ಇತ್ತೀಚೆಗಷ್ಟೇ ಲವ್ ಮಾಕ್ಟೇಲ್ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿಯೇ ಜಾಹೀರಾಗಿತ್ತು. ಡಾರ್ಲಿಂಗ್ ಕೃಷ್ಣ ಹೆಚ್ಚೇನೂ ಮಾಹಿತಿಗಳನ್ನು ಬಿಟ್ಟು ಕೊಡದೇ ಹೋದರೂ ಕೂಡಾ ಒಟ್ಟಾರೆ ಕಥನದ ಬಗ್ಗೆ ಒಂದಷ್ಟು ದಿಕ್ಕಿನ ಚರ್ಚೆಗಳಾಗಿದ್ದವು. ಇದೆಲ್ಲದರ ಬೆನ್ನಲ್ಲಿಯೇ ಇದೀಗ ಕಥೆಯ ಆತ್ಮವನ್ನೇ ಬಚ್ಚಿಟ್ಟುಕೊಂಡಂಥಾ ಚೆಂದದ ಹಾಡೊಂದು ಬಿಡುಗಡೆಗೊಂಡಿದೆ. ಮೊದಲೆರಡು ಭಗದಲ್ಲಿ ನವಿರು ಪ್ರೇಮದೊಂದಿಗೆ ಗೆದ್ದಿದ್ದ ಡಾರ್ಲಿಂಗ್ ಕೃಷ್ಣ ಈ ಬಾರಿ ಅಪ್ಪ ಮಗಳ ಬಾಂಧವ್ಯದ ಕಥೆಯನ್ನು ಕೇಂದ್ರವಾಗಿಟ್ಟುಕೊಂಡಂತಿದೆ. ಆ ಬಂಧದ ಮಧುರ ಭಾವಗಳನ್ನು ಬಚ್ಚಿಟ್ಟುಕೊಂಡಂತಿರುವ ಈ ಹಾಡೀಗ ಕ್ಷಣ ಕ್ಷಣಕ್ಕೂ ಹೆಚ್ಚೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಾ ಕೇಳುಗರನ್ನು ಪರವಶಗೊಳಿಸುತ್ತಿದೆ.
ನೀನೇ ನೀನೇನೆ ನನ್ನೆಲ್ಲ ಆಸೆ ಅಂತ ಶುರುವಾದ ಈ ಪಾಡಿನ ಪ್ರತೀ ಪಲುಕುಗಳಲ್ಲಿಯೂ ಮಗಳ ಮೇಲಿನ ಮಮಕಾರದ ಒರತೆಯಿದೆ. ಮೊದಲ ಸಲಕ್ಕೇ ಆವರಿಸಿಕೊಳ್ಳುವ ಗುಣ ಹೊಂದಿರುವ ಈ ಹಾಡನ್ನು ಶಶಾಂಕ್ ಬರೆದಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿ ಸ್ವತಃ ತಾವೇ ಹಾಡಿದ್ದಾರೆ. ಇದು ಲವ್ ಮಾಕ್ಟೇಲ್ ಚಿತ್ರದ ಮೊದಲ ಹಾಡು. ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೈಲ್ ಮೊದಲ ಕಂತಿನಿಂದಲೂ ಹಾಡುಗಳಿಗೆ ಒತ್ತು ಕೊಟ್ಟಿದ್ದರು. ಆ ಸಿನಿಮಾ ಗೆದ್ದಿದ್ದರ ಹಿಂದಿರುವ ನಿಜವಾದ ಕಸುವಿನಲ್ಲಿ ಹಾಡುಗಳದ್ದು ಸಿಂಹ ಪಾಲಾಗಿತ್ತು. ಈ ಕಾರಣದಿಂದಲೇ ಲವ್ ಮಾಕ್ಟೇಲ್೩ ಹಾಡುಗಳ ಬಗ್ಗೆ ಸಹಜವಾಗಿಯೇ ಕೌತುಕ ಮೂಡಿಕೊಂಡಿತ್ತು. ಈಗ ಬಿಡುಗಡೆಗೊಂಡಿರೋ ಹಾಡು ಅಂಥಾ ನಿರೀಕ್ಷೆ ಹೊಂದಿದ್ದವರನ್ನೆಲ್ಲ ಸಂತೃಪ್ತಗೊಳಿಸುವಂತಿದೆ.
Rukmini Vasanth’s Toxic Look: ಯಶ್ ಚಿತ್ರದಲ್ಲಿ ರುಕ್ಮಿಣಿಗೆ ಸಿಕ್ಕಿದ್ದು ಎಂಥಾ ಪಾತ್ರ?
ಲವ್ ಮಾಕ್ಟೇಲ್ ಚಿತ್ರದ ಮೂಲಕ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ಅಕ್ಷರಶಃ ಮೋಡಿ ಮಾಡಿತ್ತು. ಸಾಮಾನ್ಯವಾಗಿ ಒಂದು ಯಶಸ್ವೀ ಸಿನಿಮಾದ ಸರಣಿಗಳನ್ನು ಮಾಡುವಾಗ ನಾನಾ ಸವಾಲುಗಳು ಎದುರಾಗುತ್ತವೆ. ಮೊದಲ ಭಾಗವನ್ನೇ ಮೀರಿಸುವಂಥಾ ಕಂಟೆಂಟು ಇದ್ದರೆ ಮಾತ್ರವೇ ಗೆಲ್ಲಲು ಸಾಧ್ಯ. ಆ ನಿಟ್ಟಿನಲ್ಲಿ ಹೇಳೋದಾದರೆ, ನಿರ್ದೇಶಕರಾಗಿ ಡಾರ್ಲಿಂಗ್ ಕೃಷ್ಣ ಎರಡನೇ ಭಾಗದಲ್ಲಿಯೂ ಗೆದ್ದಿದ್ದರು. ಮೂರನೇ ಆವೃತ್ತಿಯೂ ಗೆದ್ದೇ ಗೆಲ್ಲುತ್ತದೆಂಬ ಗಾಢ ನಂಬಿಕೆ ಅವರೊಳಗೆ ಇದ್ದಂತಿದೆ. ಈಗ ಬಂದಿರೋ ಹಾಡು, ಈಗಾಗಲೇ ಬಿಡುಗಡೆಯಾಗಿದ್ದ ಮೋಷನ್ ಪೋಸ್ಟರ್ ಮತ್ತು ಖುದ್ದು ಕೃಷ್ಣ ಅದಕ್ಕೆ ಪೂರಕವಾದ ಒಂದಷ್ಟು ವಿಚಾರಗಳನ್ನು ಬಿಟ್ಟುಕೊಟ್ಟಿದ್ದರು.
ಸದರಿ ಹಾಡು ಕೇಳಿದ ಯಾರೊಳಗೇ ಆದರೂ ತಂತಾನೇ ಲವ್ ಮಾಕ್ಟೇಲ್೩ಯ ಬಗೆಗೊಂದು ಕುತೂಹಲ ಮೂಡಿಕೊಳ್ಳುತ್ತೆ. ಕನ್ನಡ ಚಿತ್ರರಂಗದಲ್ಲಿ ಈವರೆಗೂ ಅಪ್ಪ ಮಗಳ ಬಾಂಧವ್ಯದ ಭೂಮಿಕೆಯಲ್ಲಿ ಒಂದಷ್ಟು ಎವರ್ಗ್ರೀನ್ ಅನ್ನಿಸಬಲ್ಲ ಹಾಡುಗಳು ಬಂದಿವೆ. ಈ ಕ್ಷಣಕ್ಕೂ ಅವುಗಳು ಅಪ್ಪ ಮಗಳ ನಡುವೆ ಮಾತಲ್ಲಿ ಹೇಳಲಾರದ ಅನೂಹ್ಯ ಭಾವಗಳ ವಾಹಕಗಳಾಗಿ ಚಾಲ್ತಿಯಲ್ಲಿವೆ. ಲವ್ ಮಾಕ್ಟೇಲ್೩ ಹಾಡೂ ಕೂಡಾ ಹಾಗೆ ಎವರ್ಗ್ರೀನ್ ಲಿಸ್ಟಿಗೆ ಸೇರಿಕೊಳ್ಳುವ ಗುಣಲಕ್ಷಣಗಳನ್ನು ಒಳಗೊಂಡಿದೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲ ಈ ಚಿತ್ರಕ್ಕಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣವಿರುವ ಈ ಚಿತ್ರ ಏಪ್ರಿಲ್ ೧೦ರಂದು ತೆರೆಗಾಣಲಿದೆ.
keywords: love mocktail, darling krishna, milana nagaraj, sandalwood, kfi, cinishodha

