ರಹಗಾರರಿಗೆ ಸೂಕ್ತ ಅವಕಾಶ ಕಲ್ಪಿಸಿದರೆ ಮಾತ್ರವೇ ಸಿನಿಮಾ ರಂಗವೊಂದು ಏಳಿಗೆ ಕಾಣಲು ಸಾಧ್ಯ. ಹೊಸಾ ಆಲೋಚನೆ, ಕಂಟೆಂಟು ಹುಟ್ಟದೇ ಹೋದರೆ ಯಾವ ಹೈಪು, ಅದ್ದೂರಿತನಗಳೂ ಬರಖತ್ತಾಗೋದಿಲ್ಲ ಎಂಬ ಸತ್ಯ ಈಗಾಗಲೇ ಸಾಬೀತಾಗಿದೆ. ಹೀಗಿರೋದರಿಂದಲೇ ಯುವ ಆವೇಗದ ಬರಹಗಾರರು ಆಗಮಿಸಿದಾಗ ಪ್ರೇಕ್ಷಕ ವಲಯದಲ್ಲಿ ಸಹಜವಾಗಿಯೇ ನಿರೀಕ್ಷೆಗಳು ಮೊಳೆತುಕೊಳ್ಳುತ್ತವೆ. ಇದೀಗ ತೆರೆಗಾಣುವ ಸನ್ನಾಹದಲ್ಲಿರುವ (guns and roses movie) `ಗನ್ಸ್ ಅಂಡ್ ರೋಸಸ್’ ಮೂಲಕ (sharath) ಶರತ್ ಎಂಬ ಯುವ ಕಥೆಗಾರನ ಆಗಮನವಾಗುತ್ತಿದೆ. ವಿಶೇಷವೆಂದರೆ, ಮೊದಲ ಹೆಜ್ಜೆಯಲ್ಲಿಯೇ (cinima writer sharath) ಶರತ್ ಪಕ್ಕಾ ಕಮರ್ಶಿಯಲ್ ಧಾಟಿಯ, ಸಾಮಾಜಿಕ ಕಳಕಳಿ ಹೊಂದಿರೋ ಕಥೆಯನ್ನು ಮುಟ್ಟಿದ್ದಾರೆ!

ದೇವನಹಳ್ಳಿಯ ಒಡಲಲ್ಲಿರೋ ಭಟ್ರೇನಹಳ್ಳಿ ಎಂಬೂರಿನ ರೈತಾಪಿ ವರ್ಗದಿಂದ ಬಂದವರು ಶರತ್. ಈವತ್ತಿಗೂ ಕೃಷಿಯೇ ಇವರ ತಂದೆ ಮತ್ತು ಕುಟುಂಬದ ಮೂಲ ಆಧಾರ. ಅಂಥಾ ರೈತಾಪಿ ಬದುಕು ಕರುಣಿಸಿದ ಸಂವೇದನೆಯ ಪಸೆಯನ್ನು ಮನಸಲ್ಲಿಟ್ಟುಕೊಂಡಿರುವ ಶರತ್ ಪಾಲಿಗೆ ಸಿನಿಮಾ ಅನ್ನೋದು ಎಳವೆಯಿಂದಲೇ ಆವರಿಸಿಕೊಂಡಿದ್ದ ಮಾಯೆ. ಆದರೆ, ಇಂಥಾ ಕನಸಿನ ಹಾದಿ ನೇರವಾಗಿ ಗಾಂಧಿನಗರಕ್ಕೆ ತಂದು ನಿಲ್ಲಿಸುವುದಿಲ್ಲ. ಬದುಕಿನ ಅನಿವಾರ್ಯತೆ ಯಾವತ್ತಿದ್ದರೂ ಕನಸಿಗೆ ವಿರುದ್ಧ ದಿಕ್ಕಿನಲ್ಲಿರುತ್ತೆ. ಅಂಥಾದ್ದೊಂದು ಅನಿವಾರ್ಯತೆಗೆ ಸಿಕ್ಕಿ ಐಟಿ ವಲಯದಲ್ಲಿ ಉದ್ಯೋಗ ಆರಂಭಿಸಿದ್ದವರು ಶರತ್. ಕಂಫರ್ಟ್ ಜೋನಿನಲ್ಲಿ ಜೀವನವನ್ನು ಪ್ರತಿಷ್ಠಾಪಿಸಿಕೊಳ್ಳುವ ಉಮೇದು ಹೊಂದಿರುವವರಿಗೆ ಏನೂ ತೊಂದರೆಯಿಲ್ಲದ ಕೆಲಸವದು. ಆದರೆ, ಒಂದು ಹಂತದಲ್ಲಿ ಶರತ್ ಪಾಲಿಗೆ ಕೈ ತುಂಬಾ ಸಂಬಳ ತರುವ ಕೆಲಸಕ್ಕಿಂತ, ಎದೆಯಲ್ಲಿದ್ದ ಕನಸನ್ನು ನನಸು ಮಾಡಿಕೊಳ್ಳೋದೇ ಒಳಿತೆನ್ನಿಸಿತ್ತು.

ಹಾಗೊಂದು ನಿರ್ಧಾರ ತಳೆಯುತ್ತಲೇ ಇನ್ನು ಮುಂದಿನ ಬದುಕೇನಿದ್ದರೂ ಸಿನಿಮಾಕ್ಕಾಗಿಯೇ ಮುಡಿಪೆಂಬ ದೃಢ ನಿರ್ಧಾರವೂ ಅವರೊಳಗೆ ಹದಗೊಂಡಿತ್ತು. ಆ ಕ್ಷಣದಲ್ಲಿಮ ಎದುರಾದದ್ದು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಹೇಗೆಂಬ ಯಕ್ಷ ಪ್ರಶ್ನೆ. ಆ ಹೊತ್ತಿನಲ್ಲಿ ಒಂದು ಕಾಲದಲ್ಲಿ ಕಥೆಗಾರರಾದ ಅಜಯ್ ಕುಮಾರ್ ಅವರ ಬಳಿ ಕೆಲಸ ಮಾಡಿದ್ದ ತನ್ನ ಮಾವನ ಮೂಲಕವೇ ದಾರಿ ತೆರೆದುಕೊಂಡೀತೆಂಬ ಆಸೆಯೊಂದು ಶರತ್ ರೊಳಗೆ ಮೂಡಿಕೊಂಡಿತ್ತು. ಆ ದಿಕ್ಕಿನಲ್ಲಿ ಪ್ರಯತ್ನಿಸಿದಾಗ ಅಜಯ್ ಕುಮಾರ್ ಅವರ ಗರಡು ಸೇರಿಕೊಳ್ಳುವ ಸದವಕಾಶ ಬಂದಿತ್ತು. ಹಾಗೆ ಅಜಯ್ ಕುಮಾರ್ ಬಳಿ ಕಸುಬು ಕಲಿಯಲಾರಂಭಿಸಿದ್ದ ಶರತ್, ಎರಡು ವರ್ಷಗಳ ಕಾಲ ಅದನ್ನು ಧ್ಯಾನದಂತೆ ಆವಾಹಿಸಿಕೊಂಡಿದ್ದರು. ಕಡೆಗೂ ಗುರುಗಳಾದ ಅಜಯ್ ಕುಮಾರ್ ಕಡೆಯಿಂದಲೇ ಅಚ್ಚರಿದಾಯಕ ಅವಕಾಶವೊಂದು ಅಚಾನಕ್ಕಾಗಿ ಒಲಿದು ಬಂದಿತ್ತು!

ಅಜಯ್ ಕುಮಾರ್ ಮಗ ಅರ್ಜುನ್ ನಾಯಕನಾಗಿ ನಟಿಸಲಿರೋ ಚಿತ್ರದ ತಯಾರಿ ನಡೆದಿದ್ದ ಕಾಲವದು. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅದನ್ನು ನಿರ್ದೇಶನ ಮಾಡೋದು ನಿಕ್ಕಿಯಾಗಿತ್ತು. ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಲು ತಯಾರಾಗಿದ್ದರು. ಈ ಹಂತದಲ್ಲಿ ಒಂದೊಳ್ಳೆ ಕಥೆ ರೆಡಿ ಮಾಡುವಂತೆ ಅಜಯ್ ಕುಮಾರ್ ತಮ್ಮ ಶಿಷ್ಯ ಶರತ್ ಗೆ ಸೂಚಿಸಿದ್ದರು. ಅದು ಶರತ್ ಪಾಲಿಗೆ ಬಯಸದೇ ಬಂದ ಭಾಗ್ಯ. ಹಾಗೊಂದು ಅವಕಾಶ ಬರುವ ಹೊತ್ತಿನಲ್ಲಿ ಸ್ಯಾಂಡಲ್ ವುಡ್ಡಿನಲ್ಲಿ ಡ್ರಗ್ಸ್‌ವಿಚಾರದ ಚರ್ಚೆ ನಡೆಯುತ್ತಿತ್ತು. ಬಾಲಿವುಡ್ಡಿನ ಖ್ಯಾತ ನಟನೊಬ್ಬನ ಪುತ್ರ ಡ್ರಗ್ಸ್ ಪಾರ್ಟಿ ಮಾಡಿ ತಗುಲಿಕೊಂಡಿದ್ದ. ಅದೆಲ್ಲದರಿಂದಾಗಿ ಕಥಾ ಎಳೆಯೊಂದನ್ನು ಸಿದ್ಧಪಡಿಸಿಕೊಂಡ ಶರತ್, ನಾನಾ ಮಾಹಿತಿಗಳನ್ನು ಕಲೆಹಾಕಿ, ಭೂಗತ ಜಗತ್ತು, ಡ್ರಗ್ಸ್ ಮಾಫಿಯಾ ಮತ್ತು ಪ್ರೇಮ ಕಥಾನಕದ ಸಾಲಿಡ್ ಸ್ಟೋರಿಯೊಂದನ್ನು ಸಿದ್ಧಪಡಿಸಿದ್ದರು.

ಈ ಕಥೆ ತಯಾರಾಗುವ ಪ್ರತೀ ಹಂತದಲ್ಲಿಯೂ ಅಜಯ್ ಕುಮಾರ್ ಮಾರ್ಗದರ್ಶನ ನೀಡಿದ್ದರಂತೆ. ಕಡೆಗೆ ನಿರ್ಮಾಪಕರಿಗೂ ಕೂಡಾ ಈ ಕಥೆ ಇಷ್ಟವಾದದ್ದೇ ಗನ್ಸ್ ಅಂಡ್ ರೋಸಸ್ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಈಗಾಗಲೇ ಟೀಸರಿನಲ್ಲಿ ಕಾಣಿಸಿಕೊಂಡಿರುವ ಒಂದಷ್ಟು ಅಂಶಗಳು, ಮತ್ತು ಚಿತ್ರತಂಡ ಹೇಳಿಕೊಂಡಿರುವ ವಿಚಾರಗಳ ಮೂಲಕ ಸದರಿ ಕಥನದ ಬಗ್ಗೆ ಕುತೂಹಲ ಮೂಡಿಕೊಂಡಿದೆ. ಈ ಮೂಲಕ ಕಥೆಗಾರನಾಗಿ ನೆಲೆ ಕಾಣುವ ಆಸೆ ಹೊಂದಿರುವ ಶರತ್ ಪಾಲಿಗೆ ನಿರ್ದೇಶಕನಾಗಬೇಕೆಂಬ ಕನಸಿದೆ. ಬಹುಶಃ ಆ ಕನಸಿಗೆ ಗನ್ಸ್ ಅಂಡ್ ರೋಸಸ್ ಮೂಲಕ ಮತ್ತಷ್ಟು ಬಲ ಬರೋದು ನಿಕ್ಕಿ. ಕೆಟ್ಟದ್ದು ಮಾಡೋದೇ ಫ್ಯಾಶನ್ ಆಗಿರುವ ಈ ಹೊತ್ತಿನಲ್ಲಿ ಯುವ ಸಮುದಾಯ ಯಾವ ಬಿಂದುವಿನಲ್ಲಿ ಹಾದಿ ತಪ್ಪುತ್ತಿದೆ, ಅದಕ್ಕೆ ಕಾರಣಗಳೇನು, ಅಂಥಾದ್ದರ ಹಿಂದೆ ಹೋದರೆ ಏನಾಗುತ್ತದೆ ಅನ್ನೋದನ್ನೆಲ್ಲ ಬೆರೆಸಿ, ಕಮರ್ಶಿಯಲ್ ಅಂಶಗಳು ಧಾರಾಳವಾಗಿರುವಂತೆ ಶರತ್ ಈ ಕಥೆ ಸೃಷ್ಟಿಸಿದ್ದಾರಂತೆ.

ನಿಖರವಾಗಿ ಹೇಳಬೇಕೆಂದರೆ, ಇದು ಗಟ್ಟಿ ಕಂಟೆಂಟು ಹೊಂದಿರುವ ಪಕ್ಕಾ ಕಮರ್ಶಿಯಲ್ ಚಿತ್ರ. ಈ ಮೂಲಕ ಎರಡು ವರ್ಷಗಳಿಂದ ಆವರಿಸಿಕೊಂಡಿದ್ದ ಗೊಂದಲ, ಅವಮಾನಗಳ ಪರ್ವವನ್ನು ಶರತ್ ದಾಟಿಕೊಂಡಿದ್ದಾರೆ. ಐಟಿ ಕ್ಷೇತ್ರದಲ್ಲಿನ ಒಳ್ಳೆ ಉದ್ಯೋಗ ಬಿಟ್ಟು ಸಿನಿಮಾ ಚುಂಗು ಹಿಡಿದು ಹೊರಟಿದ್ದ ಈ ಹುಡುಗನನ್ನು ಅವಮಾನಗಳು ಬಾಧಿಸಿದ್ದವು. ಊರ ಕಡೆ, ಸಂಬಂಧಿಕರ ವಲಯದಲ್ಲಿ ವಿಚಿತ್ರ ನೋಟ ಬೀರುವವರ ಸಂಖ್ಯೆ ಹೆಚ್ಚಿಕೊಂಡಿತ್ತು. ಆದರೆ, ಸಿನಿಮಾ ರಂಗದಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಛಾತಿಕ ಇದ್ದ ಶರತ್ ಅದೆಲ್ಲವನ್ನೂ ಕಡೆಗಣಿಸಿ ಸಾಗಿ ಬಂದಿದ್ದರು. ರೈತಾಪಿ ಬದುಕು ಕೊಡಮಾಡಿದ ಗಟ್ಟಿತನ, ಆತ್ಮಾಭಿಮಾನ, ಸ್ವಾಭಿಮಾನಗಳನ್ನೇ ಇಂಧನವಾಗಿಸಿಕೊಂಡ ಶರತ್ ಸಿನಿಮಾ ಯಾನ ಗನ್ಸ್ ಅಂಡ್ ರೋಸಸ್ ಮೂಲಕ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಗಳಿವೆ.

ಕಂಪ್ಯೂಟರ್ ಸೈನ್ಸ್ ಬಿಎಸ್‌ಸಿ ಪದವಿ ಪಡೆದುಕೊಂಡಿದ್ದ ಶರತ್ ಪಾಲಿಗೆ ಸಿನಿಮಾಕ್ಕಿಂತಲೂ ತೀವ್ರವಾಗಿ ಕಾಡಿದ್ದದ್ದು ಕ್ರಿಕೆಟ್ ಆಸಕ್ತಿ. ಆ ಕನಸಿಂದಲೇ ಬಸವನಗುಡಿಯ ನ್ಯಾಷನಲ್ ಕಾಲೇಜು ಸೇರಿಕೊಂಡಿದ್ದ ಶರತ್ ಒಳ್ಳೆ ಆಟಗಾರ. ಕೆಸಿಎಗೆ ಆಡಿ ಸೈ ಅನ್ನಿಸಿಕೊಂಡರೂ, ಆಯ್ಕೆಯ ವಿಚಾರದಲ್ಲಿ ಕಣ್ಣೆದುರೇ ದೋಖಾ ನಡೆದದ್ದನ್ನು ಕಂಡು ಶರತ್ ಆಘಾತಗೊಂಡಿದ್ದರು. ಕಡೇಗೆ ಇದು ಕಾಸು, ಪ್ರಭಾವ ಇರುವವರಿಗೆ ಮಾತ್ರವೇ ಕೈಗೆಟುಕಬಹುದಾದ ಕನಸೆಂಬ ವಿಚಾರ ಅವರಿಗೆ ಸ್ಪಷ್ಟವಾಗಿತ್ತು. ನಂತರ ಕ್ರಿಕೆಟ್ಟಿನ ಜೊತೆಗೇ ಕಾಡಿದ್ದ ಸಿನಿಮಾ ಕನಸಿನ ಚುಂಗು ಹಿಡಿದು ಹೊರಟಿದ್ದ ಶರತ್ ಈಗ ಬಹುಮುಖ್ಯ ಹಂತ ತಲುಪಿಕೊಂಡಿದ್ದಾರೆ. ಗನ್ಸ್ ಅಂಡ್ ರೋಸಸ್ ಮೂಲಕ ತನ್ನ ಮುಂದಿನ ಹೆಜ್ಜೆಗಳಿಗೆ ಮತ್ತಷ್ಟು ಬಲ ಬರುವ ನಂಬಿಕೆ ಅವರಲ್ಲಿದೆ. ಅಜಯ್ ಕುಮಾರ್ ಅವರನ್ನು ಗುರು ಮತ್ತು ಗಾಡ್ ಫಾದರ್ ಅಂದುಕೊಂಡಿರುವ ಶರತ್ ಅವರ ಇಷಾರೆಯಂತೆಯೇ ಮುಂದಿನ ನಡೆ ಅನುಸರಿಸುವ ಯೋಜನೆಯಲ್ಲಿದ್ದಾರೆ.

ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಹೆಚ್.ಆರ್ ನಟರಾಜ್ ಅಂಥಾದ್ದೊಂದು ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಙ್ರಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ ೩ರಂದು ತೆರೆಗಾಣಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!