ಯುವ ರಾಜ್ ಕುಮಾರ್ (yuva rajnkumar) ನಟಿಸಿರುವ ಎಕ್ಕ (Ekka movie) ಚಿತ್ರದ ಸುತ್ತಾ ಸಿನಿಮಾ ಪ್ರೇಮಿಗಳ ವಲಯದಲ್ಲಿ ಚರ್ಚೆ ಶುರುವಾಗಿದೆ. ಆರಂಭಿಕವಾಗಿಯೇ ಒಂದಷ್ಟು ಹಿನ್ನಡೆ ಅನುಭವಿಸಿದ್ದ (yuva) ಯುವನ ಬಗ್ಗೆ ಒಂದಷ್ಟು ಭರವಸೆಯ ಮಾತುಗಳೂ ಕೂಡಾ ಕೇಳಿ ಬರುತ್ತಿವೆ. ಮೊದಲ ಚಿತ್ರದಲ್ಲಿಯೂ ಕೂಡಾ ಯುವನ ನಟನೆ ಮತ್ತು ಪರಿಶ್ರಮಗಳು ಪ್ರೇಕ್ಷಕರ ಮನಗೆದ್ದಿದ್ದವು. ಈ ಮೂಲಕ ಡೊದ್ಮನೆಯ ಕುಡಿಯೆಂಬ ಪ್ರಭೆಯಾಚೆಗೂ ಪ್ರತಿಭೆಯಿಂದಲೇ ಈ ಹುಡುಗ ನೆಲೆ ಕಂಡುಕೊಳ್ಳಬಹುದಾದ ಸೂಚನೆಗಳೂ ಸಿಕ್ಕಿದ್ದವು. ಈ ಕಾರಣದಿಂದಲೇ ಎಕ್ಕದ ಬಗ್ಗೆ ಒಂದಷ್ಟು ನಿರೀಕ್ಷೆ ಸಹಜವಾಗಿಯೇ ಮೂಡಿಕೊಂಡಿತ್ತು. ಇದೇ ಹೊತ್ತಿನಲ್ಲೀಗ (ekka movie trailer) ಎಕ್ಕ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಅದರ ಬಗ್ಗೆ ವ್ಯಾಪಕ ಮೆಚ್ಚುಗೆ ಮೂಡಿಕೊಂಡಿರೋದು ಗಮನಾರ್ಹ ಸಂಗತಿ.
ರೋಹಿತ್ ಪದಕಿ (director rohit padaki) ಎಕ್ಕ ಚಿತ್ರದ ಸಾರಥ್ಯ ವಹಿಸಿಕೊಂಡಾಗಲೇ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಒಂದು ಧಾಟಿಯ ಸಿನಿಮಾದಿಂದ ಪ್ರವರ್ಧಮಾನಕ್ಕೆ ಬಂದಿದ್ದ ರೋಹಿತ್, ಎಕ್ಕದ ಮೂಲಕ ಎಂಥಾ ಕಥೆಯನ್ನು ಕೈಗೆತ್ತಿಕೊಂಡಿರಬಹುದು? ಅದನ್ನು ಮಾಸ್ ಶೈಲಿಯಲ್ಲಿ ಹೇಗೆ ರೂಪಿಸಿರಬಹುದು? ಇಂಥಾ ಒಂದಷ್ಟು ಪ್ರಶ್ನೆಗಳು ಸಹಜವಾಗಿಯೇ ಮೂಡಿಕೊಂಡಿದ್ದವು. ಅದೆಲ್ಲವಕ್ಕೂ ಕೂಡಾ ಟ್ರೈಲರ್ ಮೂಲಕ ನಿಖರ ಉತ್ತರ ಸಿಕ್ಕಿದೆ. ಹಳ್ಳಿ ಬದುಕಿನ ಹಿನ್ನೆಲೆಯಲ್ಲಿ ತೆರೆದುಕೊಂಡು, ಬೆಂಗಳೂರೆಂಬೋ ಸಮುದ್ರದಲ್ಲಿ ಅರಳುವ ಕಥೆಗಿಲ್ಲಿ ರೋಹಿತ್ ಪದಕಿ ದೃಷ್ಯ ರೂಪ ಕೊಟ್ಟಿದ್ದಾರೆ. ಎಲ್ಲೋ ಇರುಕ್ಕಿನಲ್ಲಿ ಹುಟ್ಟುವ ತೊರೆಯೊಂದು ನಾನಾ ರೂಪ ತಾಳಿ, ನದಿಯಾಗಿ, ಸಮುದ್ರ ಸೇರುವ ರೂಪಕದೊಂದಿಗೆ ಹಳ್ಳಿ ಹುಡುಗನೋರ್ವ ಬೆಂಗಳೂರು ಸೇರಿಕೊಂಡಾದ ನಂತರ ಮಾಸ್ ಕಥನ ಎಕ್ಕದ ಮೂಲ ಬಿಂದುವಾಗಿರೋ ವಿಚಾರವೂ ಟ್ರೈಲರ್ ಮೂಲಕ ಸಾಬೀತಾಗಿದೆ.
ಯುವ ನಿರ್ವಹಿಸಿರುವ ಪಾತ್ರಕ್ಕೆ ಒಂದಷ್ಟು ಭಿನ್ನ ಚಹರೆಗಳಿದ್ದಂತಿದೆ. ಹಳ್ಳಿ ಶೇಡೂ ಸೇರಿದಂತೆ ಯುವ ಅದನ್ನು ಎಲ್ಲಿಯೂ ಅಸಹಜ ಎನ್ನಿಸದಂತೆ ನಿಭಾಯಿಸಿರೋದೂ ಕೂಡಾ ಎದ್ದು ಕಾಣಿಸುತ್ತೆ. ಈವತ್ತಿಗೆ ಎಕ್ಕ ಸಿನಿಮಾದ ಸುತ್ತಾ ಗೆಲುವಿನ ಲೆಕ್ಕಾಚಾರಗಳು ಹುರಿಗೊಂಡಿರೋದರ ಹಿಂದೆ ಯುವ ಅಭಿನಯದ ಝಲಕ್ಕುಗಳೇ ಪ್ರಧಾನವಾಗಿ ಕೆಲಸ ಮಾಡಿವೆ. ಈ ಹಿಂದೆ ಎಕ್ಕದ ಬ್ಯಾಂಲ್ ಬಂಗಾರಿ ಅಂತೊಂದು ಹಾಡು ಬಿಡುಗಡೆಗೊಂಡಿತ್ತು. ಅದೀಗ ರೀಲ್ಸುಗಳ ಮೂಲಕ ಎಲ್ಲೆಡೆ ಪ್ರಸಿದ್ಧಿ ಪಡೆದುಕೊಂಡಿದೆ. ಅದರಲ್ಲಿ ಯುವ ಹಾಕಿರೋ ಸ್ಟೆಪ್ಪುಗಳೂ ಕೂಡಾ ಪ್ರಶಂಸೆಗೆ ಪಾತ್ರವಾಗಿವೆ. ಒಟ್ಟಾರೆಯಾಗಿ ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ಎಕ್ಕದ ಸುತ್ತಾ ಪಾಸಿಟಿವ್ ಪ್ರಭೆ ತಂತಾನೇ ಹಬ್ಬಿಕೊಂಡಿರೋದಂತೂ ಸತ್ಯ!
ತಿಂಗಳುಗಳ ಹಿಂದೆ ಟೀಸರ್ ಬಿಡುಗಡೆಗೊಂಡಿದ್ದಾಗ ಯುವ ಎನರ್ಜಿಟಿಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಬರೀ ವೇಷಭೂಷಣದಲ್ಲಿ ಮಾತ್ರವಲ್ಲ; ಯುವ ಆವಾಹಿಸಿಕೊಂಡಿದ್ದ ಲವಲವಿಕೆಯಲ್ಲಿಯೂ ಕೂಡಾ ಪುನೀತ್ ರಾಜ್ ಕುಮಾರ್ ಛಾಯೆ ಸ್ಪಷ್ಟವಾಗಿಯೇ ಕಾಣಿಸಿಕೊಂಡಿತ್ತು. ಪುನೀತ್ ಅಕಾಲಿಕ ನಿರ್ಗಮನದ ನಂತರ ಆ ಸ್ಥಾನವನ್ನು ಯುವ ತುಂಬುತ್ತಾನೆ ಎಂಬಂಥಾ ನಿರೀಕ್ಷೆ ಅಭಿಮಾನಿ ವಲಯದಲ್ಲಿತ್ತು. ಅಪ್ಪುವಿನಂಥ ನಟರ ಸ್ಥಾನವನ್ನು ಮತ್ತೋರ್ವ ತುಂಬಲು ಸಾಧ್ಯವಿಲ್ಲದಿದ್ದರೂ, ಅಪ್ಪು ಅಭಿಮಾನಿಗಳಿಗೆ ಸಮಾಧಾನಕರ ವಾತಾವರಣವೊಂದು ಎಕ್ಕದ ಮೂಲಕ ಸೃಷ್ಟಿಯಾದರೂ ಅಚ್ಚರಿಯೇನಿಲ್ಲ. ಮಾಸ್ ಅಂಶುಗಳಿದ್ದರೂ ಕೂಡಾ ಕುಟುಂಬ ಸಮೇತರಾಗಿ ಕೂತು ನೋಡುವಂಥಾ ರೀತಿಯಲ್ಲಿರೋ ರೋಹಿತ್ ಈ ಚಿತ್ರವನ್ನು ರೂಪಿಸಿದಂತಿದೆ. ಅದೂ ಕೂಡಾ ಎಕ್ಕದ ಪಾಲಿಗೆ ಪ್ಲಸ್ ಪಾಯಿಂಟಾಗೋ ಸಾಧ್ಯತೆಗಳಿದ್ದಾವೆ!