ತನ್ ಗಂಗಾಧರ್ ನಿರ್ದೇಶನದ ಸೀಸ್ ಕಡ್ಡಿ ಚಿತ್ರವೀಗ ಬಿಡುಗಡೆಗೆ ತಯಾರಾಗಿ ನಿಂತಿದೆ. ಈ ಕಡೇಯ ಘಳಿಗೆಯಲ್ಲಿ ಸದರಿ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ವಿಶೇಷವೆಂದರೆ, ಭಿನ್ನ ಪ್ರಯತೋಗಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಐವರು ನಿರ್ದೇಶಕರ ಸಮ್ಮುಖದಲ್ಲಿ ಟ್ರೈಲರ್ ಲಾಂಚ್ ಆಗಿದೆ. ಬೀರ್ ಬಲ್ ಖ್ಯಾತಿಯ ಶ್ರೀನಿ, ಮಹಿರಾ ಖ್ಯಾತಿಯ ನಿರ್ದೇಶಕ ಮಹೇಶ್ ಗೌಡ, ಡೊಳ್ಳು ಖ್ಯಾತಿಯ ನಿರ್ದೇಶಕ ಸಾಗರ್ ಪುರಾಣಿಕ್, ಆಯುಷ್ ಮಲ್ಲಿ, ಚೆಲುವರಾಜ್ ಮುಂತಾದವರು ಈ ಪತ್ರಿಕಾಗೋಷ್ಠಿಯಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚೆಂದದ ಈ ಮಕ್ಕಳ ಸಿನಿಮಾವನ್ನು ಕಮರ್ಶಿಯಲ್ ಆಗಿಯೂ ಗೆಲ್ಲುವಂತೆ ಮಾಡಬೇಕೆಂದು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿಕೊಂಡಿದ್ದಾರೆ. ಅಂದಹಾಗೆ, ಈಗ ಟ್ರೈಲರ್ ಮೂಲಕ ಸದ್ದು ಮಾಡುತ್ತಿರೋ ಸೀಸ್ ಕಡ್ಡಿ ಜೂನ್ ೬ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

ಟ್ರೈಲರ್ ಬಿಡುಗಡೆಯ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ ನಿರ್ದೇಶಕ ರತನ್ ಗಂಗಾಧರ್ ಈ ಕಥೆ ಹುಟ್ಟಿಕೊಂಡ ಬಗೆಗಿನ ಒಂದಷ್ಟು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಅದರನ್ವಯ ಹೇಳೋದಾದರೆ, ಅವರು ಪುಸ್ತಕವೊಂದನ್ನು ಓದುತ್ತಿದ್ದಾಗ, ಅದರಲ್ಲಿ ಪೆನ್ಸಿಲ್ ಬಗೆಗಿದ್ದ ವಿವರಣೆಗಳು ಗಮನ ಸೆಳೆದಿದ್ದವು. ಪೆನ್ಸಿಲಿನ ಐದು ಗುಣಗಳನ್ನು ಐದು ಪಾತ್ರಗಳನ್ನಾಗಿಸಿ, ಆ ಐದು ಭಿನ್ನ ಕಥೆಗಳು ಒಂದು ಬಿಂದುವಿನಲ್ಲಿ ಸಂಧಿಸುವಂತೆ ಈ ಕಥೆ ಸೃಷ್ಟಿಸಿದ್ದಾರಂತೆ. ಐದು ಕಥೆ, ಐದು ಕನ್ನಡದ ಉಪಭಾಷೆ ಮತ್ತು ಐದು ಪ್ರದೇಶಗಳ ಸಮಾಗಮದೊಂದಿಗೆ ಇಲ್ಲಿನ ಕಥೆ ಗರಿಬಿಚ್ಚಿಕೊಂಡಿದೆಯಂತೆ. ಅದನ್ನು ಎಲ್ಲರಿಗೂ ಹಿಡಿಸುವಂತಗೆ ಕಟ್ಟಿಕೊಟ್ಟ ತೃಪ್ತ ಭಾವವೊಂದು ಅವರ ಮಾತುಗಳಲ್ಲಿ ಧ್ವನಿಸಿದಂತಿತ್ತು.

ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ ಶ್ರೀನಿ, ಈ ಚಿತ್ರವನ್ನು ಕಮರ್ಶಿಯಲ್ ಆಗಿಯೂ ಗೆಲ್ಲಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡುತ್ತಲೇ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನುಳಿದಂತೆ, ಇತ್ತೀಚೆಗಷ್ಟೇ ತೆರೆಗಂಡು ಯಶಸ್ವೀ ಪ್ರದರ್ಶನ ಕಾಣುತ್ತಿರೋ ಪಪ್ಪಿ ಚಿತ್ರದ ನಿರ್ದೇಶಕ ಆಯುಷ್ ಮಲ್ಲಿ ಮಾತನಾಡಿ, ತಮ್ಮ ಸಿನಿಮಾಕ್ಕೆ ಕೊಟ್ಟ ಬೆಂಬಲವನ್ನು ಸೀಸ್ ಕಡ್ಡಿಗೂ ಕೊಡುವಂತೆ ಪ್ರೇಕ್ಷಕರನ್ನು ಕೇಳಿಕೊಂಡಿದ್ದಾರೆ. ಹೀಗೆ ಬಿಡುಗಡೆಗೊಂಡಿರುವ ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಗೀಗ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸೀಸ್ ಕಡ್ಡಿಯ ಬಗ್ಗೆ ಚರ್ಚೆಗಳಾಗುತ್ತಿವೆ. ಈಗಾಗಲೇ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಯನ್ನೂ ಪಡೆದುಕೊಂಡಿರೋ ಸೀಸ್ ಕಡ್ಡಿಯ ಬಗ್ಗೆ ಎಲ್ಲೆಡೆ ಸದಭಿಪ್ರಾಯ ಮೂಡಿಕೊಂಡಿದೆ.

ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣ, ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ, ಅನಿರುದ್ಧ್ ಹರ್ಷವರ್ಧನ್ ಸಂಕಲನ, ಆಶಾ ಥಾಮಸ್ ವಸ್ತ್ರ ವಿನ್ಯಾಸವಿದೆ. ಸಿತಿನ್ ಅಪ್ಪಯ್ಯ, ಬಿ ಎಸ್ ರಾಮಮೂರ್ತಿ, ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ, ಅನುಷ್ಕಾ ಟಕ್ಕಲಕಿ, ಸಂಜಯ್ ಗೌಡ, ಶ್ರೇಷ್ಠ್ ಜಪ್ತಿಮಠ್, ಮಹೇಂದ್ರ ಗೌಡ, ದೀಪಿಕಾ ಅಡ್ತಲೆ, ರಾಘವೇಂದ್ರ ಭಟ್, ನಾಗರಾಜ್ ರಾವ್, ರೇಖಾ ಕೂಡ್ಲಿಗಿ, ಉದಾತ್, ಜಯಂತ್ ವೆಂಕಟ್, ಅಮೋಘವರ್ಷ, ಅನೂಪ್ ಬಿ ಆರ್, ಶರ್ಮಿಳಾ ಕಾರ್ತಿಕ್, ಅಭಿಲಾಶ್ ಗೌಡ, ಗಂಗಾಧರ್, ಅಭಿಷೇಕ್, ಅಕುಲ್ ಮುಂತಾದವರ ತಾರಾಗಣವಿರುವ ಈ ಚಿತ್ರ ಜೂನ್ ೬ರಂದು ತೆರೆಗಾಣಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!