ನ್ನಡದ ಮಟ್ಟಿಗೆ ಹೊಸಾ ಹೊಳಹು ಹೊಂದಿರುವ, ತನ್ನದೇ ಆದ ಶೈಲಿಯೊಂದನ್ನು ಸಿದ್ಧಿಸಿಕೊಂಡಿರುವ ಅಪರೂಪದ ನಿರ್ದೇಶಕ ಸೂರಿ. ರಾ ದೃಷ್ಯಾವಳಿಗಳ ಮೂಲಕವೇ ಭರಪೂರ ಭಾವನೆಗಳನ್ನು ನೋಡುಗರ ಎದೆ ತುಂಬಿಸಬಲ್ಲ ದೊಡ್ಡ ಶಕ್ತಿ ಸೂರಿಯ ಪಾಲಿಗೆ ಸ್ವಂತ. ಇಂಥಾ ಸೂರಿ ಇತ್ತೀಚಿನ ವರ್ಷಗಳಲ್ಲಿ ಖಾಸಗೀ ಬದುಕಿನ ಹಳವಂಡಗಳಲ್ಲಿ ಕಳೆದು ಹೋದರಾ? ಹೊಸಾ ಅಲೆ, ಪ್ಯಾನಿಂಡಿಯಾ ಭರಾಟೆಗಳ ನಡುವೆ ಕಾಲೂರಿ ನಿಂತು ಕದನಕ್ಕಿಳಿಯಲು ಸಾಧ್ಯವಾಗದೆ ಮೌನಕ್ಕೆ ಜಾರಿದರಾ? ಹೀಗೆ ಅವರನ್ನು ಬೇಷರತ್ತಾಗಿ ಮೆಚ್ಚಿಕೊಳ್ಳುವವರನ್ನೆಲ್ಲ ನಾನಾ ಪ್ರಶ್ನೆಗಳು ಕಾಡುತ್ತಿವೆ. ಅಷ್ಟಕ್ಕೂ ಸೂರಿ ಪುಷ್ಕಳವಾದೊಂದು ಗೆಲುವು ಕಾಣದೆ ಹಲವಾರು ವರ್ಷಗಳೇ ಕಳೆದಿವೆ. ಟಗರು ಚಿತ್ರವೇ ಕೊನೆ; ಆ ನಂತರ ಮತ್ತೊಂದು ಗೆಲುವು ಸುಕ್ಕಾ ಸೂರಿಯ ಪಾಲಿಗೆ ಮರೀಚಿಕೆಯಾಗಿ ಬಿಟ್ಟಿದೆ. ಇಂಥಾ ವಾತಾವರಣದ ನಡುವಲ್ಲಿಯೂ ಅವರ ಹೊಸಾ ಹೆಜ್ಜೆಗಾಗಿ ಕಾದು ಕೂತವರಿಗೆಲ್ಲ ಮತ್ತೊಂದು ನಿರಾಸೆ ಎದುರಾಗಿದೆ!

ಕಳೆದ ವರ್ಷದ ಮೇ ತಿಂಗಳ ಹೊತ್ತಿಗೆಲ್ಲ ಸೂರಿ ಜಯಣ್ಣ ಕಂಬೈನ್ಸ್ ನಿರ್ಮಾಣದಲ್ಲೊಂದು ಸಿನಿಮಾ ಮಾಡುತ್ತಿರೋದರ ಬಗ್ಗೆ ಸುದ್ದಿಯಾಗಿತ್ತು. ಆ ಸಿನಿಮಾಗೆ ಕಾಗೆ ಬಂಗಾರ ಎಂಬ ಶೀರ್ಷಿಕೆ ನಿಗಧಿಯಾಗಿತ್ತು. ಕೆಂಡಸಂಪಿಗೆಯ ಪ್ರಭೆಯಲ್ಲಿಯೇ ಕಾಗೆ ಬಂಗಾರ ಅಂತೊಂದು ಗುಂಗು ಹಿಡಿಸಿದ್ದವರು ಸೂರಿ. ಕೆಂಡಸಂಪಿಗೆ ಚಿತ್ರದ ಮೂಲಕ ಮತ್ತೊಂದು ಆಯಾಮದ ಪ್ರತಿಭೆ ಪ್ರದರ್ಶಿಸಿದ್ದ ಸೂರಿ, ಆ ಕಥೆಯ ಟಿಸಿಲುಗಳನ್ನು ನೋಡುಗರ ಕಲ್ಪನೆಗೆ ಹಬ್ಬಿಸಿ ಬಿಟ್ಟಿದ್ದರು. ಆ ಮೂಲಕವೇ ಕುತೂಹಲ ಮೂಡಿಸಿದ್ದ ಕಾಗೆ ಬಂಗಾರ ಚಿತ್ರಕ್ಕೆ ಕಳೆದ ವರ್ಷ ಕಡೆಗೂ ಜೀವ ಬಂದಿತ್ತು. ವಿಶೇಷವೆಂದರೆ, ಈ ಚಿತ್ರಕ್ಕೆ ವಿರಾಟ್ ನಾಯಕನಾಗಿ ನಿಕ್ಕಿಯಾಗಿದ್ದ. ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಳು. ಇನ್ನೇನು ಈ ವರ್ಷದ ಮಧ್ಯ ಭಾಗದೊಳಗಾಗಿ ಕಾಗೆ ಬಂಗಾರದ ಚಿತ್ರೀಕರಣ ಚಾಲೂ ಆಗುತ್ತದೆಂಬ ವಾತಾವರಣವಿತ್ತು. ಇದೀಗ ಈ ಸಿನಿಮಾ ದಿಕ್ಕಿನಿಂದ ಮತ್ತೊಂದು ನಿರಾಶಾದಾಯಕ ಸುದ್ದಿ ಜಾಹೀರಾಗಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿಯೇ ಕಾಗೆ ಬಂಗಾರದಿಂದ ವಿರಾಟ್ ಔಟ್ ಆಗಿದ್ದಾನೆಂಬ ಗುಸು ಗುಸು ಕೇಳಿ ಬರಲಾರಂಭಿಸಿತ್ತು. ಇದೀಗ ಬಹುತೇಕ ಆ ಸುದ್ದಿ ಖಚಿತವಾಗಿದೆ. ಕಿಸ್ ಅಂತೊಂದು ಚಿತ್ರದ ಮೂಲಕ ಕನ್ನಡ ಸಿನಿಮಾಸಕ್ತರ ಗಮನ ಸೆಳೆದಿದ್ದ ಹುಡುಗ ವಿರಾಟ್. ಆ ಸಿನಿಮಾ ಕಾಲದಲ್ಲಿ ಈ ಹುಡುಗ ಇದ್ದ ರೀತಿಗೂ, ಈಗಿನ ಸ್ಥಿತಿಗತಿಗಳಿಗೂ ಅಜಗಜಾಂತರ ವ್ಯತ್ಯಾಸಗಳಿದ್ದಾವೆ. ಇಂಥಾ ವಿರಾಟ್ ದರ್ಶನ್ ಸಹೋದರ ನಿರ್ದೇಶನ ಮಾಡಿದ್ದ ರಾಯಲ್ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ. ಆದರೆ, ಆ ಚಿತ್ರವನ್ನು ದಾಸನ ಭಕ್ತರಿಂದಲೂ ಬಚಾವು ಮಾಡಲಾಗಿಲ್ಲ. ಯಾವಾಗ ರಾಯಲ್ ದಯನೀಯವಾಗಿ ಸೋಲು ಕಂಡಿತೋ, ಆ ಕ್ಷಣದಿಂದಲೇ ನಿರ್ಮಾಪಕ ಜಯಣ್ಣ ನಿರ್ಧಾರ ಬದಲಿಸಿದಂತಿದೆ. ಅದರ ಫಲವಾಗಿಯೇ ವಿರಾಟ್ ಔಟ್ ಆಗಿದ್ದಾನೆ. ಆ ಜಾಗಕ್ಕೆ ಯುವ ರಾಜ್ ಕುಮಾರ್ ಬರುತ್ತಾನೆಂಬಂಥಾ ಸುದ್ದಿಕಯಿದೆ. ಸದ್ಯದ ಮಟ್ಟಿಗೆ ರಾಯಲ್ ಸೋಲಿನಿಂದ ಕಂಗೆಟ್ಟಿರುವ ವಿರಾಟ್, ಮತ್ತೊಂದು ಚಿತ್ರ ಕೈ ತಪ್ಪಿದ್ದರಿಂದಾಗಿ ಕಳವಳಗೊಂಡಿದ್ದಾನೆ. ಈ ಸಂಬಂಧವಾಗಿ ಜಯಣ್ಣನ ಮೇಲೆ ವಿರಾಟ್ ಮುನಿಸಿಕೊಂಡಿದ್ದಾನೆಂಬ ಮಾತುಗಳೂ ಹರಿದಾಡುತ್ತಿವೆ.

ಹಾಗಾದರೆ, ಯುವ ರಾಜ್ ಕುಮಾರ್ ನಾಯಕನಾಗಿಯಾದರೂ ಕಾಗೆ ಬಂಗಾರ ಬರಖತ್ತಾಗುತ್ತಾ ಅಂತ ನೋಡ ಹೋದರೆ, ಆ ದಿಕ್ಕಿನಲ್ಲಿಯೂ ಸಕಾರಾತ್ಮಕ ವಾತಾವರಣ ಕಾಣಿಸುತ್ತಿಲ್ಲ. ಅಲ್ಲಿಗೆ ಪ್ರತಿಭಾನ್ವಿತ ನಿರ್ದೇಶಕ ಸೂರಿ ಪಾಲಿನ ವನವಾಸ ಈ ವರ್ಷವೂ ಮುಂದುವರೆದಂತಿದೆ. ಟಗರು ಚಿತ್ರದ ದೊಡ್ಡ ಗೆಲುವಿನ ನಂತರ, ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ನಿರ್ದೇಶಿಸಿದ್ದರು. ಆದರದು ಹೇಳಿಕೊಳ್ಳುವಂಥಾ ಗೆಲುವು ಕಾಣಲಿಲ್ಲ. ಅದರ ಬೆನ್ನಲ್ಲಿಯೇ ಸೂರಿ ಮಾಡಿಕೊಂಡ ಮಹಾ ಯಡವಟ್ಟಿನ ಹೆಸರು `ಬ್ಯಾಡ್ ಮ್ಯಾನರ್ಸ್’. ಬಹುಶಃ ಅಭರೀಶ್ ಪುತ್ರ ಅಭಿಶೇಕನ ಅಸಲೀ ಸಾಮರ್ಥ್ಯವನ್ನು ಸಲೀಸಾಗಿ ಅಂದಾಜಿಸಿದ್ದ ಸೂರಿ ಸುಮಾರಾದ ದೃಷ್ಯ ಕಟ್ಟಿದ್ದರೇನೋ… ಆ ಕಥೆಗೂ ಅಭಿಶೇಕನ ನಟನೆಯ ಪಾಂಡಿತ್ಯಕ್ಕೂ ಹೋಲಿಕೆಯಾಗಲೆ ಬ್ಯಾಡ್ ಮ್ಯಾನರ್ಸ್ ಕೂಡಾ ಕವುಚಿಕೊಂಡಿತ್ತು.

ಅದಾದ ನಂತರ ಮತ್ತೆ ಸಾವರಿಸಿಕೊಂಡು ಎದ್ದು ನಿಲ್ಲಲು ಅದೇಕೋ ಸೂರಿಗೆ ಸಾಧ್ಯವಾಗುತ್ತಿಲ್ಲ. ಈ ಕ್ಷಣಕ್ಕೂ ಎಲ್ಲ ವ್ಯಾಕುಲಗಳನ್ನು ಕೊಡವಿಕೊಂಡು ಎದ್ದು ನಿಂತರೆ ಸೂರಿ ಖಂಡಿತವಾಗಿಯೂ ಬೆರಗು ಮೂಡಿಸಬಲ್ಲ ಸಿನಿಮಾ ಮಾಡ ಬಲ್ಲರು. ಒಂದು ಧಾಟಿಯ ಹ್ಯಾಂಗೋವರ್ ಅನ್ನು ದಾಟಿಕೊಂಡರೆ, ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಬಲ್ಲ ಕಸುವು ಖಂಡಿತವಾಗಿಯೂ ಸೂರಿಗಿದೆ. ಆದರೆ, ಒಂದು ಸಿನಿಮಾದ ನಂಟು ಕಡಿದುಕೊಂಡು, ಹೊಸಾ ಸೃಷ್ಟಿಗೆ ಅಣಿಗೊಳ್ಳುವ ಅವಕಾಶ ಸೂರಿ ಪಾಲಿಗೆ ಒದಗುತ್ತಲೇ ಇಲ್ಲ. ಒಂದು ಕೆಂಡಸಂಪಿಗೆ ಗೆಲ್ಲುತ್ತಲೇ ಸೂರಿ ಗಿಣಿಮರಿ ಕೇಸಿನ ಗುಂಗಿಗೆ ಜಾರುತ್ತಾರೆ. ಕಾಗೆ ಬಂಗಾರದತ್ತ ಆಕರ್ಷಿತರಾಗುತ್ತಾರೆ. ಹೀಗೆ ಕಥೆಯೊಂದರ ಕೊಂಬೆ ಕೋವೆಗಳಲ್ಲಿ ಅವರ ಪ್ರತಿಭೆ ಎಂಬುದು ನಿತ್ರಾಣವಾಗಿ ನೇತುಬಿದ್ದಂತೆ ಭಾಸವಾಗುತ್ತದೆ. ವಿರಾಟ್ ಔಟ್ ಆದರೂ ಕೂಡಾ ಯುವನ ಜೊತೆಗಾದರೂ ಕಾಗೆ ಬಂಗಾರ ಕಳೆಗಟ್ಟಿಕೊಳ್ಳುವಂತಾದರೆ, ಅಷ್ಟರ ಮಟ್ಟಿಗೆ ಸೂರಿ ಬಚಾವಾದಂತಾಗುತ್ತದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!