ಟ್ಟ ದರಿದ್ರ ಸಿನಿಮಾ ಮಾಡಿ, ಅದನ್ನೇ ಪ್ರಪಂಚದ ಭಯಂಕರ ಅದ್ಭುತವೆಂಬಂತೆ ಪೋಸು ಕೊಡುವವರಿಗೇನೂ ಕೊರತೆಯಿಲ್ಲ. ಇಂಥಾ ಆಸಾಮಿಗಳಿಂದಲೇ ಸಿನಿಮಾ ಮಂದಿರ ಹೊಕ್ಕು, ನೋಡುವವರೆಗೂ ಯಾವ ಚಿತ್ರವನ್ನೂ ನಂಬದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥಾ ಮಂದಿಯ ಪ್ರಚಾರದ ಪಟ್ಟುಗಳಂತೂ ರಣಭೀಕರ. ಇಂಥಾ ನೌಟಂಕಿ ಆಟಗಳ ಫಲವಾಗಿಯೇ ಪ್ರಚಾರದ ವರಸೆಗಳಿಲ್ಲದೆ ಗೆಲುವಿನ ದಡ ಮುಟ್ಟೋದು ಕಷ್ಟ ಎಂಬಂಥಾ ವಾತಾವರಣ ಸೃಷ್ಟಿಯಾಗಿದೆ. ಇಂಥಾ ಪರಿಸ್ಥಿತಿಯಲ್ಲಿ ಯಾವ ಪ್ರಚಾರದ ಪಟ್ಟುಗಳೂ ಇಲ್ಲದೆ, ಕಡೇ ಕ್ಷಣದಲ್ಲಿ ಒಂದಷ್ಟು ಸುದ್ದಿಯಾಗುತ್ತಾ ಬಿಡುಗಡೆಗೊಂಡಿರುವ ಚಿತ್ರ (achar & co) `ಆಚಾರ್ ಅಂಡ್ ಕೋ’. ಹಲವು ಬಾರಿ ಸಿನಿಮಾ ಪ್ರೇಮಿಗಳು ಅಗಾಧ ನಿರೀಕ್ಷೆಯಿಟ್ಟುಕೊಂಡು, ದೊಡ್ಡ ಮಟ್ಟದಲ್ಲಿ ನಿರಾಸೆಗೀಡಾಗುತ್ತಾರೆ. ಆದರೆ, ಯಾವ ನಿರೀಕ್ಷೆಯೂ ಇಲ್ಲದೆ ಚಿತ್ರಮಂದಿರಕ್ಕೆ ಹೋಗಿ ಕೂತಾಗ ಒಂದೊಳ್ಳೆ ಕಥನ ತೆರೆದುಕೊಂಡರೆ ಆಗುವ ಖುಷಿಯಿದೆಯಲ್ಲಾ? ಅದು ವರ್ಣನಾತೀತ. ಅಂಥಾದ್ದೊಂದು ಅನುಭೂತಿಯನ್ನು (achar & co) ಆಚಾರ್ ಅಂಡ್ ಕೋ ಚಿತ್ರ ನೋಡುಗರೆಲ್ಲರ ಎದೆತುಂಬುತ್ತದೆ.

ಹಾಗೆ ನೋಡಿದರೆ, ಈ ಸಿನಿಮಾ ಹೇಳಿಕೊಳ್ಳುವಂಥಾ ಯಾವ ಪ್ರಚಾರವನ್ನೂ ಮಾಡಿರಲಿಲ್ಲ. ಕಂಟೆಂಟಿನ ಮೇಲಿನ ಭರವಸೆಯೋ, ಮತ್ತಿನ್ನೇನು ಕಾರಣವೋ ಗೊತ್ತಿಲ್ಲ; ಪಬ್ಲಿಸಿಟಿ ವಿಚಾರದಲ್ಲಿ ಚಿತ್ರತಂಡ ತಲೆಕೆಡಿಸಿಕೊಂಡಿರಲಿಲ್ಲ. ಹೀಗೆ ತಣ್ಣಗೆ ಬಿಡುಗಡೆಗೊಂಡಿರೋ ಈ ಸಿನಿಮಾ ಒಂದು ಮಟ್ಟಿಗೆ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶ ಕಂಡಿದೆ. ನಿರ್ದೇಶಕಿ ಕಂ ಈ ಸಿನಿಮಾ ನಾಯಕಿಯೂ ಆಗಿರುವ ಸಿಂಧೂ ಶ್ರೀನಿವಾಸ ಮೂಮೂರ್ತಿ ಅಷ್ಟೊಂದು ಅಚ್ಚುಕಟ್ಟಾಗಿ, ಎಲ್ಲಿಯೂ ಸಿಕ್ಕಾಗದಂತೆ, ಒಂದು ಬಿಂದುವಿನಲ್ಲಿಯೂ ಬೋರು ಹೊಡೆಸದಂತೆ ಈ ಚಿತ್ರವನ್ನು ಕಟ್ಟಿ ಕೊಟ್ಟಿರುವ ರೀತಿಗೆ ನೋಡಿದವರೆಲ್ಲರೂ ಭೇಶ್ ಅನ್ನುತ್ತಿದ್ದಾರೆ.

ಇಲ್ಲಿ ಬಸವನಗುಡಿ, ಜಯನಗರ ಪ್ರದೇಶದಲ್ಲಿ ಅರವತ್ತರ ದಶಕದ ಆಸುಪಾಸಿನಲ್ಲಿದ್ದ ಟಿಪಿಕಲ್ ಫ್ಯಾಮಿಲಿಯೊಂದರ ಕಥೆಯಿದೆ. ಆ ಕುಟುಂಬದ ಯಜಮಾನರಾದ ಮಧುಸೂಧನ್ ಆಚಾರ್, ಪಿಡಬ್ಲ್ಯುಡಿ ಇಂಜಿನಿಯರ್. ಮನೆಯೆಂಬುದು ತುಂಬಿ ತುಳುಕುವಂತೆ ಅವರಿಗೆ ಹತ್ತು ಜನ ಮಕ್ಕಳು. ಅದರಲ್ಲಿ ಗಂಡು ಮಕ್ಕಳು ಇಬ್ಬರು ಮಾತ್ರ. ಆ ಕಾಲಕ್ಕೆ ಇಂಜಿನಿಯರ್ ಆಗಿದ್ದ ಆಚಾರರಿಗೆ ಸರ್ಕಾರದ ಕಡೆಯಿಂದ ಸಿಕ್ಕೊಂದು ಅಂಬಾಸಡರ್ ಕಾರು. ಅದನ್ನೇರಿ ಹೊರಟರೆಂದರೆ, ಎಲ್ಲೆಡೆಯಿಂದಲೂ ಗೌರವ ಸಿಗುತ್ತಿರುತ್ತದೆ. ಒಬ್ಬೊಬ್ಬ Pಮಕ್ಕಳದ್ದು ಒಂದೊಂದು ಮನಃಸ್ಥಿತಿಯಾದರೂ, ಆ ಹತ್ತೂ ಮಕ್ಕಳನ್ನು ನೆಲೆಗಾಣಿಸುವ ನಿಟ್ಟಿನಲ್ಲಿ ಆಚಾರರು ಪ್ರಯತ್ನಿಸುತ್ತಿರುತ್ತಾರೆ. ಹೀಗಿರೋವಾಗಲೇ ಆಚಾರ್ ಇದ್ದಕ್ಕಿದ್ದಂತೆ ಇನ್ನಿಲ್ಲವಾದ ನಂತರ ಆ ಫ್ಯಾಮಿಲಿಯೊಳಗೆ ಏನೇನು ಪಲ್ಲಟಗಳು ನಡೆಯುತ್ತದೆಂಬುದೇ ಕಥಾ ವಸ್ತು.

ಅದನ್ನು ನಿರ್ದೇಶಕಿ ಸಿಂಧು ಶ್ರೀನಿವಾಸ ಮೂರ್ತಿ ಸರಿದೂಗಿಸಿಕೊಂಡು ಹೋಗಿರುವ ರೀತಿಯೇ ಒಂದಿಡೀ ಸಿನಿಮಾದ ಜೀವಾಳ. ಅಷ್ಟಕ್ಕೂ ಇಲಿ ಯಾವ ಅದ್ದೂರಿತನಗಳೂ ಇಲ್ಲ. ಆದರಾಚೆಗೆ ಪ್ರತೀ ದೃಷ್ಯಗಳಲ್ಲೊಂದು ತಾಜಾತನವನ್ನು ಕಾಪಿಟ್ಟುಕೊಳ್ಳುವ ಜಾಣ್ಮೆ ಮತ್ತು ಒಂದಿನಿತೂ ಬೋರು ಹೊಡೆಸದಂತೆ ನಿರೂಪಣೆ ಮಾಡಿರುವ ರೀತಿಯನ್ನು ಮೆಚ್ಚಿಕೊಳ್ಳಲೇ ಬೇಕು. ಇಲ್ಲಿರೋದು ಎರಡ್ಮೂರು ಲೊಕೇಷನ್ನುಗಳು ಮಾತ್ರ. ಕೊಂಚ ಎಚ್ಚರ ತಪ್ಪಿದ್ದರೂ ಅದು ಕಿಷ್ಕಿಂಧೆಯಂತಾಗಿ ಪ್ರೇಕ್ಷಕರು ಉಸಿರುಗಟ್ಟುತ್ತಿದ್ದರು. ಆದರೆ ಆ ಜಾಗವನ್ನು ಬೆರಗೊಂದು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಈಗ ಗಜಿಬಿಜಿಗೊಂಡಿರೋ ಜಯನಗರ ಸೀಮೆಯ ಅರವತ್ತರ ದಶಕದ ತಾಜಾತನವನ್ನು ನೋಡುಗರ ಎದೆಗಿಳಿಸಿರುವ ರೀತಿಕೂಡಾ ಅಚ್ಚರಿದಾಯಕವೇ.

ಈ ಚಿತ್ರದುದ್ದಕ್ಕೂ ಟ್ರ್ಯಾಜಿಡಿಗಳಿವೆ. ಆದರೆ ಅದನ್ನು ಮಾಮೂಲಿ ಕಣ್ಣೀರ್ ಶೈಲಿಯಲ್ಲಿ ಕಳೆದು ಹೋಗದಂತೆ ಎಚ್ಚರ ವಹಿಸಲಾಗಿದೆ. ಗಹಗಹಿಸಿ ನಗುವಂಥಾ ಕಾಮಿಡಿ ಇಲ್ಲದೇ ಹೋದರೂ ಮನಸು ಪ್ರಪುಲ್ಲಗೊಳ್ಳುವಂಥಾ ದೃಷ್ಯಾವಳಿಗಳಿದ್ದಾವೆ. ಅದರೊಳಗಿನ ಭಾವನೆಗಳು ನೇರವಾಗಿ ತಾಕದದ್ದರೂ ಕೂಡಾ ಅದ ದೊಡ್ಡ ಕೊರತೆಯಾಗಿ ಕಾಣಿಸೋದಿಲ್ಲ. ಕೆಲವರಿಗೆ ಅದು ಕಾಡಿದರೂ ಕಾಡಬಹುದೇನೋ… ಇಲ್ಲಿ ಫ್ರೇಮಿನ ತುಂಬೆಲ್ಲ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಮನೆಯ ಯಜಮಾನ ಇನ್ನಿಲ್ಲವಾಗಿ, ಇದ್ದಿಬ್ಬರು ಗಂಡುಮಕ್ಕಳೂ ಬೆನ್ನು ತಿರುಗಿಸಿದಾಗ, ಆ ಮನೆಯ ಹಿರಿಮಗಳೇ ಎಲ್ಲವನ್ನೂ ನಿಭಾಯಿಸುವ, ಒಂದು ಉದ್ಯಮವನ್ನೇ ಆರಂಭಿಸಿ ಸೈ ಅನ್ನಿಸುವಂಥಾ ಪಾಸಿಟಿವ್ ಕನವೂ ಇಲ್ಲಿದೆ.

ಒಟ್ಟಾರೆಯಾಗಿ ಜಾಹೀರಾತೊಂದರ ಫೀಲ್ ಅನ್ನು ಪದೇ ಪದೆ ಎದೆಗಿಳಿಸುತ್ತಾ ಈ ಸಿನಿಮಾ ಮುಂದುವರೆಯುತ್ತದೆ. ಇದು ಪಿಆರ್‍ಕೆ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಚಿತ್ರ. ಪುನೀತ್ ರಾಜ್‍ಕುಮಾರ್ ಒಪ್ಪಿಕೊಂಡು ಚಾಲನೆ ನೀಡಿದ್ದ ಕಡೆಯ ಚಿತ್ರವೂ ಹೌದು. ಬಹುಶಃ ಬಹುತೇಕರು ಆ ಸೆಂಟಿಮೆಂಟೊಂದರ ಕಾರಣದಿಂದಷ್ಟೇ ಈ ಚಿತ್ರ ನೋಡಲು ದೌಡಾಯಿಸುತ್ತಿರಬಹುದು. ಹಾಎ ಅಚಾಕಾಗಿ ಸಿನಿಮಾ ಮಂದಿರಕ್ಕೆ ಬಂದವರಿಗೆಲ್ಲ ಈ ಚಿತ್ರ ಅಕ್ಷರಶಃ ಅಚ್ಚರಿಯಂತೆ ಕಾಡುತ್ತದೆ. ಒಂದೊಳ್ಳೆಡ ಸಿನಿಮಾ ನೋಡಿದ ತೃಪ್ತಿಯನ್ನು ಮನಸಲ್ಲುಳಿಯುತ್ತದೆ. ಒಟ್ಟಾರೆಯಾಗಿ ಇದು ಈ ದಿನಮಾನದ ಅಪರೂಪದ ಸಿನಿಮಾ ಎನ್ನಲಡ್ಡಿಯಿಲ್ಲ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!