲ್ಲಿ ಗೆಲ್ಲೋದಿದೆ. ಆದರೆ, ಅಖಂಡ೨ ಪಾಲಿಗೆ ಅಂಥಾ ಸಾಧ್ಯತೆ ತೀರಾ ಕಡಿಮೆ. ಯಾಕೆಂದರೆ, ಬಾಲಯ್ಯ ಇಲ್ಲಿ ದ್ವಾಳೆಗಣ್ಣು ಬಿಟ್ಟುಕೊಂಡು ಚಿತ್ರವಿಚಿತ್ರವಾದ ಸೀನುಗಳಲ್ಲಿ ಕಾಣಿಸಿಕೊಂಡಿದ್ದಾನೆ. ಅತಿಶಯ ಎಂಬಂಥಾ, ಪೇಲವ ಕಥೆಯ ಈ ಚಿತ್ರ ಓಟಿಟಿಯಲ್ಲೂ ಬರಖತ್ತಾಗೋದು ಕಷ್ಟವಿದೆ!
keywords: balayya, akhanda2, nandamuri, balakrishna

