ಬಾಲಿವುಡ್ ಸಿನಿಮಾಗಳು ಕವುಚಿಕೊಂಡಿದ್ದರೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾತ ಅಕ್ಷಯ್ ಕುಮಾರ್. ಒಂದು ಹಂತದವರೆಗೆ ಹೇಗೋ ಗಾಳಿ ಬಂದ ದಿಕ್ಕಿಗೆ ತೂರಿಕೊಳ್ಳುತ್ತಿದ್ದ ಅಕ್ಷಯ್ ಕಳೆದ ವರ್ಷದಿಂದ ಕಂಗಾಲಾಗಿ ನಿಂತಿದ್ದಾನೆ. ಮಿನಿಮಮ್ ಗ್ಯಾರೆಂಟಿ ಎಂಬಂತಿದ್ದ ಈತನ ಸಿನಿಮಾಗಳು ಹೀನಾಯವಾಗಿ ಕವುಚಿಕೊಳ್ಳಲಾರಂಭಿಸಿದ್ದವು. ಹಾಕಿದ ಕಾಸಿಗೇನೂ ತತ್ವಾರವಿಲ್ಲ ಎಂಬ ನಂಬಿಕೆಯಿಂದ ಅಕ್ಷಯ್ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕರೊಬ್ಬರು ಮನೆ ಮಠ ಮಾರಿಕೊಳ್ಳುವ ಮಟ್ಟಕ್ಕೆ ಈ ಸ್ಟಾರ್ ನಟನ ಮಾನ ಹರಾಜಾಗಿತ್ತು. ಹೀಗೆ ಸಾಲು ಸಾಲು ಸೋಲಿನ ಶೂಲ ಹೆಟ್ಟಿಸಿಕೊಂಡು ಕಂಗಾಲೆದ್ದಿರೋ ಅಕ್ಷಯ್ ಕುಮಾರ್ ಇದೀಗ ನಿರ್ಮಾಪಕನ ಅವತಾರವೆತ್ತಿದ್ದಾರೆ. ನಿರ್ಮಾಪಕನಾಗಿಯೂ ಹೇರಾಪೇರಿಯ ಮೂಲಕ ವಿವಾದವೆಬ್ಬಿಸಿದ್ದಾರೆ!

ಹೇರಾಪೇರಿ ಸರಣಿಯ ಮೂರನೇ ಭಾಗವೀಗ ಒಂದಷ್ಟು ನಿರೀಕ್ಷೆ ಮೂಡಿಸಿದ್ದದ್ದು ನಿಜ. ಈ ಸರಣಿಯ ಹಿಂದಿನ ಎರಡು ಆವೃತ್ತಿಗಳು ಹಿಟ್ ಆಗಿರೋದು ಅದಕ್ಕೆ ಕಾರಣ. ಇದರಲ್ಲಿ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೀಗ ಬಹುಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದ ಪರೇಶ್ ರಾವಲ್ ಏಕಾಏಕಿ ಚಿತ್ರತಂಡದಿಂದ ಹೊರ ನಡೆದಿದ್ದಾರೆ. ಇದಲ್ಲದೇ ಅಕ್ಷಯ್ ಕುಮಾರ್ ಮೇಲೆ ಕೋಟಿಗಟ್ಟಲೆ ನಷ್ಟ ಭರಿಸುವಂತೆ ಕೇಸು ಜಡಿದಿದ್ದಾರೆ. ಹಾಗಾದರೆ, ಖುಷಿಯಾಗಿ ಈ ಸಿನಿಮಾ ಒಪ್ಪಿಕೊಂಡು, ಚಿತ್ರೀಕರಣದಲ್ಲಿಯೂ ಭಾಘಿಯಾಗಿದ್ದ ಪರೇಶ್ ಯಾಕಿಂಥಾ ನಿರ್ಧಾರ ಕೈಗೊಂಡರು? ಅಕ್ಷಯ್ ಕುಮಾರ್ ಕಡೆಯಿಂದ ನಡೆದ ಅಸಲೀ ಹೇರಾಪೇರಿಯೇನು ಅಂತೆಲ್ಲ ಹುಡುಕ ಹೋದರೆ, ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಒಂದಷ್ಟು ವಿಚಾರಗಳು ಅದಕ್ಕುತ್ತರವಾಗಿ ನಿಲ್ಲುತ್ತವೆ!

ಫಿರೋಜ್ ಎ ನಾಡಿಯಾವಾಲಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸ್ವತಃ ಅಕ್ಷಯ್ ಕುಮಾರ್ ಕೂಡಾ ಕಾಸು ಹೂಡುವ ಮೂಲಕ ನಿರ್ಮಾಪಕರಲ್ಲೊಬ್ಬರಾಗಿದ್ದಾರೆ. ಹೀಗೆ ಕಾಸು ಹೂಡಿರುವ ಅಕ್ಷಯ್ ಪರೇಶ್ ರಾವಲ್ ಕಡೆಯಿಂದಲೂ ಹೂಡಿಕೆ ಮಾಡಿಸಿ, ಪಾಲುದಾರರನ್ನಾಗಿಸಿಕೊಂಡಿದ್ದರಂತೆ. ಈ ವ್ಯವಹಾರದಲ್ಲಿ ಪರೇಶ್ ಮತ್ತು ಅಕ್ಷಯ್ ನಡುವೆ ವೈಮನಸ್ಸು ಆರಂಭವಾಗಿತ್ತೆನ್ನಲಾಗಿದೆ. ಇಂಥಾದ್ದೊಂದು ಅಸಹನೆ ಹೊಂದಿದ್ದ ಪರೇಶ್ ರಾವಲ್ ತೀರಾ ರೊಚ್ಚಿಗೇಳಲು ಕಾರಣವಾಗಿರೋದು ಅಕ್ಷಯ್ ಕುಮಾರ್ ಚಿತ್ರೀಕರಣದ ವಿಚಾರದಲ್ಲಿ ತೆಗೆದುಕೊಂಡಿದ್ದ ಬಿಗುವಿನ ನಿಲುವು ಅನ್ನುವವರೂ ಇದ್ದಾರೆ. ಸದ್ಯ ಆ ವಿಚಾರ ಭರ್ಜರಿ ಚರ್ಚೆಗಳಿಗೂ ಗ್ರಾಸವಾಗಿದೆ.

ಸಾಮಾನ್ಯವಾಗಿ, ಆರಂಭದಿಂದ ಇಲ್ಲಿಯವರೆಗೂ ಅಕ್ಷಯ್ ಕುಮಾರ್ ಚಿತ್ರೀಕರಣದ ವಿಚಾರದಲ್ಲಿ ಭಲೇ ಶಿಸ್ತಿನ ಮನುಷ್ಯ. ಅದೆಂಥಾ ಸಿನಿಮಾವಾದರೂ ಕೂಡಾ ಆರೇಳು ಗಂಟೆಗಿಂತ ಹೆಚ್ಚು ಕಾಲ ಈತ ಚಿತ್ರೀಕರಣದಲ್ಲಿ ಭಾಗಿಯಾಗೋದಿಲ್ಲ. ಅದೆಂಥಾ ತುರ್ತಿದ್ದರೂ ತನ್ನ ಗಡುವು ಮುಗಿಯುತ್ತಿದ್ದಂತೆಯೇ ಎದ್ದು ನಡೆಯೋದು ಆತನ ಶೈಲಿ. ಆದರೆ, ಹೇರಾಪೇರಿ೩ಯ ನಿರ್ಮಾಪಕನಾಗಿರುವ ಅಕ್ಷಯ್ ಕಲಾವಿದರನ್ನು ದಿನಗಟ್ಟಲೆ ಚಿತ್ರೀಕರಣದಲ್ಲಿ ಭಾಗಿಯಾಗಿಸಿದ್ದಾನಂತೆ. ಪ್ರೋಮೋ ಶೂಟ್ ವಿಚಾರದಲ್ಲಂತೂ ನಿರ್ದೇಶಕರ ಮೇಲೆ ವಿಪರೀತ ಒತ್ತಡ ಹೇರಿ ಹೀನಾಮಾನ ಚಿತ್ರೀಕರಣವಾಗುವಂತೆ ನೋಡಿಕೊಂಡಿದ್ದಾನಂತೆ. ಈ ಮೂಲಕ ಚಿತ್ರೀಕರಣ ಪೂರ್ವದಲ್ಲಿ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಅಕ್ಷಯ್ ಮೀರಿದ್ದಾರೆಂದೂ ಪರೇಶ್ ರಾವಲ್ ಆರೋಳಪಿಸಿದ್ದಾರೆ. ಈ ಕದನ ಎಲ್ಲಿಗೆ ಹೋಗಿ ಮುಟ್ಟುತ್ತದೆಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ!

About The Author