ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ ಮಿಂಚಲಾರಂಭಿಸುತ್ತಾರೆ. ಆದರೆ, ಇನ್ನೂ ಕೆಲ ನಟಿಯರ ಪಾಲಿಗೆ ಅದೇನೇ ಸರ್ಕಸ್ಸು ನಡೆಸಿದರೂ ಯಶಸ್ಸೆಂಬುದು ಸತಾಯಿಸಿ ಬಿಡುತ್ತೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ನಟಿ ನಿಶ್ವಿಕಾ ನಾಯ್ಡು. ಈಕೆ ವಾಸು ನಾನ್ ಪಕ್ಕಾ ಕಮರ್ಶಿಯಲ್ ಅಂತೊಂದು ಸಿನಿಮಾ ಮೂಲಕ ನಾಯಕಿಯಾಗಿದ್ದಳು. ಅನೀಶ್ ತೇಜೇಶ್ವರ್ ನಟನೆಯ ಆ ಚಿತ್ರ ತೋಪೆದ್ದು ಹೋಗಿತ್ತು. ತೋಪೆದ್ದದ್ದು ಕೇವಲ ಆ ಚಿತ್ರ ಮಾತ್ರವಲ್ಲ; ನಿಶ್ವಿಕಾಳ ನಸೀಬು ಕೂಡಾ ಅದೇ ಹಾದಿ ಹಿಡಿದಿತ್ತು. ಕರಟಕ ದಮನಕ ಚಿತ್ರವೂ ಅಂದುಕೊಂಡಂಥಾ ಗೆಲುವು ಕಾಣಲಿಲ್ಲ. ಇದೆಲ್ಲದರಿಂದ ಕಂಗಾಲಾಗಿದ್ದ ನಿಶ್ವಿಕಾಗೆ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಚಿತ್ರದ ಹಾಡೊಂದರ ಮೂಲಕ ಒಂದು ಮಟ್ಟಿಗೆ ಮೈಲೇಜು ಸಿಕ್ಕಿದೆ. ಈ ಹಾಡಿನ ಪ್ರಭೆಯಿಂದಾದರೂ ತನ್ನ ಮುಂದೆ ಅವಕಾಶಗಳ ಸುಗ್ಗಿ ಸಂಭ್ರಮ ಕಳೆಗಟ್ಟಬಹುದಾ ಅಂತೊಂದು ಆಸೆ ನಿಶ್ವಿಕಾಳೊಳಗೆ ಮೂಡಿಕೊಂಡಂತಿದೆ!

ನಿಶ್ವಿಕಾಗೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬರಖತ್ತಾಗೋದು ಕಷ್ಟವೆಂಬಂತೆ ಕಂಡಿದೆ. ಈಕೆ ಯೋಗರಾಜ ಭಟ್ಟರ ಕರಟಕ ಧಮನಕ ಚಿತ್ರದಲ್ಲಿ ನಟಿಸುವ ಸುದ್ದಿ ಬಂದಿತ್ತಲ್ಲಾ? ಆ ಹೊತ್ತಿನಲ್ಲಿ ಸದರಿ ಸಿನಿಮಾ ಮೂಲಕವಾದರೂ ಈಕೆಯ ಅದೃಷ್ಟ ಖುಲಾಯಿಸಬಹುದೆಂಬ ನಿರೀಕ್ಷೆಯಿತ್ತು. ಪ್ರಭುದೇವನೊಂದಿಗೆ ಸೊಂಟ ಬಳುಕಿಸಿ, ಭಟ್ಟರ ಜೊತೆ ಸೇರಿ ನಾನಾ ಕಿತಾಪತಿ ನಡೆಸಿದ್ದಳು. ಆದರೂ ಬಿಡುಗಡೆಗೊಂಡ ಕರಟಕ ದಮನಕರಿಗೆ ಮೊದಲ ವಾರವೇ ಧಮ್ಮು ಕಟ್ಟಲಾರಂಭಿಸಿತ್ತು. ಯಾವಾಗ ಈ ಚಿತ್ರವೂ ತೋಪಾಯ್ತೋ, ಆಗಲೇ ನಿಶ್ವಿಕಾ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ನಿರ್ಧಾರ ಕೈಗೊಂಡಿದ್ದಳಂತೆ. ಹೀಗಂತ ಆಕೆಯ ಆಪ್ತ ವಲಯದಲ್ಲಿಯೇ ಗುಲ್ಲೆದ್ದಿದೆ. ಹಾಗೆ ತೆಲುಗಿಗೆ ಹಾರಿದರೂ ಕೂಡಾ ನಿಶ್ವಿಕಾಳ ಪ್ರತಿಭೆಗೆ ಸರಿಕಟ್ಟಾದ ಜಯ ಸಿಕ್ಕಿರಲಿಲ್ಲ. ಹಾಗೆ ನೋಡಿದರೆ, ಈ ಹುಡುಗಿ ನಾಯಕಿಯಾಗಿ ಮಿಂಚಲು ಬೇಕಾದ ಎಲ್ಲ ಅರ್ಹತೆಗಳನ್ನೂ ಹೊಂದಿದ್ದಾಳೆ. ಆದರೂ ಸರಿಕಟ್ಟಾದೊಂದು ಗೆಲುವು ದಕ್ಕದೇ ಕೊಂಚ ಏರುಪೇರಾಗುತ್ತಾ ಬಂದಿತ್ತಷ್ಟೆ.

Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!
ಅಂಥಾದ್ದೊಂದು ಅದೃಷ್ಟದ ಶಕೆ ನಿಶ್ವಿಕಾ ಪಾಲಿಗೆ ಮಾರ್ಕ್ ಮೂಲಕವೇ ಶುರುವಾಗಬಹುದಾ? ಸುದೀಪ್ ಜೊತೆ ನಿಶ್ವಿಕಾ ಕುಣಿದಾಡಿರುವ ಮಾರ್ಕ್ ಚಿತ್ರದ ಹಾಡಿಗೆ ಸಿಕ್ಕಿರುವ ಅಪಾರ ಜನಪ್ರಿಯತೆ, ಅದು ಸೃಷ್ಟಿಸಿದ ಕ್ರೇಜ್ಗಳನ್ನು ಗಮನಿಸಿದರೆ ಆ ಸಾಧ್ಯತೆ ದಟ್ಟವಾಗಿರುವಂತೆ ಕಾಣಿಸುತ್ತದೆ. ಸದರಿ ಹಾಡುಇನಲ್ಲಿ ನಿಶ್ವಿಕಾ ಕಾಣಿಸಿಕೊಂಡಿರುವ ರೀತಿಯೂ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲ ನಟಿಯರು ಒಂದೆರಡು ಸಿನಿಮಾಗಳಲ್ಲಿ ನಟಿಸುತ್ತಲೇ ತಿಮಿರು ತೋರಿಸೋದಿದೆ. ಸಿನಿಮಾ ಸೆಟ್ಟಲ್ಲಿ ನಾನಾ ನಖರಾಗಳು ಶುರುವಾಗುತ್ತವೆ. ಆದರೆ ನಿಶ್ವಿಕಾ ಬಗ್ಗೆ ಈವರೆಗೂ ಅಂಥಾ ಆರೋಪಗಳಿಲ್ಲ. ಯಾವ ಸಿನಿಮಾ ಒಪ್ಪಿಕೊಂಡರೂ ತನ್ನ ಭಾಗದ ಕೆಲಸವನ್ನು ಯಾವ ತಗಾದೆಯೂ ಇಲ್ಲದೆ ಮುಗಿಸಿಕೊಡುವ ನಿಶ್ವಿಕಾ, ಪಾತ್ರ ಅಂತ ಬಂದರೆ ಅದಕ್ಕಾಗಿ ತಯಾರಿ ನಡೆಸಿ, ಸಮರ್ಪಿಸಿಕೊಳ್ಳುವ ಗುಣ ಹೊಂದಿದ್ದಾಳೆಂಬ ಮಾತಿದೆ. ಇಂಥಾ ನಿಶ್ವಿಕಾಳ ವೃತ್ತಿ ಬದುಕಿನಲ್ಲಿ ಇನ್ನಾದರೂ ಗೆಲುವಿನ ಪರ್ವ ಶುರುವಾಗಬಹುದಾ?
keywords: nishvika naidu, nishvika, mark, movie, sandalwood, actress

