ತುಳುನಾಡಿನ ಅಸ್ಮಿತೆಯಂತಿರೋ ಕಂಬಳವೆಂಬುದು ಸದಾ ಸಿನಿಮಾ ಕ್ಷೇತ್ರದವರನ್ನು ಕಾಡುತ್ತಾ ಬಂದಿದೆ. ಆದರೆ, ಈ ವರೆಗೆ ಅಂಥಾ ಕೌತುಕ ಕೆಲವಾರು ದೃಷ್ಯಗಳಿಗೆ ಮಾತ್ರವೇ ಸೀಮಿತವಾಗಿದೆ. ಆದರೀಗ ರೋಚಕವಾದ ಕಥನದೊಂದಿಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಂಬಳದ ಕಣಕ್ಕಿಳಿದಿದ್ದಾರೆ. ಅದರ ಫಲವಾಗಿಯೇ ವೀರ ಕಂಬಳ ಚಿತ್ರವೀಗ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ. ರಾಜೇಂದ್ರ ಸಿಂಗ್ ಬಾಬು ಸಿನಿಮಾಗಳೆಂದರೆ, ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆಂಬುದು ಪ್ರೇಕ್ಷಕರಿಗೆಲ್ಲ ಗೊತ್ತಿರುವ ಸಂಗತಿ. ಪ್ರತೀ ಚಿತ್ರಗಳಲ್ಲಿಯೂ ಭಿನ್ನವಾದ ಕಥೆ ಕೈಗೆತ್ತಿಕೊಳ್ಳುವ ರಾಜೇಂದ್ರ ಸಿಂಗ್ ಬಾಬು, ಒಂದು ದಶಕಗಳ ಕುತೂಹಲದ ಸೆಳವಿಗೆ ಸಿಕ್ಕು, ವರ್ಷಗಟ್ಟಲೆ ಕಂಬಳವನ್ನೇ ಧ್ಯಾನಿಸುತ್ತಾ, ರೋಚಕ ಅಂಶಗಳೊಂದಿಗೆ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಈಗ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿರುವ ಈ ಚಿತ್ರ ನಾಳೆ ಅಂದರೆ, ಫೆಬ್ರವರಿ ೨೭ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ವೀರ ಕಂಬಳ ತುಳು ಭಾಷೆಯಲ್ಲಿ ಬಿರ್ದುದ ಕಂಬುಳ ಎಂಬ ಶೀರ್ಷಿಕೆಯಲ್ಲಿಯೂ ಬಿಡುಗಡೆಗೊಳ್ಳಲಿದೆ. ಸಾಮಾನ್ಯವಾಗಿ ಇಂಥಾ ನೆಲಮೂಲದ ಕ್ರೀಡೆಯೊಂದರ ಸುತ್ತಾ ಸಿನಿಮಾ ಮಾಡುವಾಗ ಅದಕ್ಕೆ ಸಂಬಂಧಿಸಿದ ಅತೀ ಸೂಕ್ಷ್ಮ ವಿಚಾರಗಳತ್ತಲೂ ಗಮನ ಹರಿಸಬೇಕಾಗುತ್ತದೆ. ಅದೇ ಹೊತ್ತಿನಲ್ಲಿ ಕಮರ್ಶಿಯಲ್ ಅಂಶದತ್ತಲೂ ಹೊರಳಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತೆ. ಹಾಗಂತ ಬೇಕಂತಲೇ ಕಮರ್ಶಿಯಲ್ ಲೇಪ ಹಚ್ಚಹೋದರೆ ಮೂಲ ಕಥನಕ್ಕೆ ಅಪಚಾರವೆಸಗಿದಂತಾಗೋ ಅಪಾಯವೂ ಇದ್ದೇ ಇದೆ. ಈ ಕಾರಣದಿಂದಲೇ ರಾಜೇಂದ್ರ ಸಿಂಗ್ ಬಾಬು ತುಳುನಾಡಿನ ಪ್ರಸಿದ್ಧ ರಂಗಭೂಮಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಅವರ ಸಹಾಯ ತೆಗೆದುಕೊಂಡಿದ್ದರು. ಕಂಬಳದ ಬಗ್ಗೆ ಅಮೂಲಾಗ್ರ ಮಾಹಿತಿ ಹೊಂದಿರುವ ಗುಣಪಾಲ್ ಕಡಂಬರ ಬಳಿ ಇಂಚಿಂಚು ಮಾಹಿತಿ ಕಲೆಹಾಕಿ ಈ ಸಿನಿಮಾದ ಕಥೆ ಸಿದ್ಧಪಡಿಸಿದ್ದಾರೆ.
ಹೀಗೆ ಎಲ್ಲ ಮಾಹಿತಿಗಳನ್ನು ಕ್ರೋಢೀಕರಿಸಿದ್ದ ರಾಜೇಂದ್ರ ಸಿಂಗ್ ಬಾಬು ಸರಿಕಟ್ಟಾದೊಂದು ಕಥೆ ಸಿದ್ಧಪಡಿಸಲು ಎರಡು ವರ್ಷಗಳ ಕಾಲ ಶ್ರಮ ವಹಿಸಿದ್ದಾರೆ. ಬಳಿಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಅವರಿಗೆ ಕಂಬಳದ ಗುಂಗು ಹತ್ತಿಕೊಳ್ಳಲು ಕಾರಣವಾಗಿರೋದು ದಕ್ಷಿಣ ಕನ್ನಡ ಭಾಗದೊಂದಿಗೆ ಅವರಿಗಿರುವ ಕಳ್ಳುಬಳ್ಳಿಯ ಸಂಬಂಧ. ಅವರ ತಾಯಿ ಉಡುಪಿಯವರು. ಎಳವೆಯಿಂದಲೇ ಉಡುಪಿ ಭಾಗಕ್ಕೆ ಭೇಟಿ ನೀಡುತ್ತಿದ್ದ ಅವರಿಗೆ ಕಂಬಳವೆಂಬುದು ಹಂತ ಹಂತವಾಗಿ ಕಾಡುತ್ತಾ ಬಂದಿತ್ತು. ಕಡೆಗೂ ದಶಕದ ಹಿಂದೆ ಕಂಬಳದ ಕುರಿತಾಗೊಂದು ಸಿನಿಮಾ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದ ರಾಜೇಂದ್ರ ಸಿಂಗ್ ಬಾಬು ಅವರು ಶ್ರಮವಹಿಸಿ ಈ ಚಿತ್ರವನ್ನು ರೂಪಿಸಿರುವ ತೃಪ್ತ ಭಾವ ಹೊಂದಿದ್ದಾರೆ.
ಸರಿಸುಮಾರು ಏಳುನೂರು ವರ್ಷಗಳಿಗೂ ಅಧಿಕ ಐತಿಹ್ಯ ಹೊಂದಿರುವ ಗ್ಯಾಮ್ಯ ಕ್ರೀಡೆ ವೀರ ಕಂಬಳ. ಆ ಕಾಲದಲ್ಲಿ ಯಾವ ಮನೋರಂಜನೆಗಳೂ ಇಲ್ಲದಿರೋ ಕಾರಣದಿಂದ ಕಂಬಳದ ಪರಿಪಾಠ ಶುರುವಾಯ್ತೆಂಬ ಉಲ್ಲೇಖವಿದೆ. ಬರಬರುತ್ತಾ ಅದರ ಸುತ್ತಾ ಒಂದಷ್ಟು ನಂಬಿಕೆಗಳು ಮತ್ತು ಮೂಢ ನಂಬಿಕೆಗಳೂ ಕೂಡಾ ಹೊಸೆದುಕೊಳ್ಳಲಾರಂಭಿಸಿದ್ದವು. ಎಪ್ಪತ್ತರ ದಶಕದಲ್ಲಿ ದೊಡ್ಡ ಮಟ್ಟದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ಮೂಲಕ ಅದು ರಾಜ್ಯಾದ್ಯಂತ ಪ್ರಚಾರ ಕಂಡಿತ್ತು. ಆ ಬಳಿಕ ಭೂಗತ ಜೀವಿ ಮುತ್ತಪ್ಪ ರೈ ಥರದವರು ಕಂಬಳವನ್ನು ಆಯೋಜಿಸಲಾರಂಭಿಸಿದ್ದರು. ಈ ಮೂಲಕ ಕಂಬಳದ ಅಂಗಣಕ್ಕೆ ದಾವೂದ್ ಇಬ್ರಾಹಿಂನಂಥಾ ಕ್ರಿಮಿಗಳ ಕಣ್ಣು ಬಿದ್ದ ಬಗೆಗಿನ ರೋಚಕ ಅಂಶಗಳು ಕಂಬಳ ಸುತ್ತ ಚದುರಿಕೊಂಡಿವೆ. ಅಂಥಾ ರಣ ರೋಚಕ ವಿಚಾರಗಳೊಂದಿಗೆ ರಾಜೇಂದ್ರ ಸಿಂಗ್ ಬಾಬು ಅವರು ಈ ಚಿತ್ರವನ್ನು ರೂಪಿಸಿದ್ದಾರಾ? ಈ ಪ್ರಶ್ನೆಗೆ ಈ ರಾತ್ರಿ ಕರಗಿ ಬೆಳಗು ಮೂಡುವ ಹೊತ್ತಿಗೆಲ್ಲ ನಿಖರ ಉತ್ತರ ಸಿಗಲಿದೆ!
ಈಗಾಗಲೇ ಒಂದಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರವನ್ನು ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ನಾರಾಯಣ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ಅವರ ವಸ್ತ್ರವಿನ್ಯಾಸ ಈ ಚಿತ್ರಕ್ಕಿದೆ.
keywords: veera kambala, rajendra singh babu, sandalwood

