ಅದ್ಯಾವ ಅಲೆಯಿದ್ದರೂ, ಅದೆಂಥಾ ಸವಾಲುಗಳ ಸಂತೆ ನೆರೆದಿದ್ದರೂ ಕೂಡಾ ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಮಾತ್ರ ಅನೂಚಾನವಾಗಿ ಮುಂದುವರೆಯುತ್ತಿರುತ್ತೆ. ಹೀಗೆ ಹೊಸಬರ ಆಗಮನವಾದಾಗ ಹೊಸತನವೂ ಜೊತೆಯಾಗಿ ಆಗಮಿಸುತ್ತದೆಂಬಂಥಾ ನಂಬಿಕೆಯೊಂದು ಈ ಕ್ಷಣಕ್ಕೂ ಪ್ರೇಕ್ಷಕರಲ್ಲಿ ಜೀವಂತವಿದೆ. ಅದೇ ಹಾದಿಯಲ್ಲಿ ಮತ್ತೊಂದು ಹೊಸಾ ತಂಡವೀಗ ಸದ್ದಿಲ್ಲದೆ ಸ್ಯಾಂಡಲ್‌ವುಡ್ಡಿಗೆ ಆಗಮಿಸಿದೆ. ಹೊಸಾ ಕಲಾವಿದರೇ ಹೆಚ್ಚಾಗಿರುವ ಡೆಡ್ಲಿ ಲವರ್ಸ್ ಎಂಬ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡಿರುವ ಈ ತಂಡ ಟ್ರೈಲರ್ ಲಾಂಚ್ ಮೂಲಕವೇ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ಇದೇ ಹೊತ್ತಿನಲ್ಲಿ ಜೂನ್ 20ರಂದು ಡೆಡ್ಲಿ ಲವರ್ಸ್ ಚಿತ್ರ ಬಿಡುಗಡೆಯಾಗುತ್ತದೆಂಬುದನ್ನೂ ಘೋಶಿಸಿಕೊಂಡಿದೆ!
ನಾಗೇಂದ್ರ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಕೂಡಾ ಅವರೇ ಹೊತ್ತುಕೊಂಡಿರೋದು ವಿಶೇಷ. ಡೆಡ್ಲಿ ಲವರ್ಸ್ ಎಂಬ ಶೀರ್ಷಿಕೆಯೇ ಒಟ್ಟಾರೆ ಕಥೆಯ ಬಗ್ಗೆ ಒಂದಷ್ಟು ದಿಕ್ಕುಗಳಲ್ಲಿ ಆಲೋಚನೆಗೆ ಹಚ್ಚುವಂತಿದೆ. ಸಾಮಾನ್ಯವಾಗಿ ಪ್ರೇಮಿಗಳನ್ನು ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಆಗಿ ತೋರಿಸಲಾಗುತ್ತೆ. ಆದರೆ, ಈ ಸಿನಿಮಾದ ಕಥೆಯೇ ಭಿನ್ನ ಎಂಬುದನ್ನು ಚಿತ್ರತಂಡ ಹೇಳಿಕೊಂಡಿದೆ. ಡ್ರಗ್ಸ್ ಮಾಫಿಯಾದ ಕಾಸಿಗೆ ಕೈಯಿಡೋ ಪ್ರೇಮಿಗಳ ರೋಚಕ ಕಥನವನ್ನು ಈ ಸನಿಮಾ ಒಳಗೊಂಡಿದೆಯಂತೆ. ವಿಶೇಷವೆಂದರೆ, ಲಹರಿ ವೇಲು ಈ ಚಿತ್ರದ ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
ಅಖಿಲ್ ಕುಮಾರ್ ಹಾಗೂ ತನು ಪ್ರಸಾದ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ.ಯ ಕೋಕಿಲಾ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಸಾಥ್ ಕೊಟ್ಟಿದ್ದಾರೆ. ನಿರ್ಮಾಪಕರಾಗಿ ಸಕ್ರಿಯರಾಗಿದ್ದ ಪ್ರಶಾಂತ್ ನಾಯಕ್ ಈ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸದರಿ ಟ್ರೈಲರಿಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಒಂದಷ್ಟು ಪಾಸಿಟಿವ್ ಮಾತುಗಳು ಕೇಳಿ ಬರಲಾರಂಭಿಸಿವೆ. ಮೇಲು ನೋಟಕ್ಕೆ ಈ ಟ್ರೈಲರ್ ಒಂದಷ್ಟು ಚೆಂದಗಿದ್ದಂತಿದೆ. ಒಂದು ವೇಳೆ ಒಂದಿಡೀ ಸಿನಿಮಾ ಹೊಸತನದಿಂದ, ಬಿಗುವಿನಿಂದ ಮೂಡಿ ಬಂದಿದ್ದರೆ ಪ್ರೇಕ್ಷಕರು ಮಾರು ಹೋಗುವ ಸಾಧ್ಯತೆಗಳಿದ್ದಾವೆ. ಡೆಡ್ಲಿ ಲವರ್ಸ್ ಭವಿಷ್ಯ ಈ ವಾರ ನಿರ್ಧಾರವಾಗಲಿದೆ!