ನಿರ್ದೇಶನ: ಚಂದ್ರಮೌಳಿ
ತಾರಾಗಣ: ರಾಮ್ ಗೌಡ, ಅದಿತಿ ಪ್ರಭುದೇವ, ಡಿಂಪಲ್ ಹಯಾತಿ, ಸಾಯಿಕುಮಾರ್, ಶರತ್ ಲೋಹಿತಾಶ್ವ
ರೇಟಿಂಗ್: 2.5
ಟ್ರೈಲರ್ ಮೂಲಕವೇ ಒಂದು ವರ್ಗದ ಪ್ರೇಕ್ಷಕ ವಲಯದಲ್ಲಿ ಕುತೂಹಲ ಮೂಡಿಸುತ್ತಲೇ, ಪಡ್ಡೆ ಹೈಕಳ ಹೃದಯದಲ್ಲಿ ಸಂಚಲನ ಸೃಷ್ಟಿಸಿದ್ದ ಚಿತ್ರ ದಿಲ್ ಮಾರ್. ಈ ಸಿನಿಮಾ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದಕ್ಕೆ ಟ್ರೈಲರ್ ಮಾತ್ರವೇ ಕಾರಣ ಅಂದುಕೊಳ್ಳುವಂತಿಲ್ಲ. ಕೆಜಿಎಫ್‌ನಂಥಾ ಸೂಪರ್ ಹಿಟ್ ಸಿನಿಮಾದ ಸಂಭಾಷಣಾ ಕಾರರಾಗಿಕ ಹೆಸರಾಗಿದ್ದ ಚಂದ್ರಮೌಳಿ ದಿಲ್ ಮಾರ್ ಮೂಲಕ ನಿರ್ದೇಶಕರಾಗಿದ್ದರು. ಕೆಜಿಎಫ್‌ನಂಥಾದ್ದೊಂದು ಬಿಗ್ ಹಿಟ್ ಸಿನಿಮಾದ ಭಾಗವಾದವರು ನನ್ನು ಮಾಡಹೊರಟರೂ ಪ್ರೇಕ್ಷಕರಲ್ಲೊಂದು ಕುತೂಹಲ ಮೂಡಿಸೋದು ಸಹಜ. ಅಂಥಾ ಕೌತುಕದ ಒಡ್ಡೋಲಗದಲ್ಲಿ ದಿಲ್ ಮಾರ್ ತೆರೆಗಂಡಿದೆ. ಅದರ ಕಥನ, ಅದು ಮೂಡಿಸೋ ಫೀಲ್ ಮತ್ತು ಒಟ್ಟಾರೆ ಸಿನಿಮಾವನ್ನು ಚಂದ್ರಮೌಳಿ ಕಟ್ಟಿಕೊಟ್ಟಿರುವ ರೀತಿಯೆಲ್ಲವೂ ನೋಡುಗರನ್ನು ಸೆಳೆದಿದೆ. ಆದರೆ, ಅವರೆಲ್ಲರನ್ನೂ ಕೂಡಾ ಇದು ಈ ಕಾಲಘಟ್ಟದಲ್ಲಿ ಬಿಡುಗಡೆಗೊಳ್ಳವಂಥಾ ಸಿನಿಮಾವಲ್ಲ ಎಂಬ ವಿಚಿತ್ರ ಭಾವವೊಂದು ಅನಾಯಾಸವಾಗಿ ಅಪ್ಪಿಕೊಂಡಿದೆ!

ಚಂದ್ರಮೌಳಿ ಮೊದಲ ಹೆಜ್ಜೆಯಲ್ಲಿಯೇ ಸಿಕ್ಸರ್ ಬಾರಿಸುವ ಉಮೇದಿನೊಂದಿಗೆ ಈ ಸಿನಿಮಾವನ್ನು ಕಟ್ಟಿಕೊಟ್ಟಿರೋದು ಪ್ರತೀ ಫ್ರೇಮುಗಳಲ್ಲಿಯೂ ಕಣ್ಣಿಗೆ ರಾಚುತ್ತೆ. ಅವರ ಪ್ರಯತ್ನದಲ್ಲಿ ಯಶವನ್ನೂ ಕಂಡಿದ್ದಾರೆ. ಸೀನುಗಳು ಸರಿದಾಗೆಲ್ಲ ಪುಟಿದೇಳುವ ಪಂಚಿಂಗ್ ಡೈಲಾಗುಗಳು, ಲವ್ವು, ಫೈಟ್ ಸೀನುಗಳು ಈ ಸಿನಿಮಾವನ್ನು ಕಿಮರ್ಶಿಯಲ್ ಚೌಕಟ್ಟಿನಲ್ಲಿ ಸಮೃದ್ಧಗೊಳಿಸಿವೆ. ತಾನೋರ್ವ ಹೊಸಾ ಹೀರೋನನ್ನು ಲಾಂಚ್ ಮಾಡುತ್ತಿರುವ ವಿಚಾರವನ್ನ ಮರೆತೇ ಬಿಟ್ಟಂತೆ ಚಂದ್ರಮೌಳಿ ಆ ಪಾತ್ರವನ್ನು ಕೇಜಿಗಟ್ಟಲೆ ಪಂಚಿಂಗ್ ಡೈಲಾಗುಗಳಿಂದ ಶೃಂಗರಿಸಿದ್ದಾರೆ. ತಮ್ಮ ಪಾಲಿನ ಅಷ್ಟೂ ಕೆಲಸವನ್ನು ನೋಡುಗರೆಲ್ಲ ಅಹುದಹುದೆನ್ನುವಂತೆ ಮಾಡಿದ್ದರೂ ಕೂಡಾ, ಅತೀ ಮುಖ್ಯ ವಿಚಾರವೇ ಅದೇಕೋ ಚಂದ್ರಮೌಳಿಯ ತಲೆಗೆ ಹೊಳೆಯದೆ ಯಡವಟ್ಟು ಸಂಭವಿಸಿದಂತಿದೆ!

ಈ ಸಿನಿಮಾ ಮಂಗಳೂರಿನಲ್ಲೋರ್ವ ರೌಡಿಯ ಕೊಲೆಯ ಸನ್ನಿವೇಶದೊಂದಿಗೆ ತೆರೆದುಕೊಳ್ಳುತ್ತೆ. ಹಾಗೆ ಕೊಲೆಯಾದವನ ಅಣ್ಣ ಭಾರ್ಗವನ ಪರಿಚಯವನ್ನೂ ಕೂಡಾ ನಿರ್ದೇಶಕರು ಪಂಚಿಂಗ್ ಡೈಲಾಗುಗಳ ಮೂಲಕವೇ ಮಾಡಿಸುತ್ತಾರೆ. ಆ ನಂತರದ ದೃಷ್ಯ ಮತ್ತದೇ ಡೈಲಾಗ್ ಕಮಾಲಿನೊಂದಿಗೆ ತೆರೆದುಕೊಳ್ಳೋದು ಮೇಲುಕೋಟೆಯಲ್ಲಿ. ಅಲ್ಲಿಯೇ ಹೀರೋ ಎಂಟ್ರಿಯಾಗುತ್ತೆ. ಏಕಾಏಕಿ ಆ ಊರ ಗೌಡನ ಮನೆಗೆ ನುಗ್ಗೋ ನಾಯಕ ಹುಡುಗಿಯೊಬ್ಬಳ ಹೆಸರು ಕೂಗುತ್ತಾ ಅರಚಾಡೋ ನಾಯಕನಿಗೆ ಆಕೆಯ ಅಣ್ಣ ಸಾಯಡಿಯುತ್ತಾನೆ. ಯಾಕೆಂದರೆ, ಹೀರೋ ಅದೆಷ್ಟು ಸಲ ಹೊಡೆಸಿಕೊಂಡರೂ ಮತ್ತೆ ಮತ್ತೆ ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿರುತ್ತಾನೆ. ಇಂಥಾ ನಾಯಕನಿಗೆ ಅದಕ್ಕೂ ಮುನ್ನವೇ ಹುಡುಗಿಯೊಬ್ಬಳೊಂದಿಗೆ ಹೇಗೆ ಲವ್ವಾಗಿರುತ್ತೆ? ಖುದ್ದು ಆ ಸುಂದರಿಯೇ ಬಳಿ ಬಂದರೂ ಬ್ರೈನಿನ ಮಾತು ಕೇಳದ, ಮೆದುಳು ಹೇಳಿದಕ್ಕೆ ತದ್ವಿರುದ್ಧ ಪಥದಲ್ಲಿ ಸಾಗಿದ್ದ ಈತ ಅದೇ ಹುಡುಗಿಯ ಮೋಹಕ್ಕೆ ಬೀಳಲು ಕಾರಣವೇನು? ಆತನ ವ್ಯಕ್ತಿತ್ವಕ್ಕೆ ಸೈಕೋ ಪದರ ಮೆತ್ತಿದ ವಿಕ್ಷಿಪ್ತ ಅಧ್ಯಾತ್ಮದ ಮೂಲ ಯಾವುದು?

ಮೊದಲ ಹುಡುಗಿ ತಾನೇ ಪೀಡಿಸಿ ಪ್ರೀತಿಸೆಂದರೂ ಕೊಸರಿಕೊಂಡಿದ್ದ ನಾಯಕ ಯಾಕೆ ಮದುವೆ ನಿಗಧಿಯಾಗಿದ್ದ ಮತ್ತೋರ್ವ ಹುಡುಗಿಯನ್ನು ಬೆಂಬಿದ್ದು ಕಾಡಿಸುತ್ತಾನೆ? ಅಷ್ಟಕ್ಕೂ ಮೊದಲ ಹುಡುಗಿಯ ಬರ್ಭರ ಸಾವಿಗೆ ಕಾರಣವೇನು? ರೌಡಿ ಭಾರ್ಗವ ನಾಯಕನ ಮೇಲೆ ರೊಚ್ಚಿಟ್ಟುಕೊಂಡು ಕೊಲ್ಲಲು ಮುಗಿಬೀಳೋದ್ಯಾಕೆ? ಇಂಥಾ ಎಲ್ಲ ಪ್ರಶ್ನೆಗಳಿಗೂ ರೋಚಕ ಉತ್ತರವೆಂಬಂತೆ ನಿರ್ದೇಶಕರು ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಕಥೆಯ ವಿಚಾರಕ್ಕೆ ಬಂದರೂ ಗಟ್ಟಿತನವಿದೆ. ಪಾತ್ರವನ್ನು ಸೃಷ್ಟಿಸೋ ವಿಚಾರದಲ್ಲಿಯೂ ಚಂದ್ರಮೌಳಿಯ ಕುಸುರಿ ಬೆರಗು ಮೂಡಿಸುತ್ತೆ. ಪಂಚಿಂಗ್ ಡೈಲಾಗುಗಳಲ್ಲಿಯಂತೂ ಎಲ್ಲವನ್ನೂ ಆವರಿಸುವ ಉಮೇದಿನಲ್ಲಿ ನಿರ್ದೇಶಕರು ವಿಜೃಂಭಿಸಿದ್ದಾರೆ. ಟ್ರೈಲರ್ ನೋಡಿ ಆ ಮೂಲಕ ಕುತೂಹಲ ಮೂಡಿಸಿಕೊಂಡು ಯಾರೇ ಹೋದರೂ ಈ ಸಿನಿಮಾ ಖಂಡಿತವಾಗಿಯೂ ಮೋಸ ಮಾಡೋದಿಲ್ಲ!

ಇಷ್ಟಿದ್ದ ಮೇಲೆ ದಿಲ್ ಮಾರ್ ಹೌಸ್ ಫುಲ್ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಬೇಕಲ್ಲಾ? ಇಂಥಾ ಪ್ರಶ್ನೆ ನಿಮ್ಮನ್ನು ಕಾಡಸಿದರೆ ಉತ್ತರವೆಂಬುದು ನಿರಾಶಾದಾಯಕವಾಗಿದೆ. ಯಾಕೆಂದರೆ, ಕೆಜಿಎಫ್‌ನಂಥಾ ಈ ಕಾಲಮಾನದ ಸೂಪರ್ ಹಿಟ್ ಚಿತ್ರದ ಭಾಗವಾಗಿದ್ದ ನಿರ್ದೇಶಕ ಚಂದ್ರಮೌಳಿ, ದಿಲ್ ಮಾರ್ ಚಿತ್ರವನ್ನು ಇಂದಿನ ವಾತಾವರಣಕ್ಕೆ ತಕ್ಕುದಾಗಿ ರೂಪಿಸುವಲ್ಲಿ ಎಡವಿದ್ದಾರೆ. ಇಲ್ಲಿ ಚಂದ್ರಮೌಳಿ ಪ್ರದರ್ಶಿಸಿರೋದು ನಿರ್ದೇಶಕರ ಪಿಎನ್ ಸತ್ಯ ಬ್ರ್ಯಾಂಡಿನ ಫಾರ್ಮುಲಾವನ್ನು. ಪಾತ್ರಗಳನ್ನು ಡೈಲಾಗಿನ ಬಿಲ್ಡಪ್ಪುಗಳ ಮೂಲಕವೇ ಹಿಡಿದೆತ್ತೋದು ಸತ್ಯ ಶೈಲಿ. ಅದು ದಶಕಗಳ ಹಿಂದೆ ಸರಿಕಟ್ಟಾಗಿಯೇ ಪರಿಣಾಮ ಬೀರುತ್ತಿತ್ತು. ದರ್ಶನ್, ಸುದೀಪ್, ಶಿವಣ್ಣನಂಥಾ ನಟರೂ ಕೂಡಾ ಅಂಥಾ ಫಾರ್ಮುಲಾವನ್ನು ನೆಚ್ಚಿಕೊಂಡೇ ಸ್ಟಾರ್‌ಡಂ ಪಡೆದುಕೊಂಡಿದ್ದರು. ಆದರೆ, ಅದರ ಪಟ್ಟುಗಳೆಲ್ಲ ದಶಕದ ಹಿಂದೆಯೇ ಸವಕಲಾಗಿದೆ.

ಗಮನೀಯ ಅಂಶವೆಂದರೆ, ಹೊಸಾ ಹೀರೋನ ಎಂಟ್ರಿಯ ಸಿನಿಮಾದಲ್ಲಿ ಇಂಥಾ ಬಿಲ್ಡಪ್ ಡೈಲಾಗುಗಳು ಭಾರವೆನ್ನಿಸುತ್ತವೆ. ಈ ಕಾರಣದಿಂದಲೇ ನವನಾಯಕ ರಾಮ್ ಗೌಡ ಅತ್ಯಂತ ಎನರ್ಜಿಯಿಂದ, ಅಚ್ಚುಕಟ್ಟಾಗಿ ಪಾತ್ರವನ್ನು ನಿರ್ವಹಿಸಿದ್ದರೂ ಕೂಡಾ ಅದು ಗೆಲುವಾಗಿ ರೂಪಾಂತರಗೊಳ್ಳುವಲ್ಲಿ ಎಡವಿದಂತಾಗಿದೆ. ಓವರ್ ಬಿಲ್ಡಪ್ಪಿನ ಪ್ರಭೆಯೇ ಅವರ ಪಾಲಿಗೆ ಒಜ್ಜೆಯಾದಂತೆ ಭಾಸವಾಗುತ್ತದೆ. ಇದೆಲ್ಲದರಾಚೆ, ಈ ಸಿನಿಮಾವೇನಾದರೂ ಈಗೊಂದು ಐದತ್ತು ವರ್ಷಗಳ ಹಿಂದೆ ಬಂದಿದ್ದರೆ, ಆ ದಿನಗಳಲ್ಲಿ ಸ್ಟಾರುಗಳಾಗಿದ್ದ ದರ್ಶನ್, ಸುದೀಪ್‌ರಂಥಾ ನಟರು ನಾಯಕರಾಗಿದ್ದರೆ ಈ ಸಿನಿಮಾ ಖಂಡಿತವಾಗಿಯೂ ನೂರು ದಿನಗಳ ಭರ್ಜರಿ ಪ್ರದರ್ಶನ ಕಾಣುತ್ತಿತ್ತು. ಆದರೆ, ಈಗ ಸೋಶಿಯಲ್ ಮೀಡಿಯಾ ಅಲೆದಯಿಂದ ಪ್ರೇಕ್ಷಕರೇ ಅಪ್‌ಡೇಟಾಗಿದ್ದಾರೆ. ಈ ಹಂತದಲ್ಲಿ ದಿಲ್‌ಮಾರ್ ಚಿತ್ರಕ್ಕೆ ಸ್ಟಾರ್ ನಟರು ಹೀರೋ ಆಗಿದ್ದರೂ ಬಚಾವಾಗೋದು ಕಷ್ಟವೇ!
ಓರ್ವ ನಿರ್ದೇಶಕನಾಗಿ ಕಥೆಯ ಸೃಷ್ಟಿ, ಪಾತ್ರಗಳನ್ನು ರೂಪಿಸುವಿಕೆ ಸೇರಿದಂತೆ ಎಲ್ಲದರಲ್ಲಿಯೂ ಚಂದ್ರಮೌಳಿ ಗೆದ್ದಿದ್ದಾರೆ. ಆದರೆ, ಈವತ್ತಿನ ಪ್ರೇಕ್ಷಕರಿಗೆ ತಕ್ಕುದಾಗಿ ಈ ಸಿನಿಮಾವನ್ನು ಕಟ್ಟಿ ಕೊಡೋದರಲ್ಲಿ ಸೋತಿದ್ದಾರೆ. ಇಂಥಾ ಹಿನ್ನಡೆಯನ್ನು ಹೊರತಾಗಿಸಿ ನೋಡಿದರೆ, ನವ ನಾಯಕ ರಾಮ್ ಗೌಡ ಅತ್ಯಂತ ಸವಾಲಿನದ್ದಾದ ಈ ಪಾತ್ರವನ್ನು ಪೋಶಿಸುವಲ್ಲಿ ಗೆದ್ದಿದ್ದಾರೆ. ನಾಯಕಿಯರಾದ ಅದಿತಿ ಪ್ರಭುದೇವ ಮತ್ತು ಡಿಂಪಲ್ ಹಯಾತಿ ತಂತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಇತ್ತೀಚೆಗೆ ನೇಪಥ್ಯಕ್ಕೆ ಸರಿದಂತಿದ್ದ ಸಾಯಿಕುಮಾರ್ ಭಾರ್ಗವ ಎಂಬ ಪಾತ್ರದಲ್ಲಿ ವಿಲನ್ ಆಗಿ ಅಕ್ಷರಶಃ ಅಬ್ಬರಿಸಿದ್ದಾರೆ. ಕಡಿಮೆ ಕಾಲಾವಧಿಯಿದ್ದರೂ ನಾಯಕಿಯ ತಂದೆಯ ಪಾತ್ರದ ಮೂಲಕ ಶರತ್ ಲೋಹಿತಾಶ್ವ ಮನಸಿಗಿಳಿಯುತ್ತಾರೆ. ನಿರ್ದೇಶಕನಾಗಿ ಪ್ರತೀ ಸೂಕ್ಷ್ಮಗಳನ್ನೂ ಸಮರ್ಥವಾಗಿ ನಿಭಾಯಿಸಿರುವ ಚಂದ್ರಮೌಳಿ ಅದ್ಯಾಕೆ ದಶಕದ ಹಿಂದಿನ ಸವಕಲು ಫಾರ್ಮುಲಾವನ್ನು ನೆಚ್ಚಿಕೊಂಡರೋ… ಸಿನಿಮಾ ನೋಡಿದವರನ್ನೆಲ್ಲ ಅಂತಿಮವಾಗಿ ಅದೊಂದು ಪ್ರಶ್ನೆ ವಿಷಾಧದಂತೆ ಆವರಿಸಿಕೊಳ್ಳುತ್ತೆ!
