ಗ ಜಗತ್ತಿನಲ್ಲಿ ಸೋಶಿಯಲ್ ಮೀಡಿಯಾ (social media trend) ಯುಗ ಚಾಲ್ತಿಯಲ್ಲಿದೆ. ಒಂದ್ಯಾವುದೋ ಟ್ರೆಂಡು ಯಾವ ಮಾಯಕದಲ್ಲೋ ಶುರುವಾಗಿ ಬಿಡುತ್ತೆ. ಅದರ ಪ್ರಭೆಯಲ್ಲಿ ಮತ್ಯಾರೋ ಪ್ರಸಿದ್ಧಿ ಎಂಬೋ ಭ್ರಮೆಯ ನೆತ್ತಿಯಲ್ಲಿ ಕುಂತು ಗಿರಗಿರನೆ ಲಗಾಟಿ ಹೊಡೆಯುತ್ತಾರೆ. ಇದಾಗಿ ಮಾರನೇ ದಿನದ ಮುಂಜಾವು ಕಣ್ಬಿಡುವ ಹೊತ್ತಿಗೆಲ್ಲ ಹಳೇ ಟ್ರೆಂಡು ಹೊಸತರ ಅಲೆಯಲ್ಲಿ ಅಕ್ಷರಶಃ ಕೊಚ್ಚಿ ಹೋಗಿರುತ್ತೆ. ಇದೇ ಫಾರ್ಮುಲಾ ಸಿನಿಮಾ ರಂಗದಲ್ಲೂ ಚಾಲ್ತಿಯಲ್ಲಿದೆ. ಒಂದಷ್ಟು ಕಾಲ ಮರೆಗೆ ಸರಿದವರು ಅದೆಂಥಾ (social media stars) ಸ್ಟಾರುಗಳೇ ಆದರೂ ಜನ ಮರೆತು ಮುನ್ನಡೆಯುತ್ತಾರೆ. ಇಂಥಾ ವಿಚಿತ್ರ ಲೋಕದಲ್ಲಿ ದಶಕಗಳಿಂದೀಚೆಗೆ ದೂರ ಸರಿದಿರೋ ನಟಿಯೊಬ್ಬಳನ್ನು ಪ್ರೇಕ್ಷಕರು ಪದೇ ಪದೆ ಧ್ಯಾನಿಸುತ್ತಾರೆಂದರೆ, ನಲವತ್ತು ದಾಟಿದ ಹಳೇ ಚೆಲುವೆ ಮತ್ತೆ ಬಣ್ಣ ಹಚ್ಚಲೆಂದು ಹಾತೊರೆಯುತ್ತಾರೆಂದರೆ ಅದು ನಿಜಕ್ಕೂ ಅಚ್ಚರಿಯಂತೆ ಕಾಣುತ್ತದೆ. ನಟಿ (actress ramya divya spandana) ರಮ್ಯಾ ವಿಚಾರದಲ್ಲಿ ಹೆಜ್ಜೆ ಹೆಜ್ಜೆಗೂ ಅಂಥಾದ್ದೊಂದು ಅಚ್ಚರಿ ಮೂಡಿಕೊಳ್ಳುತ್ತಲೇ ಇದೆ.

ದಶಕದ ಹಿಂದೆ ಖ್ಯಾತಿಯ ಉತ್ತುಂಗದಲ್ಲಿದ್ದಾಕೆ ರಮ್ಯಾ ದಿವ್ಯ ಸ್ಪಂದನ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲ ನಟಿಯರಿಗಿದ್ದ ಛಾರ್ಮ್ ರಮ್ಯಾಗೆ ದಕ್ಕಿ ಬಿಟ್ಟಿತ್ತು. ಅದ್ಯಾವ ಪರಿ ಆಕೆಗೆ ನಟಿಯಾಗಿ ಬೇಡಿಕೆ ಇತ್ತೆಂದರೆ, ಅದು ದಶಕ ಕಳೆದರೂ ಮುಕ್ಕಾಗುವ ಸಾಧ್ಯತೆಗಳಿರಲಿಲ್ಲ. ಹೀಗೆ ಖ್ಯಾತಿ ಮತ್ತು ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ಏಕಾಏಕಿ ಚಿತ್ರರಂಗದಿಂದ ದೂರ ಸರಿದು ರಾಜಕೀಯ ಪಡಸಾಲೆ ಸೇರಿಕೊಂಡಿದ್ದಾಕೆ ರಮ್ಯಾ. ಹೇಳಿಕೇಳಿ ಭಾರತದ ರಾಜಕಾರಣದಲ್ಲಿ ಪುರುಷಾಧಿಪಥ್ಯದ ಮೆರೆದಾಟವೇ ಹೆಚ್ಚಿಕೊಂಡಿದೆ. ಇಂದಿರಾ ಗಾಂಧಿಯಂಥಾ ಬೆರಳೆಣಿಕೆಯಷ್ಟು ಮಹಿಳೆಯರು ಬಿಟ್ಟರೆ ಮತ್ಯಾರಿಂದಲೂ ಪುರುಷಹಂಕಾರವನ್ನ ಮೀರಿಕೊಂಡು ಮಿಂಚುವ ಸಾಹಸ ಸಾಧ್ಯವಾಗಿಲ್ಲ. ಇಂಥಾ ರಾಜಕೀಯ ರಂಗಕ್ಕೆ ಗಿಣಿಯಂಥಾ ರಮ್ಯಾ ಎಂಟ್ರಿ ಕೊಟ್ಟಾಗ ಸಹಜವಾಗಿಯೇ ಎಲ್ಲರೊಳಗೊಂದು ಅನುಮಾನ ಮೂಡಿಕೊಂಡಿತ್ತು. 

ಹಾಗೆ ರಾಜಕೀಯ ರಂಗಕ್ಕಿಳಿದು ಕಾಂಗ್ರೆಸ್ ಪಕ್ಷದ ಆಯಕಟ್ಟಿನ ಸ್ಥಾನಗಳಲ್ಲಿ ಮಿಂಚಿದ್ದ ರಮ್ಯಾ, ಈಗೊಂದೆರಡು ವರ್ಷಘಗಳಿಂದ ಅಲ್ಲಿಂದಲೂ ಗಾಯಬ್ ಆದಂತಿದ್ದಾರೆ. ಹಾಗೆ ರಮ್ಯಾ ರಾಜಕೀಯದಿಂದ ದೂರ ಸರಿದ ಮುನ್ಸೂಚನೆ ಸಿಗುತ್ತಲೇ ಕರುನಾಡಿನ ಅಭಿಮಾನಿ ಬಳಗದಲ್ಲಿ ಮತ್ತೊಂದು ಸುತ್ತಿನ ಆಸೆ ಚಿಗುರಿಕೊಂಡಿತ್ತು. ಆಕೆ ಮತ್ತೆ ನಾಯಕಿಯಾಗಿ ಮುಂದವರೆಯುತ್ತಾರೆಂಬ ನಿರೀಕ್ಷೆ ಬಹುತೇಕರಲ್ಲಿತ್ತು. ಆದರೆ ರಮ್ಯಾ ಯಾಕೋ ನಾಯಕಿಯಾಗುವ ನಿಟ್ಟಿನಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಒಂದು ಸಂಸ್ಥೆ ಆರಂಭಿಸಿ ಸಿನಿಮಾ ನಿರ್ಮಾಣಕ್ಕಿಳಿದರೇ ಹೊರತು ತಾನು ಮತ್ತೆ ಬಣ್ಣ ಹಚ್ಚೋದ್ಯಾವಾಗ ಎಂಬ ವಿಚಾರದ ಬಗ್ಗೆ ಮಾತಾಡಿಲ್ಲ.

ಈ ನಡುವೆ ರಾಜ್ ಶೆಟ್ಟಿ ಜೊತೆಗೊಂದು ಸಿನಿಮಾದಲ್ಲಿ ರಮ್ಯಾ ನಟಿಸುತ್ತಾರೆಂಬ ಸುದ್ದಿ ಹಬ್ಬಿತ್ತಾದರೂ ಆರಂಭದಲ್ಲೇ ಅಲ್ಲೇನೋ ಕಿರಿಕ್ಕುಗಳು ನಡೆದಿದ್ದವು. ಆ ಕಾರಣದಿಂದಲೇ ರಮ್ಯಾ ಹೊರ ನಡೆದಿದ್ದಾರೆಂಬ ಮಾಹಿತಿ ಜಾಹೀರಾಗಿತ್ತು. ಇದೆಲ್ಲದರಿಂದಾಗಿ ರಮ್ಯಾಭಿಮಾನಿಗಳಿಗೆಲ್ಲ ತೀವ್ರ ನಿರಾಸೆಯಾಗಿದೆ. ಇದೀಗ ಒಪ್ಪುವಂಥಾ ಪಾತ್ರ ಸಿಕ್ಕರೆ ಮತ್ತೆ ಬಣ್ಣ ಹಚ್ಚುವ ಇರಾದೆ ಇದೆ ಎಂಬರ್ಥದಲ್ಲಿ ರಮ್ಯಾ ಮಾತಾಡಿದ್ದಾರೆ. ಅದೂ ಕೂಡಾ ಆ ಕ್ಷಣಕ್ಕೆ ತ್ಯಾಪೆ ಹಚ್ಚಿ ಬಚಾವಾಗೋ ಬುದ್ಧಿವಂತಿಕೆ ಎಂಬ ವಿಚಾರ ಅಭಿಮಾನಿ ಬಳಗಕ್ಕೆ ಪಕ್ಕಾ ಆದಂತಿದೆ. ಒಂದು ವೇಳೆ ರಮ್ಯಾಗೆ ನಾಯಕಿಯಾಗಿ ಮರಳೋ ಆಸೆ ಇದ್ದರೆ, ಯಾರೋ ತನಗಾಗಿ ಒಳ್ಳೆ ಪಾತ್ರ ಕಥೆ ರೆಡಿ ಮಾಡುತ್ತಾರೆಂದು ಕಾಯೋ ಅವಶ್ಯಕತೆಯಿಲ್ಲ. ಅಂಥಾದ್ದನ್ನು ತನಗಾಗಿ ಸೃಷ್ಟಿಸಿಕೊಳ್ಳುವ ಎಲ್ಲ ಬಲವೂ ಆಕೆಗಿದೆ. ಅಂತೂ ನಾಯಕಿಯಾಗೋ ರಿಸ್ಕು ಆಕೆಗೀಗ ಬೇಕಾದಂತಿಲ್ಲ. ಹಾಗಂತ ನಟಿಯಾಗಿ ರಮ್ಯಾಳನ್ನ ಮತ್ತೆ ನೋಡಲು ಸಾಧ್ಯವೇ ಇಲ್ಲ ಅಂತ ನಿರಾಸೆ ಪಡಬೇಕಿಲ್ಲಿ. ಯಾಕಂದ್ರೆ ಇನ್ನೊಂದಷ್ಟು ವರ್ಷ ಕಳೆದ ಬಳಿಕ ಸುದೀರ್ಘ ಏಕಾಂತದಲ್ಲಿ ಮಾಗಿದ ರಮ್ಯಾ ಆ ವಯಸ್ಸಿಗೊಪ್ಪುವ ಪಾತ್ರದ ಮೂಲಕ ಸರ್‌ಪ್ರೈಸ್ ಕೊಡೋ ಸಾಧ್ಯತೆಗಳಿದ್ದಾವೆ!

About The Author