ಬಿಗ್ ಬಾಸ್ ಸೀಜನ್೧೨ ಮೆಲ್ಲಗೆ ಕಳೆಗಟ್ಟಿಕೊಳ್ಳುತ್ತಿದೆ. ಆರಂಭದಲ್ಲಿ ಸ್ಪರ್ಧಿಗಳೆಲ್ಲ ಮಂಕಾದಂತೆ ಕಂಡರೂ ಕೂಡಾ ಇದೀಗ ಯಥಾವತ್ತಾದ ಷಡ್ಯಂತ್ರ, ವೈಮನಸ್ಯ, ಕಾಳಗಗಳಿಂದ ಕೊತಗುಡುತ್ತಿದೆ. ಈ ನಡುವೆ ಕೆಲ ಮಂದಿ ಮಾತು, ವರ್ತನೆಗಳ ಮೂಲಕ ವಿಕೃತಿಗಳನ್ನು ಹೊರಹಾಕುತ್ತಾ, ಖುದ್ದು ಬಿಗ್ ಬಾಸ್ ಅಭಿಮಾನಿಗಳಿಗೇ ರೇಜಿಗೆ ಮೂಡಿಸುತ್ತಿದ್ದಾರೆ. ಇನ್ನೂ ಕೆಲ ಮಂದಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವಾಗ ಬಿಟ್ಟಿ ಬಲ್ಡಪ್ಪು ಕೊಟ್ಟುಕೊಳ್ಳೋದು, ಮನೆಯೊಳಗೆ ಮಂಕಾಗಿ ನಗೆಪಾಟಲಿಗೀಡಾಗೋದು ಪ್ರತೀ ಸೀಜನ್ನುಗಳ ವಾಡಿಕೆ. ಈ ಬಾರಿ ಆ ಸಾಲಿನಲ್ಲಿ ಪ್ರಮುಖವಾಗಿ ಗುರುತಿಸಿಕೊಳ್ಳುವ ಅರ್ಹತೆ ಹೊಂದಿರುವಾತ ವಿಕ್ಷಿಪ್ತ ಖಳನಟ ಕಾಕ್ರೋಚ್ ಸುಧಿ!

ಸೈಕೋ ಟೈಪಿನ ಪಾತ್ರಗಳನ್ನು ನಿಭಾಯಿಸುತ್ತಾ, ಮೈತುಂಬಾ ಚಿತ್ರವಿಚಿತ್ರ ಹಚ್ಚೆ ಹಾಕಿಸಿಕೊಂಡು ವ್ಯಕ್ತಿತ್ವವನ್ನೂ ಕೂಡಾ ವಿಕ್ಷಿಪ್ತವಾಗಿಸಿಕೊಂಡಿರುವಾತ ಕಾಕ್ರೋಚ್. ಪಾತ್ರಗಳು ಮಾತ್ರವಲ್ಲ; ಸಿನಿಮಾ ಸಂಬಂಧಿತ ಸಂದರ್ಶನಗಳಲ್ಲೂ ಕೂಡಾ ಈತ ಖದರಿನಿಂದಲೇ ಕಾಣಿಕಸಿಕೊಂಡಿದ್ದ. ಇಂಥಾ ಸುಧಿ ಬಿಗ್ ಬಾಸ್ ಸ್ಪ;ರ್ಧಿಯೆಂಬ ವಿಚಾರ ಗೊತ್ತಾದೇಟಿಗೆ ಈತ ಟಫ್ ಸ್ಪರ್ಧೆ ನೀಡುತ್ತಾನೆಂಬ ನಂಬಿಕೆ ಮೊಳೆತುಕೊಂಡಿತ್ತು. ಆದರೆ, ಈ ಆಸಾಮಿ ಅದಕ್ಕೆ ತದ್ವಿರುದ್ಧ ಸ್ವರೂಪದಲ್ಲಿ ಬಿಗ್ ಬಾಸ್ ಮನೆಯೊಳಗೆ ಕಾಣಿಸಿಕೊಳ್ಳುತ್ತಿದ್ದಾನೆ. ಇಂಥಾ ಸುಧಿ ರಕ್ಷಿತಾಗೆ ಸೆಡೆ ಅಂತೆಲ್ಲ ಪದ ಪ್ರಯೋಗ ಮಾಡುವ ಮೂಲಕ ತಾನೆಂಥಾ ಸೆಡೆ ಎಂಬುದನ್ನು ಒಂದಿಡೀ ಕರ್ನಾಟಕಕ್ಕೆ ಜಾಹೀರು ಮಾಡಿಕೊಂಡಿದ್ದಾನೆ!

ಕಾಕ್ರೋಚ್ ಸುಧಿಯ ಈ ದುಂಡಾವರ್ತನೆ ವಿರುದ್ಧ ಗಿಲ್ಲಿ ನಟ ಮಾತಾಡಿದ್ದಾನೆ. ಅದು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುವ ಮೂಲಕ ಸುಧಿಗೆ ಸಾಮೂಹಿಕ ಮಹಾ ಮಂಗಳಾರತಿಯೂ ನಡೆಯುತ್ತಿದೆ. ಇಂಥಾ ವಿಕೃತ ನಡವಳಿಕೆಗಳಾಚೆಗೆ ಕಾಕ್ರೋಚ್ ಓರ್ವ ಸ್ಪರ್ಧಿಯಾಗಿ ವಿಫಲನಾಗಿದ್ದಾನೆ. ಯಾವುದನ್ನೂ ಎದುರಿಸಲಾರದ ಸುಧಿ ತನ್ನ ಬಿರುದಿಗೆ ಅನುಗುಣವಾಗಿ ಜಿರಳೆಯಂತೆಯೇ ಸಂದಿಗೊಂದಿ ಸೇರಿಕೊಳ್ಳುತ್ತಿದ್ದಾನೆ. ಈ ಹಿಂದೆ ಟಾಸ್ಕ್ ಒಂದರಲ್ಲಿ ಅಸುರನಾಗಿ ಕಾಣಿಸಿಕೊಂಡಿದ್ದ ಸುಧಿ ಕಾಮಿಡಿ ಪೀಸಿನಂತಾಗಿದ್ದ. ಖುದ್ದು ಸುದೀಪ್ ಅದನ್ನು ಹೀನಾಮಾನ ಆಡಿಕೊಂಡಿದ್ದರು. ತೆರೆಮೇಲೆ ಅಬ್ಬರಿಸುವ ಕಾಕ್ರೋಚ್ ಸುಧಿ ಆಟದಲ್ಲಿ ಆ ಖದರ್ ತೋರಿಸುತ್ತಿಲ್ಲ. ಪ್ರಭಲ ಸ್ಪರ್ಧಿಗಳಿಗೆ ಎದೆಗೊಟ್ಟು ಸೆಣೆಸುತ್ತಿಲ್ಲ. ಆದರೆ ಪುಟ್ಟ ಹುಡುಗಿ ರಕ್ಷಿತಾ ಮೇಲೆ ಎಗರಿ ಬೀಳುತ್ತಾನೆ. ಈ ನಡೆಯೇ ಕಾಕ್ರೋಚ್ ಸುಧಿ ಅದೆಂಥಾ ಸೆಡೆ ಎಂಬುದಕ್ಕೆ ಸಾಕ್ಷಿಯಂತಿದೆ!
