ಸಿನಿಮಾದಿಂದ ಸಿನಿಮಾಕ್ಕೆ ಹೊಸಾ ಸಾಧ್ಯತೆಗಳತ್ತ ತೆರೆದುಕೊಳ್ಳುವವರು (kamal hassan) ಕಮಲ್ ಹಾಸನ್. ಬಹುಶಃ ಅಂಥಾ ಗುಣವಿಲ್ಲದೇ ಹೋಗಿದ್ದರೆ ಇಷ್ಟೊಂದು ಸುದೀರ್ಘಾವಧಿಯ ಬಳಿಕವೂ ಕಮಲ್ (kamal) ಪ್ರಸ್ತುತವಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಒಂದು ಸೋಲೆದುರಾದಾಗಲೂ, ಮತ್ತೊಂದು ಮಹಾ ಗೆಲುವಿನ ಮೂಲಕ ಸೆಡ್ಡು ಹೊಡೆಯುವ ಛಾತಿ, ತನ್ನ ಕಿಮ್ಮತ್ತಿಗನುಗುಣವಾದ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುವ ರೀತಿಗಳೆಲ್ಲವೂ ಕಮಲ್ ಬದುಕಿನ ಹಾಡಿಯ ತುಂಬೆಲ್ಲ ಅಚ್ಚರಿಯಂತೆ ಹಬ್ಬಿಕೊಂಡಿವೆ. ಬಹುಶಃ ಈ ಕಾರಣದಿಂದಲೇ ಕಮಲ್ ಚಿತ್ರಗಳಿಗಾಗಿ ಕಾದು ಕೂರುವ ಬಹುದೊಡ್ಡ ಪಡೆಯೊಂದು ದೇಶವ್ಯಾಪಿ ಹಬ್ಬಿಕೊಂಡಿದೆ. ಅಂಥವರೆಲ್ಲ ಸದ್ಯ (indian2) `ಇಂಡಿಯನ್೨’ ಚಿತ್ರದತ್ತ ಕಣ್ಣಿಟ್ಟು ಕಾದು ಕೂತಿದ್ದಾರೆ!

ಅಂದಹಾಗೆ, ಇಂಡಿಯನ್೨ (indian2) ಮೂಲಕ ತಮಿಳಿನ ಪ್ರಖ್ಯಾತ ನಿರ್ದೇಶಕ (shankar) ಶಂಕರ್ ಮತ್ತು ಕಮಲ್ ಹಾಸನ್ ಇಪ್ಪತೈದು ವರ್ಷಗಳ ನಂತರ ಜೊತೆಗೂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ೨೦೦೧ರ ಸುಮಾರಿಗೆ ಇಂಡಿಯನ್ ಎಂಬ ಚಿತ್ರ ತೆರೆಗಂಡಿತ್ತು. ಆ ಕಾಲದಲ್ಲದು ಸೂಪರ್ ಹಿಟ್ ಆಗಿದ್ದೀಗ ಇತಿಹಾಸ. ಆ ನಂತರದಲ್ಲಿ ಪ್ರೇಕ್ಷಕರು ಇವರಿಬ್ಬರೂ ಒಂದುಗೂಡಿ ಮತ್ತೊಂದು ಚಿತ್ರ ಮಾಡಲೆಂದು ಆಶಿಸಿದ್ದರು. ಆದರೆ, ಇಪ್ಪತೈದು ವರ್ಷಗಳ ಕಾಲ ಅದು ಕೈಗೂಡಿರಲಿಲ್ಲ. ಅಂತೂ ಈಗ ಇಂಡಿಯನ್೨ ಮೂಲಕ ಆ ಆಸೆ ಕೈಗೂಡಿದೆ. ಸದರಿ ಸಿನಿಮಾದ ಭೂಮಿಕೆಯಿಂದ ಇದೀಗ ರೋಮಾಂಚಕ ಸಂಗತಿಯೊಂದು ಜಾಹೀರಾಗಿದೆ.

ಹಾಗೆ ಹೊರ ಬಂದಿರೋ ಸುದ್ದಿಯನ್ನಾಧರಿಸಿ ಹೇಳೋದಾದರೆ, ಇಂಡಿಯನ್೨ ಚಿತ್ರದ ಡಿಜಿಟಲ್ ಹಕ್ಕುಗಳು ಭರ್ತಿ ಇನ್ನೂರು ಕೋಟಿಗೆ ಮಾರಾಟವಾಗಿದೆ. ಈ ಮೂಲಕ ಈ ಚಿತ್ರ ಆರಂಭಿಕ ಹೆಜ್ಜೆಯಲ್ಲಿಯೇ ದಾಖಲೆ ಬರೆದಿದೆ. ಇತ್ತೀಚಿನ ವರ್ಷಗಳಲ್ಲಿ ಕೊಂಚ ಮಂಕಾದಂತಿದ್ದ ಕಮಲ್ ಇತ್ತೀಚೆಗೆ ತೆರೆ ಕಂಡಿದ್ದ ವಿಕ್ರಮ್ ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದರು. ಅದರ ಬೆನ್ನಲ್ಲಿಯೇ ಇದೀಗ ಇಂಡಿಯನ್೨ ಚಿತ್ರದ ಸದ್ದು ಮೊರೆಯಲಾರಂಭಿಸಿದೆ. ಶಂಕರ್ ಎಂಬೋ ಬ್ರಾಂಡ್ ಮತ್ತು ಕಮಲ್ ಹಾಸನ್‌ರಂಥಾ ಮಹಾನ್ ನಟನ ಸಮಾಗಮದ ಚಿತ್ರವೆಂದ ಮೇಲೆ ಅದು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸೋದಂತೂ ಖರೇ!

About The Author