ದೇನು ದುರಂತವೋ ಗೊತ್ತಿಲ್ಲ; ಕೆಲ ನಟರು ಎಲ್ಲ ರೀತಿಯಿಂದಲೂ ಅರ್ಹರಾಗಿದ್ದರೂ ಕೂಡಾ ಒಂದು ಬ್ರೇಕ್‍ಗಾಗಿ ವರ್ಷಗಟ್ಟಲೆ ಸೈಕಲ್ಲು ಹೊಡೆದು ಸರ್ಕಸ್ಸು ನಡೆಸಬೇಕಾಗುತ್ತೆ. ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳೋದಾದರೆ, ಈ ಮಾತಿಗೆ ಉದಾಹರಣೆಯಾಗಿ ನಿಲ್ಲಬಲ್ಲ ನಟರದ್ದೊಂದು ದಂಡೇ ಇದೆ. ಆ ಯಾದಿಗೆ ಇತ್ತೀಚಿನ ಸೇರ್ಪಡೆಯಂತಿದ್ದ ಹುಡುಗ ರಾಕೇಶ್ ಅಡಿಗ. (rakesh adiga) ಚುರುಕು ಸ್ವಭಾವದ, ಪ್ರತಿಭಾವಂತನೂ ಆಗಿರುವ ರಾಕೇಶ್ ಈವರೆಗೂ ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾನಾದರೂ ಹೇಳಿಕೊಳ್ಳುವಂಥಾ ಗೆಲುವು ಕೈ ಹಿಡಿಯಲಿಲ್ಲ. ಇಂಥಾ ವಾತಾವರಣದಲ್ಲಿಯೇ ರಾಕೇಶ್ ಏಕಾಏಕಿ ಕಾಕ್ರೋಚ್ (cacroch) ಅವತಾರವೆತ್ತಿದ್ದಾನೆ!

ಈ ಬಾರಿಯ ಬಿಗ್‍ಬಾಸ್‍ನ ಓಟಿಟಿ ಅವತರಣಿಕೆಯಲ್ಲಿ ಸ್ಪರ್ಧಿಯಾಗಿದ್ದಾತ (rakesh adiga) ರಾಕೇಶ್ ಅಡಿಗ. ಸೋನು ಗೌಡಳ (sonu gowda) ಹಿಂದೆ ಸುತ್ತಿ ರಂಕಲು ಮಾಡಿಕೊಂಡರೂ ಒಂದಷ್ಟು ಚೆಂದಗೆ ಆಡಿದ್ದ ಈತ ಸೀಜನ್9ಗೂ ಪಾದಾರ್ಪಣೆ ಮಾಡಿದ್ದ. ಅಲ್ಲಿಯೂ ಸ್ತ್ರೀ ಸೌಖ್ಯದ ಹಂಬಲದಲ್ಲಿ ಅಡ್ಡಾಡುತ್ತಾ, ಪ್ರೇಕ್ಷಕರಿಂದ ಒಂದಷ್ಟು ಉಗಿಸಿಕೊಂಡಿದ್ದ ರಾಕೇಶ್ ಅಡಿಗ, ಆಟದ ವಿಚಾರಕ್ಕೆ ಬಂದಾಗ ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದ. ಆ ದೆಸೆಯಿಂದಲೇ ಫೈನಲ್ ವರೆಗೂ ತಲುಪಿಕೊಂಡು ರನ್ನರ್ ಅಪ್ ಆಗಿ ಹೊರಬಿದ್ದಿದ್ದ. ಹಾಗೆ ಬಿಗ್‍ಬಾಸ್ ಮುಗಿಸಿಕೊಂಡು ಬಂದ ರಾಕೇಶ್ ಎಲ್ಲಿ ಹೋದ ಅಂತ ಒಂದಷ್ಟು ಮಂದಿ ಹುಡುಕುತ್ತಿರುವಾಗಲೇ ಆತ ತನ್ನ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಹರಿಯಬಿಟ್ಟಿದ್ದಾನೆ.

ಅದರನ್ವಯ ಹೇಳೋದಾದರೆ, ರಾಕೇಶ್ ಅಡಿಗ ಈಗ ಕಾಕ್ರೋಚ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾನೆ. ವಿಶೇಷವೆಂದರೆ, ಆ ಚಿತ್ರವನ್ನು ತಾನೇ ನಿರ್ದೇಶನ ಮಾಡಲು ಮುಂದಾಗಿದ್ದಾನೆ. ಇದರ ಬಗ್ಗೆ ದೊಡ್ಡ ಕನಸಿಟ್ಟುಕೊಂಡೇ ಅಖಾಡಕ್ಕಿಳಿದಿದ್ದಾನೆ. ಹಾಗೆ ನೋಡಿದರೆ, 2009ರಲ್ಲಿ ತೆರೆ ಕಂಡಿದ್ದ ಜೋಶ್ ಎಂಬ ಚಿತ್ರದ ನಾಯಕರಲ್ಲೊಬ್ಬನಾಗಿ ಕಾಣಿಸಿಕೊಂಡಿದ್ದ ರಾಕೇಶ್‍ಗೆ ಆ ನಂತರದ್ದೆಲ್ಲವೂ ಲತ್ತೆ ಪರ್ವ. ಜೋಶ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದನಾದರೂ ಹೇಳಿಕೊಳ್ಳುವಂಥಾ ಗೆಲುವು ಸಿಕ್ಕಿರಲಿಲ್ಲ. ಅದೆಲ್ಲದರಾಚೆಗೆ ಇದೀಗ ರಾಕೇಶ್ ಹೊಸಾ ಆವೇಗದೊಂದಿಗೆ ಮತ್ತೆ ಹಾಜರಾಗಿದ್ದಾನೆ. ಕಾಕ್ರೋಚ್ ಅವತಾರದಲ್ಲಾದರೂ ಆತನಿಗೆ ಭರ್ಜರಿ ಗೆಲುವು ಸಿಗಲೆಂಬುದು ಹಾರೈಕೆ!

About The Author