ಮಹಿರಾ ಖ್ಯಾತಿಯ ಮಹೇಶ್ ಗೌಡ ನಿರ್ಮಾಣ ಮಾಡಿ, ನಿರ್ದೇಶಿಸಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ನಾಳೆ ಅಂದರೆ, ಅಕ್ಟೋಬರ್ ೨೪ರಂದು ತೆರೆಗಾಣುತ್ತಿದೆ. ಸಿನಿಮಾವೊಂದನ್ನು ಒಂದು ಜವಾಬ್ದಾರಿ ವಹಿಸಿಕೊಂಡು ರೂಪಿಸೋದೇ ಕಷ್ಟದ ಕೆಲಸ. ಅಂಥಾದ್ದರಲ್ಲಿ ನಿರ್ಮಾಣ, ನಿರ್ದೇಶನ ಮಾತ್ರವಲ್ಲದೇ ನಾಯಕನಾಗಿಯೂ ನಟಿಸೋದಿದೆಯಲ್ಲಾ? ಅದು ನಿಜಕ್ಕೂ ಮಹಾ ಸಾಹಸ. ಇದು ವಿಟಿಲಿಗೋ ಅಥವಾ ತೊನ್ನು ಎಂಬ ಸಮಸ್ಯೆಯೊಂದರ ಸುತ್ತ ಹಬ್ಬಿಕೊಂಡಿರುವ ಕಥನ. ಭಾರತೀಯ ಚಿತ್ರರಂಗದಲ್ಲೇ ಮೊದಲಾಗಿ ಗುರುತಿಸಿಕೊಳ್ಳುವ ಕನ್ನಡದ ಹೆಮ್ಮೆಯ ಚಿತ್ರವೂ ಹೌದು. ಇಂಥಾದ್ದೊಂದು ಅಪರೂಪದ ಸಿನಿಮಾ ರೂಪುಗೊಂಡಿದ್ದರ ಹಿಂದೆ ಪ್ರೇರಕ ಶಕ್ತಿಯಾಗಿದ್ದವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್!

ಅಪ್ಪು ಭಿನ್ನ ಪ್ರಯತ್ನಗಳನ್ನು ಪ್ರೇರೇಪಿಸಿ ಸಾಥ್ ಕೊಡಲೆಂದೇ ಪಿಆರ್‌ಕೆ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದದ್ದು ಗೊತ್ತಿರುವ ಸಂಗತಿ. ಆದರೆ, ಎದುರು ಯಾರೇ ಬಂದು ಕೂತರೂ, ಅವರೊಳಗಿನ ಅಸಲೀ ಶಕ್ತಿಯನ್ನು ಗುರುತಿಸಿ, ಹೊಸಾ ಸೃಷ್ಟಿಗಾಗಿ ಪ್ರೇರೇಪಿಸುವ ವಿಶಿಷ್ಟ ಗುಣವೂ ಪುನೀತ್ ಅವರಲ್ಲಿತ್ತು. ಚಿತ್ರರಂಗದಲ್ಲಿ ಅಂಥಾ ಅನುಭೂತಿ ಪಡೆದುಕೊಂಡವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಪ್ಪುವಿನ ಅಂಥಾ ಗುಣದಿಂದಲೇ ಮಹೇಶ್ ಗೌಡರೊಳಗೆ ಬಿಳಿಚುಕ್ಕಿ ಹಳ್ಳಿಹಕ್ಕಿ ಕಥೆ ಊಟೆಯೊಡೆದಿದ್ದೊಂದು ರೋಮಾಂಚಕ ಸಂಗತಿ. ಆ ಹಠಾತ್ ರೋಮಾಂಚನದ ಬಗ್ಗೆ ಖುದ್ದು ನಿರ್ದೇಶಕ ಮಹೇಶ್ ಗೌಡ ಅವರು ಒಂದಷ್ಟು ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ಅದಾಗಲೇ ಮಹಿರಾ ಎಂಬ ಸಿನಿಮಾ ನಿರ್ದೇಶನ ಮಾಡಿ ತನ್ನೊಳಗಿನ ಕಸುವೇನೆಂಬುದನ್ನು ಜಾಹೀರು ಮಾಡಿದ್ದವರು ಮಹೇಶ್ ಗೌಡ. ಹಾಗೊಂದು ಮೈಲಿಗಲ್ಲು ನೆಟ್ಟ ಹಿಂಚುಮುಂಚಿನ ಕಾಲದಿಂದಲೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ನಿರ್ದೇಶನ ಮಾಡಬೇಕೆಂಬುದು ಮಹೇಶ್ ಗೌಡರ ಮಹಾ ಕನಸಾಗಿತ್ತು. ಕಡೆಗೂ ಒಂದೊಳ್ಳೆ ಕಥೆ ರೆಡಿ ಮಾಡಿಕೊಂಡು ಪುನೀತ್‌ರನ್ನು ಭೇಟಿಯಾಗಿದ್ದರು. ಮಾತುಕಥೆ ನಡೆದು ಪುನೀತ್ ಕೂಡಾ ಹಸಿರು ನಿಶಾನೆ ತೋರಿಸಿದ್ದರು. ತನ್ನ ಜೀವಮಾನದ ಕನಸೊಂದು ನನಸಾದ ಖುಷಿಯಲ್ಲಿದ್ದ ಮಹೇಶ್ ಗೌಡರಿಗೆ ಮತ್ತೊಂದು ಸರ್‌ಪ್ರೈಸ್ ಪುನೀತ್ ಕಡೆಯಿಂದಲೇ ಸಿಕ್ಕಿ ಬಿಟ್ಟಿತ್ತು.

ಸಿನಿಮಾ ಮಾತುಕತೆಯ ಸಂದರ್ಭದಲ್ಲಿ ಪುನೀತ್, ಮಹೇಶ್ ಗೌಡ ಅವರ ದೇಹದಲ್ಲಿದ್ದ ವಿಟಿಲಿಗೋ ಛಾಯೆಯನ್ನು ಗುರುತಿಸಿದ್ದರು. ಅದರ ಬಗ್ಗೆ ಒಂದಷ್ಟು ವಿಚಾರಗಳನ್ನು ಕೇಳಿ ತಿಳಿದುಕೊಂಡಿದ್ದರು. ಅದಾದಾಕ್ಷಣವೇ ವಿಟಿಲಿಗೋ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಒಂದು ಸಿನಿಮಾವನ್ನು ಪಿಆರ್‌ಕೆ ಸ್ಟುಡಿಯೋಸ್‌ಗಾಗಿ ನಿರ್ದೇಶನ ಮಾಡುವಂತೆ ಕೇಳಿಕೊಂಡಿದ್ದರು. ಇದು ಕನ್ನಡದ ಹೆಮ್ಮೆಯ ಸಿನಿಮಾವಾಗುತ್ತದೆಂಬ ಭವಿಷ್ಯವನ್ನೂ ನುಡಿದಿದ್ದರು. ಆ ಘಳಿಗೆಯವರೆಗೂ ತನ್ನನ್ನು ಎಳವೆಯಿಂದಲೇ ಬಾಧಿಸಿದ್ದ ವಿಟಿಲಿಗೋ ಸಮಸ್ಯೆಯ ಸುತ್ತ ಸಿನಿಮಾ ನಿರ್ದೇಶನ ಮಾಡುವ ಸಣ್ಣ ಆಲೋಚನೆಯೂ ಮಹೇಶ್ ಗೌಡರ ಬಳಿ ಸುಳಿದಿರಲಿಲ್ಲ.
ಪುನೀತ್ ಅವರ ಒತ್ತಾಸೆ ಮತ್ತು ಪ್ರೇರಣೆಯಿಂದಲೇ ಮಹೇಶ್ ಗೌಡ ಅವರು ಈ ಸಿನಿಮಾಕ್ಕೆ ಚಾಲನೆ ನೀಡಿದ್ದರು. ಒಂದು ವೇಳೆ ಪುನೀತ್ ಅಕಾಲದಲ್ಲಿ ಇಲ್ಲವಾಗದೇ ಇದ್ದಿದ್ದರೆ, ಬಿಳಿಚುಕ್ಕಿ ಹಳ್ಳಿಹಕ್ಕಿಯನ್ನು ಅವರೇ ಪಿಆರ್‌ಕೆ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡುತ್ತಿದ್ದರು. ಆದರೆ, ಆ ನಂತರ ಉಳಿದುಕೊಂಡಿದ್ದು ಪುನೀತ್ ನಿರ್ಗಮಿಸಿದ ನಿರ್ವಾತ ಸ್ಥಿತಿ ಮಾತ್ರ. ಅಂಥಾ ಆಘಾತದ ನಡುವೆ ತಮ್ಮದೇ ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಕ್ಷಣದಲ್ಲಿ ಪುನೀತ್ ಇದ್ದಿದ್ದರೆ ಖಂಡಿತವಾಗಿಯೂ ಅ ಖುಷಿಪಡುತ್ತಿದ್ದರು. ಈ ಹೊತ್ತಿನಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಈ ಚಿತ್ರ ಬಿಡುಗಡೆಗೆ ಹತ್ತಿರಾಗಿದೆ. ಇಂಥಾ ಸಂಭ್ರಮದ ಘಳಿಗೆಯಲ್ಲಿ ಅಪ್ಪು ಇರಬೇಕಿತ್ತೆಂಬ ಕೊರಗೊಂದು ಮಹೇಶ್ ಗೌಡ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ…
