ಪಾಯವಿದೆ ಎಚ್ಚರಿಕೆ ಚಿತ್ರ ಬಿಡುಗಡೆಗೊಳ್ಳಲು ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಫೆಬ್ರವರಿ ೨೮ರಂದು ಈ ಚಿತ್ರ ರಾಜ್ಯಾದ್ಯಂತ ತೆರೆಗಾಣಲಿದೆ. ಹಾರರ್ ಥ್ರಿಲ್ಲರ್ ಜಾನರಿನದ್ದಾದರೂ, ಸಿದ್ಧಸೂತ್ರಗಳನ್ನು ಮೀರಿಕೊಂಡಿರುವ ಈ ಕಥನದಲ್ಲಿ ರಾಮಾಚಾರಿ ಖ್ಯಾತಿಯ ರಾಧಾ ಭಗವತಿ ನಾಯಕಿಯಾಗಿ ಚೆಂದದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ನಟಿಸಿರುವ ರಾಧಾ ಪಾಲಿಗೆ ಅಪಾಯವಿದೆ ಎಚ್ಚರಿಕೆ ಚಿತ್ರದ ಪಾತ್ರ ಬಹು ದೊಡ್ಡ ತಿರುವು ಕೊಡುವ ನಿರೀಕ್ಷೆಗಳಿವೆ. ಟ್ರೈಲರ್ ಮೂಲಕ ವ್ಯಾಪಕ ಕುತೂಹಲಕ್ಕೆ ಕಾರಣವಾಗಿರೋ ಈ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ಖುದ್ದು ರಾಧಾ ಭಗವತಿ ತೆರೆದಿಟ್ಟಿದ್ದಾರೆ.

ಕಿರುತೆರೆಯಲ್ಲಿ ಭಾರೀ ಪ್ರಸಿದ್ಧಿ ಪಡೆದುಕೊಂಡಿರುವ ರಾಮಾಚಾರಿ ಸೀರಿಯಲ್ ರಾಧಾ ಭಗವತಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಅದರಲ್ಲಿ ರಾಮಾಚಾರಿಯ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಇತ್ತೀಚೆಗಷ್ಟೇ ಬೇರೆ ಕನಸುಗಳ ಬೆಂಬತ್ತಿ ಆ ಪಾತ್ರದಿಂದ ಹೊರ ಬಂದಿದ್ದರು. ಈಗ ಭಾರ್ಗವಿ ಎಲ್ ಎಲ್ ಬಿ ಎಂಬ ಹೊಸಾ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ನಾಯಕಿಯಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ. ಇಂಥಾ ಭಾರ್ಗವಿಗೆ ಅಪಾಯವಿದೆ ಎಚ್ಚರಿಕೆ ಚಿತ್ರದ ನಾಯಕಿಯ ಪಾತ್ರ ಒಲಿದು ಬಂದಿದ್ದು ಆಡಿಷನ್ ಮೂಲಕ. ಈ ಸಿನಿಮಾಗಾಗಿನ ಆಡಿಷನ್ ನಡೆಯುತ್ತಿರೋ ವಿಚಾರವನ್ನ ಸ್ನೇಹಿತನಿಂದ ತಿಳಿದುಕೊಂಡಿದ್ದ ರಾಧಾ, ಕೂಡಲೆ ನಿರ್ದೇಶಕರನ್ನು ಸಂಪರ್ಕಿಸಿದ್ದರಂತೆ.

ಬಳಿಕ ಆಡಿಷನ್ನಿನಲ್ಲಿ ಪಾಲ್ಗೊಂಡಿದ್ದ ರಾಧಾಗೆ ತಿಂಗಳ ನಂತರ ಆಯ್ಕೆಯಾಗಿರುವ ವಿಚಾರ ರವಾನೆಯಾಗಿತ್ತು. ಆ ನಂತರ ಸದರಿ ಪಾತ್ರಕ್ಕಾಗಿ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಅತ್ಯಂತ ವ್ಯವಸ್ಥಿತವಾಗಿ ರಿಹರ್ಸಲ್ ನಡೆಸಿದ್ದರಂತೆ. ಅದರ ಮೂಲಕ ಪಾತ್ರವನ್ನು ಒಳಗಿಳಿಸಿಕೊಂಡಿದ್ದ ರಾಧಾ ತುಂಬು ಖುಷಿಯಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಟ್ರೈಲರಿನಲ್ಲಿ ಕಾಣಿಸಿರುವ ಪ್ರಕಾರ ಹಾಗೂ ಚಿತ್ರತಂಡ ಬಿಚ್ಚಿಟ್ಟಿರುವ ಒಂದಷ್ಟು ವಿಚಾರಗಳ ಆಧಾರದಲ್ಲಿ ಹೇಳೋದಾದರೆ ಈ ಸಿನಿಮಾದ ಕಥೆ ಕಾಡಿನ ಗರ್ಭದಲ್ಲಿ ಘಟಿಸುತ್ತದೆ. ಆದರೆ, ರಾಧಾ ಭಗವತಿ ಕಾಡಿನಾಚೆಗೆ ಹಬ್ಬಿಕೊಂಡಿರುವ ಪಾತ್ರವಾಗಿ ಕಾಣಿಸಿಕೊಂಡಿದ್ದಾರಂತೆ. ಅಲ್ಲಿಗೆ ಕಾಡ ಗರ್ಭದ ಕಥೆಗೆ ನಾಡಿನ ಕನೆಕ್ಷನ್ನಿರೋದು ಪಕ್ಕಾ ಆದಂತಾಗಿದೆ.  

ಒಟ್ಟಾರೆಯಾಗಿ ರಾಧಾ ಭಗವತಿಗೆ ಈ ಪಾತ್ರದ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಳ್ಳತ್ತೇನೆಂಬ ಗಾಢವಾದ ನಂಬಿಕೆ ಇದೆ. ಅಚಾನಕ್ಕಾಗಿ ಗಟ್ಟಿ ಕಥನದ ಈ ಅಪರೂಪದ ಸಿನಿಮಾದಲ್ಲಿ ನಾಯಕಿಯಾಗೋ ಅವಕಾಶ ಸಿಕ್ಕಿದ್ದರ ಬಗ್ಗೆ ಥ್ರಿಲ್ ಕೂಡಾ ಇದೆ. ಇಂಥಾ ರಾಧಾ ಭಗವತಿ ಆರಂಭ ಕಾಲದಿಂದಲೂ ಗಾಯಕಿಯಾಗಬೇಕೆಂಬ ಕನಸು ಹೊಂದಿದ್ದವರು. ಆ ದಿಸೆಯಲ್ಲಿ ಒಂದಷ್ಟು ಪ್ರಯತ್ನ ಪಟ್ಟಿದ್ದ ಅವರಿಗೆ ನಟಿಯಾಗೋ ಅವಕಾಶ ತಾನೇ ತಾನಾಗಿ ಒಲಿದು ಬಂದಿತ್ತು. ಅವರ ಪಾಲಿಗೆ ಬಹು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದು ಕೊಟ್ಟಿದ್ದದ್ದು ರಾಮಾಚಾರಿ ಸೀರಿಯಲ್ಲಿನ ತಂಗಿ ಪಾತ್ರ. ಇದುವರೆಗೂ ಆ ಪಾತ್ರದಿಂದಲೇ ಅವರಿಗೆ ಅಪಾರ ಪ್ರಮಾಣದಲ್‌ಲಿ ಪ್ರೀತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅಪಾಯವಿದೆ ಎಚ್ಚರಿಕೆ ಚಿತ್ರದ ಪಾತ್ರದ ಮೂಲಕವೇ ಆಕೆ ಗುರುತಿಸಿಕೊಳ್ಳುವಂತಾಗೋದು ಗ್ಯಾರೆಂಟಿ.

About The Author