ವಿಜಯಾನಂದ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸೂಪರ್ ಹಿಟ್’ ಚಿತ್ರವೀಗ ಸಿನಿಮಾ ಪ್ರೇಮಿಗಳ ನಡುವೆ ಭರ್ಜರಿ ಚರ್ಚೆ ಹುಟ್ಟುಹಾಕಿದೆ. ಅದೆಂಥಾದ್ದೇ ಅಲೆಯಿದ್ದರೂ ಕೂಡಾ ಹಾಸ್ಯಪ್ರಧಾನ ಸಿನಿಮಾಗಳತ್ತ ಒಂದು ಸೆಳೆತ ಇದ್ದೇ ಇರುತ್ತೆ. ಅದರಲ್ಲಿಯೂ ಪ್ರಯೋಗಾತ್ಮಕ ಗುಣ ಹೊಂದಿರೋ ಸಿನಿಮಾ ಅಂದಮೇಲೆ ಅದರತ್ತ ಸಹಜವಾಗಿಯೇ ಪ್ರೇಕ್ಷಕರ ಚಿತ್ತ ಹೊರಳಿಕೊಳ್ಳುತ್ತೆ. ಪ್ರೇಕ್ಷಕರು ಮಾತ್ರವಲ್ಲದೆ, ಸಿನಿಮಾ ರಂಗದ ಭಾಗವಾಗಿರುವವರೂ ಕೂಡಾ ಇತ್ತೀಚೆಗೆ ಬಿಡುಗಡೆಗೊಂಡಿದ್ದ ಸೂಪರ್ ಹಿಟ್ ಟೀಸರ್ ಕಂಡು ಬೆರಗಾಗಿದ್ದಾರೆ. ಇದೀಗ ನಿರ್ದೇಶಕ ಯೋಗರಾಜ್ ಭಟ್ ಈ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ಅವರು ಹಂಚಿಕೊಂಡಿರುವ ಅಭಿಪ್ರಾಯದಿಂದಾಗಿ ಚಿತ್ರತಂಡದ ಭರವಸೆ ನೂರ್ಮಡಿಯಾಗಿದೆ!
ಸಾಮಾನ್ಯವಾಗಿ ಯೋಗರಾಜ್ ಭಟ್ ತಮ್ಮ ಸಿನಿಮಾದಾಚೆಗೆ ಹೊಸಬರ ಪ್ರಯತ್ನಗಳತ್ತ ಬೆರಗಿನ ಕಣ್ಣಿಟ್ಟಿರುತ್ತಾರೆ. ಕಾಲ ಕಾಲಕ್ಕೆ ಚೆಂದದ ಪ್ರಯತ್ನಗಳನ್ನು ಗುರುತಿಸುವ ಮೂಲಕ ಬೆನ್ತಟ್ಟಿ ಪ್ರೋತ್ಸಾಹಿಸುವ ಗುಣವನ್ನೂ ಹೊಂದಿದ್ದಾರೆ. ಅದರ ಭಾಗವಾಗಿಯೇ ಸೂಪರ್ ಹಿಟ್ ಸಿನಿಮಾದ ಟ್ರೈಲರ್ ನೋಡಿ ಥ್ರಿಲ್ ಆಗಿರೋ ಭಟ್ಟರು ಇದು ಪಕ್ಕಾ ಸೂಪರ್ ಹಿಟ್ ಸಿನಿಮಾ ಎಂಬ ಭವಿಷ್ಯ ನುಡಿದಿದ್ದಾರೆ. `ಅದ್ಭುತ ಶೀರ್ಷಿಕೆ, ಅಪರೂಪದ ಅಪ್ರೋಚ್ ॒ಬರಹಗಾರ, ನಿರ್ದೇಶಕ ವಿಜಯಾನಂದ್ಗೆ ಹಾಡೂ ಇಡೀ ತಂಡಕ್ಕೆ ಶುಭವಾಗಲಿ. ಹೆಸರಿನಂತೆಯೇ ಚಿತ್ರವೂ ಸೂಪರ್ ಹಿಟ್ ಆಗಲಿ’ ಅಂತ ಯೋಗರಾಜ್ ಭಟ್ ಶುಭ ಕೋರಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಗೊಂಡಿತ್ತು. ಒಂದು ಗಹನವಾದ ಕಥೆಯನ್ನು, ಹಾಸ್ಯದ ಚುಂಗುಹಿಡಿದು ಹೇಳಿರೋ ಸೂಚನೆಯೊಂದು ಟೀಸರ್ ಮೂಲಕ ಗೋಚರಿಸಿದೆ. ಹೇಳಿಕೇಳಿ, ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿರುವ ಗಿಲ್ಲಿ ನಟನ ಹವಾ ಊರೆಲ್ಲ ಹಬ್ಬಿಕೊಂಡಿದೆ. ಪಕ್ಕಾ ಹಾಸ್ಯದ ಮೂಲಕ, ಸೆನ್ಸ್ ಆಫ್ಗ್ ಹ್ಯೂಮರ್ ಮೂಲಕ ಗಿಲ್ಲಿ ಬಿಗ್ಬಾಸ್ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾನೆ. ಇದೇ ಹೊತ್ತಿನಲ್ಲಿ ಆತ ನಾಯಕನಾಗಿರೋ ಸೂಪರ್ ಹಿಟ್ ಚಿತ್ರದ ಟೀಸರ್ ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಸೃಷ್ಟಿಸಿದೆ. ಇಂಥಾ ಘಳಿಗೆಯಲ್ಲಿಯೇ ಯೋಗರಾಜ್ ಭಟ್ಟರ ಕಡೆಯಿಂದ ಬಂದಿರೋ ಮೆಚ್ಚುಗೆ ಮತ್ತು ಶುಭಾಶಯದಿಂದ ನಿರ್ದೇಶಕ ವಿಜಯಾನಂದ್ ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಗೊಂಡಿದೆ.
ವಿಜಯಲಕ್ಷ್ಮಿ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಕಾಮಿಡಿ ಸ್ಟಾರ್ ಎನಿಸಿಕೊಂಡಿರುವ ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ.

