ಹಾಡುಗಳು ಮತ್ತು (trailer) ಟ್ರೈಲರ್ ಮೂಲಕ ಭಾರೀ ಸದ್ದು ಮಾಡೋ ಸಿನಿಮಾಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಮೂಡಿಕೊಳ್ಳುತ್ತೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥಾ ನಿರೀಕ್ಷೆಗಳ ಬೆನ್ನಲ್ಲಿಯೇ ಗುಮಾನಿಯೊಂದು ಸರಿದಾಡಲಾರಂಭಿಸಿದೆ. ಯಾಕೆಂದರೆ, ನೀಟಾಗಿ ಟ್ರೈಲರ್ ರೂಪಿಸೋ ಮಂದಿ, ಆ ಆವೇಗವನ್ನು ಸಿನಿಮಾದುದ್ದಕ್ಕೂ ಸಂಭಾಳಿಸಲಾಗದೆ ಸೋತಿದ್ದಾರೆ. ಇಂಥಾ ಹೊತ್ತಿನಲ್ಲಿ ಬಿಡುಗಡೆಗೊಂಡಿದ್ದ (yuva rajkumar) ಯುವ ರಾಜ್ ಕುಮಾರ್ ಅಭಿನಯದ ಎಕ್ಕ ಚಿತ್ರ ಅಂಥಾ ಗುಮಾನಿಗಳಾಚೆಗೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿತ್ತು. ಹೇಳಿಕೇಳಿ ಕನ್ನಡ ಚಿತ್ರರಂಗ ಒಂದು ಭರಪೂರ ಹಿಟ್ ಸಿನಿಮಾವಿಲ್ಲದೆ ಬಸವಳಿದಿತ್ತು. ಇಂಥಾ ಸಂದರ್ಭದಲ್ಲಿ ಎಕ್ಕ (ekka movie) ದೊಡ್ಡ ಮಟ್ಟದಲ್ಲಿಯೇ ಧೂಳೆಬ್ಬಿಸುತ್ತೆ ಎಂಬಂಥಾ ನಿರೀಕ್ಷೆಯಿತ್ತು. ಇದೀಗ ಭಾರಾಈ ನಿರೀಕ್ಷೆಯ ಇಕ್ಕಳಕ್ಕೆ ಸಿಕ್ಕು ಸಪ್ಪೆ ಸಪ್ಪೆ ಅನ್ನಿಸೋ ಸ್ಥಿತಿಯಲ್ಲಿ ಎಕ್ಕ ಪ್ರೇಕ್ಷಕರನ್ನು ಎದುರುಗೊಂಡಿದೆ!
ಈ ಹಿಂದೆ (yuva rajkumar) ಯುವ ರಾಜ್ ಕುಮಾರ್ ಪೊರಕೆ ಹಿಡಿದು ನಿಂತ ಪೋಸ್ ಒಂದು ಪ್ರೇಕ್ಷಕರನ್ನು ಎದುರುಗೊಂಡಿತ್ತು. ಅದು ಥೇಟು (powerstar puneethrajkumar) ಪವರ್ ಸ್ಟಾರ್ ಪುನೀತರ್ ರಾಜ್ ಕುಮಾರ್ ನಟಿಸಿದ್ದ ಜಾಕಿ (jackie movie) ಸಿನಿಮಾವನ್ನು ಕಾಪಿ ಹೊಡೆದಂತಿತ್ತು. ಹೇಳಿಕೇಳಿ ಅಪ್ಪು ಉತ್ತರಾಧಿಕಾರಿ ಎಂಬಂತೆ ಬಿಂಬಿಸಿಕೊಂಡಿರುವಾತ ಯುವ. ಅದರ ಭಾಗವಾಗಿಯೇ ಇಂಥಾದ್ದೊಂದು ಅವತಾರ ಸೃಷ್ಟಿಯಾಗಿರಬಹುದು ಅಂತನ್ನಿಸಿತ್ತು. ಆದರೀಗ ಸಿನಿಮಾ ನೋಡಿದ ಮಂದಿಗೇ ಒಟ್ಟಾರೆ ಎಕ್ಕ ಮೂಡಿ ಬಂದಿರುವ ರೀತಿಯಲ್ಲಿಯೂ ಕೂಡಾ ಜಾಕಿಯ ಛಾಯೆ ಢಾಳಾಗಿದೆ ಅನ್ನಿಸಿದೆ. ಹಾಗಂತ ಎಕ್ಕದಲ್ಲಿರೋದು ಮತ್ತದೇ ಕಥೆಯಾ ಅಂದುಕೊಂಡರೆ ಅದು ಪಕ್ಕಾ ಸುಳ್ಳು. ಕಥೆ ಹೊಸತೇ ಆದರೂ, ಅದು ದೃಶ್ಯರೂಪ ಪಡೆದ ರೀತಿ ಮಾತ್ರ ಹಳೇ ಜಾಡಿನದ್ದೇ!
ಸಮೃದ್ಧ ಹಳ್ಳಿಯೊಂದರಲ್ಲಿ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ ಯುವಕ ಮುತ್ತು. ಮಗು ಮನಸಿನ ಈತ ಒಲ್ಲದ ಮನಸ್ಸಿಂದಲೇ ಊರು ಬಿಟ್ಟು ಬೆಂಗಳೂರು ಸೇರಿಕೊಂಡ ನಂತರ ಗರಿಬಿಚ್ಚಿಕೊಳ್ಳುವ ಕಥನವೇ ಎಕ್ಕದ ಅಸಲೀ ಜೀವಾಳ. ಹಾಗೆ ಬೆಂಗಳೂರು ಸೇರಿಕೊಂಡ ಮುತ್ತುವಿನ ಬದುಕಲ್ಲಿ ಎಂತೆಂಥಾ ಘಟನೆಗಳು ನಡೆಯುತ್ತವೆ? ಹಳ್ಳಿಗಾಡಿನ ಮುಗ್ಧತೆಯನ್ನು ಮೈಗೂಡಿಸಿಕೊಂಡು ಬೆಳೆದ ಮುತ್ತು ಮಾಸ್ ಅವತಾರವೆತ್ತಲು ಕಾರಣವೇನು? ಇಂಥಾ ಪ್ರಶ್ನೆಗಳಿಗೆ ಸಿನಿಮಾ ಮಂದಿರದಲ್ಲೇ ಉತ್ತರ ಹುಡುಕಿದರೊಳಿತು. ಆದರೆ, ನಿರ್ದೇಶಕ ರೋಹಿತ್ ಪದಕಿ ತಾಂತ್ರಿಕವಾಗಿ ಎಕ್ಕವನ್ನು ಶ್ರೀಮಂತಿಕೆಯಿಂದ ಕಟ್ಟಿ ಕೊಟ್ಟಿದ್ದರಾದರೂ, ಯುವನನ್ನು ಮಾಸ್ ಲುಕ್ಕಿನಲ್ಲಿ ಬಿಂಬಿಸುವ ಭರಾಟೆಯಲ್ಲಿ ಈ ಕಥೆಯ ಭಾವನಾತ್ಮಕ ಸನ್ನಿವೇಶಗಳೇ ಮಂಕಾಗುವಂತೆ ಮಾಡಿದ್ದಾರೆ. ಭಾವನಾತ್ಮಕ ಸನ್ನಿವೇಶಗಳೆಲ್ಲ ಮಾಸ್ ಸೀನುಗಳಲ್ಲು ಕಲೆಸಿಕೊಂಡು ಎರಡೂ ಕೂಡಾ ಪ್ರೇಕ್ಷಕರ ಮನಸಿಗೆ ತಾಕದೆ ಪೇಲವ ಭಾವವನ್ನಷ್ಟೇ ಮೂಡಿಸುತ್ತೆ.
ಇನ್ನು ಪಾತ್ರ ಕಟ್ಟುವ ವಿಚಾರದಲ್ಲಿ (rohit padaki) ರೋಹಿತ್ ಪದಕಿಯದ್ದು ಗಮನಾರ್ಹ ಪ್ರಯತ್ನ. ಖುದ್ದು ರೋಹಿತ್ ಅವರಿಗೆ ಮಾಸ್ ಕಥನ ಹೊಸತು. ತಮ್ಮ ಆತ್ಮದ ಅಭಿರುಚಿಯನ್ನು ಮಾಸ್ ಧಾಟಿಯೊಂದಿಗೆ ಸರಿದೂಗಿಸುವಲ್ಲಿ ಅವರು ಅಲ್ಲಲ್ಲಿ ಬ ಲಾಲೆನ್ಸು ತಪ್ಪಿದಂತೆ ಭಾಸವಾಗುತ್ತೆ. ಇನ್ನು ಸಾಹಿತ್ಯದ ನಂಟು ಹೊಂದಿರುವ (vikram hathwar) ವಿಕ್ರಮ್ ಹತ್ವಾರ್ ಕಥೆಯೊಂದಿಗೆ ಸಂಭಾಷಣೆಯಲ್ಲಿಯೂ ಈ ಚಿತ್ರಕ್ಕೆ ಸಾಥ್ ಕೊಟ್ಟಿಯದ್ದಾರೆ. ಇಂಥಾ ಸಾಹಿತ್ಯಕ ಹಿನ್ನೆಲೆಯವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾಗ ಸಹಜವಾಗಿಯೇ ನಿರೀಕ್ಷೆ ಮೂಡುತ್ತೆ. ಹತ್ವಾರ್ ಈ ಚಿತ್ರದ ಕಥೆ ಚಿತ್ರಕಥೆ ಮತ್ತು ಸಭಾಷಣೆಗಳ ಭಾಗವಾಗಿದ್ದಾರೆ.
ಇನ್ನುಳಿದಂತೆ ಎಕ್ಕ ಚಿತ್ರದ ವಿಚಾರದಲ್ಲಿ ಯುವ ರಾಜ್ ಕುಮಾರ್ ನಟನೆಯತ್ತ ಎಲ್ಲರ ಚಿತ್ತ ನೆಟ್ಟುಕೊಂಡಿತ್ತು. ಯಾಕೆಂದರೆ, ಮೊದಲ ಚಿತ್ರ ಯುವದಲ್ಲಿ ಆತನ ನಟನೆಯ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಅಪಸ್ವರ ಕೇಳಿ ಬಂದಿತ್ತು. ಜೊತೆಗೆ ಆ ಸಿನಿಮಾ ಭೂಮಿಕೆಯಲ್ಲಿಯೇ ವಿವಾದವೂ ತಲೆಯಿತ್ತಿತ್ತು. ಅಷದರ ಬೆನ್ನಲ್ಲಿಯೇ ಎಕ್ಕ ಚಿತ್ರ ಘೋಷಣೆಯಾಗಿದ್ದರಿಂದ ಅದರ ಬಗೆಗೊಂದು ಕುತೂಹಲವಿತ್ತು. ಈ ಸಿನಿಮಾ ಮಟ್ಟಿಗೆ ಹೇಳೋದಾದರೆ, ಯುವನ ನಟನೆಯಲ್ಲಿ ಒಂದಷ್ಟು ಸಕಾರಾತ್ಮಕ ಬೆಳವಣಿಗೆ ಕಾಣಿಸುತ್ತದೆ. ಆದರೆ, ಓರ್ವ ನಾಯಕ ನಟನಾಗಿ ನೆಲೆ ಕಂಡುಕೊಳ್ಳಬೇಕೆಂದರೆ, ಯುವ ನಟನೆಯಲ್ಲಿ ಮತ್ತಷ್ಟು ಪಳಗಿಕೊಳ್ಳೋದು ಅತ್ಯವಶ್ಯಕ. ಅಂತೂ ಎಕ್ಕ ಚಿತ್ರ ನ ಇರೀಕ್ಷೆಯ ಮಟ್ಟ ಮುಟ್ಟುವಂತೆ ಮೂಡಿ ಬಂದಿಲ್ಲ ಅನ್ನೋದಂತೂ ಪಕ್ಕಾ!