ಗಣಿ ಧೂಳಿನಿಂದ ಗೆಬರಿಕೊಂಡ ಕಾಸಲ್ಲಿ ಒಂದಿಡೀ ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನೇ ಗಬ್ಬೆಬ್ಬಿಸಿದ ಕುಖ್ಯಾತಿ ಗಾಲಿ ಜನಾರ್ಧನ ರೆಡ್ಡಿಗಿದೆ. ಬರ್ಳಳಾರಿ ಸೀಮೆಯಲ್ಲಿ ನೆಲ ಬಗೆಯುತ್ತಾ, ಅಕ್ರಮಗಳ ಮೇಲೆ ಅಕ್ರಮಗಳನ್ನು ನಡೆಸಿ ಕಡೆಗೂ ಜೈಲುವಾಸವನ್ನೂ ಅನುಭವಿಸಿದ್ದ ಕರಾಳ ಹಿಸ್ಟರಿ ರೆಡ್ಡಿಯದ್ದು. ಇತ್ತೀಚೆಗಷ್ಟೇ ಮತ್ತೆ ಜೈಲುಪಾಲಾಗಿದ್ದ ಗಣಿಗಳ್ಳ ಅದು ಹೇಗೋ ತಾತ್ಕಾಲಿಕವಾಗಿ ಬಚಾವಾಗಿದ್ದಾನೆ. ಕೊಳ್ಳೆ ಹೊಡೆದ ಕಾಸಲ್ಲಿ ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಕಿರೀಟ ಮಾಡಿಸಿದ್ದ ರೆಡ್ಡಿಯದ್ದು ಚಿನ್ನದ ಕಾಚಾ ಹಾಕಿಕೊಂಡು ಓಡಾಡುವಷ್ಟು ಶೋಕಿಯ ಬದುಕು. ಇಂತಿಪ್ಪ ರೆಡ್ಡಿಗೆ ತನ್ನ ಪುತ್ರ ಕಿರೀಟಿ ಎಂಬಾತನನ್ನು ಹೀರೋ ಆಗಿ ಮೆರೆಸಬೇಕೆಂಬ ತಲುಬಿತ್ತು. ಅದರ ಫಲವಾಗಿಯೇ ಶುರುವಾಗಿದ್ದ ಚಿತ್ರ ಜ್ಯೂನಿಯರ್. ಇದರಲ್ಲಿ ಶ್ರೀಲೀಲಾ ರೆಡ್ಡಿಮಗ ಕಿರೀಟಿಯೊಂದಿಗೆ ಕುಣಿದು ಕುಪ್ಪಳಿಸಿದ ಹಾಡೊಂದೀಗ ತಕ್ಕ ಮಟ್ಟಿಗೆ ಸೌಂಡು ಮಾಡುತ್ತಿದೆ!
ಜನಾರ್ಧನ ರೆಡ್ಡಿ ತನ್ನ ಮಗ ಕಿರೀಟಿಯನ್ನು ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡಲು ಸರ್ವ ತಯಾರಿಯನ್ನೂ ಮಾಡಿಕೊಂಡಿದ್ದ. ಅದುವರೆಗೆ ನಡೆದಿದ್ದ ಅಂದಾದುಂ ದಿಗಳನ್ನು ಕಾಸಿನ ಬಲದಿಂದಲೇ ದಕ್ಕಿಸಿಕೊಳ್ಳುವ ಅಹಮ್ಮಿಕೆ ರೆಡ್ಡಿಯದ್ದಾಗಿತ್ತು. ಕಡೆಗೂ ಕೂಡಾ ಅಷ್ಟದಿಕ್ಕುಗಳಿಂದ ಕಾನೂನಿನ ಕುಣಿಕೆ ಬಿಗಿಯಾಗಿ ಆತ ಜೈಲು ಪಾಲಾಗಿದ್ದ. ಈ ನಡುವೆ ಕಿರೀಟಿಯ ಪಟ್ಟಾಭಿಷೇಕ ಪ್ರೋಗ್ರಾಮಿಗೆ ಪದೇ ಪದೆ ವಿಘ್ನ ಎದುರಾಗಿತ್ತು. ಕಡೆಗೂ ನಾನಾ ಸರ್ಕಸ್ಸು ನಡೆಸಿದ ಫಲವಾಗಿ ಆ ಸಿನಿಮಾವೀಗ ಬಿಡುಗಡೆಯ ಹಂತ ತಲುಪಿಕೊಂಡಿದೆ. ಅದರದ್ದೊಂದು ಹಾಡೀಗ ಒಂದಷ್ಟು ಸದ್ದು ಮಾಡುತ್ತಿದೆ. ಯದ್ವಾತದ್ವ ಕುಣಿದಾಡಿರುವ ಕಿರೀಟಿಯ ಬಗ್ಗೆ ಒಂದಷ್ಟು ಮೆಚ್ಚುಗೆ ಕೇಳಿ ಬಂದರೂ, ಅಪ್ಪ ಗಾಲಿ ರೆಡ್ಡಿಯ ಕಾರಣದಿಂದ ಅದೆಲ್ಲವೂ ನಕಾರಾತ್ಮಕ ಛಾಯೆಯಲ್ಲಿ ನೆಂದು ಹೋದಂತೆ ಕಾಣಿಸುತ್ತಿದೆ.
ಅಷ್ಟಕ್ಕೂ ಕಾಸೊಂದಿದ್ದರೆ ಕತ್ತೆಯನ್ನೂ ಹೀರೋ ಮಾಡಬಹುದು, ಹೇಗೋ ಜೈಸಿಕೊಳ್ಳಬಹುದೆಂಬ ಮನಃಸ್ಥಿತಿಯೀಗ ಮಗುಚಿಕೊಂಡಿದೆ. ಕಂಟೆಂಟಿನ ಕಸುವು, ಕ್ರಿಯಾಶೀಲತೆಯಿದ್ದರೆ ಮಾತ್ರವೇ ಗೆಲುವು ಸಾಧ್ಯವೆಂಬ ವಾಸ್ತವ ಎಲ್ಲರಿಗೂ ಅರ್ಥವಾಗಿದೆ. ಬಹುಶಃ ಮಗನ ಸಿನಿಮಾ ಚೆನ್ನಾಗಿಲ್ಲದೇ ಹೋದರೂ ಕರ್ನಾಟಕದ ಅಷ್ಟೂ ಸಿನಿಮಾ ಮಂದಿರಗಳನ್ನು ಬುಕ್ ಮಾಡಿಕೊಂಡು ಓಡಿಸಬಹುದೆಂಬ ಗತ್ತು ರೆಡ್ಡಿಗಿದ್ದರೂ ಇರಬಹುದು. ಆದರೆ, ಇಂಥಾ ಹಣವಂತರ ಮಕ್ಕಳನ್ನು ಯೋಗ್ಯತೆ ಇಲ್ಲದಿದ್ದರೂ ಮೆರೆಸುವಷ್ಟು ಮತಿಗೇಡಿ ಪ್ರೇಕ್ಷಕರಂತೂ ಕನ್ನಡದಲ್ಲಿಲ್ಲ. ಹಾಗೆ ನೋಡಿದರೆ, ಇಂಥಾ ಕಳ್ಳ ಕಾಸಿನ ಕುಡಿಗಳು ಸಿನಿಮಾ ರಂಗಕ್ಕೆ ಬಂದು ಮರೆಯೋದಿದೆಯಲ್ಲಾ? ಅದು ಅಸಲೀ ಪ್ರತಿಭೆಗೆ ಮಾಡೋ ಬಹು ದೊಡ್ಡ ಅವಮಾನ.
ಅಪ್ಪ ಕಳ್ಳ ಆಗಿದ್ದರೆ ಅದರಲ್ಲಿ ಈ ಹುಡುಗ ಕಿರೀಟಿಯ ತಪ್ಪೇನು ಅಂತೊಂದು ಪ್ರಶ್ನೆ ಎದುರಾದೀತು. ಕಿರೀಟಿಯಂಥವರು ಮೈ ಕುಣಿಸಲು ಕಾರಣವಾಗಿರೋದು ಕಳ್ಳ ಕಾಸೆಂಬ ವಾಸ್ತವವಿದೆಯಲ್ಲಾ? ಅದು ಎಲ್ಲ ಪ್ರಶ್ನೆಗಳಿಗೂ ಸಮರ್ಥ ಉತ್ತರವಾಗಿ ಕಾಣಿಸುತ್ತದೆ. ಈ ರೆಡ್ಡಿ ತನ್ನ ಕಳ್ಳ ಕಾಸಿನಿಂದ ಒಂದಿಡೀ ರಾಜಕೀಯದ ಓಘವನ್ನೇ ಅಲ್ಲೋಲಕಲ್ಲೋಲವಾಗಿಸಿದ್ದ ರೀತಿಯಿದೆಯಲ್ಲಾ? ಅದನ್ನು ಕರ್ನಾಟಕದ ಇತಿಹಾಸ ಯಾವತ್ತಿಗೂ ಕ್ಷಮಿಸೋದಿಲ್ಲ. ಈವತ್ತಿಗೆ ಮಹಾನ್ ನಾಯಕ ಅನ್ನಿಸಿಕೊಂಡು ಜೋಲು ಮೋರೆ ಹಾಕ,ಇ ಮನೆಯಲ್ಲಿ ಕುಂತಿರುವ ಯಡಿಯೂರಪ್ಪ ಅಧಿಕಾರ ಕೇಂದ್ರದಲ್ಲಿ ಆಟಕಟ್ಟಿದ್ದೆಲ್ಲವೂ ರೆಡ್ಡಿಯ ಹಡಬೆ ಕಾಸಿನ ಬಲದಿಂದಲೇ. ಚುನಾಯಿತ ಪ್ರತಿನಿಧಿಗಳನ್ನು ಕೋಟಿ ಕಾಸು ಸುರಿದು ಖರೀದಿಸುವ ಹೀನ ಸಂಪ್ರದಾಯದ ಪಿತಾಮಹ ಕೂಡಾ ಇದೇ ರೆಡ್ಡಿ. ಇಂಥಾ ಹಲಾಲುಕೋರನ ಕುಡಿಗಳು ಸಿನಿಮಾ ಮಾತ್ರವಲ್ಲ; ಅದೆಲ್ಲಿಯೇ ಕಾಣಿಸಿಕೊಂಡರೂ ಪ್ರಜ್ಞಾವಂತರಲ್ಲೊಂದು ಅಸಹ್ಯ ಮೂಡಿಕೊಳ್ಳುತ್ತೆ. ಜನಾರೆಡ್ಡಿಯ ಮಗನ ಸಿನಿಮಾ ಬಗ್ಗೆ ಅದಕ್ಕಿಂತ ಭಿನ್ನ ಭಾವ ಮೂಡಿಕೊಳ್ಳಲು ಸಾಧ್ಯವೇ?