ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗೆಗಿದ್ದ ಭಾರೀ ಕುತೂಹಲ ತಣಿದಿದೆ. ಈ ಹಿಂದೆ ಹಂತ ಹಂತವಾಗಿ ಟಾಕ್ಸಿಕ್ ಅಡ್ಡಾದಿಂದ ಒಂದಷ್ಟು ಅಂಶಗಳು ಜಾಹೀರಾಗಿದ್ದವು. ಆದರೆ, ಅವ್ಯಾವುವೂ ನಿರೀಕ್ಷೆಯ ಮಟ್ಟ ಮುಟ್ಟಿರಲಿಲ್ಲ. ಅದೂ ಕೂಡಾ ಟಾಕ್ಸಿಕ್ ಚಿತ್ರತಂಡದ ಬುದ್ಧಿವಂಕೆಯದ್ದೊಂದು ಭಾಗ ಎಂಬ ವಿಚಾರವೀಗ ಋಜುವಾತಾಗಿದೆ. ಏಕಾಏಕಿ ಬಿಡುಗಡೆಗೊಂಡಿರುವ ಟೀಸರ್ ಕಂಡವರೆಲ್ಲ ಅಕ್ಷರಶಃ ಥ್ರಿಲ್ ಆಗಿದ್ದಾರೆ. ಯಾಕೆಂದರೆ, ಯಾರೂ ಊಹಿಸಿರದ ರೀತಿಯಲ್ಲಿ ಟಾಕ್ಸಿಕ್ ಮೂಡಿ ಬಂದಿರೋ ಸ್ಪಷ್ಟ ಸೂಚನೆ ಸದರಿ ಟೀಸರ್ ಮೂಲಕ ಸಿಕ್ಕಿದಂತಾಗಿದೆ.
ಹಾಲಿವುಡ್ ಗುಣಮಟ್ಟದಿಂದ ಕೂಡಿರುವ ಈ ಟೀಸರ್ನಲ್ಲಿ ರಾಕಿಂಗ್ ಸ್ಟಾರ್ ಯಶ್ ಎಂಟ್ರಿ ಕಂಡು ಪ್ರೇಕ್ಷಕರು ಅವಾಕ್ಕಾಗಿದ್ದಾರೆ. ಈ ಹಿಂದೆ ಯಶ್ ಅವರದ್ದೊಂದು ಅವತಾರದ ಕ್ಲೂ ಕಡಲಾಗಿತ್ತು. ಈ ಟೀಸರ್ನಲ್ಲಿ ಅದರ ಮುಂದುವರೆದ ಭಾಗದಂತೆ ರಾಕಿ ಭಾಯ್ ಪಕ್ಕಾ ರಸಿಕನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಷ್ಯಗಳನ್ನು ರೋಮಾಂಚನಕಾರಿಯಾಗಿ ಕಟ್ಟಿ ಕೊಡುವ ಮೂಲಕ ನಿರ್ದೇಶಕಿ ಗೀತು ಮೋಹನ್ ದಾಸ್ ಕೂಡಾ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಮಹಿಳಾ ನಿರ್ದೇಶಕಿಯೋರ್ವರು ಮನಸು ಮಾಡಿದರೆ ಅದ್ಭುತವನ್ನೇ ಸೃಷ್ಟಿಸಬಹುದೆಂಬುದನ್ನು ಗೀತು ಕಾರ್ಯ ರೂಪದಲ್ಲಿಯೇ ತೋರಿಸಿ ಕೊಟ್ಟಿದ್ದಾರೆ.
ರಾಕಿ ಭಾಯ್ ಈ ಟೀಸರ್ನಲ್ಲಿ ಕೆಜಿಎಫ್ ಸರಣಿಯ ಕತ್ತಲ ಛಾಯೆಯಿಂದ ಕಳಚಿಕೊಂಡು, ಬೇರೊಂದು ಬಗೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳನ್ನು ಮಾತ್ರವಲ್ಲ; ಚೆಂದದ ಸಿನಿಮಾಗಳಿಗಾಗಿ ಸದಾ ಕಾದು ಕೂರುವ ಜಗತ್ತಿನ ಅಷ್ಟೂ ಸಿನಿಮಾ ಪ್ರೇಮಿಗಳನ್ನು ಯಶ್ ಸೆಳೆದಿದ್ದಾರೆ. ಒಂದು ಕಾಲದಲ್ಲಿ ಕನ್ನಡದ ಸೀಮಿತ ಪರಿಧಿಯಾಚೆಗೆ ಕೈ ಚಾಚಿ, ಪ್ಯಾನಿಂಡಿಯಾ ಸ್ಟಾರ್ ಆಗಿದ್ದವರು ಯಶ್. ಆ ಪಥದಲ್ಲಿ ಸರಣಿ ಗೆಲುವಿನ ಮೈಲಿಗಲ್ಲು ನೆಟ್ಟ ಬಳಿಕ ಅವರೀಗ ಪ್ಯಾನಿಂಡಿಯಾ ಪ್ರಭೆಯಾಚೆಗೂ ಕೈಚಾಚಿದ್ದಾರೆ. ಈ ಟೀಸರಿನಲ್ಲಿರು ಕ್ವಾಲಿಟಿ, ಬಿಗುವು ಒಂದಿಡೀ ಸಿನಿಮಾದಲ್ಲಿದ್ದರೆ ಯಶ್ ವಿಶ್ವ ಮಟ್ಟದಲ್ಲಿ ಎಲ್ಲ ನಟರನ್ನೂ ಹಿಂದಿಕ್ಕಿ ಮೆರೆಯೋದು ನಿಕ್ಕಿ!
keywords: toxic, teaser, yash, geethu mohan das, bollywood, sandalwood, mollywood

