ಒಂದಷ್ಟು ಗೆಲುವಿನ ಸಿಹಿಯೊಂದಿಗೆ ಕನ್ನಡ ಚಿತ್ರರಂಗ ಹೊಸಾ ಸಂವತ್ಸರಕ್ಕೆ ಹೊರಳಿಕೊಂಡಿದೆ. ಹೊಸ ವರ್ಷ ಕಣ್ತೆರೆಯುತ್ತಿರೋ ಘಳಿಗೆಯಲ್ಲಿಯೇ ಒಂದಷ್ಟು ಪ್ರಯೋಗಾತ್ಮಕ ಗುಣಗಳಿರುವ, ಕ್ರಿಯಾಶೀಲ ಪ್ರಯತ್ನಗಳ ಸುಳಿವೂ ಸಿಗಲಾರಂಭಿಸಿದೆ. ಅಂಥಾದ್ದೇ ಒಂದು ಹೊಸತನದ ಚಿತ್ರವೊಂದರ ಭಾಗವಾಗಿರುವ ಚೈತ್ರಾ ಆಚಾರ್, ಈ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಕ್ತಿ ಪ್ರಸಾದ್ ನಿರ್ದೇಶನದ ಲೈಲಾಸ್ ಸ್ವೀಟ್ ಡ್ರೀಮ್ಸ್ ಎಂಬ ಚಿತ್ರದಲ್ಲಿ ಚೈತ್ರಾ ಆಚಾರ್ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಗೊಂಡಿದೆ. ಈ ಮೂಲಕ ಹೊಸತೇನೋ ಹೊಳಹೊಂದನ್ನು ಪ್ರೇಕ್ಷರತ್ತ ದಾಟಿಸಿದಂತಿರೋ ಈ ಸಿನಿಮಾದ ಹಿಂಚುಮುಂಚಿನ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಚೈತ್ರಾ ತೆರೆದಿಟ್ಟಿದ್ದಾರೆ.
ನಿರ್ದೇಶಕ ಶಕ್ತಿ ಪ್ರಸಾದ್ ಈ ಚಿತ್ರದ ಕಥೆಯನ್ನು ಸಿದ್ಧಪಡಿಸಿಕೊಂಡು, ಬಹುತೇಕ ಎಲ್ಲ ಭಾಷೆಗಳ ನಿರ್ಮಾಪಕರುಗಳಿಗೂ ಒಂದೊಂದು ಸುತ್ತು ಕಥೆ ಹೇಳಿದ್ದರಂತೆ. ಹಾಗೆ ಕಥೆ ಸಿದ್ಧಪಡಿಸಿಕೊಂಡಿದ್ದ ಶಕ್ತಿ ಪ್ರಸಾದ್ಗೆ ಅದರ ಪ್ರಧಾನ ಪಾತ್ರವನ್ನು ಚೈತ್ರ ಆಚಾರ್ ಮಾಡಬೇಕೆಂಬ ಆಸೆ ಹೊಂದಿದ್ದಂತೆ. ಆ ಬಳಿಕ ಶಕ್ತಿ ಪ್ರಸಾದ್ ಚೈತ್ರಾರನ್ನು ಸಂಪರ್ಕಿಸಿ ಕಥೆ ಹೇಳಿದಾಕ್ಷಣವೇ ಥ್ರಿಲ್ ಆಗಿ ಒಪ್ಪಿಗೆ ಸೂಚಿದ್ದರಂತೆ. ಹೀಗೆ ಸದರಿ ಕಥೆಯನ್ನು ಚೈತ್ರಾ ಕೇಳಿದ್ದು ವರ್ಷದ ಹಿಂದೆ. ಆ ನಂತರ ನಿರಂತರವಾಗಿ ಒಟ್ಟಾರೆ ಸಿನಿಮಾದ ಪೂರ್ವಭಾವಿ ತಯಾಠರಿಯಲ್ಲಿ ಖುದ್ದು ಚೈತ್ರಾ ಭಾಗಿಯಾಗಿದ್ದರು. ಅಂಥಾ ನಿರಂತರ ಧ್ಯಾನವೀಗ ಲೈಲಾಸ್ ಸ್ವೀಟ್ ಡ್ರೀಮ್ಸ್ ಚಿತ್ರದ ಮೂಲಕ ನಿರ್ಣಾಯಕ ಘಟ್ಟ ತಲುಪಿಕೊಂಡಿದೆ.
ನಿರ್ದೇಶಕ ಶಕ್ತಿ ಪ್ರಸಾದ್ ಪಾಲಿಗಿದು ಚೊಚ್ಚಲ ಸಿನಿಮಾ. ಈ ಕಥೆಯನ್ನು ಬೇರೆ ಬೇರೆ ನಿರ್ಮಾಪಕರಿಗೆ ಹೇಳಿದ್ದಾಗ ಅವರೆಲ್ಲರೂ ತಂತಮ್ಮ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂದು ಕೇಳಿಕೊಂಡಿದ್ದರಂತೆ. ಆದರೆ, ಕನ್ನಡತಿ ಚೈತ್ರಾ ಆಸಾರ್ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರ ಕನ್ನಡದಲ್ಲಿಯೇ ಸಿದ್ಧಗೊಳ್ಳಬೇಕೆಂಬ ಇಂಗಿತವನ್ನು ಶಕ್ತಿ ಪ್ರಸಾದ್ ಸಾಧ್ಯವಾಗಿಸಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಇವಿಷ್ಟು ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಟೈಟಲ್ ಮೂಲಕವೇ ವಿಶೇಷ ಆಸಕ್ತಿ ಹುಟ್ಟಿಸಿರೋ ಲೈಲಾಸ್ ಸ್ವೀಟ್ ಡ್ರೀಮ್ಸ್ನಲ್ಲಿ ಖ್ಯಾತ ಗಾಯಕಿ ಎಚಿಡಿ ಪಲ್ಲವಿ ನಾಯಕಿಯ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅವಿನಾಶ್ ಕೂಡಾ ಪ್ರಧಾನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಮಿಕ್ಕುಳಿದ ಮಾಹಿತಿಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ.

