ಹೆಚ್ಚೇನಲ್ಲ; ಈಗ್ಗೆ ಐದಾರು ವರ್ಷಗಳ ಹಿಂದಿನವರೆಗೂ ತಾನೇ ಶ್ರೇಷ್ಠ ಎಂಬಂಥಾ ಭ್ರಮೆಯೊಂದು ಬಾಲಿವುಡ್ ಮಂದಿಯನ್ನು ಅಪಾದಮಸ್ತಕ ಕವುಚಿಕೊಂಡಿತ್ತು. ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಮಾತ್ರ ಎಂಬಂಥಾ ತಿಮಿರು ಬಾಲಿವುಡ್ಡಲ್ಲಿ ಮಿರಮಿರನೆ ಮಿಂಚುತ್ತಿತ್ತು. ಎಲ್ಲ ಭಾಷೆಗಳ, ಸಕಲ ಪ್ರಯತ್ನಗಳೂ ಒಗ್ಗೂಡಿದರೇನೇ ಭಾರತೀಯ ಸಿನಿಮಾ ರಂಗದ ಘನತೆ ಹೆಚ್ಚಾಗುತ್ತೆ ಎಂಬಂಥಾ ಒಕ್ಕೂಟದ ಮನಃಸ್ಥಿತಿಯನ್ನೇ ಬಾಲಿವುಡ್ ಮಂದಿ ಮರೆತಿದ್ದರು. ಇಂಥಾ ಅಸಡ್ಡೆಯ ಪಕ್ಕೆಗೆ ಮಹಾ ಗೆಲುವಿನ ಮೂಲಕವೇ ತಿವಿದು ನಗಲಾರಂಭಿಸಿದ್ದು ದಕ್ಷಿಣ ಭಾರತೀಯ ಚಿತ್ರರಂಗ. ಯಾವಾಗ ಪ್ಯಾನಿಂಡಿಯಾ ಸಿನಿಮಾಗಳ ಮೂಲಕ ಕನ್ನಡವೂ ಸೇರಿದಂತೆ ದಕ್ಷಿಣ ಭಾರತೀಯ ಸಿನಿಮಾಗಳು ಮಿಂಚಲಾರಂಭಿಸಿದವೋ, ಆ ಕ್ಷಣದಿಂದಲೇ ಬಾಲಿವುಡ್ ಮಂದಿಯ ಝಂಗಾಬಲ ಉಡುಗಿ ಹೋಗಿತ್ತು. ಹಾಗೆ ಸಾಲು ಸಾಲಾಗಿ ಸೋಲು ಕಾಣುತ್ತಾ, ಉಸಿರುಗಟ್ಟಿದ್ದ ಬಾಲಿವುಡ್ಡಿಗೆ ದುರಂಧರ್ ಚಿತ್ರದ ಗೆಲುವು ಅಕ್ಷರಶಃ ಆಕ್ಸಿಜನ್ನಿನಂತಾಗಿದೆ!
ಎಲಿಸ್ಟಿಕ್ ಕಥೆಗಳನ್ನು ಆಯ್ದುಕೊಳ್ಳುವ ಮೂಲಕ ಒಂದಷ್ಟು ವಿವಾದಗಳನ್ನು ಮೈಮೇಲೆಳೆದುಕೊಂಡಿರುವಾತ ಆದಿತ್ಯ ಧಾರ್. ಈತನ ನಿರ್ದೇಶನದಲ್ಲಿ ಮೂಡಿ ಬಂದಿರುವ ದುರಂಧರ್ ಚಿತ್ರ ಯಾವುದೇ ಪ್ರಚಾರದ ಗವಿಮಿಕ್ಕುಗಳ ಮೊರೆ ಹೋಗದೆ ತೆರೆಗಂಡಿತ್ತು. ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿದ್ದ ಈ ಸಿನಿಮಾದ ಬಗ್ಗೆ ಹೇಳಿಕೊಳ್ಳುವಂಥಾ ನಿರೀಕ್ಷೆಗಳೇನಿರಲಿಲ್ಲ. ಇಂಥಾ ಚಿತ್ರ ಈ ಪಾಟಿ ಗೆಲುವು ಕಾಣುತ್ತದೆಂದು ಬಹುಶಃ ಯಾರೆಂದರೆ ಯಾರೂ ಊಹಿಸಿರಲಿಕ್ಕಿಲ್ಲ. ಈ ಗೆಲುವು ಬರೀ ನಿರ್ದೇಶಕ, ನಾಯಕ, ಚಿತ್ರತಂಡಕ್ಕೆ ಮಾತ್ರವೇ ಸೀಮಿತವಾಗಿಲ್ಲ. ದಕ್ಷಿಣದ ಸಿನಿಮಾಗಳ ಅಬ್ಬರದ ಮುಂದೆ ಮಂಕಾಗಿದ್ದ ಒಂದಿಡೀ ಬಾಲಿವುಡ್ ದುರಂಧರ್ ಗೆಲುವನ್ನು ತನ್ನ ಗೆಲುವೆಂಬಂತೆ ಸಂಭ್ರಮಿಸುತ್ತಿದೆ. ಎಲ್ಲ ಮುನಿಸು, ಸ್ಟಾರ್ ವಾರ್‌ಗಳಾಚೆಗೆ ಬಾಲಿವುಡ್ ಮಂದಿ ಧುರಂಧರ್ ಗೆಲುವಿನಿಂದ ನಿರಾಳವಾಗಿದ್ದಾರೆ. ಯಾಕೆಂದರೆ, ಇನ್ನೇನು ಬಾಲಿವುಡ್ ಕಥೆ ಮುಗಿದೇ ಹೋಯ್ತೆಂಬ ಘಳಿಗೆಯಲ್ಲಿ ದುರಂಧರ್ ಗೆ,ಲುವು ಆಕ್ಸಿಜನ್ನಾಗಿ ಪರಿಣಮಿಸಿದೆ!
ದುರಂಧರ್ ಬಿಡುಗಡೆಯಾಗಿ ಇಪ್ಪತ್ತೆಂಟು ದಿನಗಳು ಕಳೆದಿವೆ. ದಿನದಿಂದ ದಿನಕ್ಕೆ ಕಲೆಕ್ಷನ್ನು ಏರುಗತಿ ಕಾಣುತ್ತಲೇ ಸಾಗಿದೆ. ಈ ಅವಧಿಯಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿದ್ದರೂ ಕೂಡಾ ಧುರಂಧರ್ ನಾಗಾಲೋಟಕ್ಕೆ ಯಾವ ಅಡ್ಡಿಯೂ ಆಗಿಲ್ಲ. ಇದುವರೆಗೂ ದಕ್ಷಿಣ ಭಾರತೀಯ ಸಿನಿಮಾಗಳು ಏಳುನೂರು ಎಂಟುನೂರು ಕೋಟಿ ನಿವ್ವಳ ಗಳಿಕೆಯ ಲೆಕ್ಕ ಕೊಡುತ್ತಿದ್ದವು. ಇದೀಗ ಆ ಅವಕಾಶ ದುರಂಧರ್ ಮೂಲಕ ಬಾಲಿವುಡ್ಡಿಗೆ ಸಿಕ್ಕಿದೆ. ಅದೇನೇ ಅಡೆತಡೆಗಳು ಬಂದರೂ ದುರಂಧರ್ ಚಿತ್ರ ಅನಾಯಾಸವಾಗಿ ಎಂಟುನೂರು ಕೋಟಿಗೂ ಮೀರಿದ ಗಳಿಕೆ ಮಾಡೋದರಲ್ಲಿ ಯಾವ ಸಂದೇಹವೂ ಇಲ್ಲ. ಖಾನ್‌ಗಳೇ ಸರಿಕಟ್ಟಾದೊಂದು ಹಿಟ್ ಕೊಡಲಾಗದೆ ಕಂಗಾಲಾಗಿದ್ದಾರೆ. ಅಕ್ಷಯ್ ಕುಮಾರನಂಥಾ ನೌಟಂಕಿ ನಟರು ಒಂದರ ಹಿಂದೊಂದರಂತೆ ತೋಪು ಸಿನಿಮಾಗಳನ್ನು ರಾಚುತ್ತಿದ್ದಾರೆ. ಇಂಥಾ ಹೊತ್ತಿನಲ್ಲಿ ಧುರಂಧರ್ ಚಿತ್ರದ ಮಹಾ ಗೆಲುವು ಬಾಲಿವುಡ್ ಮಟ್ಟಿಗೆ ಒಂದಷ್ಟು ಭರವಸೆ ಮೂಡಿಸುವಂತಿದೆ!
keywords: dhurandhar, ranveer sing, dhurandhar box office collections, adithya dhar, bollywood

