ಪುಷ್ಪಾ ಸರಣಿ ಚಿತ್ರಗಳ ನಂತರದಲ್ಲಿ ಅಲ್ಲು ಅರ್ಜುನ್ ಹವಾ ಜಗದಗಲ ಹಬ್ಬಿಕೊಂಡಿದೆ. ಇಂಥಾ ಯಶಸ್ವೀ ಸಿನಿಮಾಗಳ ನಂತರ ಅಲ್ಲು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಕುತೂಹಲ ಸಹಜವಾಗಿಯೇ ಹಬ್ಬಿಕೊಂಡಿತ್ತು. ಹಾಗೆ ನೋಡಿದರೆ, ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಅಲ್ಲು ಲಾಗಾಯ್ತಿನಿಂದಲೂ ಭಲೇ ಚಾಲಾಕಿ. ಇಂಥಾ ನಟನ ನಿರ್ಧಾರದ ಬಗ್ಗೆ ಕುತೂಹಲ ಮೂಡೋದು ವಿಶೇಷವೇನಲ್ಲ. ಇಂಥಾ ಘಳಿಗೆಯಲ್ಲಿಯೇ ಅಲ್ಲು ಮುಂದಿನ ಚಿತ್ರವನ್ನು ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆ ಅಂತೊಂದು ಸುದ್ದಿ ಕೇಳಿ ಬಂದಿತ್ತು. ಒಂದಷ್ಟು ಕಾಲ ಚಾಲ್ತಿಯಲ್ಲಿದ್ದ ಈ ವಿಚಾರ ಏಕಾಏಕಿ ನಿಂತು ಹೋಗಿತ್ತು; ಅಲ್ಲು ಅರ್ಜುನ್ ಆಟ್ಲಿ ನಿರ್ದೇಶನದ ಸಿನಿಮಾ ಒಪ್ಪಿಕೊಳ್ಳುವ ಮೂಲಕ!
ಅಷ್ಟಕ್ಕೂ ತ್ರಿವಿಕ್ರಮ್ ನಿರ್ದೇಶನದ ಚಿತ್ರಗಳ್ಲ್ಲಿ ಅಲ್ಲು ಅರ್ಜುನ್ ಈ ಹಿಂದೆಯೂ ನಟಿಸಿದ್ದಾರೆ. ಬರವಣಿಗೆಯನ್ನು ಮೂಲ ಶಕ್ತಿಯಾಗಿಸಿಕೊಂಡಿರೋ ತ್ರಿವಿಕ್ರಮ್ ಐಲು ಬುದ್ಧಿ ಬದಿಗಿಟ್ಟು ನಿಂತರೆ ಈ ಕ್ಷಣಕ್ಕೂ ಪ್ಯಾನಿಂಡಿಯಾ ಮಟ್ಟದಲ್ಲಿ ಕಮಾಲ್ ಸೃಷ್ಟಿಸುವ ಛಾತಿ ಹೊಂದಿರುವ ನಿರ್ದೇಶಕ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂಥವರ ಸಿನಿಮಾವನ್ನು ಅಲ್ಲು ಅರ್ಜುನ್ ಅದ್ಯಾಕೆ ಸೈಡಿಗೆ ಸರಿಸಿದರು? ಅಲ್ಲು ತ್ರಿವಿಕ್ರಮ್ ಮೇಲೆ ಮುನಿಸಿಕೊಂಡಿದ್ದೇಕೆ? ಇಂಥಾ ಅನೇಕ ಪ್ರಶ್ನೆಗಳು ಮೂಡಿಕಕೊಂಡಿದ್ದವು. ಅವೆಲ್ಲದಕ್ಕೂ ಈಗ ನಿಖರವಾದ ಉತ್ತರ ಸಿಕ್ಕಿದೆ. ಈ ಮೂಲಕ ತ್ರಿವಿಕ್ರಮನ ಧಾಡಸೀತನದ ಪ್ರವರಗಳೂ ಕೂಡಾ ಜಾಹೀರಾಗಿವೆ!
ಅಲ್ಲು ಅರ್ಜುನ್ ಪುಷ್ಪಾ ೨ ಗೆಲುವಿನ ಹಿಂಚುಮುಂಚಿನಲ್ಲಿ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದದ್ದು ನಿಜ. ಆರಂಭದಲ್ಲಿ ತ್ರಿವಿಕ್ರಮ್ ಕೂಡಾ ಅತ್ಯಂತ ಉತ್ಸಾಹದಿಂದಲೇ ಮಾತುಕತೆ ನಡೆಸಿದ್ದರು. ಇನ್ನೇನು ಎಲ್ಲವೂ ರೆಡಿ ಎಂಬರ್ಥದಲ್ಲಿ ಮಾತಾಡಿದ್ದರು. ಆದರೆ, ತಿಂಗಳುಗಟ್ಟಲೆ ಕಾದರೂ ಸ್ಕ್ರಿಫ್ಟ್ ರೆಡಿಯಾಗಿರಲಿಲ್ಲ. ತಿಂಗಳುಗಳು ಉರುಳಿದವೇ ವಿನಃ ತ್ರಿವಿಕ್ರಮ್ ಕಡೆಯಿಂದ ಕೆಲಸ ಶುರುವಾಗಿರಲಿಲ್ಲ. ಹೀಗೇ ಕಾದರೆ ವರ್ಷ ಕಳೆದರೂ ಈ ಆಸಾಮಿ ರೆಡಿಯಾಗೋದು ಡೌಟು ಅಂದಾಗಲೇ ಅಲ್ಲು ಅರ್ಜುನ್ ಕೆಂಡವಾಗಿದ್ದಾರೆ. ತ್ರಿವಿಕ್ರಮ್ ಮೇಲೆ ಮುನಿಸಿಕೊಂಡ ಅಲ್ಲು, ಅದಾಗಲೇ ಕಾದು ಕೂತಿದ್ದ ಆಟ್ಲಿಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲಿಗೆ ತನ್ನ ನಿಧಾನಗತಿಯಿಂದ ತ್ರಿವಿಕ್ರಮ್ ಒಂದೊಳ್ಳೆ ಅವಕಾಶವನ್ನು ಕಳೆದುಕೊಂಡಂತಾಗಿದೆ!