ಬಾಹುಬಲಿಯಂಥಾ (bahubali movie)  ದೊಡ್ಡ ಮಟ್ಟದ ಗೆಲುವು ಸಿಕ್ಕ ಮೇಲೆ (prabhas) ಪ್ರಭಾಸ್ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ ಅಂತ ಕೋಟ್ಯಂತರ ಅಭಿಮಾನಿಗಳು ಅಂದುಕೊಂಡಿದ್ದರು. ಸಿನಿಮಾ ಪ್ರೇಮಿಗಳು, ಪಂಡಿತರ ಅಭಿಪ್ರಾಯವೂ ಅದೇ ಆಗಿದ್ದಿದ್ದರಲ್ಲಿ ಅಚ್ಚರಿಯೇನಿಲ್ಲ. ಅಷ್ಟಕ್ಕೂ ಅದೇನು ಸಣ್ಣ ಮಟ್ಟದ ಗೆಲುವೇ? ಆದರೆ, ಅಂಥಾ ಮಹಾ ಗೆಲುವೊಂದನ್ನು ಮುನ್ನಡೆಸಿಕೊಂಡು ಹೋಗಲಾರದ ದುರಂತ ನಾಯಕನಂತೆ ಪ್ರಭಾಸ್ ಬಿಂಬಿಸಲ್ಪಟ್ಟಿದ್ದಾರೆ. ಪ್ರಭಾಸ್ ವೃತ್ತಿ ಬದುಕಿನಲ್ಲೀಗ ದೊಡ್ಡ ಗೆಲುವಿನ ಮುಂದುವರೆದ ಹಾದಿಯ ತುಂಬೆಲ್ಲ, ಸರಣಿ ಸೋಲಿನ ಮಂಜು ಮುಸುಕಿಕೊಂಡಿದೆ. ಇದೆಲ್ಲದರ ನಡುವೆ, ಅನಾರೋಗ್ಯವೂ ಕಾಡಿ ಪ್ರಭಾಸ್ ಅಕ್ಷರಶಃ ಹೈರಾಣಾಗಿದ್ದಾನೆ. ಅಂಥಾ ಎಲ್ಲ ಯಾತನೆಗಳನ್ನೂ ಕೊಡವಿಕೊಂಡು, ಮತ್ತೆ ಗೆಲುವು ದಕ್ಕಿಸಿಕೊಳ್ಳುವ ಛಲದೊಂದಿಗೆ ಆತ ಕಲ್ಕಿಯ ಅವತಾರವೆತ್ತಿದ್ದಾನೆ!

ಕಲ್ಕಿ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಚಿತ್ರ. ಆತನ ಅಭಿಮಾನಿ ಬಳಗ ಎಲ್ಲ ಆಘಾತ, ನಿರಾಸೆ, ಅವಮಾನಗಳಾಚೆಗೂ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿಟ್ಟುಕೊಂಡು ಕಾಯುತ್ತಿದ್ದಾರೆ. ಈವರೆಗಿನ ಸಿನಿಮಾಗಳಿಗೆ ಹೋಲಿಸಿದರೆ, ಕಲ್ಕಿ ಬಗ್ಗೆ ಬೇರೆಯದ್ದೇ ತೆರನಾದ ಭರವಸೆ ಮೂಡಿಕೊಳ್ಳುತ್ತೆ. ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಾಗ್ ಅಶ್ವಿನ್ ರೆಡ್ಡಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಿಂದೂ ಧರ್ಮದ ಐತಿಹ್ಯದ ಕೆಲ ಮಜಲುಗಳನ್ನು ಒಳಗೊಂಡಿರುವ ಈ ಚಿತ್ರ ಈಗಾಗಲೇ ಬೃಹತ್ ಬಜೆಟ್ ಕಾರಣದಿಂದ ಭಾರೀ ಸದ್ದು ಮಾಡುತ್ತಿದೆ. ಅದರ ತಾರಾ ಬಳಗವೇ ಪ್ರೇಕ್ಷಕರನ್ನೆಲ್ಲ ಅವಾಕ್ಕಾಗಿಸಿ ಬಿಟ್ಟಿದೆ.

ಹಾಗೆ ನೋಡಿದರೆ, ಕಲ್ಕಿ ಚಿತ್ರ ಹಂತ ಹಂತವಾಗಿ ಸುದ್ದಿ ಮಾಡಿಕೊಂಡೇ ಸಾಗಿ ಬರುತ್ತಿದೆ. ಇದುವರೆಗೂ ಕಂಡು ಕೇಳರಿಯದ ರೀತಿಯಲ್ಲಿ ವಿ ಎಫ್ ಎಕ್ಸ್ ಕಮಾಲ್ ನಡೆಸಲಾಗುತ್ತದೆ ಎಂಬ ಸುದ್ದಿಯೂ ಹಬ್ಬಿಕೊಂಡಿದೆ. ಅದರಲ್ಲಿಯೂ ವಿಶೇಷವಾಗಿ, ಇದೀಗ ಕಲ್ಕಿಯ ಕ್ಲೈಮ್ಯಾಕ್ಸಿಗೆ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವಾರದಿಂದಲೇ ಈ ಚಿತ್ರೀಕರಣ ಶುರುವಾಗಲಿದೆ. ಇದರಲ್ಲಿ ಪಾಲ್ಗೊಳ್ಳಲಿರುವ ತಾರಾ ಬಳಗಗವಂತೂ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂತಿದೆ. ಪ್ರಭಾಸ್ ಜೊತೆಗೆ ಕಮಲ್ ಹಾಸನ್, ಅಮಿತಾಭ್ ಬಚ್ಚನ್, ದಿಶಾ ಪಟಾಣಿ, ದೀಪಾಕಾ ಪಡುಕೋಣೆ, ದುಲ್ಕರ್ ಸಲ್ಮಾನ್, ನಾನಿ, ವಿಜಯ್ ದೇವರಕೊಂಡ ಸೇರಿದಂತೆ ಸ್ಟಾರ್ ಗಳ ಜಾತ್ರೆಯೇ ನೆರೆಯಲಿದೆ. ಹಾಗಿದ್ದ ಮೇಲೆ, ಈ ಸಿನಿಮಾ ಬಗ್ಗೆ ಪ್ಯಾನಿಂಡಿಯಾ ಲೆವೆಲ್ಲಿನಲ್ಲೊಂದು ಹಂಗಾಮ ಸೃಷ್ಟಿಯಾಗೋದರಲ್ಲಿ ಅನುಮಾನವೇನಿಲ್ಲ!

About The Author