ನಿರ್ದೇಶಕ ನಾಗಶೇಖರ್ ಮತ್ತೆ ಮಂಡೆಬಿಸಿ ಮಾಡಿಕೊಂಡಿದ್ದಾರೆ. ಭಾರೀ ಮಹತ್ವಾಕಾಂಕ್ಷೆಯೊಂದಿಗೆ ನಾಗಣ್ಣ ಸಂಜು ವೆಡ್ಸ್ ಗೀತಾ೨ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಲವ್ ಸ್ಟೋರಿಗಳಿಗೆ ದೃಶ್ಯರೂಪ ಕೊಡೋದರಲ್ಲಿ ನಿಸ್ಸೀಮರಾದ ನಾಗಶೇಖರ್ ಈ ಮೂಲಕ ಹಳೇ ಗೆಲುವು ಪುನರಾವರ್ತನೆಯಾದೀತೆಂಬ ನಿರೀಕ್ಷೆಯಿಟ್ಟುಕೊಂಡಿದ್ದರು. ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಹಾಗೊಂದು ಖುಷಿಯಿಂದ ಈ ಸಿನಿಮಾ ಬಿಡುಗಡೆಯಾದೇಟಿಗೆ ನಾಗಣ್ಣನಿಗೆ ನಡುಕ ಹುಟ್ಟುವಂಥಾ ಸೋಲೆದುರಾಗಿತ್ತು. ಆದರೂ ಛಲ ಬಿಡದೆ ಈ ಸಿನಿಮಾವನ್ನು ಮರು ಬಿಡುಗಡೆಗೊಳಿಸಿದ್ದ ನಾಗಶೇಖರ್ ಈಗ ರೊಚ್ಚಿಗೆದ್ದು ಬಿಟ್ಟಿದ್ದಾರೆ.
ಇದೇ ಸಿಟ್ಟಲ್ಲಿ ಸೀದಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿರುವ ನಾಗಶೇಖರ್ ಥಿಯೇಟರು ಸಿಗದೆ ದೋಖಾ ನಡೆಯುತ್ತಿರೋದರ ಬಗ್ಗೆ ದೂರು ಕೊಟ್ಟಿದ್ದಾರೆ. ಪ್ರಧಾನವಾಗಿ ಈ ಸಿನಿಮಾ ನಾಯಕಿಯಾದ ರಚಿತಾ ರಾಮ್ ಯಾವುದೇ ಪ್ರಮೋಷನ್ನುಗಳಿಗೆ ಬಾರದೆ ವಂಚಿಸಿದ್ದಾರೆಂದು ಆರೋಪಿಸಿ, ಆಕೆಯ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. ಓರ್ವ ನಾಯಕಿಯಾಗಿ ಸೋಲು ಗೆಲುವಿನಲ್ಲಿ ಸಮನಾಗಿ ಭಾಗಿಯಾಗಬೇಕಾದದ್ದು ರಚಿತಾ ಕರ್ತವ್ಯ. ಆದರೆ, ಆಕೆ ಸಿನಿಮಾ ಸಂಕಷ್ಟದಲ್ಲಿದ್ದರೂ ಪ್ರಚಾರಕ್ಕೆ ಬಾರದೆ ಸತಾಯಿಸಿದ್ದಾರೆಂಬುದು ನಾಗಶೇಖರ್ ವಾದ.
ಸದ್ಯಕ್ಕೆ ಗುಳಿಗೆನ್ನೆ ಹುಡುಗಿ ರಿಯಾಲಿಟಿ ಶೋ ಅಂತೆಲ್ಲ ಬ್ಯುಸಿಯಾಗಿದೆ. ಆಕೆಗೀಗ ಕಂಗಾಲೆದ್ದ ನಾಗಣ್ಣನ ಆರ್ತನಾದ ಕೇಳಿಸಕೊಳ್ಳುವಷ್ಟು ಪುರಸೊತ್ತಿರುವಂತೆ ಕಾಣಿಸುತ್ತಿಲ್ಲ. ಅಷ್ಟಕ್ಕೂ ಸದರಿ ಚಿತ್ರವನ್ನು ಮತ್ತೆ ಬಿಡುಗಡೆಗೊಳಿಸಿ, ಅದನ್ನು ಗೆಲ್ಲಿಸಹೊರಟಿರೋ ನಾಗಣ್ಣನ ಸರ್ಕಸ್ಸು ಕುಂಬಾಗಿ ಹರಿದ ಚಲ್ಲಣಕ್ಕೆ ತ್ಯಾಪೆ ಹಾಕುವ ಕಸರತ್ತಿನಂತೆಯೇ ಕಾಣಿಸುತ್ತಿದೆ. ಆರಂಭದಲ್ಲಿ ಈ ಸಿನಿಮಾ ಲ್ಯಾಗ್ ಆಗಿದೆ, ದೃಶ್ಯಗಳು ಪರಿಣಾಮಕಾರಿಯಾಗಿಲ;ಲ ಅಂತೆಲ್ಲ ಅಭಿಪ್ರಾಯ ಹೊಮ್ಮಿತ್ತು. ಅಂಥಾ ಸೀನುಗಳನ್ನು ಕತ್ತರಿಸಿ ಎಸೆದು, ಹೊಸಾ ಸೀನುಗಳನ್ನು ಸೇರಿಸಿ ಮತ್ತೆ ಬಿಡುಗಡೆಗೊಳಿಸಲಾಗಿದೆ. ಈಗ ಮತ್ತೆ ಥೇಟರ್ ಸಮಸ್ಯೆ ಎದುರಾಗಿದೆ. ಈ ಸಂಬಂಧವಾಗಿ ಅವರು ವಾಣಿಜ್ಯ ಮಂಡಳಿ ಮೊರೆ ಹೋಗಿದ್ದಾರೆ. ಆದರೆ, ಈ ವಾಣಿಜ್ಯ ಮಂಡಳಿಯ ಪೌರುಷವೇನಿದ್ದರೂ ಮಡೇನೂರು ಮನುವಿನಂಥಾ ತಲೆಡಮಾಸಿದ ನಟರನ್ನು ಬ್ಯಾನ್ ಮಾಡೋದಕ್ಕೆ ಮಾತ್ರ ಸೀಮಿತ. ಸಿನಿಮಾ ರಂಗದ ಬೇರೆ ಸಮಸ್ಯೆಗಳ ಬಗ್ಗೆ ಈ ಮಂದಿಕ ತಲೆ ಕೆಡಿಸಿಕೊಳ್ಳೋದು ಡೌಟು!