ರಿಷಭ್ ಶೆಟ್ಟಿಯ ಮಹಾ ಸಾಹಸದಂತಿರುವ ಕಾಂತಾರಾ ಚಾಪ್ಟರ್1 ಮಹಾ ಗೆಲುವನ ನೇ ದಾಖಲಿಸಿದೆ. ಕರ್ನಾಟಕದಲ್ಲಿ ಭೂತಾರಾಧನೆ ಹಾಗೂ ಮೌಢ್ಯಗಳ ನೆಲೆಯಲ್ಲಿ ಈ ಚಿತ್ರದ ಸುತ್ತಾ ಒಂದಷ್ಟು ಚರ್ಚೆಗಳು ನಡೆದಿವೆ. ರಿಷಭ್ ಶೆಟ್ಟಿ ಈ ಮೂಲಕ ಒಂದಷ್ಟು ವಿರೋಧಾಭಾಸಗಳಿಗೂ ಒಡ್ಡಿಕೊಳ್ಳಬೇಕಾದ ಸಂದರ್ಭ ಬಂದೊದಗಿದೆ. ಆದರೆ, ಸೈದ್ಧಾಂತಿಕ ನೆಲೆಯಲ್ಲಿ ಒಂದಷ್ಟು ಮಂದಿ ಕಾಂತಾರವನ್ನು ನಕಾರಾತ್ಮಕವಾಗಿ ಬಿಂಬಿಸಿದರೂ ಅದರ ಕಲೆಕ್ಷನ್ನಿಗೇನೂ ಹಿನ್ನಡೆಯಾಗಿಲ್ಲ. ದಿನದಿಂದ ದಿನಕ್ಕೆ ಏರುಗತಿ ಕಾಣುತ್ತಾ ಸಾಗಿದ್ದ ಈ ಸಿನಿಮಾ ಸಾವಿರ ಕೋಟಿ ಸಂಪಾದಿಸುವ ನಿರೀಕ್ಷೆಯಿತ್ತು. ಆದರೆ, ಆ ಗುರಿ ಹತ್ತಿರದಲ್ಲಿರುವಾಗಲೇ ಕಾಂತಾರ ಚಾಪ್ಟರ್೧ ಓಟಿಟಿಗೆ ಎಂಟ್ರಿ ಕೊಡಲು ಮುಹೂರ್ತ ನಿಗಧಿಯಾಗಿ ಬಿಟ್ಟಿದೆ!

ಯಾರೂ ಕೂಡಾ ಈ ಸಿನಿಮಾ ಇಷ್ಟು ಬೇಗನೆ ಓಟಿಟಿಗೆ ಎಂಟ್ರಿ ಕೊಡುತ್ತದೆಂದು ಅಂದುಕೊಂಡಿರಲಿಲ್ಲ. ಆದರೆ, ಲೆಕ್ಕಾಚಾರದಲ್ಲಿ ರಿಷಭ್ ಶೆಟ್ಟರಿಗೆ ತಕ್ಕುದಾಗಿ ಪಕ್ಕಾ ಇರುವ ಹೊಂಬಾಳೆ ಸಂಸ್ಥೆ, ಕಲೆಕ್ಷನ್ನು ಕೊಂಚ ನಿಧಾನಗತಿಯಾಗುತ್ತಲೇ ಓಟಿಟಿ ಎಂಟ್ರಿಗೆ ಮುಹೂರ್ತವಿಟ್ಟಿದೆ. ಅದರನ್ವಯ ಹೇಳೋದಾದರೆ, ಇದೇ ತಿಂಗಳ ಮೂವತ್ತೊಂದರಂದು ಅಮೇಜಾನ್ ಪ್ರೈಮ್‌ಗೆ ಈ ಸಿನಿಮಾ ಎಂಟ್ರಿ ಕೊಡಲಿದೆ. ಈ ವಿಚಾರವನ್ನು ಖುದ್ದು ಅಮೇಜಾನ್ ಪ್ರೈಮ್ ಸಂಸ್ಥೆ ಸಾಮಾಜಿಕ ಜಾಲತಾಣಗಳ ಮೂಲಕ ಖಚಿತಪಡಿಸಿದೆ. ಕೇವಲ ಸಿನಿಮಾ ತಂಡ, ಕಾಸು ಹೂಡಿದ ನಿರ್ಮಾಪಕರು ಮಾತ್ರವಲ್ಲ; ಎಲ್ಲ ಕನ್ನಡದ ಸಿನಿಮಾ ಪ್ರೇಮಿಗಳೂ ಕಾಂತಾರಾ ಚಾಪ್ಟರ್೨ ಸಾವಿರ ಕೋಟಿ ಕ್ಲಬ್ ಸೇರಿ ದಾಖಲೆ ಬರೆಯಲೆಂದು ಆಶಿಸಿದ್ದರು. ಆದರೆ, ಅದಕ್ಕೀಗ ಬ್ರೇಕ್ ಬಿದ್ದಂತಿದೆ.

ಇನ್ನು ಸಿನ ಇಮಾ ಮಂದಿರಗಳಲ್ಲಿ ಈ ಸಿನಿಮಾ ಉಳಿಯೋದು ಎರಡ್ಮೂರು ದಿನ ಮಾತ್ರ. ಅಷ್ಟರಲ್ಲಿ ಕಾಂತಾರವನ್ನು ಸಾವಿರ ಕೋಟಿಯ ಗಡಿ ದಾಟಿಸುವ ಪವಾಡವನ್ನು ಸಾಕ್ಷಾತ್ತು ಪಂಜುರ್ಲಿ, ಗುಳಿಗ ದೈವಗಳೂ ಮಾಡಲಿಕ್ಕಿಲ್ಲ. ಯಾಕೆಂದರೆ, ಈವರೆಗೂ ವಿಶ್ವ ಮಟ್ಟದಲ್ಲಿ ಈ ಚಿತ್ರ ಎಂಟುನೂರು ಚಿಲ್ಲರೆ ಕೋಟಿಗಳಷ್ಟು ಕಲೆಕ್ಷನ್ನು ಮಾಡಿದೆ. ಹೇಳಿಕೇಳಿ ದೀಪಾವಳಿ ಹಬ್ಬದ ಜೊತೆ ಜೊತೆಗೇ ಕಾಂತಾರದ ಅಬ್ಬರದ ಪ್ರದರ್ಶನವೂ ತಗ್ಗಿದೆ. ಈ ಕಾರಣದಿಂದಲೇ ದಿನದ ಕಲೆಕ್ಷನ್ನು ಒಂದಂಕಿಗಿಳಿದಿತ್ತು. ಹಾಗಿರುವಾಗ ಇನ್ನು ಎರಡ್ಮೂರು ದಿನಗಳಲ್ಲಿ ಇನ್ನೂರು ಕೋಟಿಯಷ್ಟನ್ನು ಬಾಚಿಕೊಳ್ಳೋದು ಕನಸಿನ ಮಾತು. ಕಾಂತಾರ ಸಾವಿರ ಕೋಟಿ ಕ್ಲಬ್ ಸೇರಿದ್ದರೆ, ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಘನತೆ ಮತ್ತಷ್ಟು ಮಿರುಗುತ್ತಿತ್ತು. ಅಂಥಾ ರೋಮಾಂಚಕ ದಾಖಲೆಯ ಹೊಸ್ತಿಲಿನಲ್ಲೇ ರಿಷಭ್ ಶೆಟ್ಟಿ ಅದೇಕೋ ಎಡವಿದಂತಿದೆ!
